ಸೋಮವಾರ, ಜೂನ್ 14, 2021
24 °C
ನಾರಿಕೇಳಾ

ಬಿಡುಗಡೆಯೆಂಬುದುಂಟೇ ಹೇಳಾ ಕೆಳದಿ

ಎಂ.ಎಸ್. ಆಶಾದೇವಿ Updated:

ಅಕ್ಷರ ಗಾತ್ರ : | |

ಈ ಅಂಕಣದಲ್ಲಿ ಕನ್ನಡದ  ಮುಖ್ಯ ಸ್ತ್ರೀಪಾತ್ರಗಳನ್ನು ಮರುಓದಿಗೆ ಒಳಪಡಿಸುವುದರ ಹಿಂದೆ ಅನೇಕ ಕಾರಣಗಳು, ಉದ್ದೇಶಗಳು ಮಾತ್ರವಲ್ಲದೆ ಕೆಲವು ಆಸೆಗಳೂ ಇವೆ. ಸ್ತ್ರೀಪಾತ್ರಗಳನ್ನು ಬಿಡಿ ಬಿಡಿಯಾಗಿ ಓದುತ್ತಲೇ ಹೆಣ್ಣಿನ ಇಡಿಯಾದ ಚಹರೆಯೊಂದನ್ನು ಕಟ್ಟಲು ಸಾಧ್ಯವೇ ಎನ್ನುವುದು ಇಲ್ಲಿನ ಮುಖ್ಯ ಹುಡುಕಾಟಗಳಲ್ಲೊಂದು.ಯಾವೆಲ್ಲ ಕಾರಣಗಳಿಗಾಗಿ ಕನ್ನಡ ಜಗತ್ತು ಈ ಪಾತ್ರಗಳನ್ನು ಮುಖ್ಯವೆಂದು ಪರಿಗಣಿಸಿದೆಯೋ ಅದರಾಚೆಗೆ ಈ ಪಾತ್ರಗಳು ಹಬ್ಬಿ ಹರಡುವ ಪರಿಗೆ, ಏಕಕಾಲಕ್ಕೆ ಲೋಕಕಾಠಿಣ್ಯವನ್ನು, ಲೋಕಕಾರುಣ್ಯವನ್ನು ಧಿಕ್ಕರಿಸುತ್ತ ತಮ್ಮನ್ನು ತಾವೇ ಅರಿಯುತ್ತಲೇ ತಮ್ಮ ಇರವಿನ ಅರಿವನ್ನು ಸೂಚಿಸುತ್ತ, ಧ್ವನಿಸುತ್ತ, ಪ್ರತಿನಿಧಿಸುತ್ತ ಈ ಪಾತ್ರಗಳು ಬೆಳೆಯುತ್ತಾ ಹೋಗುವ ಕ್ರಮಕ್ಕೆ ಇವತ್ತಿನ ಸನ್ನಿವೇಶದಲ್ಲಿ ಸಾಹಿತ್ಯ ಕೃತಿಯ ಅತ್ಯುತ್ತಮ ಪಾತ್ರದ ಆಚೆಗೂ ನಿರ್ವಹಿಸಬೇಕಾದ ಪಾತ್ರವೊಂದಿದೆ.ಮಹಿಳಾ ಸಂಕಥನವು ‘ಪುನರ್ ಇತಿಹಾಸ’ದ ಪ್ರಯತ್ನಗಳಲ್ಲಿ ತೊಡಗಿರುವ ಈ ದಿನಮಾನದಲ್ಲಿ ಪ್ರತಿರೋಧ ಮತ್ತು ಅದಮ್ಯ ಜೀವನ ಪ್ರೀತಿಯನ್ನು ಮೂಲಧಾತುಗಳಾಗಿ ಹೊಂದಿರುವ ಎಲ್ಲ ಮುಖ್ಯ ಸ್ತ್ರೀಪಾತ್ರಗಳನ್ನು ಒಂದು ವೇದಿಕೆಯಲ್ಲಿ ತರುವ ಪ್ರಯತ್ನಕ್ಕೆ ಈ ಪುನರ್ ಇತಿಹಾಸದ ಮತ್ತು ಮರುನಿರೂಪಣೆಯ ಉದ್ದೇಶಗಳೂ ಇವೆ. ಲಯವಾಗಿ ಹೋಗಿರುವ ಅಂಶಗಳನ್ನು ಸೄಷ್ಟಿಸಿಕೊಳ್ಳುತ್ತಾ ನಮ್ಮ ಇತಿಹಾಸವನ್ನು ನಾವೇ ಬರೆದುಕೊಳ್ಳುವ ಯತ್ನ ಇದು.ಈ ಬಾರಿಯ ನಮ್ಮ ನಾಯಕಿ ವೀಣಾ ಶಾಂತೇಶ್ವರ ಅವರ ‘ಬಿಡುಗಡೆ’ ಕಥೆಯ ನಾಯಕಿ ಸರೋಜ. ಹೆಣ್ಣಿನ ಮಟ್ಟಿಗೆ ಬಿಡುಗಡೆ ಎನ್ನುವುದು ಏನು ಎನ್ನುವ ಪ್ರಶ್ನೆಯನ್ನು ಸರೋಜ ಅತ್ಯಂತ ನಾಟಕೀಯವಾಗಿ ಮುಖಾಮುಖಿಯಾಗುತ್ತಾಳೆ. ಆಧುನಿಕತೆಯು ಹೆಣ್ಣಿನ ಬಿಡುಗಡೆಯ ದಾರಿಗಳೆಂದು ಪ್ರತಿಪಾದಿಸಿದ, ಅದು ನಿಜವೆಂದು ನಂಬಿದ, ನೆಚ್ಚಿದ ಹೆಣ್ಣಿಗೆ ‘ಒಲೆ ಬದಲಾದರೂ ಉರಿ ಬದಲಾಗಿದೆಯೆ?’ ಎನ್ನುವ ಕಟು ವಾಸ್ತವದ ಅರಿವನ್ನು ಮೂಡಿಸಿದ ಮೊದಲ ತಲೆಮಾರಿನ ಪ್ರತಿನಿಧಿ ಸರೋಜ. ಆದರೆ ಆ ಕಟು ವಾಸ್ತವವವನ್ನು ಅಪಾರ ಸ್ಪಷ್ಟತೆಯಲ್ಲಿ ಅವಳು ಎದುರಿಸುವ ಕ್ರಮವೇ ಅವಳನ್ನು ಬಹುಮುಖ್ಯ ಸ್ಥಾನದಲ್ಲಿ ನಿಲ್ಲಿಸುತ್ತದೆ.‘ಬಿಡುಗಡೆ’ ಎನ್ನುವ ಪದ–ಪರಿಕಲ್ಪನೆಯೇ ಹೆಣ್ಣಿನ ಮಟ್ಟಿಗೆ ಬಹುಮುಖಿಯಾದುದು ಮತ್ತು ಸಂಕೀರ್ಣವಾದುದು. ಇದನ್ನು ಸಾಧಾರಣೀಕರಿಸುವುದಂತೂ ಸಾಧ್ಯವೇ ಇಲ್ಲ. ಯಾವೆಲ್ಲದರಿಂದ ಆಕೆಗೆ ಬಿಡುಗಡೆ ಬೇಕು? ತನಗೆ ತಾನೇ ಹಾಕಿಕೊಳ್ಳುವ ನಿರ್ಬಂಧಗಳಿಂದಲೇ? ತನ್ನ ಮೇಲೆ ಹೇರಲಾಗಿರುವ ನಿರ್ಬಂಧಗಳಿಂದಲೆ? ಹೇರಲಾಗಿದೆಯೆಂದು ತನಗೆ ತಾನೇ ಭ್ರಮಿಸಿಕೊಳ್ಳುವ ನಿರ್ಬಂಧಗಳಿಂದಲೆ? ಬಿಡುಗಡೆ ಎನ್ನುವುದು ತನಗೆ ಬೇಕಾಗಿ ತಾನು ಪಡೆದುಕೊಳ್ಳುವುದೋ, ತನ್ನ ಸಲುವಾಗಿ ಇತರರು ತಂದುಕೊಡಬೇಕಾಗಿರುವುದೋ ಎನ್ನುವ ದ್ವಂದ್ವದಿಂದಲೆ? ತನ್ನ ವ್ಯಕ್ತಿತ್ವಕ್ಕೆ ಅಧಿಕೃತತೆಯನ್ನು ತಾನು ಕೊಟ್ಟುಕೊಂಡರೆ ಸಾಕೇ ಅದಕ್ಕೆ ವ್ಯವಸ್ಥೆಯ ಮುದ್ರೆ ಬೇಕೋ ಎನ್ನುವ ಪ್ರಶ್ನೆಯಿಂದಲೆ?... ಹೀಗೆ ಈ ಪಟ್ಟಿಯನ್ನು ಬೆಳಸುತ್ತ ಹೋಗಬಹುದು ಎನ್ನುವ ಸಂಗತಿಯೇ ಬಿಡುಗಡೆ ಎನ್ನುವುದು ಹೆಣ್ಣಿನ ಮಟ್ಟಿಗೆ ಎಷ್ಟು ಸಮಸ್ಯಾತ್ಮಕವಾದುದು ಎನ್ನುವ ಅಂಶವನ್ನು ಹೇಳುತ್ತದೆ.ಆಧುನಿಕತೆಯು ಇದಕ್ಕೆ ಇನ್ನಷ್ಟು ಸಂಗತಿಗಳನ್ನು ಸೇರಿಸುತ್ತಾ ಇಡೀ ಸನ್ನಿವೇಶವನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತಿದೆ. ವಿದ್ಯೆ, ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯಗಳು ಹೆಣ್ಣಿನ ಬಿಡುಗಡೆಯ ಹೆದ್ದಾರಿಗಳು ಎಂದು ತಿಳಿಯಲಾಗಿದೆ ಮತ್ತು ಮೇಲ್ನೋಟಕ್ಕೆ ಅದನ್ನು ಸಮರ್ಥಿಸುವುದು ಕಷ್ಟವೇನಲ್ಲ ಎನ್ನುವುದೂ ಒಂದರ್ಥದಲ್ಲಿ ನಿಜವೇ.ಆದರೆ ಇದು ಸರಳವಾದ ಮತ್ತು ಸಂಪೂರ್ಣ ಬಿಡುಗಡೆಯ ಹಾದಿಯಂತೂ ಅಲ್ಲವೇ ಅಲ್ಲ. ಅನೇಕ ಸಂದರ್ಭಗಳಲ್ಲಿ ಅವಳಿಗೆ ಇದು ಬಿಡುಗಡೆಯ ಹಾದಿಯಾಗುವುದಿರಲಿ, ಅವಳು ಬಿಡುವಿರದ ಕತ್ತೆಯಾಗಿರುತ್ತಾಳೆ. ಮಾತ್ರವಲ್ಲ ವಿದ್ಯೆ, ಉದ್ಯೋಗಗಳು ಅವಳನ್ನು ಆರ್ಥಿಕ ಶೋಷಣೆಯೆಂಬ ಇನ್ನೊಂದು ಕಮರಿಯನ್ನೂ ಸೄಷ್ಟಿಸಿವೆ. ಆದರೆ ಇದರರ್ಥ ನಾವು ಇವುಗಳನ್ನು ನಿರಾಕರಿಸಬೇಕೆಂದಲ್ಲವೇ ಅಲ್ಲ. ನಮ್ಮ ಎದುರಿಗಿನ ಸವಾಲುಗಳ ತೀವ್ರತೆ ಮತ್ತು ಸಾಂದ್ರತೆಯನ್ನು ಅರ್ಥ ಮಾಡಿಕೊಳ್ಳುವುದು ಅವುಗಳನ್ನು ಎದುರಿಸುವ ದಾರಿಯನ್ನು ಕಟ್ಟಿಕೊಳ್ಳಲಿಕ್ಕೆ.ವೀಣಾ ಶಾಂತೇಶ್ವರ ತಮ್ಮ ಕಥೆಗಳಲ್ಲಿ ಕಟ್ಟಿಕೊಟ್ಟ ಹೊಸಹೆಣ್ಣನ್ನು ಕಂಡು ಆ ಕಾಲದಲ್ಲಿ ಬೆಚ್ಚಿಬಿದ್ದವರೇ ಹೆಚ್ಹು. ಇದರಲ್ಲಿ ಮಹಿಳೆಯರೂ ಇದ್ದರು ಎನ್ನುವುದು ಆಶ್ಚರ್ಯದ ಸಂಗತಿಯಲ್ಲ. ಇವರ ‘ಗಂಡಸರು’ ಕೃತಿ ಗಂಡಸರಿಗೆ ಹಿಡಿದ ಕನ್ನಡಿಯಂತೆಯೇ ಹೆಂಗಸರ ಒಳಲೋಕಕ್ಕೆ ಹಿಡಿದ ಕನ್ನಡಿಯೂ ಆಗಿತ್ತು. ಹಲವು ತಲೆಮಾರುಗಳನ್ನು ದಟ್ಟವಾಗಿ ಪ್ರಭಾವಿಸಿದ ಲೇಖಕಿ ವೀಣಾ. ಹೊಸ ಹೆಣ್ಣಿನ ವ್ಯಗ್ರತೆಯಷ್ಟೇ ಅವಳ ತಲ್ಲಣಗಳನ್ನೂ ಅಪಾರ ಸೂಕ್ಷ್ಮತೆಯಲ್ಲಿ ಹಿಡಿದ ವೀಣಾ ಅವರ ಕಥೆಗಳು ಇಂದಿಗೂ ತಾಜಾ ಅನಿಸುವುದು ಅವುಗಳ ಅಪೂರ್ವ ಒಳಕಾಣ್ಕೆಗಾಗಿ.‘ಬಿಡುಗಡೆ’ ಕಥೆಯ ಸರೋಜ ಆಧುನಿಕ ಹೆಣ್ಣಿನ ಆಶೋತ್ತರಗಳನ್ನು ಬಿಂಬಿಸುತ್ತಿರುವಂತೆ ಕಂಡರೂ ಆಳದಲ್ಲಿ ಹೆಣ್ಣಿನ ಯಾವತ್ತಿನ ಅಥವಾ ಅನಾದಿ ಎನ್ನಬಹುದಾದ ನಿರೀಕ್ಷೆಗಳನ್ನೇ ಧ್ವನಿಸುತ್ತಾಳೆ. ದಾಂಪತ್ಯದಲ್ಲಿ ಸಖೀಗೀತವನ್ನು ಹಾಡುವ ಕನಸನ್ನು ಕೇವಲ ಆಧುನಿಕ ಹೆಣ್ಣುಮಕ್ಕಳು ಮಾತ್ರ ಕಾಣುತ್ತಾರೆ ಎಂದು ಹೇಳುವುದು ಸಾಧ್ಯವಿದೆಯೆ?ದಾಂಪತ್ಯವನ್ನು ಕುರಿತ ಸಹಜ ನಿರೀಕ್ಷೆಗಳ ಜೊತೆಗೇ ವಿದ್ಯೆ ಮತ್ತು ಉದ್ಯೋಗಗಳೆಂಬ ಈ ತನಕದ ವಂಚಿತ ಪರಿಕರಗಳು ತನಗೆ ದಕ್ಕಿಸಿಕೊಟ್ಟ ಆತ್ಮವಿಶ್ವಾಸದೊಂದಿಗೆ ದಾಂಪತ್ಯವನ್ನು ಪ್ರವೇಶಿಸುವ ಸರೋಜಾಗೆ ಉದ್ದಕ್ಕೂ ಸಿಕ್ಕುವುದು ಗಂಡಿನ ಅಕಾರಣ ಅಧಿಕಾರದ ದಬ್ಬಾಳಿಕೆ ಮತ್ತು ದೌರ್ಜನ್ಯ. ಸರೋಜ ತನ್ನ ನಿರೀಕ್ಷೆ ಮತ್ತು ಹಕ್ಕುಗಳನ್ನು ಒಳಗೇ ನುಂಗಿಕೊಳ್ಳದೆ ಮೆಲುದನಿಯಲ್ಲಿ ಗಂಡನ ಜೊತೆ ಚರ್ಚಿಸಲು ಪ್ರಯತ್ನಿಸಿದಾಗಲೆಲ್ಲ ಅವಳಿಗೆ ಸಿಗುವುದು ಇನ್ನೂ ಹೆಚ್ಹಿನ ಅವಮಾನ ಮತ್ತು ದಬ್ಬಾಳಿಕೆ.‘ಅಲ್ಲ ಸರೋಜಿ, ನೀ ಬ್ಯಾಂಕಿನಾಗ ಆಫೀಸರ್ ಇದ್ದೀ ಖರೆ, ಅದರರ್ಥ ನಿನಗ ಬೇಕಾದವರ ಜೋಡಿ ಖಿ ಖಿ ಖಿ ಮಾಡಿಕೋತ ಚಕ್ಕಂದ ಆಡ್ಲಿಕ್ಕ್ಕೆ ಲೈಸೆನ್ಸ್ ಅದ ಅಂತ ಅಲ್ಲ...ಇಕಾ ನೋಡು, ನಾ ಹೇಳಿದ್ದು ನೆನಪಿಟಗೋ, ಹೊರಗಿನ ಗಂಡಸರ ಜೋಡಿ ಖಾಲಿ ಫುಕಟ ನಕ್ಕೋತ ಮಾತಾಡಿದರ ನಿನ್ನ ಹಲ್ಲ ಮುರಿತೀನಿ.ಪಗಾರ ಬಂದ ಕೂಡಲೇ ನನ ಕೈಯಾಗ ಕೊಡಬೇಕಂತ ತಿಳಿಯೂದಿಲ್ಲ...

ಎಷ್ಟರ ಸೀರಿ ಬೇಕು? ಮನ್ಯಾಗ ಎರಡು, ಹೊರಗ ಹೋಗ್ಲಿಕ್ಕೆ ಎರಡು ಸೀರಿ, ಒಟ್ಟು ನಾಲ್ಕು ಇದ್ದ್ದರ ಸಾಕು’.ಇಂಥ ನಿತ್ಯ ಮಂತ್ರಪುಷ್ಪಗಳದ್ದೇ ಅರ್ಚನೆ ಅವಳಿಗೆ. ಅವಳ ವಿದ್ಯೆ, ಅವಳ ಉದ್ಯೋಗ ಮಾತ್ರವಲ್ಲ ಅವಳ ಸಮಯ, ಅವಳ ಮನೋದೈಹಿಕ ಶಕ್ತಿ, ಅವಳ ಆಸಕ್ತಿ, ಹವ್ಯಾಸ, ಅಭಿರುಚಿ, ಎಲ್ಲದರ ಮೇಲೂ ಈತನ ಹದ್ದಿನ ಕಣ್ಣು. ಮಕ್ಕಳ ವಿದ್ಯಾಭ್ಯಾಸ, ಅಡಿಗೆ ಯಾವುದರಲ್ಲೂ ಈತ ತನ್ನ ಜವಾಬ್ದಾರಿಯನ್ನು ಹಂಚಿಕೊಳ್ಳುವುದಿಲ್ಲ. ಬಿಡುವಿರದ ಕತ್ತೆಗಳಾಗಿಬಿಡುತ್ತಾರೆ ಅನೇಕ ಬಾರಿ ಹೆಣ್ಣುಮಕ್ಕಳು ಎಂದದ್ದು ಈ ಅರ್ಥದಲ್ಲಿಯೇ. ಇಡೀ ಕಥೆಯನ್ನು ವೀಣಾ ಬೈನರಿ ಎನ್ನಬಹುದಾದ ಸಮಾನಾಂತರ ನೆಲೆಯಲ್ಲಿ ನಿರ್ವಹಿಸಿದ್ದಾರೆ ಎನ್ನುವುದು ನಿಜ. ಹೀಗಾಗಿ ಈ ಕಥೆಯ ‘ಗಂಡ’ ಖಳನಾಯಕನಂತೆ ಭಾಸವಾಗಿಬಿಡುತ್ತಾನೆ. ಆದರೆ ಇದು ಅಸಂಖ್ಯಾತ ಹೆಣ್ಣುಮಕ್ಕಳ ಬದುಕಿನ ಸಾಮಾನ್ಯ ಮಾದರಿಯೇ ಆಗಿಬಿಟ್ಟಿರುವುದರಿಂದ ಇದೊಂದು ಮಿತಿ ಎಂದು ಅನಿಸುವುದಿಲ್ಲ. ಅಥವಾ ವಾಸ್ತವವನ್ನು ವೀಣಾ ಸರಳೀಕರಿಸಿದ್ದಾರೆ ಅನಿಸಿದರೂ ಕಥೆ ಅಥವಾ ವಿವರಗಳು ಎಲ್ಲಿಯೂ ನಮಗೆ ಭೋಳೆ, ಉತ್ಪ್ರೇಕ್ಷಿತ, ಅವಾಸ್ತವ ಅನಿಸುವುದಿಲ್ಲ.ಒಂದು ಘಟ್ಟದಲ್ಲಿ ಅವಳ ವಿದ್ಯೆ ಅವಳಿಗೆ ಕಲಿಸಿಕೊಡುವ ನಾಗರಿಕ ನಡವಳಿಕೆ ಅವಳ ಮೇಲಿನ ದೌರ್ಜನ್ಯವನ್ನು ಇನ್ನೂ ಹೆಚ್ಚು ಮಾಡಿದ ಹಾಗೂ ಕೆಲವೊಮ್ಮೆ ಅನಿಸಿಬಿಡುತ್ತದೆ. ಆದರೆ ತನ್ನ ಈ ಸ್ಥಿತಿಯನ್ನು ಅವಳು ಸ್ಪಷ್ಟವಾಗಿ ಪರಿಭಾವಿಸಬಲ್ಲಳು. ಇದು ಇರಬೇಕಾದ್ದು ಹೀಗಲ್ಲ ಎನ್ನುವುದರ ಬಗ್ಗೆ ಅವಳಿಗೆ ಅನುಮಾನಗಳಿಲ್ಲ. ಆದರೆ ಮಕ್ಕಳ ಸಲುವಾಗಿ ಕುಟುಂಬವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಗಂಡನನ್ನು ಸಹಿಸಿಕೊಳ್ಳುತ್ತಾಳೆ, ದಾಂಪತ್ಯವನ್ನು ಉಳಿಸಿಕೊಳ್ಳುತ್ತಾಳೆ. ಅವಳ ಸುದೀರ್ಘವೆಂದೇ ಕರೆಯಬಹುದಾದ ದಾಂಪತ್ಯ ಕೊನೆಗೊಮ್ಮೆ ಅವನ ಸಾವಿನಲ್ಲಿ ಕೊನೆಯಾಗುತ್ತದೆಮನೆಯ ಹಾಲಿನಲ್ಲಿ ಅವನ ಶವವಿರುವಾಗ ಗಂಡನ ಸಾವಿನ ಆಘಾತವನ್ನು ಈಕೆ ಸಹಿಸಲಾರಳು ಎಂದು ಆಕೆಗೆ ನಿದ್ದೆಯ ಔಷಧಿಯನ್ನು ಮಕ್ಕಳು ಕೊಡಿಸುತ್ತಾರೆ. ಮಕ್ಕಳ ದೃಷ್ಟಿಯಲ್ಲಿಯೂ ಅದೊಂದು ಯಶಸ್ವಿ ದಾಂಪತ್ಯ! ಬಹುಶಃ ಇದಕ್ಕೆ ಕಾರಣ ಸರೋಜಳ ತಾಳ್ಮೆ ಮತ್ತು ಮೌನ. ಇದೇನೇ ಇದ್ದರೂ ಸರೋಜಳಿಗೆ ನಿದ್ದೆಯ ಔಷಧಿ ಕೊಡುವುದು ಒಂದು ವ್ಯಂಗ್ಯವಾಗಿಯೇ ಕಾಣುತ್ತದೆ. ಗಂಡನ ಸಾವಿನ ಬಗ್ಗೆ ಸರೋಜಳಲ್ಲಿ ಮೊದಲು ಹುಟ್ಟುವ ಪ್ರತಿಕ್ರಿಯೆಯ ಎದುರಿಗೆ ಇವಳಿಗೆ ಕೊಡುವ ಮಂಪರಿನ ಔಷಧಿಯ ವಿವರವನ್ನಿಟ್ಟರೆ ಅವುಗಳ ನಡುವಿನ ವಿರೋಧಾಭಾಸವೇ ಕಥೆಗೆ ವಿಚಿತ್ರವಾದ ನಾಟಕೀಯತೆಯನ್ನು ತಂದುಕೊಡುತ್ತದೆ.‘ಆತ ಸತ್ತು ಹೋಗಿದ್ದಾನೆ. ತನ್ನನ್ನು ಲಗ್ನವಾದಾತ, ಮೂರುಮಕ್ಕಳನ್ನು ಹುಟ್ಟಿಸಿದಾತ, ಜೊತೆಗೆ ಮೂವತ್ತೈದು ವರ್ಷ ಬಾಳಿದಾತ, ಮೂವತ್ತೈದು ವರ್ಷಗಳ ಕಾಲ ತನ್ನ ಕನಸುಗಳನ್ನೆಲ್ಲ ಕನಸುಗಳಾಗಿಯೇ ಉಳಿಸಿದಾತ, ಈಗ ಸತ್ತಿದ್ದಾನೆ... .ಉದ್ದಕ್ಕೂ ಮಲಗಿದ್ದಾನೆ. ಈಗ ಎದ್ದು ಬರುತ್ತಾನೇನೋ ಅನಿಸುವಂತೆ, ಎದ್ದು ಬಂದು ಮತ್ತೆ ಕರ್ಕಶವಾದ ದನಿಯಲ್ಲಿ ಕೂಗಾಡುತ್ತಾನೇನೋ ಅನಿಸುವಂತೆ....’ಮೂವತ್ತೈದು ವರ್ಷ ಜೊತೆಗೆ ಬಾಳಿದಾತ ಸತ್ತ ಘಳಿಗೆಯಲ್ಲಿ ಅವಳಿಗೆ ಸಹಜವೆನ್ನುವ ದುಃಖದ ಭಾವದ ಬದಲು ಅವನು ಸತ್ತಿರುವ, ಮತ್ತೆ ಅವನು ಮಾತಾಡದ, ಹಿಂಸೆ ಕೊಡದ ಸತ್ಯವೇ ಮುಖ್ಯವಾಗಿ ಕಾಣಿಸುತ್ತಿದೆ. ಆಳದಲ್ಲಿ ಅವಳು ಅವನ ಸಾವನ್ನು ಬಯಸಿದ್ದಳೆ? ಫ್ರಾಯ್ಡ್ ನ interpretation of dreamsನಲ್ಲಿ ಮಹಿಳೆಯೊಬ್ಬಳು ಒಂದೇ ಸಮ ತನಗೆ ತಾನು ಕಪ್ಪುಡುಗೆಯುಟ್ಟ ಕನಸು ಬೀಳುತ್ತಿದೆ ಎಂದಾಗ ಅವಳ ಬದುಕಿನ ವಿವರಗಳನ್ನು ಅವಳು ಕೊಟ್ಟ, ಅಡ್ಡಿಯಿಲ್ಲ, ನಮ್ಮದೂ ಎಲ್ಲರಂತೆಯೇ ಕೆಲವು ಏರಿಳಿತಗಳ  ಕುಟುಂಬ ಎನ್ನುವ  ಚಿತ್ರದಾಚೆಗೆ ವಿಶ್ಲೇಷಿಸಿ ಫ್ರಾಯ್ಡ್ ಕೊನೆಗೆ ಕೊಡುವ ತೀರ್ಮಾನವೆಂದರೆ, ನೀನು ನಿನ್ನ ಮನಸ್ಸಿನಾಳದಲ್ಲಿ ಗಂಡನ ಸಾವನ್ನು ಬಯಸುತ್ತಿದ್ದಿ ಎಂದು. ಅವಳು ಇದನ್ನು ಅಲ್ಲಗಳೆಯಲು ಹರಸಾಹಸ ಮಾಡುತ್ತಾಳೆ. ಕೊನೆಗೆ ಗಂಡನ ಕ್ರೌರ್ಯವನ್ನು ಅನಿವಾರ್ಯವಾಗಿ ಬಿಚ್ಹಿಡುತ್ತಾಳೆ.ನಿಜ, ಹೆಣ್ಣಿನ ಈ ಸಾಧ್ಯತೆಯನ್ನು ಒಪ್ಪುವುದು ಗಂಡಿಗಿರಲಿ ಹೆಣ್ಣಿಗೇ ಕಷ್ಟವಾಗುತ್ತದೆ. ಆದರೆ ಗಂಡಿನ ಯಾವ ಕ್ರೌರ್ಯವೂ ಬದುಕಿನ ಸಾಧ್ಯತೆಯಾಗಬಹುದಾದರೆ ಹೆಣ್ಣಿನ ಕ್ರೌರ್ಯ ಯಾಕೆ ನಮಗೆ ಇಂಥ ದಿಗಿಲು ಹುಟ್ಟಿಸುತ್ತದೆ? ಇದಕ್ಕೆ ಹೆಣ್ಣಿನ ಸೃಷ್ಟಿಶೀಲ ಶಕ್ತಿ, ಎಲ್ಲವನ್ನೂ, ಎಂಥದನ್ನೂ ಪೊರೆಯಬಲ್ಲ ಅಸಾಧಾರಣ ಪ್ರೀತಿಕೋಶ... ಇಂಥ ಜೀವಧಾತುಗಳ ಹೆಣ್ಣು ಗಂಡನ ಸಾವನ್ನು ಬಯಸುವುದು ಜೀವವಿರೋಧಿ ನಿಲುವಿನಂತೆಯೇ ಕಾಣಿಸುತ್ತದೆ.ಆದ್ದರಿಂದಲೇ ಇದನ್ನು ಅವಳ ಬಯಕೆ ಎಂದು ಕರೆಯುವುದಕ್ಕಿಂತ, ತನ್ನ ಬಿಡುಗಡೆಯ ದಾರಿಯೊಂದಾಗಿ ಅವಳು ಯೋಚಿಸಿದಳೇ ಎಂದು ನೋಡುವುದೇ ಸರಿ ಅನಿಸುತ್ತದೆ. ಹೀಗೆ ಯೋಚಿಸಬಹುದಾದ ಸಾಧ್ಯತೆ ಮತ್ತು ಸ್ಪಷ್ಟತೆಯನ್ನೇ ನಾನು ಹೆಣ್ಣಿನ ಮನೋವಿನ್ಯಾಸದಲ್ಲಿನ ಪಲ್ಲಟ ಎನ್ನುತ್ತೇನೆ. ಇದನ್ನು ಅವಳು ಬಯಸಿರಲಿಲ್ಲ, ಆದರೆ ಅದು ಘಟಿಸಿದಾಗ ಅವಳಿಗೆ ಅದು ಬಿಡುಗಡೆಯ ಹಾಗೆ ಕಂಡಿತು ಎಂದೂ ಯೋಚಿಸಬಹುದು.ಪೊಳ್ಳು ದಾಂಪತ್ಯವೊಂದು ಕೊನೆಗೊಂಡಾಗ ಹೆಣ್ಣಿಗಾಗಲಿ ಗಂಡಿಗಾಗಲಿ ನಿರುಮ್ಮಳ ಭಾವ ಸಹಜವಾದಂತೆ, ತನ್ನ ಅಸ್ತಿತ್ವ, ವ್ಯಕ್ತಿತ್ವ, ಭಾವ, ಬಯಕೆ, ಬುದ್ಧಿ, ಕೊನೆಯಿರದ ದುಡಿಮೆ, ತ್ಯಾಗ, ಕುಟುಂಬವನ್ನೂ ವೃತ್ತಿಯನ್ನೂ ಘನವಾಗಿ ನಿಭಾಯಿಸಿದ ದಕ್ಷತೆ ಈ ಯಾವುದಕ್ಕೂ ದಮ್ಮಡಿ ಬೆಲೆ ಕೊಡದ, ತನ್ನ ಅಕಾರಣ ಅಹಂಕಾರದ ಬಗ್ಗೆ ಎಂದೂ ಸ್ವವಿಮರ್ಶೆ ಮಾಡಿಕೊಳ್ಳದ, ಸಾಯುವ ತನಕವೂ ಇದೇ ಪುರುಷಾಹಂಕಾರದ ಬಾವುಟ ಹಾರಿಸಿದವನ ಸಾವಿನ ಬಗ್ಗೆ ಇವಳು ತೋರಿಸುವ ಪ್ರತಿಕ್ರಿಯೆಯನ್ನು ತಪ್ಪು ಎಂದು, ಅಮಾನವೀಯ ಎಂದು ಕರೆಯಲು ಸಾಧ್ಯವಿದೆಯೆ?ತನಗೆ ಕೊಟ್ಟ ಔಷಧಿಯ ಮಂಪರಿನಲ್ಲಿ ಸರೋಜಳಿಗೆ ಕನಸೆಂದೋ ಕನವರಿಕೆಯೆಂದೋ ಕರೆಯಬಹುದಾದ ಚಿತ್ರಗಳು ಎದುರಾಗುತ್ತವೆ. ಆ ಚಿತ್ರಗಳೇ ಸರೋಜಳ ವಕೀಲಿಕೆಯನ್ನು ಅನಾಯಾಸವಾಗಿ ಮಾಡುತ್ತವೆ. ಕೊನೆಗೂ ಅವಳು ಬಯಸಿದ್ದು, ತಾಜಮಹಲನ್ನಲ್ಲ. ಮಂದಾರಪುಷ್ಪವನ್ನಲ್ಲ. ಏಳು ಸಮುದ್ರದಾಚೆ, ಏಳುಬೆಟ್ಟದಾಚೆ ಇರುವ ಗಿಳಿಯನ್ನಲ್ಲ. ತನ್ನನ್ನು ದುಡಿಯುವ ಯಂತ್ರವೆಂದು ನೋಡದೆ, ಒಂದೊಂದು ಸಲವಾದರೂ ಉಪ್ಪಿಟ್ಟು ಮಾಡುವ, ಮಕ್ಕಳ ಜವಾಬ್ದಾರಿಯನ್ನು ಹಂಚಿಕೊಳ್ಳುವ, ತನಗೆ ಕಾಟನ್ ಸೀರೆ ಇಷ್ಟ ಎಂದು ಅರ್ಥ ಮಾಡಿಕೊಂಡಿರುವ, ಬೆಳದಿಂಗಳ ರಾತ್ರಿಯನ್ನು ಅವಳೊಂದಿಗೆ ಕಳೆಯುವ... ಇಂಥ ಹುಲುಮಾನವರ ಬಯಕೆಗಳೂ ಆಕೆಯ ಗಂಡನಿಗೆ ಪರಮ ಅಪರಾಧಗಳಾಗಿ ಕಾಣಿಸುತ್ತವೆ.ಗಂಡ ಬದುಕಿರುವಷ್ಟು ಕಾಲವೂ ತನ್ನ ಬದುಕನ್ನು ಬದುಕುವ ಅವಕಾಶವೇ ಸಿಗದ ಅವಳು, ಔಷಧಿಯ ಮಂಪರು ಇಳಿದ ಮೇಲೆ ಅಡಿಗೆ ಮನೆಗೆ ಹೋಗಿ ಹಾಲು ಬಗ್ಗಿಸಿ ಅದಕ್ಕೆ ಸಕ್ಕರೆ ಬೆರೆಸಿ ಕುಡಿದು ಗಂಡನ ಶವವನ್ನಿಟ್ಟಿರುವ ಹಾಲಿಗೆ ಹಗುರವಾದ, ದಿಟ್ಟವಾದ ಹೆಜ್ಜೆಗಳನ್ನಿಟ್ಟು ನಡೆಯುತ್ತಾಳೆ.ಸರೋಜಳ ಪಾತ್ರ ಇಲ್ಲಿಗೇ ಮುಗಿಯುವುದಿಲ್ಲ. ಈ ಕಥೆ ಪ್ರಕಟವಾದ ಮೇಲೆ ಅನೇಕ ಹೆಣ್ಣುಮಕ್ಕಳು ವೀಣಾ ಅವರಿಗೆ ಫೋನ್ ಮಾಡಿ, ಕಾಗದ ಬರೆದು ‘ಮೇಡಂ ನಮ್ಮ ಮನೆ ಕಥೆ ನಿಮಗೆ ಹೇಗೆ ಗೊತ್ತಾಯಿತು?’ಎಂದು ಕೇಳಿದರಂತೆ! ಆ ಎಲ್ಲ ಮಹಿಳೆಯರ ಗಂಡಂದಿರೂ ಸತ್ತಿದ್ದಿರಲಿಲ್ಲ, ಅವರು ಸಾಯಲಿ ಎನ್ನುವ ಬಯಕೆಯೂ ಖಂಡಿತಾ ಆ ಮಹಿಳೆಯರದಲ್ಲ. ಆದರೆ ಆ ಹಿಂಸೆ, ದಬ್ಬಾಳಿಕೆ, ಕೊನೆಯಿರದ ಮತ್ತು ಬೆಲೆಯಿರದ ದುಡಿಮೆ, ಬಿಡಲಾರದ, ಅನುಭವಿಸಲಾರದ ಬದುಕಿನ ವಿನ್ಯಾಸ ಮಾತ್ರ ಅದೇ ಆಗಿತ್ತು.‘ಚಿಕವೀರ ರಾಜೇಂದ್ರ’ದ ಗೌರಮ್ಮಾಜಿ ಹೇಳುವಂತೆ, ‘ಹೇಗೂ ಹೆಂಡಿರಾಗಿ ಬದುಕಬೇಕಾದ್ದು ಎಲ್ಲ ಹೆಣ್ಣಿನ ಹಣೆಯಲ್ಲಿ ಬರೆದದ್ದು’ ಎನ್ನುವುದನ್ನು ಸರೋಜ ನಿರಾಕರಿಸಲಿಲ್ಲ ನಿಜ. ಆದರೆ, ಅದು ಗಂಡಿನ ಗೆಲುವಲ್ಲ ಹೆಣ್ಣಿನ ಗೆಲುವು ಎಂದು ತಿಳಿಯುವ ದೃಷ್ಟಿಕೋನ ಸರೋಜಳ ವ್ಯಕ್ತಿತ್ವಕ್ಕೆ ಹೊಸ ಶಕ್ತಿಯನ್ನು, ತೇಜಸ್ಸನ್ನು ಕೊಡುತ್ತದೆ. ಇದನ್ನು ಬೇಕಾದರೆ ಆಧುನಿಕ ಹೆಣ್ಣಿನ ‘ಅಗ್ನಿದಿವ್ಯ’ ಎಂದು ಕರೆಯಬಹುದು. ಆದರೆ ಈ ‘ಅಗ್ನಿದಿವ್ಯ’ವನ್ನು ಗಂಡೂ ಹಾಯುವ ತನಕ ನಾವು ಬಯಸುವ ಪಲ್ಲಟ ಘಟಿಸುವುದಿಲ್ಲ!

saptahika@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.