ಸೋಮವಾರ, ಜೂನ್ 14, 2021
26 °C

ಬಾಹ್ಯಾಕಾಶದಿಂದ ಭೂಮಿಗೆ ವಿದ್ಯುತ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರು ತಿಂಗಳ ಹಿಂದಿನ ಮಾತು. ಬೆಂಗಳೂರಿನ ಜೆ.ಪಿ ನಗರದ ಶಾಲೆ­ಯೊಂದರ ಬೆಳ್ಳಿಹಬ್ಬದ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್‌ ಕಲಾಂ ಬಂದಿ­ದ್ದರು. ಕಾರ್ಯಕ್ರಮದ ಅಂಗವಾ­ಗಿ ವಿದ್ಯಾ­ರ್ಥಿ­ಗಳೊಂದಿಗೆ ಸಂವಾದ ಕಾರ್ಯ­­ಕ್ರಮ ಏರ್ಪಡಿಸಲಾಗಿತ್ತು.‘ಸೌರಶಕ್ತಿ ಬಳಕೆ ಹೆಚ್ಚಾಗಬೇಕೆಂದು ಸರ್ಕಾರ ಹೇಳುತ್ತದೆ. ಆದರೆ, ಸೌರಫಲ­ಕಗಳ ಬೆಲೆ ಹೆಚ್ಚಾಗಿದೆಯಲ್ಲಾ ಸರ್‌?  ಇದಕ್ಕೇನು ಪರಿಹಾರ’? ಏಳನೇ ತರಗತಿ ವಿದ್ಯಾರ್ಥಿನಿ ಇಂಚರ ಹೀಗೊಂದು ಪ್ರಶ್ನೆಯನ್ನು ಕಲಾಂರತ್ತ ಎಸೆದಳು.ನಗುಮೊಗದಿಂದಲೇ ಈ ಪ್ರಶ್ನೆಗೆ ಉತ್ತರಿಸಿದ ಕಲಾಂ, ‘ದೇಶದ ಪ್ರತಿ ಮನೆಯಲ್ಲೂ ಸೌರಶಕ್ತಿ ಬಳಕೆಯಾಗಬೇಕು. ಸೌರಶಕ್ತಿ­ಯಿಂದ ವಿದ್ಯುತ್‌ ಉತ್ಪಾದಿಸುವ ಘಟಕ­ಗಳು ಹೆಚ್ಚಾಗಬೇಕು. ಸೌರಶಕ್ತಿಯ ಬಳಕೆ ಹೆಚ್ಚಾದರೆ, ಸೌರಫಲಕಗಳ (ಸೋಲಾರ್‌ ಪ್ಯಾನೆಲ್‌) ಬೆಲೆ ಕಡಿಮೆ­ಯಾ­ಗುತ್ತದೆ. ಆಗ ಸರ್ಕಾರವೂ ಸೌರ­ಶಕ್ತಿಯಿಂದ ಹೆಚ್ಚು ವಿದ್ಯುತ್‌ ಉತ್ಪಾ­ದಿಸಲು ಮುಂದಾಗುತ್ತದೆ’ ಎಂದಿದ್ದರು.ಕಲಾಂ ಕನಸು

‘ಸೌರಶಕ್ತಿಯಿಂದ ಜಗವು ಬೆಳಗಬೇಕು’ ಎನ್ನು­ವುದು ಕಲಾಂ ಕನಸು. ನವೀಕರಿಸಬ­ಹುದಾದ ಇಂಧನ ಮೂಲಗಳನ್ನು ಬಳಸಿ­ಕೊಂಡರೆ ದೇಶವು ಇಂಧನ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸುವುದರಲ್ಲಿ ಸಂಶ­ಯವೇ ಇಲ್ಲ ಎನ್ನುವುದು ಅವರ ವಿಶ್ವಾಸ. ಕಳೆದ ಮೇನಲ್ಲಿ ಕ್ಯಾಲಿಫೋರ್ನಿ­ಯಾದಲ್ಲಿ ನಡೆದ 32ನೇ ಅಂತರರಾ­ಷ್ಟ್ರೀಯ ಬಾಹ್ಯಾಕಾಶ ಅಭಿವೃದ್ಧಿ ಸಮ್ಮೇಳ­­ನದಲ್ಲಿ ಅವರು ವಿಶೇಷವಾದ ಉಪನ್ಯಾ­ಸವೊಂದನ್ನು ನೀಡಿದರು. ಬಾಹ್ಯಾಕಾ­ಶದಲ್ಲೇ ಸೌರಶಕ್ತಿಯನ್ನು ಸಂಗ್ರಹಿಸಿ  ನಂತರ ಅದನ್ನು ಭೂಮಿಗೆ ಹೇಗೆ ವರ್ಗಾ­ಯಿಸ­ಬಹುದು ಎಂಬು­ದನ್ನು ಅವರು ಪವರ್‌ ಪಾಯಿಂಟ್‌ ಪ್ರೆಸಂಟೇಷನ್‌ (ಪಿಪಿಟಿ) ಮೂಲಕ ವಿವರಿಸಿದ್ದರು.ಕಲಾಂ ಅವರ ಈ ಕನಸಿನ ಯೋಜನೆಯನ್ನು ಇದೀಗ ಅಮೆರಿಕದ ವಿಜ್ಞಾನಿಗಳು ನನಸು ಮಾಡುವ ಸಿದ್ಧತೆಯಲ್ಲಿದ್ದಾರೆ. ಅಮೆರಿಕದ ರಕ್ಷಣಾ ಇಲಾಖೆಗೆ ಸೇರಿದ ನೇವಲ್‌ ರೀಸರ್ಚ್‌ ಲ್ಯಾಬೊರೇ­ಟರಿಯ (ಎನ್‌ಆರ್‌ಎಲ್‌)  ಬಾಹ್ಯಾ­ಕಾಶ ಎಂಜಿನಿಯರ್‌ ಡಾ. ಪೌಲ್‌ ಜಾಫೆ, ಬಾಹ್ಯಾಕಾಶದಲ್ಲೇ ಸೌರಶಕ್ತಿ ಸಂಗ್ರಹಿ­ಸುವ ಮತ್ತು ಅಲ್ಲಿಂದ ಭೂಮಿಗೆ ವರ್ಗಾಯಿಸುವ ‘ಮಾದರಿ’ ಯಂತ್ರವೊಂದನ್ನು ಅಭಿವೃ­ದ್ಧಿಪಡಿಸಿದ್ದಾರೆ.ಹೀಗೆ ಸಂಗ್ರಹ­ವಾಗುವ ವಿದ್ಯುತ್‌ನಿಂದ ಒಂದು ಬೃಹತ್‌ ನಗರವನ್ನೇ ಬೆಳಗಿಸಬಹುದು. ಮೋಡ ಕವಿದ ವಾತಾವರಣ ಇದ್ದಾ­ಗಲೂ ಸೌರಶಕ್ತಿ ಸಂಗ್ರಹವಾಗುತ್ತಲೇ ಇರುತ್ತದೆ. ದಿನದ 24 ಗಂಟೆ, ವರ್ಷದ 365 ದಿನಗಳೂ ಅಡೆತಡೆ ಇಲ್ಲದೆ ವಿದ್ಯುತ್‌ ಲಭಿಸುತ್ತದೆ ಎನ್ನುವುದು ಅವರ ವಿವರಣೆ.‘ಸ್ಯಾಂಡ್‌ವಿಚ್‌’ ಮಾದರಿ

ಜಾಫೆ ಅಭಿವೃದ್ಧಿಪಡಿಸಿರುವ ‘ಸ್ಯಾಂಡ್‌­ವಿಚ್‌’ ಮಾದರಿ  ಯಂತ್ರ ಒಂದರ ಮೇಲೊಂದು ಮೂರು ಫಲಕ­ಗಳನ್ನು ಒಳಗೊಂಡಿದೆ. ಒಂದು ಬದಿಯಲ್ಲಿ ‘ದ್ಯುತಿವಿದ್ಯುತ್‌­ ಜನಕ’ ಇದೆ. ಇದು ಸೌರಶಕ್ತಿಯನ್ನು ಸಂಗ್ರಹಿಸಿ ವಿದ್ಯುಚ್ಛಕ್ತಿಯಾಗಿ ಪರಿವರ್ತಿ­ಸುತ್ತದೆ. ಮಧ್ಯದಲ್ಲಿರುವ ಎಲೆಕ್ಟ್ರಾನಿಕ್‌ ಫಲಕ ನೇರ ವಿದ್ಯುಚ್ಛಕ್ತಿಯನ್ನು ರೇಡಿಯೊ ತರಂಗಾಂತರಗಳಾಗಿ ಪರಿವರ್ತಿಸುತ್ತದೆ. ಕೆಳಭಾಗದಲ್ಲಿರುವ ಅಂಟೆನಾ ಇದನ್ನು ಭೂಮಿಗೆ ವರ್ಗಾಯಿಸುತ್ತದೆ. ಆದರೆ, ಈ ಯಂತ್ರದ ಕಾರ್ಯ­ದಕ್ಷತೆ ಕುರಿತು ಈಗ ಪ್ರಶ್ನೆಗಳೆದ್ದಿವೆ.ಜಾಫೆ ಅವರು ಅಭಿವೃದ್ಧಿಪ­ಡಿಸಿರುವ ‘ಸ್ಯಾಂಡ್‌ವಿಚ್‌ ಮಾದರಿ ಯಂತ್ರ’ ಹಿಂದಿನ ಎಲ್ಲ ಮಾದರಿ­ಗಳಿಗಿಂತ ನಾಲ್ಕು ಪಟ್ಟು ಹೆಚ್ಚಿನ ಸಾಮರ್ಥ್ಯ ಹೊಂದಿದೆ ಎನ್ನುವುದು ‘ಎನ್‌ಆರ್‌ಎಲ್‌’ ವಿವರಣೆ.ಉಷ್ಣ ವಿದ್ಯುತ್‌ ಬಳಕೆಗೆ ಸಂಬಂಧಿಸಿದ ‘ಸೆಫ್ಟ್‌’ ಮಾದರಿಯನ್ನೂ ಜಾಫೆ ಅಭಿ­ವೃ­ದ್ಧಿ­­ಪಡಿಸಿದ್ದಾರೆ. ವಿಕಿರಣ ಬಳಸಿ­ಕೊಂಡು  ವಿದ್ಯುತ್‌ ಉತ್ಪಾದಿಸುವ ತಂತ್ರ­ಜ್ಞಾನ ಇದು. ಇದಿನ್ನೂ ಪ್ರಾಥ­ಮಿಕ ಹಂತ­ದಲ್ಲಿದೆ. ಜಾಫೆ ಅವರ ಈ ಎರಡು ಮಾದರಿಗಳಿಗೂ ಕಳೆದ ವರ್ಷ ಕಲಾಂ ನೀಡಿದ ಉಪನ್ಯಾಸ ಪ್ರೇರಣೆ.‘ಬಾಹ್ಯಾಕಾಶದಲ್ಲಿ ಲಭಿಸುವ ಸೌರಶಕ್ತಿ ಅತ್ಯಂತ ಸುರಕ್ಷಿತ ಶಕ್ತಿ ಮೂಲ. ಎಲ್ಲ ದೇಶಗಳು ಇದರ ಲಾಭ ಪಡೆದು­ಕೊಳ್ಳಬಹುದು. ಈ ನಿಟ್ಟಿನಲ್ಲಿ ಸಂಶೋಧನೆ ನಡೆಯ­ಬೇಕಿದೆ’ ಎಂದು ಕಲಾಂ ಉಪನ್ಯಾಸದಲ್ಲಿ ಹೇಳಿದ್ದರು.ಇದಕ್ಕೆ ಸಂಬಂಧಿ­ಸಿದಂತೆ ಭಾರತ ಮತ್ತು ಅಮೆರಿಕ ಜಂಟಿಯಾಗಿ ಪ್ರಯತ್ನ ನಡೆಸು­ತ್ತಿದೆ ಎಂದು ಅಮೆರಿಕದ ರಾಷ್ಟ್ರೀಯ ಬಾಹ್ಯಾ­ಕಾಶ ಸಂಸ್ಥೆ (ಎನ್‌ಎಸ್‌ಎಸ್‌) ಕಳೆದ ಜೂನ್‌ನಲ್ಲಿ ಹೇಳಿತ್ತು.‘ಬಾಹ್ಯಾಕಾಶದಿಂದ ಭೂಮಿಗೆ  ವಿದ್ಯುತ್‌ ತರುವ ಯೋಜನೆ ಮುಂದಿನ 30 ವರ್ಷಗಳಲ್ಲಿ ಸಹಕಾರಗೊಳ್ಳ­ಬಹು­ದು’ ಎನ್ನುವುದು ಅಂತರರಾಷ್ಟ್ರೀಯ ಖಗೋಳಶಾಸ್ತ್ರಜ್ಞರ  ಸಂಘಟನೆಯ ಅಭಿಮತ. ಈ ಯೋಜನೆಗೆ ಅಂತರರಾ­ಷ್ಟ್ರೀಯ ಸಹಕಾರ ಬೇಕು ಎಂದು ನ್ಯಾಷನಲ್‌ ಸ್ಪೇಸ್‌ ಸೊಸೈಟಿಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಡಾ. ಕಲಾಂ ಮತ್ತು ಮಾರ್ಕ್‌ ಹಾಪ್‌­ಕಿನ್ಸ್‌  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.