ಸೋಮವಾರ, ಏಪ್ರಿಲ್ 12, 2021
23 °C

ಬಿಜೆಪಿಯಲ್ಲಿ ಒಡಕು ತಂದ ಗಡ್ಕರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಮುಖಂಡರ ಬಾಯಿಗೆ ಬೀಗ ಹಾಕುವಲ್ಲಿ ಆರೆಸ್ಸೆಸ್ ಯಶಸ್ವಿ

ನವದೆಹಲಿ: ಸುಳ್ಳು ವಿಳಾಸ ಮತ್ತು ಹೆಸರುಗಳನ್ನು ನೀಡಿ ಕಂಪೆನಿಗಳನ್ನು ಸ್ಥಾಪಿಸಿದ ಆರೋಪಕ್ಕೆ ಒಳಗಾಗಿರುವ ನಿತಿನ್ ಗಡ್ಕರಿ ಅವರನ್ನು  ಹಿರಿಯ ನಾಯಕರ ಭಿನ್ನಾಭಿಪ್ರಾಯದ ಮಧ್ಯೆಯೇ ಬೆಂಬಲಿಸಲು ಬಿಜೆಪಿ ತೀರ್ಮಾನಿಸಿರುವುದರಿಂದ ಸದ್ಯಕ್ಕೆ ಪಕ್ಷದ ಅಧ್ಯಕ್ಷರು ಬಿಕ್ಕಟ್ಟಿನಿಂದ ಪಾರಾಗಿದ್ದಾರೆ. ಡಿಸೆಂಬರ್‌ಗೆ ಅಂತ್ಯವಾಗಲಿರುವ ಅವಧಿ ಪೂರೈಸಲು ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಎರಡನೇ ಅವಧಿಗೆ ಮುಂದುವರಿಸುವ ಕುರಿತು ಅನುಮಾನ ತಲೆದೋರಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಗಾದಿಯಲ್ಲಿ ನಿತಿನ್ ಗಡ್ಕರಿ ಮುಂದುವರಿಕೆಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಒಡಕು ಮೂಡಿರುವುದು ಸ್ಪಷ್ಟವಾಗಿದೆ.ಬಿಜೆಪಿ ಅಧ್ಯಕ್ಷರ ರಾಜೀನಾಮೆಗೆ ಹೆಚ್ಚಿದ ಒತ್ತಡದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಸಭೆ ಸೇರಿದ್ದ ಹಿರಿಯ ಮುಖಂಡರು ಎರಡು ಗಂಟೆ ಸಮಾಲೋಚಿಸಿದ ಬಳಿಕ  `ಗಡ್ಕರಿ ನೈತಿಕವಾಗಿ ಹಾಗೂ ಕಾನೂನು ದೃಷ್ಟಿಯಿಂದ ಯಾವುದೇ ತಪ್ಪು ಮಾಡಿಲ್ಲ~ ಎಂಬ ತೀರ್ಮಾನಕ್ಕೆ ಬಂದರು. ಆದರೆ, ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಈ ನಿರ್ಧಾರದಲ್ಲಿ ಭಾಗಿಯಾಗಲಿಲ್ಲ. ಇವರಿಬ್ಬರೂ ಸಭೆಗೆ ಗೈರುಹಾಜರಾದರು.ಸಮರ್ಥನೆ: ತಮ್ಮ ಮೇಲೆ ಬಂದಿರುವ ಆರೋಪದ ಸಂಬಂಧ ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಹೇಳಿರುವ ಗಡ್ಕರಿ ಅವರ ಹೇಳಿಕೆಯನ್ನು ಬಿಜೆಪಿ ಸಮರ್ಥನೆ ಮಾಡಿತು. ಈ ಬಗ್ಗೆ ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರು ನೀಡಿರುವ ಜಂಟಿ ಹೇಳಿಕೆಯನ್ನು ಮತ್ತೊಬ್ಬ ಮುಖಂಡ ರವಿಶಂಕರ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಓದಿದರು. ಗಡ್ಕರಿ ನಾಯಕತ್ವದಲ್ಲಿ ಪೂರ್ಣ ವಿಶ್ವಾಸವಿದೆ ಎಂದು ಹೇಳಿಕೆ ಸ್ಪಷ್ಟಪಡಿಸಿದೆ.  ಬಿಜೆಪಿ ಮುಖಂಡರ ಬಾಯಿಗೆ ಬೀಗ ಹಾಕುವ ಕೆಲಸವನ್ನು  ಆರೆಸ್ಸೆಸ್ ಯಶಸ್ವಿಯಾಗಿ ಮಾಡಿದೆ.ಅವ್ಯವಹಾರ ಆರೋಪಗಳ ಹಿನ್ನೆಲೆಯಲ್ಲಿ ಗಡ್ಕರಿ ರಾಜೀನಾಮೆ ನೀಡಬೇಕೆಂದು ಖ್ಯಾತ ವಕೀಲ ಮಹೇಶ್ ಜೇಠ್ಮಲಾನಿ ದನಿ ಎತ್ತಿದ ಬೆನ್ನಲ್ಲೇ ಬಿಜೆಪಿ ರಾಜ್ಯಸಭಾ ಸದಸ್ಯ ರಾಂ ಜೇಠ್ಮಲಾನಿ ಅವರೂ ಈ ಬೇಡಿಕೆಗೆ ಕೈಜೋಡಿಸಿದರು. ಗಡ್ಕರಿ ರಾಜೀನಾಮೆ ನೀಡಬೇಕೆಂಬ ಬೇಡಿಕೆ ಇಟ್ಟರು. ಈ ಬೇಡಿಕೆಗೆ ಯಶವಂತ ಸಿನ್ಹಾ, ಜಸ್ವಂತ್ ಸಿಂಗ್ ಹಾಗೂ ಶತ್ರುಘ್ನ ಸಿನ್ಹಾ ಆವರ ಬೆಂಬಲವಿದೆ ಎಂದು ಪ್ರತಿಪಾದಿಸಿದರು.ಗಡ್ಕರಿ ರಾಜೀನಾಮೆ ಬೇಡಿಕೆ ಹಿನ್ನೆಲೆಯಲ್ಲಿ ಆರೆಸ್ಸೆಸ್ ಚಿಂತಕ ಎಸ್. ಗುರುಮೂರ್ತಿ ಅವರು, ಸುಷ್ಮಾ, ಜೇಟ್ಲಿ ಮತ್ತಿತರರನ್ನು ಭೇಟಿ ಮಾಡಿ ಆರೋಪದ ಸ್ವರೂಪ ಕುರಿತು ವಿವರಿಸಿದರು. ಈ ಆರೋಪಗಳು ಮೇಲ್ನೋಟಕ್ಕೆ ಸತ್ಯವೆಂದು ಕಂಡುಬರುತ್ತಿವೆ. ವಾಸ್ತವದಲ್ಲಿ ಯಾವುದೇ ಹುರುಳಿಲ್ಲ ಎಂದು ಮನವರಿಕೆ ಮಾಡಿದರು. ಗಡ್ಕರಿ ನಾಯಕತ್ವ ಬೆಂಬಲಿಸಬೇಕೆಂಬ ಆರ್‌ಎಸ್‌ಎಸ್ ಆದೇಶವನ್ನು ಬಿಜೆಪಿ ಮುಖಂಡರಿಗೆ ರವಾನಿಸಿದರು.ರಾಜೀನಾಮೆ ಬೇಡಿಕೆಯಿಂದ ವಿಚಲಿತರಾದ ಗಡ್ಕರಿ, ಖುದ್ದು ಸುಷ್ಮಾ ಹಾಗೂ ಜೇಟ್ಲಿ ಅವರ ಮನೆಗೆ ದೌಡಾಯಿಸಿ ಮಾತುಕತೆ ನಡೆಸಿದರು. ಅನಂತರ ಸುಷ್ಮಾ ಬಹಿರಂಗವಾಗಿ ಗಡ್ಕರಿ ಅವರಿಗೆ ಬೆಂಬಲ ಸೂಚಿಸಿದರು. `ನಾನು ಬಿಜೆಪಿ ಅಧ್ಯಕ್ಷರನ್ನು ವಿರೋಧ ಮಾಡುತ್ತಿದ್ದೇನೆ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಮಾತು~ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕಿ ಸ್ಪಷ್ಟಪಡಿಸಿದರು.

ಆರೋಪಗಳ ಸುಳಿಗೆ ಸಿಕ್ಕಿರುವ ಬಿಜೆಪಿ ಅಧ್ಯಕ್ಷರನ್ನು ತಕ್ಷಣ ಬದಲಾವಣೆ ಮಾಡಬೇಕೆಂಬ ನಿಲುವು ಹೊಂದಿರುವ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಸುಷ್ಮಾ ಸ್ವರಾಜ್ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಜೇಟ್ಲಿ, ಅನಂತ ಕುಮಾರ್ ಹಾಗೂ ಬಲಬೀರ್‌ಸಿಂಗ್ ಅವರಿದ್ದರು. ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಪ್ರಮುಖರ ಸಮಿತಿ ಸಭೆಗೆ ಹಾಜರಾಗಲು ಅಡ್ವಾಣಿ ಅವರಿಗೆ ಮನವಿ ಮಾಡಿದರು. ಈ ಮನವಿ ಫಲ ನೀಡಲಿಲ್ಲ.ಪ್ರಮುಖರ ಸಭೆಗೆ ಅಡ್ವಾಣಿ ಗೈರು ಹಾಜರಾದ ಬಗ್ಗೆ ರವಿಶಂಕರ್ ಪ್ರಸಾದ್ ಹಾರಿಕೆ ಉತ್ತರ ಕೊಟ್ಟರು. ಗಡ್ಕರಿ ಮೇಲಿನ ಆರೋಪಗಳನ್ನು ಕುರಿತು ಗುರುಮೂರ್ತಿ ಹಿರಿಯ ನಾಯಕರಿಗೆ ಸಮಗ್ರ ವಾಗಿ ಮನವರಿಕೆ ಮಾಡಿದ್ದಾರೆ ಎಂದರು.ನಿತಿನ್ ಗಡ್ಕರಿ ಅವರಿಗೆ ಆರ್‌ಎಸ್‌ಎಸ್ ಬೆಂಬಲವಿದೆ. ಈ ಕಾರಣದಿಂದಾಗಿಯೇ ಅವರನ್ನು ಎರಡನೇ ಅವಧಿಗೆ ಮುಂದುವರಿಸಲು ಪಕ್ಷದ ಸಂವಿಧಾನ  ತಿದ್ದುಪಡಿ ಮಾಡಲಾಗಿದೆ. ಡಿಸೆಂಬರ್ ಬಳಿಕ ಗಡ್ಕರಿ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.