ಬುಧವಾರ, ಜೂನ್ 23, 2021
29 °C

ಬಾಲ್ಯವಿವಾಹ ಪದ್ಧತಿ ಜೀವಂತ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರಿಗೆರೆ: ಆಧುನಿಕ ವಿಜ್ಞಾನ ತಂತ್ರಜ್ಞಾನಗಳು ಬಹು ಎತ್ತರಕ್ಕೆ ಬೆಳೆದು ನಿಂತಿರುವ ಇಂತಹ ಕಾಲದಲ್ಲಿಯೂ ಸಹ ಬಾಲ್ಯವಿವಾಹಗಳಂತಹ ಅನಿಷ್ಟ ಪದ್ಧತಿಗಳು ರೂಢಿಯಲ್ಲಿರುವುದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿ ಎಂದು ಪ್ರಾಂಶುಪಾಲರಾದ ಪ್ರೊ.ಟಿ. ನೀಲಾಂಬಿಕೆ ವಿಷಾದಿಸಿದರು.ಇಲ್ಲಿನ ಎಂ. ಬಸವಯ್ಯ ವಸತಿ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ದೇಶಿಸಿ ಅವರು ಮಾತನಾಡಿದರು.20ನೇ ಶತಮಾನದಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿ ಪುರುಷ ಶೋಷಣೆ, ದೌರ್ಜನ್ಯಗಳ ವಿರುದ್ದ ಮಹಿಳೆಯರು ಹಲವು ಚಳವಳಿಗಳನ್ನು ನಡೆಸಿದರು. ಅದರ ಫಲವಾಗಿ ಕೂಪನ್‌ಹೇಗನ್‌ನಲ್ಲಿ ನಡೆದ ಮೊದಲ ಜಾಗತಿಕ ಮಹಿಳಾ ಸಮ್ಮೇಳನದಲ್ಲಿ ಮಹಿಳಾ ದಿನ ಆಚರಿಸುವ ಬಗ್ಗೆ ತೀರ್ಮಾನಿಸಿ, 1975ರಲ್ಲಿ ಅಧಿಕೃತವಾಗಿ ಒಪ್ಪಿಗೆ ನೀಡಿದ ಫಲವಾಗಿ ಅಂದಿನಿಂದ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದೆ ಎಂದು ಸ್ಮರಿಸಿದ ಅವರು ಇತ್ತೀಚೆಗೆ ಉದ್ಯೋಗಸ್ಥ ಮಹಿಳೆಯರು ನಾವು ಆರ್ಥಿಕವಾಗಿ ಸ್ವತಂತ್ರರು ಎಂಬ ಮನೋಭಾವದಿಂದ ವೈಭವೋಪೇತ ಜೀವನ ಸಾಗಿಸುತ್ತಾ ಸಾಮಾಜಿಕ ನಡವಳಿ ಹಾಗೂ ಸಂಪ್ರದಾಯ ದಿಕ್ಕರಿಸುತ್ತಿರುವುದು ಆಘಾತಕಾರಿ ಸಂಗತಿ. ಮಹಿಳೆಯರಿಂದಲೂ ಸಹ ಒಮ್ಮೆ ಆತ್ಮಾವಲೋಕನ ಆಗಬೇಕು, ಆಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.ಪ್ರೊ.ಬಿ.ಎಸ್. ಕಲ್ಪನಾ ಮಾತನಾಡಿ ಈ ಮಹಿಳಾ ದಿನಾಚರಣೆಯ ಉದ್ದೇಶ ಇತ್ತೀಚಿನ ದಿನಗಳಲ್ಲಿ ಶೋಷಣೆಗೆ ಒಳಗಾಗಿರುವ ಮಹಿಳೆಯರನ್ನು ಸಬಲಗೊಳಿಸುವುದೇ ಆಗಿದ್ದು, ಇಂತಹ ಮಹತ್ಕಾರ್ಯದಲ್ಲಿ ಪುರುಷರ ನೈತಿಕ ಬೆಂಬಲದ ಅಗತ್ಯತೆಯೂ ಅತ್ಯಂತ ಮುಖ್ಯವಾದುದು. ಒಂದು ಕುಟುಂಬದ ಅಭಿವೃದ್ಧಿಯಲ್ಲಿ ಪತಿ, ಪತ್ನಿ ಇತರ ಪಾತ್ರವೂ ಬಹುಮುಖ್ಯ, ಇಂತಹ ಸಂದರ್ಭದಲ್ಲಿ ತನ್ನ ಕುಟುಂಬದ ಏಳ್ಗೆಗೆ ಸಂಬಂಧಿಸಿದಂತೆ ಉತ್ತಮ ಸಲಹೆಗಳನ್ನು ನೀಡಿದಾಗ ಅವುಗಳನ್ನು ಸ್ವೀಕರಿಸುವ ಮನಸ್ಥಿತಿ ನಿರ್ಮಾಣವಾಗಬೇಕು ಎಂದು ಆಶಿಸಿದರು.ಸ್ತ್ರೀ-ಪುರುಷರು ಪರಸ್ಪರ ಅರ್ಥಮಾಡಿಕೊಂಡು `ಸಮಪಾಲು ಸಮಬಾಳು~ ಎಂಬುದನ್ನು ಅರಿತು ಮಹಿಳೆಯ ಬೌದ್ಧಿಕ ಸಾಮರ್ಥ್ಯವನ್ನು ಅರಿತು ಕುಟುಂಬ, ಸಮಾಜ, ದೇಶದ ಅಭಿವೃದ್ಧಿಗೆ ಅವುಗಳನ್ನು ಬಳಸಿಕೊಳ್ಳುವ ಅವಕಾಶ ಹೆಚ್ಚಾಗಿ ದೊರೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.ಸಿ.ಎಂ. ಸಂಹಿತಾ ಯಾದವ್, ಆರ್.ಡಿ. ಬಿಂದು, ಎಂ. ಶಿವಶ್ರುತಿ, ಎಂ.ಸಿ. ವಿಶ್ವಭಾರತಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಅಧ್ಯಾಪಕ ಕಾರ್ಯದರ್ಶಿ ಮಹೇಶ್ವರಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಲ್ಲಾ ಪ್ರಾಧ್ಯಾಪಕರು, ನೌಕರರು, ವಿದ್ಯಾರ್ಥಿಗಳು ಹಾಜರಿದ್ದರು.ವಿದ್ಯಾರ್ಥಿನಿ ಸುಮಾ ಮುದುಕನಗೌಡ್ರ ಪ್ರಾರ್ಥಿಸಿದರು. ಅಧ್ಯಾಪಕ ಜಿ.ಡಿ. ರವಿಕುಮಾರ ಸ್ವಾಗತಿಸಿದರು. ಪ್ರೊ.ಜಿ.ಕೆ. ರಾಮಣ್ಣ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.