ಗುರುವಾರ , ಜನವರಿ 30, 2020
20 °C

ಬಿಜೆಪಿಗೆ ಮರಳದಂತೆ ಬಿಎಸ್‌ವೈಗೆ ಚಂಪಾ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಾವುದೇ ಕಾರಣಕ್ಕೂ ತಾವು ಬಿಜೆಪಿಗೆ ಮರಳಬಾರದು ಎಂದು ಕೆಜೆಪಿ ಮುಖಂಡರೂ ಆದ ಸಾಹಿತಿ ಪ್ರೊ ಚಂದ್ರಶೇಖರ ಪಾಟೀಲ ಅವರು ಬಿ.ಎಸ್‌.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಯಡಿಯೂರಪ್ಪ ಅವರಿಗೆ ಚಂಪಾ ಶನಿವಾರ ಪತ್ರ ಬರೆದಿದ್ದು, ಅದರ ಪ್ರತಿಯನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದಾರೆ.ಡಿ.9ರಂದು ಕೆಜೆಪಿಯ ಕಾರ್ಯಕಾರಿಣಿಗೆ ಚಂಪಾ ಅವರನ್ನು ಯಡಿಯೂರಪ್ಪ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಚಂಪಾ ಅವರು ಪತ್ರ ಬರೆದಿದ್ದು, ಅದರಲ್ಲಿ ಈ ರೀತಿ ಇದೆ. ‘ಹಾವೇರಿಯ ಉದ್ಘಾಟನಾ ಸಮಾವೇಶದ ಮೂಲಕ ಅಸ್ತಿತ್ವಕ್ಕೆ ಬಂದ, ತಮ್ಮ ನಾಯಕತ್ವದ ಕರ್ನಾಟಕ ಜನತಾಪಕ್ಷ ಈಗ ಕವಲು ದಾರಿಯಲ್ಲಿದೆ.

ಅಲ್ಪಾವಧಿಯಲ್ಲೇ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 10ರಷ್ಟು ಮತಗಳನ್ನು, ಆರು ಶಾಸಕ ಸ್ಥಾನಗಳನ್ನು ಗಳಿಸಿದ್ದು ಸಣ್ಣ ಸಾಧನೆಯೇನಲ್ಲ. ಈ ಪರಿಯ ಬೆಂಬಲ ಕೆಜೆಪಿಗೆ ಸಿಕ್ಕಿದ್ದು ಅದು ಜಾತ್ಯತೀತ ನೆಲೆಯ ಅಪ್ಪಟ ಪ್ರಾದೇಶಿಕ ಪಕ್ಷವಾಗಿದ್ದರಿಂದ ಪಕ್ಷದ ಪ್ರಣಾಳಿಕೆಯಲ್ಲೂ ಈ ಅಂಶ ಸ್ಪಷ್ಟವಾಗಿದೆ. ಹೀಗಾಗಿ ಕನ್ನಡ ನಾಡಿನ ಜನಾದೇಶಕ್ಕೆ ದ್ರೋಹ ಬಗೆಯುವ ರೀತಿಯಲ್ಲಿ ನಮ್ಮ ನಾಯಕರಾದ ತಾವು ಮತ್ತೆ ತಮ್ಮ ಮೂಲ ಪಕ್ಷಕ್ಕೆ (ಬಿಜೆಪಿ) ವಾಪಸು ಹೋಗಬಾರದು.

ಲೋಕಸಭಾ ಚುನಾವಣೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಮುಂದಿನ ವಿಧಾನಸಭಾ ಚುನಾವಣೆಯತ್ತ ಮುಖ ಮಾಡಿ, ಕೆಜೆಪಿಯನ್ನು ಪ್ರಬಲ ಪ್ರತಿಪಕ್ಷವನ್ನಾಗಿ ಕಟ್ಟಲು ತಮ್ಮ ಶಕ್ತಿಯನ್ನು ಮೀಸಲಿಡಬೇಕು. ಈ ದಿಸೆಯಲ್ಲಿ ಕಾರ್ಯಾಧ್ಯಕ್ಷೆ ಶೋಭಾ ಕರಂದ್ಲಾಜೆ ಅವರ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ. ಕೂಡಲೇ ರಾಜ್ಯದಲ್ಲಿ ಮಿಂಚಿನ ಸಂಚಾರ ಕೈಗೊಳ್ಳಬೇಕು. ನನ್ನ ಈ ಮಾತಿನ ಹಿಂದೆ ಸಾವಿರಾರು ಕಾರ್ಯಕರ್ತರ ದನಿ ಇದೆ ಎಂಬುದನ್ನು ಗಮನಿಸಬೇಕು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರತಿಕ್ರಿಯಿಸಿ (+)