ಗುರುವಾರ , ಜನವರಿ 23, 2020
27 °C

ಬಿ.ಎಂ.ಶ್ರೀ ಈಗಲೂ ಪ್ರಸ್ತುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿ.ಎಂ.ಶ್ರೀಕಂಠಯ್ಯನವರು 100 ವರ್ಷಗಳ ಹಿಂದೆ `ಕನ್ನಡ ಮಾತು ತಲೆ ಎತ್ತುವ ಬಗೆ~ ಕುರಿತು ಮಾಡಿದ್ದ ಭಾಷಣದಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯಗಳು ಈಗಲೂ ಅತ್ಯಂತ ಪ್ರಸ್ತುತವಾಗಿವೆ ಎಂದು ಹಿರಿಯ ಸಾಹಿತಿ ಪ್ರೊ.ಎಲ್.ಎಸ್.ಶೇಷಗಿರಿರಾವ್ ಅಭಿಪ್ರಾಯಪಟ್ಟರು.ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನವು ಬಿ.ಎಂ.ಶ್ರೀ. ಅವರ ಐತಿಹಾಸಿಕ ಭಾಷಣದ ನೂರನೇ ವರ್ಷದ ನೆನಪಿನಾರ್ಥ ಮಂಗಳವಾರ ಏರ್ಪಡಿಸಿದ್ದ `ಶ್ರೀ ಉತ್ಸವ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಸಂಸ್ಕೃತ ಪ್ರಬಲವಾಗಿದ್ದ ಕಾಲದಲ್ಲಿ ಅವರು ಭಾಷಣ ಮಾಡಿದ್ದು. ಈಗ ಇಂಗ್ಲಿಷ್ ಪ್ರಬಲವಾಗಿರುವ ಕಾಲ. ಆದರೂ ಶ್ರೀಯವರು ಆ ಕಾಲದಲ್ಲೇ ಗುರುತಿಸಿದ್ದ ಕನ್ನಡದ ಸಮಸ್ಯೆಗಳು ಈಗಲೂ ಇವೆ. ಪದ ಸಂಪತ್ತು, ಗ್ರಂಥ ಸಂಪತ್ತು ಮೊದಲಾದ ಕನ್ನಡದ ಕೆಲಸಗಳು ಬಾಕಿ ಉಳಿದಿವೆ~ ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ವಿಮರ್ಶಕ ಪ್ರೊ.ಎಂ.ಎಚ್.ಕೃಷ್ಣಯ್ಯ ಮಾತನಾಡಿ, `ಅನುವಾದ ಎಂದರೆ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಮಾಡುವ ಪದಗಳ ಬದಲಾವಣೆ ಅಲ್ಲ; ಒಂದು ಸಂಸ್ಕೃತಿಯ ಸಂವೇದನೆಗಳನ್ನು ಇನ್ನೊಂದು ಸಂಸ್ಕೃತಿಗೆ ಸಂವಹನ ಮಾಡುವ ಮಾಂತ್ರಿಕ ಕ್ರಿಯೆ ಇದ್ದಂತೆ. ಅನುವಾದದ ಶ್ರೇಷ್ಠ ಮಾದರಿಗೆ ಶ್ರೀಯವರ ಇಂಗ್ಲಿಷ್ ಗೀತಗಳು ಅತ್ಯುತ್ತಮ ಉದಾಹರಣೆ~ ಎಂದು ವಿಶ್ಲೇಷಿಸಿದರು.`ನೂರು ವರ್ಷದ ಹಿಂದೆಯೇ ಶ್ರೀಯವರು ಬರೆಯುವ ಭಾಷೆಗೆ ಆಡುವ ಭಾಷೆಯೇ ಜನ್ಮಸ್ಥಾನ ಎಂದಿದ್ದರು. ಕನ್ನಡ ಜಾಯಮಾನಕ್ಕೆ ಹೊಂದುವ ಪದಗಳು, ವ್ಯಾಕರಣವನ್ನು ಬಳಸುವುದು ಸರಿಯಾದ ಕ್ರಮ ಎಂದು ವಾದಿಸಿದ್ದರು. ಅರ್ಥವಾಗದ ಸಂಸ್ಕೃತ ಪದಗಳ ಬದಲು ಇಂಗ್ಲಿಷಿನ ಪದಗಳನ್ನು ಕನ್ನಡಕ್ಕೆ ಒಗ್ಗಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದ್ದರು. ವಿಪರ್ಯಾಸವೆಂದರೆ ಈಗಲೂ ಎಂಜಿನಿಯರ್‌ಗೆ ಅಭಿಯಂತರ, ಪೊಲೀಸ್‌ಗೆ ಆರಕ್ಷಕ ಎಂಬ ಪದಗಳ ಬಳಕೆಯನ್ನು ಕಾಣುತ್ತಿದ್ದೇವೆ~ ಎಂದು ಅವರು ವಿಷಾದಿಸಿದರು.ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಡಿ.ಲಿಂಗಯ್ಯ, `ಶ್ರೀಯವರ ಭಾಷಣದಲ್ಲಿರುವ ಅಂಶಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲು ಪ್ರತಿಷ್ಠಾನ ನೆರವು ನೀಡುತ್ತದೆ. ಆ ಮೂಲಕ ನಾಡಿನಾದ್ಯಂತ  ಕನ್ನಡ ಜಾಗೃತಿ ಮೂಡಿಸುವುದು ನಮ್ಮ ಆಶಯ~ ಎಂದರು.ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ.ನಾ.ಗೀತಾಚಾರ್ಯ ಉಪಸ್ಥಿತರಿದ್ದರು. ವ್ಯವಸ್ಥಾಪಕ ಕಾರ್ಯದರ್ಶಿ ಎಸ್.ವಿ.ಶ್ರೀನಿವಾಸರಾವ್ ಸ್ವಾಗತಿಸಿದರು. ಮರು ಮುದ್ರಣಗೊಂಡ `ಕನ್ನಡ ಮಾತು ತಲೆಎತ್ತುವ ಬಗೆ~ ಹಾಗೂ `ಇಂಗ್ಲಿಷ್ ಗೀತಗಳು~ ಕೃತಿಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

 

ಪ್ರತಿಕ್ರಿಯಿಸಿ (+)