ಬೆಂಗಳೂರು: ದೀರ್ಘ ಕಾಲದಿಂದ ಮುನಿಸಿಕೊಂಡಿದ್ದ ರಾಜ್ಯ ಬಿಜೆಪಿ ನಾಯಕರ ನಡುವೆ ಶನಿವಾರದಿಂದ ಸಂಧಾನ ಪರ್ವ ಆರಂಭವಾಗಿದೆ. ಸುಪ್ರೀಂ ಕೋರ್ಟ್ನ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ತಮ್ಮ ವಿರುದ್ಧ ತನಿಖೆಗೆ ಶಿಫಾರಸು ಮಾಡಿದ ಮರುದಿನವೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಕೈ ಕುಲುಕಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ಸಲ್ಲಿಸಿದ್ದ ವರದಿ ಆಧರಿಸಿ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಥಮ ಮಾಹಿತಿ ವರದಿಯನ್ನು ರದ್ದುಗೊಳಿಸಿ ಹೈಕೋರ್ಟ್ ತೀರ್ಪು ನೀಡಿದ ದಿನದಿಂದಲೇ ಬಿಜೆಪಿ ಇಬ್ಭಾಗವಾಗಿತ್ತು. ಹಿಂದೆ ನೀಡಿದ್ದ ವಾಗ್ದಾನದಂತೆ ಮತ್ತೆ ಮುಖ್ಯಮಂತ್ರಿ ಪಟ್ಟ ನೀಡುವಂತೆ ಯಡಿಯೂರಪ್ಪ ಪಟ್ಟುಹಿಡಿದಿದ್ದರು. ಇದರಿಂದಾಗಿ ಯಡಿಯೂರಪ್ಪ, ಸದಾನಂದ ಗೌಡ ಮತ್ತು ಈಶ್ವರಪ್ಪ ನಡುವೆ ಸಂಬಂಧ ಕಡಿದಿತ್ತು.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ `ಜಗನ್ನಾಥ ಭವನ~ದಲ್ಲಿ ಸಂಜೆ ನಡೆದ ಸಭೆಯಲ್ಲಿ ಯಡಿಯೂರಪ್ಪ, ಸದಾನಂದ ಗೌಡ, ಈಶ್ವರಪ್ಪ, ಸಚಿವ ಜಗದೀಶ ಶೆಟ್ಟರ್, ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್ ಪಾಲ್ಗೊಂಡಿದ್ದರು. ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ನಾಯಕರು, ಒಗ್ಗಟ್ಟಿನ ಮಂತ್ರ ಜಪಿಸುತ್ತಾ ಹೊರಬಂದರು. ದೀರ್ಘ ಕಾಲದಿಂದ ಮುಖ ಕಂಡರಾಗದ ಸ್ಥಿತಿಯಲ್ಲಿದ್ದವರು ಪರಸ್ಪರ ನಗುತ್ತಲೇ ಮಾತುಕತೆಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು.

ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಈಶ್ವರಪ್ಪ, `ಕೆಲ ದಿನಗಳಿಂದ ರಾಜ್ಯ ಬಿಜೆಪಿಯಲ್ಲಿ ಗೊಂದಲ ಇದ್ದುದು ನಿಜ. ಈಗ ಅವೆಲ್ಲಕ್ಕೂ ವಿರಾಮ ಬಿದ್ದಿದೆ. ನಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಪರಿಹರಿಸಿಕೊಂಡಿದ್ದೇವೆ. ಎಲ್ಲರೂ ಮುಕ್ತವಾಗಿ ಮಾತನಾಡಿದ್ದೇವೆ. ಇನ್ನು ಯಾವುದೇ ಸಮಸ್ಯೆಗೂ ಅವಕಾಶ ಇಲ್ಲ~ ಎಂದರು. `ನಾಯಕರಲ್ಲಿ ಇದ್ದ ಗೊಂದಲದಿಂದಾಗಿ ಕಾರ್ಯಕರ್ತರೂ ಗೊಂದಲಕ್ಕೆ ಒಳಗಾಗಿದ್ದರು. ಈಗ ನಮ್ಮ ನಡುವೆ ಸಹಮತ ವ್ಯಕ್ತವಾಗಿರುವುದರಿಂದ ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗಳಿಸುವುದು ನಮ್ಮ ಗುರಿ. ಆ ದಿಕ್ಕಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನ ನಡೆಸುತ್ತೇವೆ~ ಎಂದರು.

ದಿಢೀರ್ ಬೆಳವಣಿಗೆ: ಯಡಿಯೂರಪ್ಪ ವಿರುದ್ಧ ಸಿಇಸಿ ಶುಕ್ರವಾರ ವರದಿ ಸಲ್ಲಿಸಿದ್ದರಿಂದ ಆತಂಕಕ್ಕೆ ಸಿಲುಕಿದ ಯಡಿಯೂರಪ್ಪ ಬೆಂಬಲಿಗರು ಶನಿವಾರ ಬೆಳಿಗ್ಗೆಯೇ ಈಶ್ವರಪ್ಪ ಅವರನ್ನು ಭೇಟಿ ಮಾಡಿ ಸಂಧಾನ ಸಭೆಗೆ ವೇದಿಕೆ ಸಿದ್ಧಪಡಿಸಿದರು. ಈಶ್ವರಪ್ಪ ಅವರನ್ನು ಭೇಟಿ ಮಾಡಿದ ಸಚಿವರಾದ ಜಗದೀಶ ಶೆಟ್ಟರ್, ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ ಮತ್ತಿತರರು, ಸಿಇಸಿ ವರದಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಯಡಿಯೂರಪ್ಪ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದರು.

ಅವರನ್ನು ಒಬ್ಬಂಟಿಯಾಗಿ ಬಿಡದೇ ಪಕ್ಷದ ಮೂಲಕವೇ ನೈತಿಕ ಸ್ಥೈರ್ಯ ತುಂಬುವಂತೆ ಆಗ್ರಹಿಸಿದರು.
ಬಳಿಕ ಯಡಿಯೂರಪ್ಪ ಅವರನ್ನು ಖುದ್ದಾಗಿ ಭೇಟಿ ಮಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸತೀಶ್, ಸಂಜೆ ನಡೆಯುವ ಸಂಧಾನ ಸಭೆ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸೂಚಿಸಿದ್ದರು. ಈ ಎಲ್ಲ ಬೆಳವಣಿಗೆಗಳು ಮೂವರೂ ನಾಯಕರು ಒಂದೆಡೆ ಸೇರಲು ಕಾರಣವಾದವು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮುಕ್ತ ಮಾತುಕತೆ: ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಎಲ್ಲರೂ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಯಡಿಯೂರಪ್ಪ ಕೂಡ ಸಭೆಯಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ನಡುವಿನ ಭಿನ್ನಾಭಿಪ್ರಾಯ ಪಕ್ಷದ ಸಂಘಟನೆಗೆ ಪೆಟ್ಟು ನೀಡುತ್ತಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಕಾರ್ಯಕ್ರಮವನ್ನು ತುರ್ತಾಗಿ ಹಮ್ಮಿಕೊಳ್ಳಬೇಕೆಂಬ ಇಂಗಿತ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರಿಂದಲೂ ವ್ಯಕ್ತವಾಗಿದೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದೊಳಗಿನ ಭಿನ್ನಾಭಿಪ್ರಾಯ ಸೋಲಿಗೆ ಕಾರಣವಾಯಿತು ಎಂಬುದನ್ನು ವಿಶ್ಲೇಷಿಸಿದ್ದಾರೆ. ಮತ್ತೆ ಅಂತಹ ಪರಿಸ್ಥಿತಿ ಮರುಕಳಿಸದಂತೆ ತಡೆಯುವ ಉದ್ದೇಶದಿಂದ ಒಟ್ಟಾಗಿ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಸಿಇಸಿ ವರದಿ ಮತ್ತು ನ್ಯಾಯಾಲಯಗಳಲ್ಲಿರುವ ಪ್ರಕರಣಗಳಲ್ಲಿ ಸಂಪೂರ್ಣವಾಗಿ ಪಕ್ಷವೇ ಬೆಂಬಲಕ್ಕೆ ನಿಲ್ಲಲಿದೆ ಎಂಬ ಭರವಸೆಯನ್ನು ಸಭೆಯಲ್ಲಿದ್ದ ಎಲ್ಲರೂ ಯಡಿಯೂರಪ್ಪ ಅವರಿಗೆ ನೀಡಿದ್ದಾರೆ. ಈ ವಿಚಾರದಲ್ಲಿ ಕಡೆಗಣಿಸುವ ಅಥವಾ ಒಬ್ಬಂಟಿಯಾಗಿಸುವ ಪ್ರಶ್ನೆಯೇ ಇಲ್ಲ ಎಂಬ ವಾಗ್ದಾನವನ್ನೂ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಸಂಪುಟ ವಿಸ್ತರಣೆ ಸೇರಿದಂತೆ ಯಾವುದೇ ರಾಜಕೀಯ ವಿಚಾರದ ಬಗ್ಗೆ ಶನಿವಾರದ ಸಭೆಯಲ್ಲಿ ಚರ್ಚೆ ನಡೆದಿಲ್ಲ.
ಇದೇ 25 ಅಥವಾ 26ರಂದು ನಡೆಯುವ ಪಕ್ಷದ ಪ್ರಮುಖರ ಸಭೆಯಲ್ಲಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸುವ ನಿರ್ಧಾರಕ್ಕೆ ಬರಲಾಗಿದೆ. ಮತ್ತೊಂದು ಸುತ್ತಿನ ಸಭೆ ನಡೆಸಿ ಪಕ್ಷದ ನಾಯಕರ ರಾಜ್ಯ ಪ್ರವಾಸ ಮತ್ತಿತರ ಕಾರ್ಯಕ್ರಮಗಳನ್ನು ನಿಗದಿ ಮಾಡಲು ತೀರ್ಮಾನಿಸಲಾಗಿದೆ ಎಂದು ಗೊತ್ತಾಗಿದೆ.

ಒಗ್ಗಟ್ಟಿಗಾಗಿ ಸಭೆ: ಸಭೆ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಜಗದೀಶ ಶೆಟ್ಟರ್, `ಒಂದಡೆ ಕುಳಿತು ಮಾತುಕತೆ ನಡೆಸುವಂತೆ ಪಕ್ಷದ ಹೈಕಮಾಂಡ್ ಸಲಹೆ ನೀಡಿತ್ತು. ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಮುನ್ನ ಈ ರೀತಿಯ ಸಭೆಗಳು ಅಗತ್ಯ ಎಂದು ವರಿಷ್ಠರು ಸೂಚಿಸಿದ್ದರು. ಒಗ್ಗಟ್ಟಿನಿಂದ ಮುನ್ನಡೆದು ಪಕ್ಷ ಸಂಘಟಿಸುವುದು ಶನಿವಾರದ ಸಭೆಯ ಪ್ರಮುಖ ಉದ್ದೇಶವಾಗಿತ್ತು~ ಎಂದರು.

`ಶಿಫಾರಸಿನ ಹಿಂದೆ ಹುನ್ನಾರ~: `ಸಿಇಸಿ ಶುಕ್ರವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಲ್ಲಿಸಿರುವ ಶಿಫಾರಸುಗಳ ಹಿಂದೆ ಕೆಲವರ ಹುನ್ನಾರವಿದೆ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಶನಿವಾರ ಬೆಳಿಗ್ಗೆ ಪಕ್ಷದ ಕಚೇರಿಯಲ್ಲಿ ಸಚಿವರ ಜೊತೆ ಚರ್ಚೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, `ಸಿಇಸಿ ಶಿಫಾರಸುಗಳ ಮೂಲಕ ಬಿಜೆಪಿಯ ಹಿರಿಯ ನಾಯಕರನ್ನು ಬೆದರಿಸುವ ತಂತ್ರ ನಡೆಯುತ್ತಿದೆ. ಯಡಿಯೂರಪ್ಪ ಅವರ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡಿರುವುದರ ಹಿಂದೆಯೂ ಹುನ್ನಾರವಿದೆ. ಯಾರು ಈ ರೀತಿಯ ಹುನ್ನಾರ ಮಾಡಿರುವವರು ಎಂಬುದು ಸದ್ಯದಲ್ಲೇ ಬಹಿರಂಗವಾಗಲಿದೆ. ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ಯಡಿಯೂರಪ್ಪ ಅವರಿಗೆ ನ್ಯಾಯ ದೊರೆಯುವುದು ಖಚಿತ~ ಎಂದರು.

`ಮುಖ್ಯಮಂತ್ರಿಯವರ ಬಳಿ 20ಕ್ಕೂ ಹೆಚ್ಚು ಖಾತೆಗಳಿವೆ. ಆಡಳಿತಾತ್ಮಕ ದೃಷ್ಟಿಯಿಂದ ಖಾತೆಗಳ ಮರುಹಂಚಿಕೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹತ್ತು ದಿನಗಳೊಳಗೆ ಖಾತೆಗಳ ಮರುಹಂಚಿಕೆ ಮಾಡಲಾಗುವುದು~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.