ಭಾನುವಾರ, ಮೇ 16, 2021
28 °C

ಬಿಎಸ್‌ವೈ ಬೆಂಗಾವಲು ಪಡೆ ಕಿರಿಕಿರಿ: ಕ್ರಮ ಕೋರಿ ವಕೀಲರ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಗಾವಲು ಪಡೆಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ನಿತಿನ್ ಬುಧವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.ಯಡಿಯೂರಪ್ಪ ವಿರುದ್ಧ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಐದು ಖಾಸಗಿ ದೂರುಗಳಲ್ಲಿ ನಿತಿನ್ ದೂರುದಾರರ ಪರವಾಗಿ ವಾದಿಸುತ್ತಿದ್ದಾರೆ. ಬುಧವಾರ ವಿಚಾರಣೆಗಾಗಿ ಪರಪ್ಪನ ಅಗ್ರಹಾರದಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ ಯಡಿಯೂರಪ್ಪ ಅವರ ಬೆಂಗಾವಲು ಪಡೆ ಸಿಬ್ಬಂದಿ ತಮ್ಮಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಅವರು ಮನವಿಯಲ್ಲಿ ದೂರಿದ್ದಾರೆ.`ಬೆಳಿಗ್ಗೆ 10.50ರ ಸುಮಾರಿಗೆ ನಾನು ವಾಹನದಲ್ಲಿ ನ್ಯಾಯಾಲಯದತ್ತ ತೆರಳುತ್ತಿದ್ದಾಗ ಹಿಂದಿನಿಂದ ಯಡಿಯೂರಪ್ಪ ಅವರು ಬೆಂಗಾವಲು ಪಡೆಯೊಂದಿಗೆ ಬಂದರು. ರಸ್ತೆಯಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದರೂ ಬೆಂಗಾವಲು ಪಡೆಯ ವಾಹನದಲ್ಲಿ ಪದೇ ಪದೇ `ಸೈರನ್~ ಮೊಳಗಿಸಿದರು. ಆದರೆ, ನ್ಯಾಯಾಲಯದ ಕಲಾಪಕ್ಕೆ ಸಕಾಲಕ್ಕೆ ಹಾಜರಾಗಬೇಕಿದ್ದರಿಂದ ಬಲಬದಿಯಲ್ಲಿ ಸಾಗುವಂತೆ ನಾನು ನನ್ನ ವಾಹನದ ಚಾಲಕನಿಗೆ ಸೂಚಿಸಿದೆ. ಆತ ಮುಂದೆ ಹೋದಂತೆಲ್ಲ ಬೆನ್ನಟ್ಟಿಕೊಂಡು ಬಂದ ಬೆಂಗಾವಲುಪಡೆ ಸಿಬ್ಬಂದಿ ಕಿರಿಕಿರಿ ಉಂಟುಮಾಡಿದರು~ ಎಂದು ತಿಳಿಸಿದ್ದಾರೆ.`ಬೆಂಗಾವಲು ಪಡೆಯ ಏಳಕ್ಕೂ ಹೆಚ್ಚು ವಾಹನಗಳು ಯಡಿಯೂರಪ್ಪ ಜೊತೆಗಿದ್ದವು. ಎರಡು ವಾಹನಗಳ ಚಾಲಕರು ನಮ್ಮ ವಾಹನಕ್ಕೆ ಡಿಕ್ಕಿ ಹೊಡೆಯುವ ರೀತಿಯಲ್ಲಿ ಹಾದು ಹೋದರು. ಹತ್ತಿರ ಬಂದು ವಾಹನ ನಿಲ್ಲಿಸಿ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ದಾರಿಯುದ್ದಕ್ಕೂ  ಹೀಗೆಯೇ ವರ್ತಿಸಿದರು. ಅವರ ಈ ವರ್ತನೆಯಿಂದ ಜನಸಾಮಾನ್ಯರೂ ತೀವ್ರ ತೊಂದರೆ ಅನುಭವಿಸಿದ್ದಾರೆ~ ಎಂದು ಆರೋಪಿಸಿದ್ದಾರೆ.`ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬರಿಗೆ ಸಾರ್ವಜನಿಕರ ತೆರಿಗೆ ಹಣವನ್ನು ವೆಚ್ಚಮಾಡಿ ಬೆಂಗಾವಲು ಒದಗಿಸಲಾಗಿದೆ. ಸಾರ್ವಜನಿಕರ ಹಣದಿಂದ ವೇತನ ಪಡೆಯುವ ಬೆಂಗಾವಲು ಪಡೆ ಸಿಬ್ಬಂದಿ ನಾಗರಿಕರನ್ನು ಕಾಲಕಸದಂತೆ ಕಾಣುವುದು ಸರಿಯಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸದಂತೆ ನ್ಯಾಯಾಲಯ ಬೆಂಗಾವಲು ಪಡೆಗೆ ನಿರ್ದೇಶನ ನೀಡಬೇಕು~ ಎಂದು ಮನವಿಯಲ್ಲಿ ಕೋರಿದ್ದಾರೆ.

ಖಾಸಗಿ ದೂರಿನ ವಿಚಾರಣೆ ಅಂತ್ಯಗೊಂಡ ಬಳಿಕ ನಿತಿನ್ ಅವರು ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಲಿಖಿತ ರೂಪದಲ್ಲಿ ಪ್ರಮಾಣ ಪತ್ರ ಸಲ್ಲಿಸಿದರೆ ಮನವಿಯನ್ನು ಪರಿಶೀಲಿಸುವುದಾಗಿ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ತಿಳಿಸಿದರು. ಬಳಿಕ ನಿತಿನ್ ಪ್ರಮಾಣಪತ್ರ ಸಲ್ಲಿಸಿದರು.ದಾಖಲೆ ವಶಕ್ಕೆ ಅರ್ಜಿ: ಯಡಿಯೂರಪ್ಪ ವಿರುದ್ಧ ಸಿರಾಜಿನ್ ಬಾಷಾ ಸಲ್ಲಿಸಿದ್ದ ಎರಡನೇ ಖಾಸಗಿ ದೂರಿನ ವಿಚಾರಣೆ ಬುಧವಾರ ಆರಂಭವಾಯಿತು. ಪ್ರಕರಣದಲ್ಲಿನ ಸಾಕ್ಷಿಗಳು ಮತ್ತು ಸಾಕ್ಷ್ಯಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ನಿತಿನ್, ದೂರಿನಲ್ಲಿ ಉಲ್ಲೇಖಿಸಿರುವ 30 ದಾಖಲೆಗಳ ಮೂಲ ಪ್ರತಿಗಳನ್ನು ಸರ್ಕಾರದಿಂದ ಪಡೆಯುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.ತಾವು ಉಲ್ಲೇಖಿಸಿರುವ ದಾಖಲೆಗಳು, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಬಳಿ ಇವೆ. ಈ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿ, ದಾಖಲೆಗಳ ಮೂಲ ಪ್ರತಿಗಳನ್ನು ವಶಕ್ಕೆ ಪಡೆಯಬೇಕು. ಯಡಿಯೂರಪ್ಪ ಅವರು ಪ್ರಭಾವಿ ರಾಜಕಾರಣಿ ಆಗಿರುವುದರಿಂದ ಸಾಕ್ಷ್ಯ ನಾಶದ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.ದೂರುದಾರರ ಮನವಿಯನ್ನು ಸ್ವೀಕರಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 30ಕ್ಕೆ ಮುಂದೂಡಿದರು. ಸಿರಾಜಿನ್ ಬಾಷಾ ಸಲ್ಲಿಸಿರುವ ಮೊದಲನೇ ಖಾಸಗಿ ದೂರಿನ ವಿಚಾರಣೆಯನ್ನು ಮೇ 25ಕ್ಕೆ ಮತ್ತು ಮೂರನೇ ದೂರಿನ ವಿಚಾರಣೆಯನ್ನು ಏ.30ಕ್ಕೆ ಮುಂದೂಡಿ ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ಆದೇಶ ಹೊರಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.