ಗುರುವಾರ , ಜನವರಿ 23, 2020
26 °C

ಬಾಲ ಭಾರತ್ ಸೃಜನೋತ್ಸವ: ಕಲಾ ಸ್ಪರ್ಧೆಗಳಲ್ಲಿ ರಾಜ್ಯಕ್ಕೆ ಸಿಂಹಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಬಾಲ ಭಾರತ್ ಸೃಜನೋತ್ಸವಕ್ಕೆ ಬುಧವಾರ ತೆರೆ ಬಿದ್ದಿದೆ. ಕೆಲವು ಸೃಜನಾತ್ಮಕ ಕಲಾ ಪ್ರಕಾರಗಳಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ಹೊರರಾಜ್ಯದಿಂದ ಆಂಧ್ರಪ್ರದೇಶದ ಒಬ್ಬ ಬಾಲಕ ಬಹುಮಾನ ಪಡೆದಿರುವುದು ಹೊರತುಪಡಿಸಿದರೆ ಉಳಿದೆಲ್ಲ ಬಹುಮಾನಗಳು ರಾಜ್ಯದ ವಿದ್ಯಾರ್ಥಿಗಳ ಪಾಲಾಗಿದೆ.ಸಾಮೂಹಿಕ ಪೇಂಟಿಂಗ್ ಸ್ಪರ್ಧೆಯಲ್ಲಿ ಮಂಡ್ಯದ ರಕ್ಷಿತ್ ಕುಮಾರ್ ಪ್ರಥಮ ಸ್ಥಾನ ಗಳಿಸಿದರೆ, ಮುಖವಾಡ ರಚನೆಯಲ್ಲಿ ಬೆಳಗಾವಿ ರಾಯಭಾಗದ ಆರಿಫ್ ಕೆ.ಮುಲ್ಲಾ ಪ್ರಥಮ ಸ್ಥಾನ ಗಳಿಸಿದರು. ಲೋಹ ಉಬ್ಬುಚಿತ್ರದಲ್ಲಿ ಸುಳ್ಯದ ಸುದೀನ್ ನಾರಾಯಣ್, ವ್ಯಂಗ್ಯಚಿತ್ರದಲ್ಲಿ ಹಾಸನದ ವಿ.ಕೆ.ಕಾರ್ತಿಕ್, ಮಣ್ಣಿನ ಮೂರ್ತಿ ರಚನೆಯಲ್ಲಿ ಕುಂದಾಪುರದ ಕಾರ್ತಿಕ್ ಆಚಾರ್, ಚಿತ್ರಕಲೆ ಕಿರಿಯರ ವಿಭಾಗದಲ್ಲಿ ಮೈಸೂರಿನ ಸಿ.ಅಂಕಿತ, ಹಿರಿಯರ ವಿಭಾಗದಲ್ಲಿ ಪುತ್ತೂರಿನ ವಿ.ಎಂ.ಉಮೇಶ್ ಪ್ರಥಮ ಬಹುಮಾನ ಗಳಿಸಿದರು. ಮುಖವಾಡ ರಚನೆ ವಿಭಾಗದಲ್ಲಿ ಮಾತ್ರ ಆಂಧ್ರಪ್ರದೇಶದ ನಿಶ್ಚಯ್ ಎಂಬವರು ತೃತೀಯ ಬಹುಮಾನ ಗಳಿಸಿದರು.17 ರಾಜ್ಯಗಳ ಬಾಲ ಭವನ ಸೊಸೈಟಿಗಳು ಸೇರಿ 55 ಬಾಲಭವನ ಸೊಸೈಟಿಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ಬಹುತೇಕ ಎಲ್ಲರೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ತಮ್ಮ ನಾಡಿನ ಸೊಗಡನ್ನು ಇತರರಿಗೆ ಪರಿಚಯಿಸಿದ್ದರು. ಆದರೆ ಈ ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸದೆ, ಎಲ್ಲರಿಗೂ ಕಾರ್ಯಕ್ರಮ ನೀಡುವ ಅವಕಾಶ ಕಲ್ಪಿಸಿ ಮಕ್ಕಳೆಲ್ಲರನ್ನೂ ಸಮಾನವಾಗಿ ಕಾಣುವ ಪ್ರಯತ್ನ ನಡೆಸಲಾಯಿತು.ಬುಧವಾರ ಸಮಾರೋಪ ಭಾಷಣ ಮಾಡಿದ ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ, ಕಠಿಣ ಪರಿಶ್ರಮ, ಸಾಧನೆಯಿಂದ ಹಳ್ಳಿಗಾಡಿನ ವಿದ್ಯಾರ್ಥಿಗಳೂ ಉನ್ನತ ಸ್ಥಾನಕ್ಕೆ ಏರಬಹುದು. ಇದಕ್ಕೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ನಿದರ್ಶನ ಎಂದರು.ಹೊರ ರಾಜ್ಯಗಳ 467 ಮಕ್ಕಳು ಮತ್ತು ಅವರ ಮಾರ್ಗದರ್ಶಕರ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 1820 ಮಂದಿ ಈ ಸೃಜನೋತ್ಸವದಲ್ಲಿ ಪಾಲ್ಗೊಂಡಿದ್ದರು. ನಾಲ್ಕು ದಿನದ ಕಾರ್ಯಕ್ರಮಗಳನ್ನು ಮಂಗಳೂರು ಸುತ್ತಮುತ್ತಲಿನ ನಾಲ್ಕು ಸಾವಿರಕ್ಕೂ ಅಧಿಕ ಸ್ಥಳೀಯ ವಿದ್ಯಾರ್ಥಿಗಳು ವೀಕ್ಷಿಸಿದ್ದರು.

ಪ್ರತಿಕ್ರಿಯಿಸಿ (+)