ಶನಿವಾರ, ಮೇ 8, 2021
18 °C

ಬಿಎಸ್‌ವೈಗೆ ಜಾಮೀನು ನೀಡದಿರಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಮೂರನೇ ಖಾಸಗಿ ದೂರಿನ ಪ್ರಮುಖ ಆರೋಪಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಾಮೀನು ನೀಡಬಾರದು ಎಂದು ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ, ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದರು.ಯಡಿಯೂರಪ್ಪ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಮಂಗಳವಾರ ನಡೆಸಿದ ವಿಚಾರಣೆ ಅಪೂರ್ಣವಾಗಿದೆ.ಬುಧವಾರವೂ ವಿಚಾರಣೆ ನಡೆಯಲಿದ್ದು ಬಹುತೇಕ ಮೂರನೇ ಖಾಸಗಿ ದೂರಿನ ವಿಚಾರಣೆ ಅಂತ್ಯಗೊಳ್ಳಲಿದೆ. ಆದರೆ ನಾಲ್ಕನೇ ದೂರಿನಲ್ಲಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಂಡ ನಂತರವೇ, ಎರಡೂ ಪ್ರಕರಣಗಳ ಜಾಮೀನು ಅರ್ಜಿಯ ತೀರ್ಪು ಪ್ರಕಟವಾಗುವ ಸಂಭವವಿದೆ.ಮಂಗಳವಾರ ನಡೆದ ವಿಚಾರಣೆಗೆ ಯಡಿಯೂರಪ್ಪ ಅವರು ಗೈರುಹಾಜರಾಗಿದ್ದರು. ಆದರೆ ಈ ಪ್ರಕರಣದ ಉಳಿದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾನೂನುಬಾಹಿರವಾಗಿ ಡಿನೋಟಿಫಿಕೇಷನ್ ಮಾಡಿದ್ದು ಬೇನಾಮಿ ಹೆಸರಿನಲ್ಲಿ ಆಸ್ತಿ ಹೊಂದಿದ್ದಾರೆ.

 

ಒಮ್ಮೆ ನೋಟಿಫಿಕೇಷನ್ ಆದ ನಂತರ ಅದನ್ನು ಡಿನೋಟಿಫಿಕೇಷನ್ ಮಾಡಬೇಕಾದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಇರುವ ಡಿನೋಟಿಫಿಕೇಷನ್ ಸಮಿತಿಯ ಒಪ್ಪಿಗೆ ಪಡೆಯಬೇಕು. ಸಮಿತಿಯ ಗಮನಕ್ಕೆ ತರದೆ ಡಿನೋಟಿಫಿಕೇಷನ್ ಮಾಡಲಾಗಿದೆ ಎಂದು ಆರೋಪಿಸಿದರು.ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 2003ರಲ್ಲಿಯೇ ಡಿನೋಟಿಫಿಕೇಷನ್ ಸಮಿತಿ ರಚನೆಯಾಗಿದ್ದು, ಅದರಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಆದರೆ ಯಡಿಯೂರಪ್ಪ ಅವರು ತಮಗೆ ಬೇಕಾದ ಅಧಿಕಾರಿಗಳನ್ನು ಗೃಹ ಕಚೇರಿಗೆ ಕರೆಸಿಕೊಂಡು ಡಿನೋಟಿಫಿಕೇಷನ್‌ಗೆ ಆದೇಶಿಸಿದ್ದಾರೆ. ಈ ರೀತಿ ಮಾಡುವುದು ಸರಿಯಲ್ಲ ಎಂದು ಕೆಲ ಅಧಿಕಾರಿಗಳು ಸಲಹೆ ಮಾಡಿದ್ದರೂ, ಅದನ್ನು ಪರಿಗಣಿಸಿಲ್ಲ ಎಂದು ತಿಳಿಸಿದರು.ಯಡಿಯೂರಪ್ಪ ಅವರೇ ಬಿಡಿಎ, ಬೆಂಗಳೂರು ಅಭಿವೃದ್ಧಿಯ ಖಾತೆಗಳನ್ನು ನೋಡಿಕೊಳ್ಳುತ್ತಿದ್ದರು. ಅವರು ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಅತಿಹೆಚ್ಚು ಡಿನೋಟಿಫಿಕೇಷನ್ ಆಗಿದೆ. ಗೆದ್ದಲಹಳ್ಳಿಯಲ್ಲಿ 1.24 ಎಕರೆ ಭೂಮಿ ಡಿನೋಟಿಫಿಕೇಷನ್ ಆಗುವುದಕ್ಕೂ ಮೊದಲೇ ಸ್ಟಾಂಪ್‌ಪೇಪರ್ ಖರೀದಿ ಮಾಡಲಾಗಿದೆ. ಅಂದರೆ ಡಿನೋಟಿಫಿಕೇಷನ್ ಮಾಡಿದ ನಂತರ ಅದು ಯಾರ ಪಾಲಾಗಲಿದೆ ಎಂಬುದು ಮುಂಚೆಯೇ ನಿರ್ಧಾರವಾಗಿತ್ತು ಎಂಬುದನ್ನು ಗಮನಕ್ಕೆ ತಂದರು.ಅರ್ಜಿದಾರರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರೂ ದಾಖಲಿಸಿಕೊಳ್ಳಲಿಲ್ಲ. ಹೀಗಾಗಿ ಅವರು ರಾಜ್ಯಪಾಲರ ಮೊರೆ ಹೋದರು. ರಾಜ್ಯಪಾಲರು ನಿರ್ಧಾರ ತೆಗೆದುಕೊಳ್ಳುವ ಮೊದಲೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದಂತೆ ರಾಜ್ಯಪಾಲರಿಗೆ ಮನವಿ ಮಾಡುವ ನಿರ್ಣಯವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಅಲ್ಲದೆ ಅನುಮತಿ ನೀಡಿದ ನಂತರ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಯಿತು.ಅಧಿಕಾರದಲ್ಲಿ ಇದ್ದಾಗ ದೂರು ದಾಖಲಾಗದಂತೆ ನೋಡಿಕೊಳ್ಳಲು ಈ ರೀತಿ ಹಲವು ಒತ್ತಡ ತಂತ್ರಗಳನ್ನು ಹೇರಿದ್ದರು. ಈಗ ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶಪಡಿಸುವ, ಸಾಕ್ಷಿ ಹೇಳದಂತೆ ಒತ್ತಡ ಹೇರುವ ತಂತ್ರಗಳನ್ನು ಅನುಸರಿಸುವುದು ಖಚಿತ. ಆದ್ದರಿಂದ ಜಾಮೀನು ನೀಡಬಾರದು ಎಂದು ಕೋರಿದರು.ಸಮಿತಿ ಪುನರ್‌ರಚನೆ: ಡಿನೋಟಿಫಿಕೇಷನ್‌ಗೆ ಸಂಬಂಧಿಸಿದ ಸಮಿತಿಯನ್ನು 2010ರ ಅಕ್ಟೋಬರ್ 29ರಂದು ಪುನರ್‌ರಚಿಸಲಾಗಿದ್ದು, ಇದರಲ್ಲಿ ಹಿಂದೆ ಇದ್ದ ಐದು ಮಂದಿಯನ್ನು ಕೈಬಿಟ್ಟು, ತಮಗೆ ಬೇಕಾದವರನ್ನು ಸಮಿತಿಯ ಸದಸ್ಯರನ್ನಾಗಿ ಯಡಿಯೂರಪ್ಪ ನೇಮಕ ಮಾಡಿದ್ದರು. ಎಲ್ಲವೂ ತಾವು ಹೇಳಿದಂತೆ ಆಗಬೇಕು ಎಂಬ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿಯೇ ಯಡಿಯೂರಪ್ಪ ಸಮಿತಿಯನ್ನು ಪುನರ್‌ರಚಿಸಿದ್ದರು ಎಂದು ನ್ಯಾಯಾಲಯದ ಗಮನ ಸೆಳೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.