ಶುಕ್ರವಾರ, ಜೂನ್ 25, 2021
29 °C

ಬಿಎಂಟಿಸಿ ಬಿಸಿ : ಅಲ್ಲೂ ಇದೆ ಸುರಕ್ಷತೆ ಸಮಿತಿ

ಇ.ಎಸ್.ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಬಿಎಂಟಿಸಿ ಬಸ್ಸಿನಲ್ಲಿ ರಾತ್ರಿ ವೇಳೆ ಒಂಟಿ ಮಹಿಳೆ ಮೇಲೆ ಅತ್ಯಾಚಾರ ಯತ್ನ ಹಾಗೂ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಟಿಸಿ, ಅಪರಾಧ ಎಸಗಿದ ಚಾಲಕನನ್ನು ಸೇವೆಯಿಂದ ವಜಾಗೊಳಿಸಿದೆ. ಮತ್ತೊಂದೆಡೆ ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದಿಂದ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆ ಕಾಪಾಡಲೆಂದೇ ಒಂದು ಸಮಿತಿ ಸ್ಥಾಪಿಸಲಾಗಿದೆ. ಈ ಕುರಿತು ಪ್ರಯಾಣಿಕರಲ್ಲಿ ಅರಿವು ಇದೆಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಬಿಎಂಟಿಸಿ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ‘ಮೆಟ್ರೊ’ ಮಾತನಾಡಿಸಿತು. ಆಶ್ಚರ್ಯಕರ ಸಂಗತಿ ಎಂದರೆ ಪ್ರಯಾಣಿಕರಿಗೆ ಮಾತ್ರವಲ್ಲ ಸ್ವತಃ ಬಿಎಂಟಿಸಿ ಮಹಿಳಾ ಸಿಬ್ಬಂದಿಗೆ ಇಂಥದ್ದೊಂದು ಸಮಿತಿ ರಚನೆಯಾಗಿರುವ ಕುರಿತು ಯಾವುದೇ ಮಾಹಿತಿ ಇಲ್ಲ.ಖಾಸಗಿಯೋ, ಬಿಎಂಟಿಸಿಯೋ?

‘ಇಂಥದ್ದೊಂದು ಸಮಿತಿ ಇದೆ ಎಂದು ಗೊತ್ತಿಲ್ಲ. ಆದರೆ ಮಹಿಳೆಯರು ರಾತ್ರಿ ವೇಳೆ ಖಾಸಗಿ ವಾಹನಗಳಲ್ಲಿ ಹೋಗಬಾರದು, ಸಾರ್ವಜನಿಕ ಸಾರಿಗೆಯಲ್ಲೇ ಹೋಗಬೇಕೆಂದು ಹೇಳುತ್ತಾರೆ. ಅತ್ಯಂತ ಸುರಕ್ಷಿತ ಎಂದು ಹೇಳಲಾಗುವ ಬಿಎಂಟಿಸಿಯಲ್ಲಿ ಇಂಥ ಘಟನೆ ನಡೆದಿರುವುದು ಈಗ ಮಹಿಳೆಯರಲ್ಲೂ ಗೊಂದಲವನ್ನುಂಟು ಮಾಡಿದೆ. ಆದರೂ ಬಿಎಂಟಿಸಿ ಬಸ್‌ನಲ್ಲಿ ಒಂಟಿ ಮಹಿಳೆ ಸಂಚರಿಸುವಾಗ ಮೇಲ್ವಿಚಾರಕರನ್ನೋ ಅಥವಾ ಭದ್ರತಾ ಸಿಬ್ಬಂದಿಯನ್ನೋ ನೇಮಿಸಬೇಕು ಎನಿಸುತ್ತದೆ’ ಎಂದು ಪದವಿ ವ್ಯಾಸಂಗ ಮಾಡುತ್ತಿರುವ ರಶ್ಮಿ ಅಭಿಪ್ರಾಯ ಪಡುತ್ತಾರೆ.‘ಪ್ರಯಾಣಿಕರು ಪುರುಷರಾಗಿರಲೀ ಅಥವಾ ಮಹಿಳೆಯಾಗಿರಲಿ, ಅವರನ್ನು ನಮ್ಮ ರೂಟ್‌ನ ಕೊನೆಯ ನಿಲ್ದಾಣದವರೆಗೂ ಸುರಕ್ಷಿತವಾಗಿ ಬಿಟ್ಟುಬರುವುದು ನಮ್ಮ ಜವಾಬ್ದಾರಿ. ಇದನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಮಹಿಳಾ ಸುರಕ್ಷತಾ ಸಮಿತಿ ಕುರಿತು ನಮಗೇನೂ ಮಾಹಿತಿ ಇಲ್ಲ’ ಎಂದು ಬಿಎಂಟಿಸಿ ನಿರ್ವಾಹಕಿ ಹೇಮಾ ಹೇಳುತ್ತಾರೆ.ರಾತ್ರಿ ಹೊತ್ತು ಮಹಿಳೆಗೇನು ಕೆಲಸ?

ಸಂಜೆಯಾದ ಮೇಲೆ ಸುಮ್ಮನೆ ಮನೆಯಲ್ಲಿ ಕೂರಬೇಕಾದ ಮಹಿಳೆ ಮಧ್ಯರಾತ್ರಿಯಲ್ಲಿ ತಿರುಗುವ ಅವಶ್ಯಕತೆಯಾದರೂ ಏನು? ಅವರು ಹೀಗೆ ಮಾಡುವುದರಿಂದ ಇಂಥ ಘಟನೆಗಳು ಆಗುತ್ತಿರುತ್ತವೆ. ಸರಿ ರಾತ್ರಿಯಲ್ಲಿ ಮಹಿಳೆಯರು ಓಡಾಡುವ ಮುನ್ನ ತಮ್ಮ ಸುರಕ್ಷತೆ ಕುರಿತು ಅರಿವಿರಬೇಕು’ ಎಂದು ಹೆಸರು ಹೇಳಲಿಚ್ಛಿಸದ ಹಾಗೂ ಛಾಯಾಚಿತ್ರ ತೆಗೆಯಲು ಬಿಡದ ಬಿಎಂಟಿಸಿಯ ಮಧ್ಯ ವಯಸ್ಸಿನ ಚಾಲಕರೊಬ್ಬರು ಆಕ್ರೋಶಭರಿತರಾಗಿ ನುಡಿದರು. ಇವರ ಮಾತಿಗೆ ಅಲ್ಲೇ ಇದ್ದ ಮಹಿಳೆಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು.

ಇವರಂತೆಯೇ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವ ಬಹಳಷ್ಟು ಮಹಿಳೆಯರು ಹಾಗೂ ಪುರುಷರು ಒಂಟಿ ಮಹಿಳೆಯರ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದರು. ಈ ಪ್ರಕರಣವಾದರೂ ಮಹಿಳಾ ಸುರಕ್ಷತಾ ಸಮಿತಿ ಕುರಿತು ಗೊತ್ತೇ ಇಲ್ಲದವರ ಕಣ್ಣು ತೆರೆಸಲಿ. ಅರಿವು ಮೂಡಿಸುವ ಕಾರ್ಯ ನಿರಂತರವಾಗಿರಲಿ

ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಾಗ ಇಲಾಖೆ, ಸಾರ್ವಜನಿಕರು, ಪೊಲೀಸ್ ಎಲ್ಲರೂ ಜಾಗೃತರಾಗುತ್ತಾರೆ. ಆದರೆ ದಿನಗಳು ಕಳೆದಂತೆ ಅದನ್ನು ಮರೆತೇಬಿಡುತ್ತಾರೆ. ಹೀಗೆ ಆಗಬಾರದು. ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ಆಗಬೇಕು. ಮಹಿಳಾ ಆಸನದಲ್ಲಿ ಕೂತರೆ ದಂಡ ಎಂದು ಎಲ್ಲಾ ಬಸ್ಸುಗಳಲ್ಲಿ ನಮೂದಿಸಲಾಗಿದೆ. ಇದು ಈಗ ಪ್ರಯಾಣಿಕರ ಅರಿವಿಗೂ ಬಂದಿದೆ. ಅದರಂತೆಯೇ ಮಹಿಳಾ ಪ್ರಯಾಣಿಕರ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಫಲಕಗಳು ಹಾಗೂ ಭದ್ರತೆ ನೀಡುವ ಸಂಸ್ಥೆಗಳ ದೂರವಾಣಿ ಸಂಖ್ಯೆಯ ಫಲಕವನ್ನೂ ಹಾಕಬೇಕು.

– ಬಿ.ಕೆ. ಶಿವರಾಮ್‌, ನಿವೃತ್ತ ಪೊಲೀಸ್‌ ಅಧಿಕಾರಿ

ಸುರಕ್ಷತೆಯ ನಂಬಿಕೆ ಇಲ್ಲ

ನನ್ನ ನಿತ್ಯದ ಪ್ರಯಾಣದಲ್ಲಿ ಅರ್ಧ  ದಾರಿಯನ್ನು ಕಂಪೆನಿ ಬಸ್‌ನಲ್ಲಿ, ಉಳಿದ ಅವಧಿಯನ್ನು ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತೇನೆ. ಪೀಕ್‌ ಅವರ್‌ನಲ್ಲಿ ಮಹಿಳೆಯರೊಂದಿಗೆ ನಿರ್ವಾಹಕರು ಅಸಭ್ಯವಾಗಿ ವರ್ತಿಸುವ ಕುರಿತು ಕಂಪೆನಿಯ ಕೆಲವು ಉದ್ಯೋಗಿಗಳು ಹೇಳಿದ್ದಾರೆ. ಆದರೆ ರಾತ್ರಿ ವೇಳೆ ಬಿಎಂಟಿಸಿಯಲ್ಲಿ ಮಹಿಳೆಯರಿಗೆ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆ ನನಗಿಲ್ಲ. ಆದರೆ ಖಾಸಗಿ ಕಂಪೆನಿಯ ಬಸ್‌ಗಳಲ್ಲಿ ಈ ಕುರಿತು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂಟಿ ಮಹಿಳೆಯನ್ನು ಕೊನೆಯಲ್ಲಿ  ಮನೆಗೆ ಬಿಡುವಂತಿಲ್ಲ, ಮೊದಲ ಆಸನದಲ್ಲಿ ಮಹಿಳೆ ಕೂರುವಂತಿಲ್ಲ ಇತ್ಯಾದಿ ನಿಯಮಗಳಿವೆ. ಆದರೆ ಅದೇ ವ್ಯವಸ್ಥೆಯನ್ನು ಬಿಎಂಟಿಸಿಯಿಂದ ನಿರೀಕ್ಷಿಸುವುದು ಸಾಧ್ಯವಿಲ್ಲ. ಪೊಲೀಸ್‌ ದೂರವಾಣಿ ಸಂಖ್ಯೆಯನ್ನು ಎಲ್ಲಾ ಬಸ್‌ಗಳಲ್ಲಿ ನಮೂದಿಸುವುದು ಉತ್ತಮ.

–ಐಟಿ ಕಂಪೆನಿ ಉದ್ಯೋಗಿ ಅಕ್ಷತಾ ಕಿರಣ್‌ಸಮಿತಿಯಲ್ಲಿ ಇರುವವರು...

‘ರಾತ್ರಿ ವೇಳೆಯಲ್ಲಿ ಎಲ್ಲಾ ಬಸ್ಸುಗಳಲ್ಲಿ ಚಾಲಕ, ನಿರ್ವಾಹಕರು ಇಬ್ಬರೂ ಇರಬೇಕಾದ್ದು ಕಡ್ಡಾಯ ಎಂಬ ಸೂಚನೆಯನ್ನು ಹಲವು ತಿಂಗಳ ಹಿಂದೆಯೇ ಹೊರಡಿಸಲಾಗಿದೆ. ಅದನ್ನು ಮೀರಿ ಚಾಲಕನೊಬ್ಬನನ್ನೇ ನೇಮಿಸಿದ್ದು ತಪ್ಪು. ಹೀಗಾಗಿಯೇ ಪ್ರಕರಣ ಸಂಬಂಧ ಇಬ್ಬರನ್ನು ಅಮಾನತು ಹಾಗೂ ಒಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಇಂಥ ಶಿಕ್ಷೆ ಇತರರಿಗೆ ಎಚ್ಚರಿಕೆಯಾಗಲಿದೆ’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.‘ಈ ಹಿಂದಿನ ಕೆಲವು ಪ್ರಕರಣಗಳಿಂದಾಗಿ ಬಿಎಂಟಿಸಿ ಈ ವರ್ಷದ ಜನವರಿಯಲ್ಲಿ ಮಹಿಳಾ ಸುರಕ್ಷತಾ ಸಮಿತಿಯನ್ನು ಸ್ಥಾಪಿಸಿದೆ. ಈ ಸಮಿತಿಯಲ್ಲಿ ಬಿಎಂಟಿಸಿ ಅಧಿಕಾರಿಗಳು ಮಾತ್ರವಲ್ಲ ಪೊಲೀಸ್‌ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಿಎಂಟಿಸಿ ಅಧಿಕಾರಿಗಳು ಸೇರಿದಂತೆ ಹದಿನೇಳು ಸರ್ಕಾರೇತರ ಸಂಸ್ಥೆಗಳ ನುರಿತ ತಜ್ಞರು, ಮನೋವೈದ್ಯರು ಇದ್ದಾರೆ. ಪ್ರತಿದಿನ ತಲಾ ನೂರು ಚಾಲಕ ಹಾಗೂ ನಿರ್ವಾಹಕರ ಎರಡು ತಂಡಗಳನ್ನು ಮಾಡಿ ಮಹಿಳೆಯರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ಹೇಳಿಕೊಡಲಾಗುತ್ತಿದೆ’ ಎಂದೂ ಅವರು ತಿಳಿಸಿದರು.ಚಾಲಕರಲ್ಲಿ ಭಯ, ಜಾಗೃತಿ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ಈ ತರಬೇತಿ ನಡೆಯುತ್ತಿದ್ದು, ಇದು ಪೂರ್ಣಗೊಂಡ ಬಳಿಕ ಸಮಿತಿ ಕುರಿತು ಪ್ರಯಾಣಿಕರಲ್ಲಿ ಅರಿವು ಮೂಡಿಸುವ ಕೆಲಸ ಆರಂಭಿಸಲಾಗುವುದು. ಇದರ ಜತೆಯಲ್ಲೇ ಈಗಾಗಲೇ ಕೆಲವು ಬಸ್‌ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನೂ ದೊಡ್ಡ ಸಂಖ್ಯೆಯ ಬಸ್ಸುಗಳಲ್ಲಿ ಇದರ ಅಳವಡಿಕೆ ಕಾರ್ಯ ನಡೆಯಬೇಕಿದೆ. ಜತೆಗೆ ಎಲ್ಲಾ ಬಸ್ಸಿನಲ್ಲಿ ನಿರ್ಭಯ, ಹೊಯ್ಸಳ ದೂರವಾಣಿ ಸಂಖ್ಯೆಯನ್ನು  ಕಡ್ಡಾಯವಾಗಿ ಹಾಕಲು ಬಿಎಂಟಿಸಿ ಉದ್ದೇಶಿಸಿದೆ’ ಎಂದು ಇದೇ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಎಸ್‌. ಲತಾ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.