ಶನಿವಾರ, ಮೇ 15, 2021
29 °C

ಬಿಗ್‌ಬಾಸ್ ಸಮಾರೋಪಕ್ಕೆ ತಾರಾ ಮೆರುಗು

-ರಮೇಶ ಕೆ. Updated:

ಅಕ್ಷರ ಗಾತ್ರ : | |

ಒಂದೇ ಮನೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು, ವಿವಾದಕ್ಕೀಡಾದವರು, ವಿವಾದ ಮಾಡಿದವರು ಹೀಗೆ ಬಗೆಬಗೆಯ ವ್ಯಕ್ತಿಗಳ 77 ದಿನಗಳ ಸ್ನೇಹ, ರಾಗದ್ವೇಷ, ಕಿತ್ತಾಟ ಹಾಗೂ ಕಣ್ಣೀರಿನ ಕಥೆಯನ್ನು ಯಥಾವತ್ತಾಗಿ ವೀಕ್ಷಕರಿಗೆ ಉಣಬಡಿಸುತ್ತಿರುವ (ಕೆಲ ದೃಶ್ಯಗಳು ಎಡಿಟ್ ಆಗಿ) ಈಟೀವಿ ಕನ್ನಡ ವಾಹಿನಿಯ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಶನಿವಾರ (ಜೂ.29) ತೆರೆಬೀಳಲಿದೆ.ಮುಂಬೈನಿಂದ ನೂರು ಕಿಲೋಮೀಟರ್ ದೂರದ ಲೋನಾವಾಲಾ ಗಿರಿಧಾಮದಲ್ಲಿರುವ ಸೆಟ್‌ನಲ್ಲಿ ಬಿಗ್‌ಬಾಸ್ ಶೋ ಚಿತ್ರೀಕರಣವಾಗುತ್ತಿದೆ. ಕನ್ನಡದ ಬಿಗ್‌ಬಾಸ್ 77 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಪತ್ರಕರ್ತರನ್ನು ಆಹ್ವಾನಿಸಿದ್ದ ಈ ಟೀವಿ ವಾಹಿನಿ ಬಳಗ ರಿಯಾಲಿಟಿ ಶೋ ಯಶಸ್ಸಿನ ಸಿಂಹಾವಲೋಕನ ಮಾಡಿತು. ರಿಯಾಲಿಟಿ ಶೋಗಳ ಕಾರ್ಯಕ್ರಮ ಮುಖ್ಯಸ್ಥ ರಾಘವೇಂದ್ರ ಹುಣಸೂರು ಬಿಗ್‌ಬಾಸ್ ಕುರಿತು `ಮೆಟ್ರೊ'ದೊಂದಿಗೆ ಮಾತಿಗಿಳಿದರು.ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಹೇಳಿ...

ನಾಲ್ಕನೇ ಸ್ಥಾನದಲ್ಲಿದ್ದ ಈಟೀವಿ ಕನ್ನಡ ವಾಹಿನಿ 320 ಪಾಯಿಂಟ್ ಪಡೆದುಕೊಂಡು (ಜಿ.ಆರ್.ಪಿ) ಉತ್ತಮ ಸ್ಥಾನದಲ್ಲಿದೆ. ವಾರಪೂರ್ತಿ ಟಿಆರ್‌ಪಿ 5.8ರಷ್ಟು ಸರಾಸರಿ ಹೊಂದಿದ್ದು, ಇತರೆ ವಾಹಿನಿಗಳನ್ನು ಹಿಂದಿಕ್ಕಿದೆ. ಆತಿಥೇಯರಾಗಿ ವಾರಂತ್ಯದಲ್ಲಿ ಕಾಣಿಸಿಕೊಳ್ಳುವ ಸುದೀಪ್ ಜನರ ಹೃದಯ ಗೆದ್ದಿದ್ದಾರೆ. ರಾಷ್ಟ್ರ ಮಟ್ಟದ ಕಾರ್ಯಕ್ರಮಗಳಿಗಿಂತ ಹೆಚ್ಚು ಎಸ್‌ಎಂಎಸ್ ಬಂದ ಕಾರ್ಯಕ್ರಮ ಎಂಬ ಹೆಗ್ಗಳಿಕೆ ವಾಹಿನಿಯದ್ದು. ವಾರಕ್ಕೆ ಒಟ್ಟು 70 ಸಾವಿರ ಓಟುಗಳು ಬರುತ್ತಿವೆ. ಇನ್ನು ಮೂರು ವಾರ ಮಾತ್ರ ಕಾರ್ಯಕ್ರಮವಿದ್ದು, ಅಂತಿಮವಾಗಿ ಮೂವರು ಉಳಿದುಕೊಳ್ಳುತ್ತಾರೆ. ಅವರಲ್ಲಿ ಒಬ್ಬರು ಮಾತ್ರ ಬಿಗ್‌ಬಾಸ್ `ಅಧಿಪತಿ'ಯಾಗುತ್ತಾರೆ. ಅವರು  ರೂ 50ಲಕ್ಷ ಬಹುಮಾನ ಪಡೆಯಲಿದ್ದಾರೆ.ಎಸ್‌ಎಂಎಸ್ ಮತದಾನದಲ್ಲಿ ರಾಜಕೀಯ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಕುರಿತು ಏನು ಹೇಳುತ್ತೀರಾ?

ಇದು ಶುದ್ಧ ಸುಳ್ಳು. ಎಸ್‌ಎಂಎಸ್‌ಗಳ ನಿರ್ವಹಣೆ ಮೂರನೇ ವ್ಯಕ್ತಿ ನೋಡಿಕೊಳ್ಳುವುದು. ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಆಡಿಟ್ ಸಂಸ್ಥೆಯೊಂದು ಇದರ ವರದಿ ಮಾಡುತ್ತದೆ. ಬೇಕಿದ್ದರೆ ನೋಡಬಹುದು.ಕಾರ್ಯಕ್ರಮ ಕುರಿತು ಬಂದಿರುವ ಟೀಕೆಗಳ ಬಗ್ಗೆ ಗಮನಕ್ಕೆ ಬಂದಿದೆಯಾ?

ಆರಂಭವಾದ ದಿನಗಳಲ್ಲಿ ನೂತನ ರಿಯಾಲಿಟಿ ಕಾರ್ಯಕ್ರಮಕ್ಕೆ ಸಾಮಾನ್ಯ ಪ್ರೇಕ್ಷಕರ ಮನಸ್ಸುಗಳು ಒಗ್ಗಿಕೊಂಡಿರಲಿಲ್ಲ. ಇಲ್ಲಿ ಸಂಗೀತದ ಅಬ್ಬರವಿಲ್ಲ. ಒಂದೇ ಮನೆಯಲ್ಲಿ ಅದೇ ಸ್ಪರ್ಧಿಗಳನ್ನು ಪದೇ ಪದೇ ನೋಡುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದರು. ನರೇಂದ್ರ ಬಾಬು ಶರ್ಮಾ ವಿರುದ್ಧ ದೂರುಗಳು ಬಂದವು. ನಂತರ ಅವರ ಮಗುವಿನ ಮನಸ್ಸು ಕಂಡು ಇಷ್ಟಪಟ್ಟರು. ದಿನ ಕಳೆದಂತೆ ಕಾರ್ಯಕ್ರಮವೂ ಹಿಟ್ ಆಯಿತು. ಜಗಳವಾಡೋದನ್ನೇ ಕೆಲವರು ಇಷ್ಟಪಡುತ್ತಾರೆ. ಅವರು ಹೀಗೆ ಮಾತಾಡಬಾರದಿತ್ತು ಎಂದು ಹೇಳುತ್ತಾರೆ. ಜನರಿಗೆ ಯಾವುದು ಇಷ್ಟವಾಗುತ್ತದೆ, ಯಾವುದು ಆಗೋದಿಲ್ಲ ಎಂದು ಹೇಳುವುದೇ ಕಷ್ಟ. ಸ್ಪರ್ಧಿಗಳ ಜೀವನ ಶೈಲಿಗೆ ಹೊಂದುವಂಥ ಟಾಸ್ಕ್‌ಗಳನ್ನೇ ಕೊಡುತ್ತೇವೆ. ಹಾಗಾಗಿ ಇಲ್ಲಿ ಪಾರದರ್ಶಕತೆ ಇದೆ.ಈ ರಿಯಾಲಿಟಿ ಶೋನಲ್ಲಿ ಕನ್ನಡ ಸಂಸ್ಕೃತಿ ಪ್ರತಿಬಿಂಬಿತವಾಗಿದಿಯಾ?

ಯಾವುದೇ ಶೋಗಳಲ್ಲೂ ಕನ್ನಡತನ ನೋಡುವುದಕ್ಕಾಗುವುದಿಲ್ಲ, ಈಗಿರುವ ಕನ್ನಡದ ಕೆಲವು ಸುದ್ದಿ ಚಾನಲ್‌ಗಳಲ್ಲೂ ಈ ಅಂಶ ಗಮನಿಸುವುದು ಕಷ್ಟ. ಈ ರಿಯಾಲಿಟಿ ಶೋ 94 ಭಾಷೆಗಳಲ್ಲಿ ನಡೆದಿದ್ದು, ಕನ್ನಡದಲ್ಲೂ ಯಶಸ್ವಿಯಾಗಿದೆ. ಇದೇ ಕನ್ನಡ ಸಂಸ್ಕೃತಿಗೆ ನೀಡುವ ಕೊಡುಗೆ.

ದೇಶದಲ್ಲಿ ಹಿಂದಿ ಭಾಷೆ ಬಿಟ್ಟು ಬೇರೆ ಯಾವುದೇ ಭಾಷೆಗಳಲ್ಲಿ ಬಂದಿಲ್ಲ. ನಿಖಿತಾ ಕನ್ನಡ ಕಲಿಯಲು ತೋರುತ್ತಿರುವ ಶ್ರದ್ಧೆ ಮೆಚ್ಚುವಂಥದ್ದು.ಅಶರೀರ ಧ್ವನಿಯ ಬಿಗ್‌ಬಾಸ್ ಯಾರು?

ಬಿಗ್‌ಬಾಸ್ ಅನಾಮಧೇಯ ವ್ಯಕ್ತಿ. ಯಾರು ಎಂದು ಹೇಳಲಾಗುವುದಿಲ್ಲ. ಸಂಸ್ಥೆಯೊಂದಿಗೆ ಗುತ್ತಿಗೆಯಾಗಿದೆ. ಅವರನ್ನು ಹಾಗೆಯೇ ಇಡುತ್ತೇವೆ. ಅವರ ವಿವರ ಬಯಲು ಮಾಡಲಾಗುವುದಿಲ್ಲ. ಅವರ ಧ್ವನಿಯೇ ಮಾಧ್ಯಮ.ಎರಡನೇ ಆವೃತ್ತಿ ಮಾಡುವ ಬಗ್ಗೆ ಚಿಂತನೆ ಇದೆಯಾ?

ಹೌದು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನಮೆಚ್ಚುಗೆ ಪಡೆದು, ಟಿಆರ್‌ಪಿ ಹೆಚ್ಚಿಸಿರುವ ಬಿಗ್‌ಬಾಸ್ 2ನೇ ಆವೃತ್ತಿಯನ್ನು ಮುಂದಿನ ವರ್ಷ ಆರಂಭಿಸುವ ಯೋಜನೆ ಇದೆ.ಅಂತಿಮವಾಗಿ `ಬಿಗ್‌ಬಾಸ್'ನ ಸಂದೇಶ?

ಬಿಗ್‌ಬಾಸ್ ಎಂಬುದೊಂದು ಚಿಕ್ಕ ಜಗತ್ತು. 100 ದಿನ ಹೊರಜಗತ್ತಿನ ಸಂಪರ್ಕವಿಲ್ಲದೇ ಇರುವಾಗ ಸ್ಪರ್ಧಿಗಳು ಮಾಡುವ ಕೆಲಸಕ್ಕೂ, ನಿಜಜೀವನಕ್ಕೂ ವ್ಯತ್ಯಾಸವಿದೆ. ಅಲ್ಲಿ ಕ್ಯಾಮೆರಾಗಳಿವೆ ಅಂತಾ ಗೊತ್ತಿದ್ದೂ ಬದುಕುತ್ತಿದ್ದಾರೆ. ಪ್ರತಿ ವೀಕ್ಷಕ ಸ್ಪರ್ಧಿಗಳ ಸ್ಥಾನದಲ್ಲಿ ನಿಂತು ಯೋಚಿಸಿ ನೋಡುತ್ತಾನೆ. ಅದೇ ಇದರ ಪ್ರಭಾವ. ಇದೊಂದು `ಸೈಕಾಲಜಿಕಲ್ ಗೇಮ್' ಅಷ್ಟೇ ಎಂದು ಹೇಳಬಹುದು.

ಹದಿನಾರು ಸ್ಪರ್ಧಿಗಳಲ್ಲಿ ನರೇಂದ್ರ ಬಾಬು ಶರ್ಮಾ, ಅರುಣ್ ಸಾಗರ್, ವಿಜಯ ರಾಘವೇಂದ್ರ, ನಿಖಿತಾ ಹಾಗೂ ಚಂದ್ರಿಕಾ ಉಳಿದುಕೊಂಡಿದ್ದಾರೆ. ವೀಕ್ಷಕರ ಪ್ರೀತಿಗೆ ಪಾತ್ರರಾಗಿ ಉಳಿಯುವ ಸ್ಪರ್ಧಿ ಯಾರು ಎಂಬುದು 29ರಂದು ಗೊತ್ತಾಗಲಿದೆ.ಗ್ರಾಂಡ್ ಫಿನಾಲೆ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ನಟರಾದ ಅಂಬರೀಷ್, ರವಿಚಂದ್ರನ್, ಗಣೇಶ್, ನಟಿ ರಮ್ಯಾ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರಂತೆ. ಜೊತೆಗೆ ಸ್ಪರ್ಧಿಗಳ ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ. 700 ಮಂದಿ ತಾಂತ್ರಿಕ ವರ್ಗ ಕೆಲಸ ನಿರ್ವಹಿಸಿರುವ ಬಿಗ್‌ಬಾಸ್ ಕಾರ್ಯಕ್ರಮ 29ರಂದು ರಾತ್ರಿ 8ರಿಂದ 11ರವರೆಗೆ ಪ್ರಸಾರವಾಗಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.