ಶನಿವಾರ, ಮೇ 8, 2021
26 °C
ರೈತರಿಗೆ ಇಳುವರಿ ಕುಸಿತದ ಭೀತಿ

ಬಾಳೆಗೆ ಪೋಷಕಾಂಶ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ:ತಾಲ್ಲೂಕಿನ ಹರದನಹಳ್ಳಿ, ಬ್ಯಾಡಮೂಡ್ಲು ಗ್ರಾಮದ ಸುತ್ತಮುತ್ತ ರೈತರು ಬೆಳೆದಿರುವ ಬಾಳೆ ತೋಟದಲ್ಲಿ ಸುಣ್ಣ ಮತ್ತು ಬೋರಾನ್ ಕೊರತೆ ಇರುವುದು ಕಂಡುಬಂದಿದೆ.ಲವಣಯುಕ್ತ ಮಣ್ಣಿನಲ್ಲಿ ಸಮರ್ಪಕವಾಗಿ ನೀರಿನ ನಿರ್ವಹಣೆ ಮಾಡದಿದ್ದರೆ ಸುಣ್ಣ ಮತ್ತು ಬೋರಾನ್ ಕೊರತೆ ಕಂಡುಬರುವುದು ಸಾಮಾನ್ಯ. ಇದರ ಪರಿಣಾಮ ಬಾಳೆ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳಲಿದೆ. ಇದರಿಂದ ಇಳುವರಿ ಕುಸಿತಕ್ಕೆ ಕಾರಣವಾಗುತ್ತದೆ.ಸುಣ್ಣದ ಕೊರತೆಯಿಂದ ಬಾಳೆ ಎಲೆಗಳು ಸರಿಯಾಗಿ ಹೊರಹೊಮ್ಮುವುದಿಲ್ಲ.  ಮಧ್ಯಪಟ್ಟಿಯ ಪಕ್ಕದ ಎಲೆಯ ಭಾಗಗಳು ಗಟ್ಟಿಗೊಳ್ಳುತ್ತವೆ. ಜತೆಗೆ, ಎಲೆಗಳು ಕೆಂಪುಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತವೆ. ಕ್ಯಾಲ್ಸಿಯಂ ನೈಟ್ರೇಟ್ ಸಿಂಪಡಣೆ ನೀಡುವುದರಿಂದ ಸುಣ್ಣದ ಕೊರತೆ ನೀಗಿಸಬಹುದು ಎನ್ನುತ್ತಾರೆ ಕೃಷಿ ತಜ್ಞರು.ಸಸ್ಯಗಳು ಸುಣ್ಣ ಹೀರಿಕೊಳ್ಳಲು ಹಾಗೂ ಸುಣ್ಣದ ಚಲನೆಗೆ ಬೋರಾನ್ ಪೋಷಕಾಂಶ ಸಹಕಾರಿಯಾಗಲಿದೆ. ಬೋರಾನ್ ನೀಡುವುದರಿಂದ ಸಸಿಗಳಲ್ಲಿ ಸುಣ್ಣದ ಕೊರತೆಯನ್ನು ಗಣನೀಯವಾಗಿ ನೀಗಿಸಬಹುದು. ಆಗ ಬೆಳೆಗಳಲ್ಲಿ ಗುಣಮಟ್ಟದ ವೈಶಿಷ್ಟ್ಯಗಳಾದ ಹಣ್ಣು, ಕಾಯಿಗಳ ಪಕ್ವತೆ, ಗಟ್ಟಿತನ, ಶೇಖರಣಾ ಸಾಮರ್ಥ್ಯ, ಬಣ್ಣವನ್ನು ಉತ್ತಮಗೊಳಿಸಬಹುದು.ಬೋರಾನ್ ಸಸ್ಯಗಳ ಬೇರಿನ ಬೆಳವಣಿಗೆ ಮತ್ತು ಗಿಡಗಳಲ್ಲಿ ಸಹಿಷ್ಣುತೆ ಹೆಚ್ಚಿಸಿಕೊಳ್ಳಲು ಅತ್ಯಾವಶ್ಯಕವಾಗಿದೆ. ಇದರ ಕೊರತೆಯು ಶಿಲೀಂಧ್ರ ಬಾಧೆ ಮತ್ತು ವಾತಾವರಣದ ಒತ್ತಡಕ್ಕೆ ಬೆಳೆಗಳು ತುತ್ತಾಗುವಂತೆ ಮಾಡುತ್ತದೆ. ಬೋರಾನ್ ಕೊರತೆ ಕಂಡುಬಂದಾಗ ಇದನ್ನು ನೀಗಿಸಲು ಬೋರ‌್ಯಾಕ್ಸ್ 2 ಗ್ರಾಂ. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಣೆ ಮಾಡಬೇಕು.`ಹರದನಹಳ್ಳಿ ಸುತ್ತಮುತ್ತ ಕೆಲವು ರೈತರು ಲವಣಯುಕ್ತ ಮಣ್ಣಿನಲ್ಲಿ ಬಾಳೆ ಬೆಳೆದಿದ್ದಾರೆ. ಹೀಗಾಗಿ, ಸುಣ್ಣ ಮತ್ತು ಬೋರಾನ್ ಕೊರತೆ ಕಂಡುಬಂದಿದೆ. ವಿಜ್ಞಾನ ಕೇಂದ್ರಕ್ಕೂ ಈ ಸಂಬಂಧ ಕೆಲವು ರೈತರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಈ ಸಮಸ್ಯೆ ಕಂಡುಬಂದಿರುವ ಬಾಳೆ ಬೆಳೆದಿರುವ ರೈತರು ಕೇಂದ್ರಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು' ಎಂದು ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಭಾಗದ ವಿಷಯ ತಜ್ಞ ಜಿ.ಎಸ್. ಯೋಗೇಶ್ `ಪ್ರಜಾವಾಣಿ'ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.