ಶುಕ್ರವಾರ, ಮೇ 14, 2021
27 °C

ಬಿಎಸ್‌ವೈ ಬರ ರಾಜಕೀಯ: ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬರದ ವಿಷಯದಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ರೆಸಾರ್ಟ್ ರಾಜಕೀಯ, ದೆಹಲಿ ಯಾತ್ರೆ ಸಮಯದಲ್ಲಿ ಬರ ಪರಿಸ್ಥಿತಿ ಬಗ್ಗೆ ಮರೆವು ಪ್ರದರ್ಶಿಸಿದ್ದ ಅವರು ಈಗ ರಾಜಕೀಯಕ್ಕಾಗಿ ಪ್ರವಾಸ ಆರಂಭಿಸಿದ್ದಾರೆ~ ಎಂದು ಕಾಂಗ್ರೆಸ್ ಟೀಕಿಸಿದೆ.ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿರುವ ಜಗಜೀವನರಾಂ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ಅವರು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಬಾಬು ಜಗಜೀನರಾಂ ಜನ್ಮದಿನ ಸಮಾರಂಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಪರಮೇಶ್ವರ್, ಯಡಿಯೂರಪ್ಪ ಅವರ ಪ್ರವಾಸವನ್ನು ಟೀಕಿಸಿದರು.`ರಾಜ್ಯದ ಜನರು ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಅಧಿಕಾರಕ್ಕಾಗಿ ರೆಸಾರ್ಟ್ ವಾಸ, ದೆಹಲಿ ಯಾತ್ರೆ, ರಾಜಕೀಯ ಸಭೆಗಳನ್ನು ನಡೆಸುತ್ತಿದ್ದರು. ಆಗ ರಾಜ್ಯದಲ್ಲಿ ಬರ ಇರುವುದು ಅವರಿಗೆ ಗೊತ್ತಿರಲಿಲ್ಲವೆ. ಈಗ ಇದ್ದಕ್ಕಿದ್ದಂತೆ ಅವರಿಗೆ ಬರ ಪೀಡಿತ ಪ್ರದೇಶಗಳ ಜನರ ನೆನಪಾಯಿತೇ~ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.ವಿಧಾನಮಂಡಲ ಅಧಿವೇಶನದಲ್ಲಿ ಯಡಿಯೂರಪ್ಪ ಅವರು ಬರಪೀಡಿತ ಪ್ರದೇಶದ ಜನರ ಸಮಸ್ಯೆಗಳ ಬಗ್ಗೆ ಚಕಾರ ಎತ್ತಲಿಲ್ಲ. ಈಗ ಅವರು ಪ್ರವಾಸ ಹೊರಟಿರುವುದು ರಾಜಕೀಯ ಲಾಭಕ್ಕಾಗಿಯೇ ಹೊರತು, ಸಮಸ್ಯೆಗೆ ಸಿಲುಕಿರುವ ಜನರಿಗೆ ಪರಿಹಾರ ದೊರಕಿಸಲು ಅಲ್ಲ ಎಂದು ಟೀಕಿಸಿದರು.`ನಾನು ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯಗಳು, ವಸ್ತುಸ್ಥಿತಿ ಮತ್ತಿತರ ಅಂಶಗಳನ್ನು ಪರಿಶೀಲನೆ ನಡೆಸುತ್ತೇನೆ. ಶೀಘ್ರದಲ್ಲಿಯೇ ಪ್ರವಾಸ ಆರಂಭಿಸಲಿದ್ದು, ಪರಿಹಾರ ಕಾರ್ಯದಲ್ಲಿ ಸರ್ಕಾರದಿಂದ ಆಗಿರುವ ಲೋಪಗಳನ್ನು ಗುರುತಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತೇವೆ~ ಎಂದು ತಿಳಿಸಿದರು.`ಸರ್ಕಾರ ಅಸ್ಥಿರ~: `ಯಡಿಯೂರಪ್ಪ ಅವರು ಬರ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಬಿಜೆಪಿ ಸರ್ಕಾರ ಸ್ಥಿರವಾಗಿಲ್ಲ ಎಂಬ ಸಂದೇಹಕ್ಕೆ ಕಾರಣವಾಗಿದೆ. ಸದಾನಂದ ಗೌಡರಿಗೆ ತಮ್ಮ ಬೆಂಬಲ ಇಲ್ಲ ಎಂಬ ಸಂದೇಶ ರವಾನಿಸಲು ಯಡಿಯೂರಪ್ಪ ಪ್ರವಾಸ ಮಾಡುತ್ತಿದ್ದಾರೆ~ ಎಂದು ಪರಮೇಶ್ವರ್ ಹೇಳಿದರು.`ಬಿಜೆಪಿ ಸರ್ಕಾರ ಜನಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಬರಪೀಡಿತ ಪ್ರದೇಶದ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸಬೇಕಾದವರು ಅಧಿಕಾರಕ್ಕಾಗಿ ಸಂಘರ್ಷ ನಡೆಸುತ್ತಿದ್ದಾರೆ~ ಎಂದು ದೂರಿದರು.ಈ ಸರ್ಕಾರ ಕಾನೂನಿಗೆ ಗೌರವ ನೀಡುವ ಕೆಲಸ ಮಾಡುತ್ತಿಲ್ಲ. ಲೋಕಾಯುಕ್ತ, ಉಪ ಲೋಕಾಯುಕ್ತರ ನೇಮಕಾತಿಯಲ್ಲಿ ಕಾನೂನು ಪಾಲನೆಯಲ್ಲಿ ವಿಫಲವಾದ ಪರಿಣಾಮವಾಗಿ ಸರ್ಕಾರ ಮುಜುಗರಕ್ಕೆ ಒಳಗಾಗಿದೆ.ಇಂತಹವರು ಅಧಿಕಾರದಲ್ಲಿ ಉಳಿಯಬಾರದು. ತಕ್ಷಣವೇ ಹೊಸ ಜನಾದೇಶ ಪಡೆಯಲು ಮುಂದಾಗಬೇಕು ಎಂದು ಪರಮೇಶ್ವರ್ ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.