ಶನಿವಾರ, ಮೇ 21, 2022
23 °C

ಬಿಜೆಪಿಗೆ ಯಡಿಯೂರಪ್ಪ: ಸದ್ಯಕ್ಕೆ ಅನುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಜತೆಗಿನ ಮೈತ್ರಿ ಮತ್ತು ಸ್ಥಾನ ಹೊಂದಾಣಿಕೆ ಕುರಿತು ಪಕ್ಷದ ರಾಷ್ಟ್ರೀಯ ಮುಖಂಡರ ಜತೆ ಚರ್ಚೆ ನಡೆಸುವುದಾಗಿ ಕೆಜೆಪಿಯ ಬಿ.ಎಸ್. ಯಡಿಯೂರಪ್ಪ ಅವರು ಹೇಳಿರುವ ಕಾರಣ ಅವರ ಮರು ಸೇರ್ಪಡೆ ಕುರಿತು ಶುಕ್ರವಾರ ನಡೆದ ರಾಜ್ಯ ಬಿಜೆಪಿ ಪ್ರಮುಖರ ಸಭೆಯಲ್ಲಿ ಯಾವುದೇ ಚರ್ಚೆ ಆಗಲಿಲ್ಲ ಎನ್ನಲಾಗಿದೆ.ದೆಹಲಿಮಟ್ಟದಲ್ಲೇ ಅವರು ಮಾತು ಕತೆ ನಡೆಸುವ ಇಂಗಿತ ವ್ಯಕ್ತಪಡಿಸಿರುವ ಕಾರಣ, ರಾಜ್ಯ ಮಟ್ಟದಲ್ಲಿ ಆ ಕುರಿತು ಚರ್ಚೆ ನಡೆಸುವುದರಲ್ಲಿ ಅರ್ಥ ಇಲ್ಲ ಎಂದು ಆ ವಿಷಯವನ್ನು ಅಲ್ಲಿಗೇ ಕೈಬಿಟ್ಟರು ಎಂದು ಗೊತ್ತಾಗಿದೆ.ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತಂದ ನಂತರ ಅವರಿಗೆ ವಿಧಾನ ಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಬೇಕು ಎನ್ನುವ ಬೇಡಿಕೆಯನ್ನು ಅವರ ಬೆಂಬಲಿಗರು ಬಿಜೆಪಿ ಮುಖಂಡರ ಮುಂದೆ ಇಟ್ಟಿದ್ದಾರೆ.

ಇದಲ್ಲದೆ, ಲೋಕಸಭಾ ಚುನಾವಣೆ ಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಮತ್ತು ಶಿವಕುಮಾರ್ ಉದಾಸಿ ಅವರಿಗೆ ಟಿಕೆಟ್ ನೀಡಬೇಕು, ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಅವರ ಹೆಸರನ್ನು ಪರಿಗಣಿಸಬೇಕು ಎನ್ನುವ ಷರತ್ತು ಗಳನ್ನೂ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಷರತ್ತುಗಳಲ್ಲಿ ಟಿಕೆಟ್ ಕೊಡುವ ವಿಷಯ ಬಿಟ್ಟರೆ ಉಳಿದ ವಿಷಯಗಳ ಬಗ್ಗೆ ಪಕ್ಷದ ವರಿಷ್ಠರು ಕೂಡ ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಯಡಿಯೂರಪ್ಪ ಅವರು ಸದ್ಯಕ್ಕೆ ಬಿಜೆಪಿಗೆ ಮರಳುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.