ಶನಿವಾರ, ಮೇ 8, 2021
19 °C

ಬಿಜೆಪಿಯ ತಾಯಿ ಬೇರಿಗೆ ಕಳಚಿಕೊಳ್ಳುವ ಇಂಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಲ್ ಕೃಷ್ಣ ಅಡ್ವಾಣಿ ಎಂದೇ ಚಿರಪರಿಚಿತರಾದ ರಾಷ್ಟ್ರ ರಾಜಕಾರಣದ ಬಿಜೆಪಿಯ ಹಿರಿಯ ನಾಯಕ ಲಾಲ್ ಕಿಶನ್‌ಚಂದ್ ಅಡ್ವಾಣಿ ಜನಿಸಿದ್ದು 1927ರ ನವೆಂಬರ್ 8ರಂದು ಅಂದಿನ ಅವಿಭಜಿತ, ಸ್ವತಂತ್ರ್ಯ ಪೂರ್ವ ಭಾರತದ ಸಿಂಧ್ ಪ್ರಾಂತ್ಯದ ಗೊರೆಗಾಂವ್‌ನಲ್ಲಿ.

ಹಿಂದೂ ಸಂಪ್ರದಾಯದ ಸಿಂಧ್ ಕುಟುಂಬದಲ್ಲಿ ಕಿಶನ್‌ಚಂದ್ ಡಿ. ಅಡ್ವಾಣಿ ಹಾಗೂ ಜ್ಞಾನಿ ದೇವಿ ಅವರ ಪುತ್ರನಾಗಿ ಜನಿಸಿದರು. ಕರಾಚಿಯ ಸೆಂಟ್ ಪಾಟ್ರಿಕ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಪಡೆದರು. ನಂತರ ಸಿಂಧ್ ಪ್ರಾಂತ್ಯದ ಹೈದರಾಬಾದ್‌ನ ಡಿ.ಜಿ. ರಾಷ್ಟ್ರೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಮುಂಬೈನ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.ರಾಜಕೀಯ ಪ್ರವೇಶ:

1947ರಲ್ಲಿ ಕರಾಚಿಯ ರಾಷ್ಟ್ರೀಯ ಸ್ವಯಂ ಸೇವಾ ಸಂಘ(ಆರ್‌ಎಸ್‌ಎಸ್)ದ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ಅಡ್ವಾಣಿ ತಮ್ಮ ರಾಜಕೀಯ ಭವಿಷ್ಯಕ್ಕೆ ಮುನ್ನುಡಿ ಬರೆದರು.ಜನ ಸಂಘದಿಂದ ಜನತಾ ಪಾರ್ಟಿಗೆ:

1951ರಲ್ಲಿ ಶ್ಯಾಂಪ್ರಸಾದ್ ಮುಖರ್ಜಿ ಅವರು ಆರಂಭಿಸಿದ ಭಾರತೀಯ ಜನ ಸಂಘದ ಸದಸ್ಯರಾಗುವ ಮೂಲಕ ಅಡ್ವಾಣಿ ಗುರುತಿಸಿಕೊಳ್ಳಲು ಆರಂಭಿಸಿದರು. ನಂತರದ ದಿನಗಳಲ್ಲಿ ಸಂಘದ ವಿವಿಧ ಹುದ್ದೆಗಳನ್ನು ನಿರ್ವಹಿಸಿ, 1975ರಲ್ಲಿ ಅಧ್ಯಕ್ಷ ಸ್ಥಾನ ಅಲಂಕರಿಸಿದರು.ತುರ್ತು ಪರಿಸ್ಥಿತಿ ಘೋಷಣೆ ವಿರುದ್ಧ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಸಾಮೂಹಿಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಜನಸಂಘ ಮತ್ತು  ಇತರ ಪಕ್ಷಗಳು ಜನತಾ ಪಾರ್ಟಿಯಲ್ಲಿ ವಿಲೀನವಾದವು. ಅಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಜತೆಯಾಗುವ ಮೂಲಕ 1977ರ ಲೋಕಸಭಾ ಚುನಾವಣೆ ಎದುರಿಸಿದರು.

ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿ ಅವರ ಸಂಪುಟ ಸಭೆಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಪ್ರಸಾರ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದರು.ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಅಡ್ವಾಣಿ, ಬಿಜೆಪಿಯಿಂದ ಭಾರತದ 7ನೇ ಉಪ ಪ್ರಧಾನಿಯಾಗಿ, ಗೃಹ ಖಾತೆ ಸಚಿವರಾಗಿ (2002ರ ಫೆ. 5ರಿಂದ 2004ರ ಮೇ 22) ತಮ್ಮ ಅನುಪಮ ಸೇವೆ ಸಲ್ಲಿಸಿದ್ದಾರೆ.

ಸಂಸತ್‌ನಲ್ಲಿ 10 ಮತ್ತು 14ನೇ ಸರ್ಕಾರಗಳ ಆಡಳಿತದ ವೇಳೆ ವಿರೋಧ ಪಕ್ಷದ ನಾಯಕನಾಗಿ ಕಾರ್ಯ ನಿರ್ವಹಿಸಿದರು.ಯಾತ್ರೆಗಳು...

ಅಡ್ವಾಣಿ ತಮ್ಮ ನೇತೃತ್ವದಲ್ಲಿ  ಆರು ರಥ ಯಾತ್ರೆ ಕೈಗೊಳ್ಳುವ ಮೂಲಕ ಮತ್ತೊಂದು ಛಾಪು ಮೂಡಿಸಿದ ವ್ಯಕ್ತಿ.

* 1990ರಲ್ಲಿ `ರಾಮ ರಥ' ಯಾತ್ರೆಯನ್ನು ಗುಜರಾತ್‌ನ ಸೋಮನಾಥದಿಂದ ಅಯೋಧ್ಯೆವರೆಗೆ  ಕೈಗೊಂಡರು.

* 1993ರಲ್ಲಿ `ಜನಾದೇಶ' ಯಾತ್ರೆಯನ್ನು ಮೈಸೂರಿನಿಂದ ಆರಂಭಿಸಿದರು. ಈ ಯಾತ್ರೆ 14 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ಸಂಚರಿಸಿತು.

* 1997ರಲ್ಲಿ `ಸ್ವರ್ಣ ಜಯಂತಿ' ರಥ ಯಾತ್ರೆ.

* 2004ರಲ್ಲಿ `ಭಾರತ ಉದಯ' ಯಾತ್ರೆ ನಡೆಸಿದರು.

* 2006ರಲ್ಲಿ ಭಾರತ `ಸುರಕ್ಷಾ ಯಾತ್ರೆ' ನಡೆಯಿತು. ಈ ವೇಳೆ  ದ್ವಾರಕಾದಿಂದ ನವದೆಹಲಿವರೆಗೆ ಯಾತ್ರೆ ಅಡ್ವಾಣಿ ನೇತೃತ್ವದಲ್ಲಿ ನಡೆದರೆ, ಮತ್ತೊಬ್ಬ ಮುಖಂಡ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಓಡಿಶಾದ ಜಗನ್ನಾಥ ಪುರಿಯಿಂದ ನವದೆಹಲಿವರೆಗೆ ಯಾತ್ರೆ ನಡೆಯಿತು.

* 2011ರಲ್ಲಿ `ಜನ ಚೇತನ' ಯಾತ್ರೆಗೆ ಬಿಹಾರದಲ್ಲಿ ಚಾಲನೆ ನೀಡುವ ಮೂಲಕ ಅಡ್ವಾಣಿ ಪಕ್ಷದ ರಾಷ್ಟ್ರೀಯ ನಾಯಕರಾಗಿ ಗುರುತಿಸಿಕೊಂಡವರು.`ಮೈ ಕಂಟ್ರಿ ಮೈ ಲೈಫ್' ಜೀವನ ಚರಿತ್ರೆಯ 1,040 ಪುಟಗಳ ಬೃಹತ್ ಪುಸ್ತಕವನ್ನು ಅಡ್ವಾಣಿ ರಚಿಸುವ ಮೂಲಕ ತಮ್ಮ ರಾಜಕೀಯ ಜೀವನದ ಅನುಭವನ್ನು ಅದರಲ್ಲಿ ತೆರೆದಿಟ್ಟಿದ್ದಾರೆ. ಈ ಪುಸ್ತಕವನ್ನು 2008ರ ಮಾರ್ಚ್ 19ರಂದು ಅಬ್ದುಲ್ ಕಲಾಂ ಬಿಡುಗಡೆ ಮಾಡಿದ್ದಾರೆ.ಪಕ್ಷವೊಂದನ್ನು ಆರಂಭದ ದಿನಗಳಿಂದ ಬೆಳೆಸಿದ ಅಡ್ವಾಣಿ ಬಿಜೆಪಿಯ `ತಾಯಿ ಬೇರು' ಆಗಿ ಕಾರ್ಯ ನಿರ್ವಹಿಸಿದವರು. ಈಗ ಆ ತಾಯಿ ಬೇರು `ವೃಕ್ಷ'ದಿಂದ ಕಳಚಿಕೊಳ್ಳುವ ಇಂಗಿತ ವ್ಯಕ್ತಪಡಿಸಿದೆ!

ಅಡ್ವಾಣಿ ರಾಜೀನಾಮೆ: ಪ್ರತಿಕ್ರಿಯೆಗಳು....

ದುರಾದೃಷ್ಟ...

ಅಡ್ವಾಣಿ  ರಾಜೀನಾಮೆ ನೀಡಿದ್ದು ದುರಾದೃಷ್ಟ. ನಾನು ಅವರೊಂದಿಗೆ  ಫೋನಿನಲ್ಲಿ ಈ ಬಗ್ಗೆ ಮಾತನಾಡಿದ್ದೆನೆ. ಮನೆಗೆ ಹೋಗಿ ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ಮಾಡುತ್ತೆನೆ.

-ಸುಷ್ಮಾ ಸ್ವರಾಜ್, ಬಿಜೆಪಿ

ರಾಜೀನಾಮೆ ಅಂಗೀಕರಿಸುವುದಿಲ್ಲ

ಅಡ್ವಾಣಿ ಅವರ ರಾಜೀನಾಮೆಯನ್ನು ಬಿಜೆಪಿ ಅಂಗೀಕರಿಸುವುದಿಲ್ಲ.

- ಅನಂತ್ ಕುಮಾರ್,ಬಿಜೆಪಿ

ದಿಗ್ಬ್ರಮೆ ಮೂಡಿಸಿದೆ

ವಾಜಪೇಯಿ ಮತ್ತು ಅಡ್ವಾಣಿ ಎನ್‌ಡಿಎ ಕಟ್ಟುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಅಡ್ವಾಣಿ ಅವರ ರಾಜೀನಾಮೆ ನನಗೆ ದಿಗ್ಬ್ರಮೆ ಮೂಡಿಸಿದೆ.

- ಶರದ್ ಯಾದವ್ , ಜೆಡಿಯು

ದುರಾದೃಷ್ಟವಶಾತ್...

ಅಡ್ವಾಣಿ ಅವರ ರಾಜೀನಾಮೆ ದುರಾದೃಷ್ಟವಶಾತ್.

-ಆರ್‌ಎಸ್‌ಎಸ್

ವೈಯಕ್ತಿಕ ಹಿತಾಸಕ್ತಿ...

ವೈಯಕ್ತಿಕ ಹಿತಾಸಕ್ತಿಗಳೇ ಬಿಜೆಪಿಯ ಮುಖ್ಯ ಕಾರ್ಯವೈಖರಿ ಎಂಬುದು ಇದರಿಂದ ಗೊತ್ತಾಗುತ್ತದೆ.

- ರಿಟಾ ಬಹುಗುಣ, ಕಾಂಗ್ರೆಸ್

ಬಿಜೆಪಿ ಇಬ್ಭಾಗ...

ಇದು ಬಿಜೆಪಿ ಇಬ್ಭಾಗದ ಪ್ರಮುಖ ಸಂಕೇತ. ಮುಂದಿನ ದಿನಗಳಲ್ಲಿ ಇದು ಸ್ಪಷ್ಟವಾಗಲಿದೆ.

ನರೇಶ್ ಅಗರ್‌ವಾಲ್, ಸಮಾಜವಾದಿ ಪಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.