ಗುರುವಾರ , ಮೇ 13, 2021
38 °C

ಬಿಎಸ್‌ವೈ ಪಕ್ಷಕ್ಕೆ ಕರೆ ತರಲು ದೆಹಲಿಗೆ ಸಂಸದರ ನಿಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲುರನ್ನು ಮತ್ತೆ ಪಕ್ಷಕ್ಕೆ ಕರೆತರಲು ರಾಜ್ಯ ಬಿಜೆಪಿ ಸಂಸದರ ನಿಯೋಗವು ಎರಡು ದಿನದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರ ಬಳಿ ಹೋಗಲಿದೆ ಎಂದು ಸಂಸದ ಶಿವರಾಮಗೌಡ ಹೇಳಿದರು.ಭಾನುವಾರ ಈ ಬಗ್ಗೆ ಮಾತನಾಡಿದ ಅವರು, ಬಿಎಸ್‌ವೈ ಮತ್ತು ಬಿಎಸ್‌ಆರ್ ಇಲ್ಲದೇ ರಾಜ್ಯದಲ್ಲಿ ಪಕ್ಷ ಸಂಘಟನೆ ಅಸಾಧ್ಯ ಎಂಬುವುದು ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಬಹುತೇಕ ಎಲ್ಲ ನಾಯಕರ ಗಮನಕ್ಕೆ ಬಂದಿದೆ.ಹೀಗಾಗಿ 2014ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಬಿಎಸ್‌ವೈ, ಬಿಎಸ್‌ಆರ್ ಅನಿವಾರ್ಯ ಎಂಬ ಕಾರಣಕ್ಕೆ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ರಾಷ್ಟ್ರೀಯ ನಾಯಕರ ಮನವೊಲಿಸಲು ಸಂಸದರ ನಿಯೋಗ ಹೋಗುತ್ತಿದೆ ಎಂದರು.ತೃತೀಯರಂಗ ಅಸಾಧ್ಯ: ದೇಶದ ಮಟ್ಟಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರ ರಾಷ್ಟ್ರೀಯ ಪಕ್ಷಗಳು. ಆದರೆ ಪ್ರಾದೇಶಿಕ ಪಕ್ಷಗಳು ಈ ಎರಡು ರಾಷ್ಟ್ರೀಯ ಪಕ್ಷವನ್ನು ಬದಿಗಿಟ್ಟು ತೃತೀಯರಂಗ ರಚಿಸಿ ದೇಶದ ಆಡಳಿತ ಚುಕ್ಕಾಣಿ ಹಿಡಿಯುವುದು ಅಸಾಧ್ಯ ಎಂದು ಸಂಸದ ಹೇಳಿದರು.ರಾಷ್ಟ್ರೀಯ ಪಕ್ಷಗಳಿಗೇ ನಿರೀಕ್ಷಿತ ಮಟ್ಟದಲ್ಲಿ ಬಲ ಸಾಲದ್ದರಿಂದ ಕೇಂದ್ರದಲ್ಲಿ ಎನ್‌ಡಿಎ, ಯುಪಿಎ ಎಂದು ಕೂಟಕಟ್ಟಿಕೊಂಡು ಸರ್ಕಾರ ರಚಿಸಿಕೊಳ್ಳುವಂತ ಸನ್ನಿವೇಶದಲ್ಲಿ ಪ್ರಾದೇಶಿಕ ಪಕ್ಷಗಳು ಸರ್ಕಾರ ರಚಿಸುವ ಹಂತಕ್ಕೆ ಬರುವುದು ಸಾಧ್ಯವಿಲ್ಲ ಎಂದರು.ಮೋದಿ ಚುನಾವಣಾ ಪ್ರಚಾರದ ಮುಖ್ಯಸ್ಥರಾಗಿರುವುದಕ್ಕೆ ಅದ್ವಾಣಿ ಅವರ ವಿರೋಧವಿಲ್ಲ. ಆದರೆ ಪಕ್ಷದಲ್ಲಿ ಕೆಲ ವೈಚಾರಿಕತೆ ವಿಭಿನ್ನ ನಿಲುವುಗಳಿವೆ. ಇಂದಿಗೂ ಅದ್ವಾನಿ ಅವರೇ ಪಕ್ಷದ ನಿರ್ಣಾಯ ನಾಯಕರು ಎಂಬುವುದರಲ್ಲಿ ಎರಡು ಮಾತಿಲ್ಲ.ಮೋದಿ ಅಲೆ ದೇಶದಾದ್ಯಂತ ಕೆಲಸ ಮಾಡುತ್ತಿದೆ. ವಿರೋಧ ಪಕ್ಷಗಳಿಂದಲೂ ಮೋದಿ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ನಿಲುವು ವ್ಯಕ್ತವಾಗುತ್ತಿದೆ. ಗುಜರಾತ್ ಮಾದರಿಯ ಅಭಿವೃದ್ಧಿ ದೇಶಕ್ಕೂ ವ್ಯಾಪಿಸಬೇಕೆಂಬ ಜನಸಾಮಾನ್ಯರ ನಿಲುವು ಮೋದಿಯತ್ತ ತಿರುಗಿದೆ ಎಂದು ಸಂಸದ ನುಡಿದರು.ಮುಖ್ಯಮಂತ್ರಿ ಗಾದಿಗೆ ಏರಿದ ತಕ್ಷಣ ಸಿದ್ದರಾಮಯ್ಯ, ಸಾಧಕ-ಭಾದಕ ಪರಿಶೀಲಿಸದೇ ವಿವೇಚನ ರಹಿತ ಯೋಜನೆ ಪ್ರಕಟಿಸುವುದು, ಮತ್ತೆ ಅವನ್ನು ಹಿಂದಕ್ಕೆ ಪಡೆಯುವ ಮೂಲಕ ಅಪ್ರಬುದ್ಧತೆ ಪ್ರದರ್ಶಿಸುತ್ತಿದ್ದಾರೆ ಎಂದು ಸಂಸದ ಟೀಕಿಸಿದರು.ಎಪಿಎಲ್‌ಗೂ ಅಕ್ಕಿ, ಮತ್ತೆ ಸಾರಾಯಿ ಜಾರಿಗೆ, ಅಗ್ಗದ ಸರಾಯಿ ತಯಾರಿ, ಎಲ್ಲ ದೇವಸ್ಥಾನ ಸರ್ಕಾರದ ವಶಕ್ಕೆ ಹೀಗೆ ತರೇಹವಾರಿ ಹೇಳಿಕೆ ನೀಡಿ ಹಿಂಪಡೆಯುತ್ತಿರುವ ಸಿಎಂ ಆಡಳಿತದಲ್ಲಿ ಇನ್ನೂ ಮಾಗಿಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ ಎಂದು ಸಂಸದ ಟೀಕಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.