ಮಂಗಳವಾರ, ಏಪ್ರಿಲ್ 13, 2021
29 °C

ಬಿಡಿಎ ನಿರ್ಧಾರ ತಡೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಭೂಪಸಂದ್ರದಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸಿಸುತ್ತಿರುವವರ ಮನೆಗಳನ್ನು ನೆಲಸಮ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದ್ದು, ಕೇವಲ ಮೂರು ದಿನಗಳ ಗಡುವು ನೀಡಿದೆ. ಬಿಡಿಎ ನಿರ್ಧಾರಕ್ಕೆ ಸರ್ಕಾರ ತಕ್ಷಣ ತಡೆ ನೀಡಬೇಕು ಎಂದು ವಿಧಾನ ಪರಿಷತ್‌ನ ವಿರೋಧಪಕ್ಷದ ನಾಯಕಿ ಮೋಟಮ್ಮ ಒತ್ತಾಯಿಸಿದರು.ಗುರುವಾರ ಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ವಿಷಯ ಪ್ರಸ್ತಾಪಿಸಿದ ಅವರು, ‘ಭೂಪಸಂದ್ರದಲ್ಲಿ ಮನೆಗಳನ್ನು ನೆಲಸಮ ಮಾಡಲು ಬಿಡಿಎ ಸಿದ್ಧತೆ ನಡೆಸಿದೆ. ಮೂರು ದಿನಗಳಲ್ಲಿ ನಿವೇಶನ ಒಡೆತನದ ದಾಖಲೆ ಒದಗಿಸುವಂತೆ ಮನೆಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.ಬುಧವಾರ ಈ ಕುರಿತು ಬಿಡಿಎ ಆಯುಕ್ತರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ, ಸಾಧ್ಯವಾಗಲಿಲ್ಲ. ನಾಲ್ಕು ಸಾವಿರ ಜನರನ್ನು ಏಕಾಏಕಿ ಬೀದಿಗೆ ತಳ್ಳಲು ಮುಂದಾಗಿರುವ ಬಿಡಿಎ ಅಧಿಕಾರಿಗಳು, ಮನಸೋಇಚ್ಛೆ ನಿರ್ಧಾರ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆ ನಡೆಸದಂತೆ ಬಿಡಿಎ ಅಧಿಕಾರಿಗಳಿಗೆ ತಕ್ಷಣವೇ ಮುಖ್ಯಮಂತ್ರಿಯವರು ಆದೇಶ ನೀಡಬೇಕು ಎಂದು ಆಗ್ರಹಿಸಿದರು.‘ಬಿಡಿಎ ಬಡಾವಣೆಗಳಿಗಾಗಿ ಸ್ವಾಧೀನಪಡಿಸಿಕೊಂಡಿದ್ದ ಪ್ರದೇಶದಲ್ಲಿ 30-40 ವರ್ಷಗಳಿಂದ ಬಡ ಕುಟುಂಬಗಳು ವಾಸಿಸುತ್ತಿವೆ. ಈಗ ಅವರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ. ತಮ್ಮ ಇಷ್ಟಕ್ಕೆ ತಕ್ಕಂತೆ ಬಿಡಿಎ ಆಸ್ತಿಯನ್ನು ಡಿನೋಟಿಫಿಕೇಷನ್ ಮಾಡುವ ಸರ್ಕಾರ, ಬಡವರ ಹಿತವನ್ನು ಕಡೆಗಣಿಸಬಾರದು’ ಎಂದರು.ಹಕ್ಕುಪತ್ರ ಸಾಧ್ಯವಿಲ್ಲ: ಇದೇ ವೇಳೆ ಜೆಡಿಎಸ್ ಸದಸ್ಯ ಅಬ್ದುಲ್ ಅಜೀಂ ಪ್ರಶ್ನೆಗೆ ಮುಖ್ಯಮಂತ್ರಿ ಪರ ಉತ್ತರ ನೀಡಿದ ಜಲ ಸಂಪನ್ಮೂಲ ಸಚಿವ ಬೊಮ್ಮಾಯಿ, ‘ಸದ್ಯದ ಪರಿಸ್ಥಿತಿಯಲ್ಲಿ ಬಿಡಿಎ ಆಸ್ತಿಯಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಅವಕಾಶ ಇಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಾತೆ ನೀಡಿದ್ದರೂ, ಹಕ್ಕುಪತ್ರ ವಿತರಣೆ ಸಾಧ್ಯವಿಲ್ಲ’ ಎಂದು ತಿಳಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.