ಶುಕ್ರವಾರ, ಮೇ 14, 2021
31 °C

ಬಿಂಡಿಗನವಿಲೆಯ ವೈನತೇಯ

ಬಿಂಡಿಗನವಿಲೆ ಭಗವಾನ್ Updated:

ಅಕ್ಷರ ಗಾತ್ರ : | |

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಎಂದೊಡನೆ ಬಿ.ವೆಂಕಟಾಚಾರ್, ಬಿ.ಎಸ್.ರಂಗಾ. ಡಾ.ರಾಜಾರಾಮಣ್ಣ, ಡಾ. ವೈಜಯಂತಿಮಾಲಾ, ಬಿ.ಎನ್.ಗರುಡಾಚಾರ್ ಮುಂತಾದ ಪ್ರಸಿದ್ಧ ಮಹನೀಯರು ಕಣ್ಮುಂದೆ ಬರುತ್ತಾರೆ. ಜತೆಗೆ ಈ ಊರು ಶ್ರೀ ಪ್ರಸನ್ನ ಚನ್ನಕೇಶವ ಸ್ವಾಮಿ ದೇವಾಲಯದಿಂದಲೂ ಹೆಸರುವಾಸಿ.ದ್ರಾವಿಡ ವಾಸ್ತುಶೈಲಿಯಲ್ಲಿ ರಚಿತವಾಗಿರುವ ದೇಗುಲ ಚಿಕ್ಕದಾದರೂ ಆಕರ್ಷಕವಾಗಿದೆ. ಸ್ವಾಮಿಯ ಎಡಕ್ಕೆ ಸೌಮ್ಯನಾಯಕಿ ತಾಯರ್, ಬಲಕ್ಕೆ  ಪಕ್ಷಿರಾಜ ಗರುಡದೇವ ವಿರಾಜಮಾನರಾಗಿದ್ದಾರೆ. ವಿಷ್ಣುವಾಹನ ಗರುಡ, ಕಾಶ್ಯಪ ಮತ್ತು ವಿನತಳ ಪುತ್ರ. ಆದ್ದರಿಂದ ಅವನಿಗೆ ವೈನತೇಯ ಎಂಬ ನಾಮಾಂಕಿತ. ಸಾಹಸ, ಕರ್ಮಶೀಲತೆ, ಸ್ವಾಮಿನಿಷ್ಠೆಗೆ ಗಣಪತಿ ಮತ್ತು ಹನುಮರಂತೆಯೆ ಗರುಡ ಸಹ ಹೆಸರುವಾಸಿ. ವಿಶೇಷ ಎಂದರೆ ಉಳಿದೆಡೆ ಮರ ಅಥವಾ ಲೋಹದಿಂದ ಗರುಡನನ್ನು ನಿರ್ಮಿಸಿದರೆ ಇಲ್ಲಿ ಶಿಲೆಯಲ್ಲಿ ರಚಿಸಿದ್ದಾರೆ.ಆಚಾರ್ಯರೂಪಿಯಾಗಿರುವ ದೇವರು ಇಲ್ಲಿ ನಿತ್ಯ ವೈನತೇಯನಿಂದಲೇ ಕೈಂಕರ್ಯ ಸ್ವೀಕರಿಸುತ್ತಾರೆಂಬ ನಂಬಿಕೆಯಿದೆ. ಹಾಗಾಗಿ ಪಕ್ಷಿರಾಜನಿಗೆ ಆದರಣೀಯ ಪ್ರಾತಿನಿಧ್ಯ, ಅಗ್ರ ನಮನ. ಅಲ್ಲದೆ ಅವನ ನೇತ್ರಗಳು ಸಾಲಿಗ್ರಾಮಗಳಿಂದ ವಿನ್ಯಾಸ ಗೊಂಡಿರುವುದರಿಂದ ಮೋಹಕ ಕಳೆ. ಬ್ರಹ್ಮಾಂಡವನ್ನೆಲ್ಲ ಸುತ್ತುವ ಗರುಡ ಜಗತ್ತಿನ ಕಲ್ಮಶ ಕಳೆಯುತ್ತಾನೆ ಎಂಬ ನಂಬಿಕೆಯಿದೆ. 
ದೇವಾಲಯದಲ್ಲಿ ನಡೆಯುವ ಸೇವೆಗಳು

ವೈನತೇಯ ಸಹಸ್ರನಾಮ ಹೋಮ- 10,000 ರೂನಿತ್ಯ ಸೇವೆ -2000 ರೂ

ವೈನತೇಯ ಸ್ವಾಮಿಗೆ ಗಂಧ ಲೇಪನ -1500 ರೂಪ್ರಸಾದ ಸೇವೆ- 1000 ರೂ

ಅಭಿಷೇಕ -400 ರೂ

ಈ ದಿಸೆಯಲ್ಲಿ ಒಂದು ಸ್ವಾರಸ್ಯದ ಕಥೆ ಪ್ರಚಲಿತವಿದೆ. ಹಾಸನ ಜಿಲ್ಲೆ ಬೇಲೂರಿನ ಚೆನ್ನಕೇಶವ ದೇವರಿಗೆ ವಾಹನ ಅಗತ್ಯವಾಯಿತಂತೆ. ಅದಕ್ಕಾಗಿ ಅಲ್ಲಿನ ಪರಿಚಾರಕರು ಕಾಂಚೀಪುರಕ್ಕೆ ಹೋಗಿ ನುರಿತ ಶಿಲ್ಪಿಗಳನ್ನು ಕಂಡು ಗರುಡ ವಿಗ್ರಹ ಕಡೆದುಕೊಡುವಂತೆ ಕೋರಿದರು. ಕೆಲವೆ ದಿನಗಳಲ್ಲಿ ವಿಗ್ರಹ ಸಿದ್ಧವಾಯಿತು.ಕಾಲ್ನಡಿಗೆಯಲ್ಲೇ ಪ್ರತಿಮೆಯನ್ನು ಹೊತ್ತು ಬೇಲೂರಿನತ್ತ ಪ್ರಯಾಣ ಆರಂಭಿಸಿದರು. ಅಲ್ಲಲ್ಲಿ ವಿಶ್ರಾಂತಿ. ಒಂದು ರಾತ್ರಿ ಬಿಂಡಿಗನವಿಲೆಗೆ ಬಂದು ತಂಗಿದರು. ಬೆಳಿಗ್ಗೆ ಪ್ರಯಾಣ ಮುಂದುವರಿಸಬೇಕೆಂದಾಗ ಗರುಡನನ್ನು ಕದಲಿಸಲೂ ಸಾಧ್ಯವಾಗಲಿಲ್ಲ.ಹಿಂದಿನ ರಾತ್ರಿ ಅಂದಿನ ನಾಗಮಂಗಲದ ಪಾಳೆಯಗಾರನಿಗೆ ಕನಸಲ್ಲಿ ಬಂದ ಗರುಡ ಬಿಂಡಿಗನವಿಲೆ ಪ್ರಸನ್ನ ಕೇಶವನ ಸನ್ನಿಧಿಯಲ್ಲಿ ತಾನು ನೆಲೆಸುವುದಾಗಿ ಹೇಳಿತಂತೆ. ಆದ್ದರಿಂದ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ವೈನತೇಯನೆಂದರೆ ವಿಶೇಷ ಶ್ರದ್ಧೆ, ನಮ್ರತೆ. ಆಚಾರ್ಯ ರಾಮಾನುಜರು ಇಲ್ಲಿ ಮೂರು ದಿನ ನೆಲೆಸಿದ್ದರಂತೆ.

ಮಾಹಿತಿಗೆ 080- 2342 0996, 99863 67311, 94481 31134.

 

ಸೇವೆ, ದಾರಿ

ಬೆಂಗಳೂರು ಮಂಗಳೂರು ಹೆದ್ದಾರಿಯ ಬೆಳ್ಳೂರು ಕ್ರಾಸ್‌ನಿಂದ ತುಸು ದೂರದಲ್ಲೇ ಕದಬಳ್ಳಿ. ಅಲ್ಲಿಂದ ಎಡಕ್ಕೆ ಹರಿಯುವ ರಸ್ತೆಯಲ್ಲಿ ಹತ್ತು ಕಿ.ಮೀ. ಕ್ರಮಿಸಿದರೆ ಬಿಂಡಿಗನವಿಲೆ ಸಿಗುತ್ತದೆ. ಕದಬಳ್ಳಿಯಿಂದ ಆಟೊ ಲಭ್ಯ.

 

ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಸೌಕರ್ಯವಿದೆ. ವಿವಾಹ, ಉಪನಯನ, ಚೌಲ ಮುಂತಾದ ಶುಭ ಕಾರ್ಯಗಳನ್ನು ಮಾಡಲು ವಿಶಾಲ ಭೋಜನಾಲಯವುಳ್ಳ ಶ್ರಿ ವೈನತೇಯ ಕಲ್ಯಾಣ ಮಂಟಪವಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.