ಶನಿವಾರ, ಮೇ 21, 2022
27 °C

ಬಿಎಸ್‌ವೈ: ಎರಡು ಆರೋಪಗಳಲ್ಲಿ ಸತ್ಯಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಕೀಲ ಸಿರಾಜಿನ್ ಬಾಷಾ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಸಲ್ಲಿಸಿರುವ ಮೊದಲನೇ ಖಾಸಗಿ ದೂರಿನಲ್ಲಿರುವ ಮೂರು ಆರೋಪಗಳ ಪೈಕಿ ಎರಡರಲ್ಲಿ ಸತ್ಯಾಂಶವಿದೆ.ಮೂರನೇ ಆರೋಪದಲ್ಲಿ ಹುರುಳಿಲ್ಲ ಎಂದು ಲೋಕಾಯುಕ್ತ ಪೊಲೀಸರು ಸೋಮವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದರು.ಜನವರಿ 22ರಂದು ಬಾಷಾ ಸಲ್ಲಿಸಿದ್ದ ದೂರನ್ನು ವಿಚಾರಣೆಗೆ ಅಂಗೀಕರಿಸಿದ್ದ ವಿಶೇಷ ನ್ಯಾಯಾಲಯ, ದೂರಿನಲ್ಲಿರುವ ಆರೋಪಗಳ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ವಿಚಾರಣೆಯನ್ನು ಪೂರ್ಣಗೊಳಿಸಿದ್ದ ತನಿಖಾ ತಂಡ ಇತ್ತೀಚೆಗೆ ವರದಿ ಸಲ್ಲಿಸಿತ್ತು.ಪ್ರಕರಣದ ವಿಚಾರಣಾ ಅಧಿಕಾರಿಯಾಗಿದ್ದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಅಬ್ದುಲ್ ಅಹದ್ ನ್ಯಾಯಾಲಯಕ್ಕೆ ವರದಿ ಕುರಿತು ವಿವರ ನೀಡಿದರು.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ರಾಚೇನಹಳ್ಳಿಯ ಎರಡು ಪ್ರತ್ಯೇಕ ಸರ್ವೆ ನಂಬರ್‌ಗಳಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿ ಕಾನೂನುಬಾಹಿರವಾಗಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದನ್ನು ಮೊದಲ ಎರಡು ಆರೋಪಗಳಲ್ಲಿ ಉಲ್ಲೇಖಿಸಲಾಗಿತ್ತು. ಈ ಎರಡೂ ಆರೋಪಗಳಲ್ಲಿ ಸತ್ಯಾಂಶವಿದೆ ಎಂಬುದು ದಾಖಲೆಗಳ ಪರಿಶೀಲನೆಯಲ್ಲಿ ಪತ್ತೆಯಾಗಿದೆ ಎಂದು ಡಿವೈಎಸ್‌ಪಿ ನ್ಯಾಯಾಲಯಕ್ಕೆ ತಿಳಿಸಿದರು.ಯಡಿಯೂರಪ್ಪ ಅವರ ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಡೆವಲಪರ್ಸ್‌ಗೆ ಲಾಭವಾಗುವಂತೆ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದ ನಾಗವಾರ ಬಡಾವಣೆಯಲ್ಲಿ ರಸ್ತೆಯನ್ನೇ ಅಕ್ರಮವಾಗಿ ನಿವೇಶನವನ್ನಾಗಿ ಪರಿವರ್ತಿಸಿದ್ದಾರೆ ಎಂಬ ಮೂರನೇ ಆರೋಪ ದೂರಿನಲ್ಲಿತ್ತು.ಪ್ರಕರಣದಲ್ಲಿ ಉಲ್ಲೇಖಿಸಿರುವ ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ವಿವರಿಸಿದರು.ಮೊದಲ ಎರಡು ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಯಡಿಯೂರಪ್ಪ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಮತ್ತು ಅಳಿಯ ಆರ್.ಎನ್.ಸೋಹನ್‌ಕುಮಾರ್ ಅವರ ಒಡೆತನದ ಧವಳಗಿರಿ ಡೆವಲಪರ್ಸ್‌ಗೆ 19.60 ಕೋಟಿ ರೂಪಾಯಿ ಲಾಭವಾಗಿದೆ. ಯಡಿಯೂರಪ್ಪ ಪುತ್ರರು, ಅಳಿಯ ಮತ್ತು ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರು ಫೋರ್ಜರಿ ದಾಖಲೆಯೊಂದನ್ನು ಸೃಷ್ಟಿಸಿ, ಬಳಕೆ ಮಾಡಿರುವುದು ಪತ್ತೆಯಾಗಿದೆ ಎಂಬ ಅಂಶಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿವೆ.ಹೊಸ ಪ್ರಕರಣ ಪತ್ತೆ: ಮೊದಲ ಖಾಸಗಿ ದೂರಿನ ಆರೋಪಗಳ ತನಿಖೆಯ ವೇಳೆ ಕೆಲ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ನ್ಯಾಯಾಲಯ ಅನುಮತಿ ನೀಡಿದಲ್ಲಿ ಅವುಗಳ ತನಿಖೆ ನಡೆಸುವುದಾಗಿ ಅಹದ್ ತಿಳಿಸಿದರು.

ಆದರೆ, ಖಾಸಗಿ ದೂರಿನ ವ್ಯಾಪ್ತಿಯಲ್ಲಿ ತನಿಖೆ ಮುಂದುವರೆಸಲು ಅಸಾಧ್ಯ ಎಂದು ನ್ಯಾಯಾಧೀಶರು ಹೇಳಿದರು.

ಲೋಕಾಯುಕ್ತ ಪೊಲೀಸರಿಂದ ವಿವರಣೆ ಪಡೆದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.