ಭಾನುವಾರ, ಮೇ 16, 2021
22 °C

ಬಿ.ಇಡಿ ಕಾಲೇಜುಗಳ ದುಃಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಬಿ.ಇಡಿ ಕಾಲೇಜುಗಳು, ಶಿಕ್ಷಕರ ತರಬೇತಿ ವ್ಯವಸ್ಥೆಯನ್ನು ನಗೆಪಾಟಲಿಗೆ ಈಡುಮಾಡಿರುವುದು ದುರದೃಷ್ಟದ ಸಂಗತಿ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಅಣಬೆಗಳಂತೆ ತಲೆ ಎತ್ತಿರುವ ಈ ಕಾಲೇಜುಗಳು ಮೂಲ ಉದ್ದೇಶಕ್ಕೆ ತಿಲಾಂಜಲಿ ಇಟ್ಟು, ಹಣ ಮಾಡುವ ದಂಧೆಗೆ ಇಳಿದಿವೆ.ಬಹುಪಾಲು ಕಾಲೇಜುಗಳು ಮೂಲ ಸೌಕರ್ಯಗಳನ್ನು ಹೊಂದಿಲ್ಲ. ನೀತಿ-ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿ ಇರುವ ಇಂತಹ ಕಾಲೇಜುಗಳ ಪಾತ್ರ ಸರ್ಟಿಫಿಕೇಟ್ ನೀಡುವುದಕ್ಕಷ್ಟೇ ಸೀಮಿತಗೊಂಡಿರುವುದು ಶಿಕ್ಷಕ ತರಬೇತಿ ವ್ಯವಸ್ಥೆಯ ಕುಸಿತಕ್ಕೆ ಹಿಡಿದ ಕನ್ನಡಿ. ಬಿ.ಇಡಿ ಕಾಲೇಜುಗಳ ಒಟ್ಟಾರೆ ವ್ಯವಸ್ಥೆಯ ಮೌಲ್ಯಮಾಪನಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ನೇಮಕ ಮಾಡಿದ್ದ ಕಾರ್ಯಪಡೆಯ ವರದಿ ಇಂತಹ ಅನೇಕ ಆಘಾತಕಾರಿ ಅಂಶಗಳನ್ನು ಬಯಲುಗೊಳಿಸಿದೆ.ಸಮರ್ಪಕ ಮೂಲ ಸೌಕರ್ಯ ಹಾಗೂ ಅಗತ್ಯ ಬೋಧಕ ಸಿಬ್ಬಂದಿಯನ್ನು ಹೊಂದಿರದ ಕಾಲೇಜುಗಳ ಮಾನ್ಯತೆ ಹಿಂದಕ್ಕೆ ಪಡೆಯುವಂತೆಯೂ ಕಾರ್ಯಪಡೆ ಶಿಫಾರಸು ಮಾಡಿದೆ. ಈ ಶಿಫಾರಸುಗಳ ಮರು ಮೌಲ್ಯಮಾಪನಕ್ಕೆ ನೇಮಕಗೊಂಡಿದ್ದ ತಜ್ಞರ ಸಮಿತಿಯೂ ವರದಿ ನೀಡಿದೆ. ಅಧ್ಯಯನ, ವರದಿ, ಶಿಫಾರಸು ಮತ್ತು ಆ ಕುರಿತ ಚರ್ಚೆಗಳ ಹೆಸರಿನಲ್ಲಿ ಕಾಲಹರಣ ಆಗುತ್ತಿರುವುದು ಬಿಟ್ಟರೆ ಈ ದಂಧೆಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ವಿ.ವಿಗೆ ಇನ್ನೂ ಸಾಧ್ಯವಾಗಿಲ್ಲ ಎಂಬುದು ಹತ್ತು ಹಲವು ಅನುಮಾನಗಳಿಗೆ ಕಾರಣವಾಗುತ್ತದೆ. ಈ ವೈಫಲ್ಯದ ಪೂರ್ಣ ಜವಾಬ್ದಾರಿಯನ್ನು ವಿಶ್ವವಿದ್ಯಾಲಯವೇ ಹೊರಬೇಕಾಗುತ್ತದೆ.ತರಗತಿಗಳಿಗೇ ಹಾಜರಾಗದ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿರುವುದು ಗಮನಕ್ಕೆ ಬಂದಿದೆ ಎಂದು ವಿ.ವಿ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಅವರೇ ಹೇಳಿದ್ದಾರೆ. ಇಂತಹವರು ಕೋರ್ಸ್ ಪೂರೈಸಿ ಶಿಕ್ಷಕರಾಗಿ ನೇಮಕಗೊಂಡರೆ ಇವರ ಬಳಿ ಕಲಿಯಲು ಬರುವ ವಿದ್ಯಾರ್ಥಿಗಳ ಪಾಡೇನು? ಲೋಪದೋಷಗಳ ಕುರಿತು ವಿವಿಧ ಸಮಿತಿಗಳು ನೀಡಿರುವ ವರದಿಗಳನ್ನು ಆಧರಿಸಿ ಕೂಡಲೇ ಕ್ರಮ ಜರುಗಿಸಿದ್ದರೆ ಕಾಲೇಜುಗಳ ಮಾನ್ಯತೆ ರದ್ದುಗೊಳಿಸುವ ಪ್ರಕ್ರಿಯೆಯನ್ನು ಮುಂದೂಡುವ ಅಗತ್ಯ ಬರುತ್ತಿರಲಿಲ್ಲ. ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಬರೆಸಿಕೊಂಡು, ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಷರತ್ತುಬದ್ಧ ಅನುಮತಿ ನೀಡುವ ಪ್ರಮೇಯ ಒದಗುತ್ತಿರಲಿಲ್ಲ.ವಿದ್ಯಾರ್ಥಿಗಳ ಭವಿಷ್ಯವನ್ನು ಮುಂದಿಟ್ಟು ಕಾಲೇಜುಗಳಿಗೆ ಜೀವದಾನ ನೀಡುವುದು ಸರಿಯಲ್ಲ. ಅಗತ್ಯ ಮಾನ್ಯತೆ ಹೊಂದಿಲ್ಲದ, ಈಗಾಗಲೇ ಕಪ್ಪು ಪಟ್ಟಿಗೆ ಸೇರಿರುವ ಕಾಲೇಜುಗಳ ಬಗ್ಗೆ ಅನುಕಂಪ ತೋರುವುದು ಎಂದರೆ ಉಲ್ಲಂಘನೆಗೆ ಅನುಮತಿ ಮುಂದುವರಿಸಿದಂತೆಯೇ ಸರಿ. ಸರ್ಕಾರಿ ಕೋಟಾ ಸೀಟುಗಳನ್ನು ಕಡೆಗಣಿಸಿ, ಆಡಳಿತ ಮಂಡಳಿ ಕೋಟಾ ತುಂಬುವ ಪ್ರವೃತ್ತಿಗೂ ಲಗಾಮು ಹಾಕಬೇಕು. ಶಿಕ್ಷಕರ ತರಬೇತಿ ವ್ಯವಸ್ಥೆ ಗೊಂದಲದ ಗೂಡಾಗಿದೆ.ಇಲ್ಲಿನ ಅವ್ಯವಸ್ಥೆ ಸರಿಪಡಿಸಲು ವಿಶ್ವವಿದ್ಯಾಲಯ ಮತ್ತು ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು. ತೇಪೆ ಹಚ್ಚುವುದರಿಂದ ಸುಧಾರಣೆ ಸಾಧ್ಯವಿಲ್ಲ. ತರಬೇತಿ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗೆ ಚಿಕಿತ್ಸಕ ನೋಟ ಅಗತ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.