ಮಂಗಳವಾರ, ಮಾರ್ಚ್ 2, 2021
31 °C
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ್‌ಗೆ ಮತ್ತೆ ನಿರಾಸೆ

ಬಿಜೆಪಿಯ ಜಿ.ಎಂ.ಸಿದ್ದೇಶ್ವರ್‌ಗೆ ಹ್ಯಾಟ್ರಿಕ್‌ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿಯ ಜಿ.ಎಂ.ಸಿದ್ದೇಶ್ವರ್‌ಗೆ ಹ್ಯಾಟ್ರಿಕ್‌ ಗೆಲುವು

ದಾವಣಗೆರೆ: ಎಲ್ಲಾ ಲೆಕ್ಕಾಚಾರಗಳನ್ನೂ ತಲೆಕೆಳಗೆ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಸತತ ಮೂರನೇ ಬಾರಿ ಜಯಭೇರಿ ಭಾರಿಸಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದರು.ಆ ಮೂಲಕ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್ (1984, 1989, 1991) ಅವರ ಸಾಧನೆ ಸರಿಗಟ್ಟಿದರು. ಬಿಜೆಪಿ ಗೆಲುವಿನ ಓಟಕ್ಕೆ ತಡೆ ಹಾಕುವಲ್ಲಿ ವಿಫಲರಾದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಸತತ ಮೂರನೇ ಬಾರಿಯೂ ಸಿದ್ದೇಶ್ವರ ಅವರ ಎದುರು ಸೋಲೊಪ್ಪಿಕೊಂಡರು.ಮಲ್ಲಿಕಾರ್ಜುನ್‌ 5,01,287 ಮತ ಪಡೆದರೆ, ಜಿ.ಎಂ.ಸಿದ್ದೇಶ್ವರ 5,18,894 ಮತ ಪಡೆಯುವ ಮೂಲಕ 17,601 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.2004ರಲ್ಲಿ ಮೊದಲ ಪ್ರಯತ್ನದಲ್ಲೇ ಸಂಸತ್‌ ಪ್ರವೇಶಿಸಿದ್ದ ಸಿದ್ದೇಶ್ವರ, ನಂತರ 2009ರ ಚುನಾವಣೆಯಲ್ಲೂ ಗೆಲುವು ಪಡೆದಿದ್ದರು. ಇದೀಗ ಮೂರನೇ ಬಾರಿ ಜಯಮಾಲೆ ಅವರ ಕೊರಳಿಗೆ ಬಿದ್ದಿದೆ.ಕೊನೆಯ ಕ್ಷಣದಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್‌.ಪಟೇಲ್‌ ಅವರ ಪುತ್ರ ಮಹಿಮ ಪಟೇಲ್‌ ಕೇವಲ 47,957 ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.ಎಣಿಕೆಯ ಕೆಲ ಸಮಯದ ನಂತರ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ್‌ ಒಂದು ಹಂತದಲ್ಲಿ 20 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದರು. 6ನೇ ಸುತ್ತಿನ ನಂತರ ಮುನ್ನಡೆಯ ಅಂತರ ಕಡಿಮೆಯಾಗುತ್ತಾ ಬಂದು 10ನೇ ಸುತ್ತಿನ ನಂತರ ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ ಮುನ್ನಡೆ ಸಾಧಿಸಿದರು. ಆ ಮುನ್ನಡೆಯನ್ನು ಕೊನೆಯ ಸುತ್ತಿನವರೆಗೂ ಕಾಯ್ದುಕೊಂಡರು.ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ದಾವಣಗೆರೆ ಉತ್ತರ, ಹರಪನಹಳ್ಳಿ, ಹೊನ್ನಾಳಿ ಹಾಗೂ ಚನ್ನಗಿರಿ ಮತದಾರರು ಸಿದ್ದೇಶ್ವರ ಅವರಿಗೆ ಮುನ್ನಡೆ ನೀಡುವ ಮೂಲಕ ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.ದಾವಣಗೆರೆ ದಕ್ಷಿಣ, ಹರಿಹರ, ಮಾಯಕೊಂಡ ಹಾಗೂ ಜಗಳೂರು ವಿಧಾನಸಭಾ ಕ್ಷೇತ್ರದ ಮತದಾರರು ಮಲ್ಲಿಕಾರ್ಜುನ್‌ ಅವರ ಕೈ ಹಿಡಿದರೂ, ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.ಫಲಿತಾಂಶ ಪ್ರಕಟವಾಗುತ್ತಿದಂತೆ ಮತಎಣಿಕೆ ಕೇಂದ್ರದಲ್ಲಿದ್ದ ಬಿಜೆಪಿ ಏಜೆಂಟರು, ಸಿದ್ದೇಶ್ವರ ಪರ ಘೋಷಣೆ ಕೂಗುತ್ತಾ ವಿಜಯೋತ್ಸವ ಆಚರಿಸಿದರು. ಕೇಂದ್ರದ ಹೊರಗೆ ಜಮಾಯಿಸಿದ್ದ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲುಮುಟ್ಟಿದ್ದವು.‘ಗೆಲುವು ಅಭಿವೃದ್ಧಿಗೆ ಸಹಕಾರಿ’

ದಾವಣಗೆರೆ:
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಗೆಲುವಿನಿಂದ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಸಂತಸ ವ್ಯಕ್ತಪಡಿಸಿದರು.

ಶುಕ್ರವಾರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಮತದಾರರು ಮೂರನೇ ಬಾರಿಯೂ ಗೆಲುವಿನ ದಡ ಸೇರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.ತಂದೆ–ತಾಯಿ ಆಶೀರ್ವಾದ, ನರೇಂದ್ರ ಮೋದಿ ಅಲೆ, ಯಡಿಯೂರಪ್ಪ ವರ್ಚಸ್ಸು, ಪ್ರತಿ ಗ್ರಾಮದ ಜತೆಗೂ ತಾವು ಹೊಂದಿರುವ ನಂಟು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಪರಿಶ್ರಮದಿಂದ ನನಗೆ ಗೆಲುವು ದೊರೆತಿದೆ ಎಂದು ಕೃತಜ್ಞತೆ ಸಲ್ಲಿಸಿದರು.ಜಿಲ್ಲಾ ಉಸ್ತುವಾರಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರು, ಕೇಂದ್ರದಿಂದ ಆಗಬಹುದಾದ ಕೆಲಸಗಳ ಪಟ್ಟಿ ನೀಡಲಿ, ಅದನ್ನು ಮಂಜೂರು ಮಾಡಿ ಸುತ್ತೇನೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸುತ್ತೇನೆ. ಮೋದಿ ದಾವಣಗೆರೆ ರ್‍ಯಾಲಿಯಲ್ಲಿ ಹೇಳಿದ ಮಾತಿನಂತೆ ಕ್ಷೇತ್ರಕ್ಕೆ ಲಕ್ಷ್ಮೀ ಕಳುಹಿಸಲಿದ್ದಾರೆ ಎಂದು ಭವಿಷ್ಯ ನುಡಿದರು.ಹ್ಯಾಟ್ರಿಕ್‌ ಗೆಲುವು ಸಾಧಿಸಿದ ತಾವು ಸಚಿವ ಸ್ಥಾನದ ಆಕಾಂಕ್ಷಿಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೇಡ ಎನ್ನಲು ಸನ್ಯಾಸಿಯಲ್ಲ. ಅದು ನರೇಂದ್ರ ಮೋದಿ ಅವರಿಗೆ ಬಿಟ್ಟ ವಿಚಾರ ಎಂದರು.ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 8 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿ ಗಳನ್ನು ಗೆಲ್ಲಿಸಲು ಶ್ರಮಿಸುವೆ. ಪಕ್ಷ ಬಿಟ್ಟು ಹೋದ ಹರಿಹರದ ಮಾಜಿ ಶಾಸಕ ಬಿ.ಪಿ.ಹರೀಶ್‌ ಮತ್ತಿತರನ್ನು ಕರೆತರುವ ಪ್ರಯತ್ನ ಮಾಡಲಾರೆ. ಅವರಿಗೆ ಪಕ್ಷದ ಬಾಗಿಲು ತೆರೆಯುವುದಿಲ್ಲ ಎಂದರು.ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ, ಬಿಜೆಪಿ ಮುಖಂಡರಾದ ಎಂ.ಪಿ.ರೇಣುಕಾಚಾರ್ಯ, ಮಾಡಾಳ್‌ ವಿರೂಪಾಕ್ಷಪ್ಪ, ಎಸ್‌.ವಿ. ರಾಮಚಂದ್ರ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.