ಶನಿವಾರ, ಫೆಬ್ರವರಿ 27, 2021
25 °C

ಬಿಡುಗಡೆಯ ಬೇಡಿ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಬಿಡುಗಡೆಯ ಬೇಡಿ

ಎಂಬತ್ತರ ದಶಕದಲ್ಲಿ ಅಂಬರೀಷ್ ಅಭಿನಯದ ಮೂರು ಚಿತ್ರಗಳು ಎರಡೇ ವಾರದ ಅಂತರದಲ್ಲಿ ತೆರೆಕಂಡಿದ್ದವಂತೆ. ಈಗಿನ ನಾಯಕರಿಗೂ ಅಂಥದ್ದೇ ಯೋಗ!

ಕಳೆದ ವಾರ `ಐ ಆಮ್ ಸಾರಿ ಮತ್ತೆ ಪ್ರೀತ್ಸೋಣ~ ಚಿತ್ರ ಬಿಡುಗಡೆಯ ಗುಂಗಲ್ಲಿ ಇದ್ದ ನಾಯಕ ಪ್ರೇಮ್‌ಗೆ ಈ ವಾರ `ಧನ್ ಧನಾ ಧನ್~ ಬಿಡುಗಡೆಯ ಭಾಗ್ಯ.

ಸಾಮಾನ್ಯವಾಗಿ ಬೆಂಗಳೂರಿನ ಇಂತಿಂಥ ಚಿತ್ರಮಂದಿರದಲ್ಲಿ ಚಿತ್ರದ ಬಿಡುಗಡೆಗೆ ಅವಕಾಶ ಕಲ್ಪಿಸಬಹುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ನಿರಾಕ್ಷೇಪಣಾ ಪತ್ರ ನೀಡುತ್ತದೆ. ಒಬ್ಬನೇ ನಾಯಕನಾಗಿರುವ ಎರಡು ಚಿತ್ರಗಳಿಗೆ ಇಷ್ಟು ಕಡಿಮೆ ಅಂತರದಲ್ಲಿ ಬಿಡುಗಡೆಯ ಅವಕಾಶ ಕಲ್ಪಿಸಿರುವ ಮಂಡಳಿಯದ್ದು ಅತಿ ಉದಾರ ಧೋರಣೆಯೇ ಸರಿ.ಇದು ಕನ್ನಡ ಚಿತ್ರರಂಗದಲ್ಲಿ ಹೊಸತೇನಲ್ಲ. ಕಳೆದ ವರ್ಷ ಶ್ರೀಮುರಳಿ ಅಭಿನಯದ `ಸಿಹಿಗಾಳಿ~ ಹಾಗೂ `ಶ್ರೀಹರಿಕಥೆ~ ಒಂದೇ ದಿನ ತೆರೆಕಂಡಿದ್ದವು. ಎರಡೂ ಸುದ್ದಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದ ಶ್ರೀಮುರಳಿ, `ಬಿಡುಗಡೆ ನಿರ್ಮಾಪಕರಿಗೆ ಸಂಬಂಧಿಸಿದ್ದು. ಇಬ್ಬರೂ ಪಟ್ಟು ಸಡಿಲಿಸದೇ ಇದ್ದರೆ ನಾವು ತಾನೆ ಏನು ಮಾಡಲು ಸಾಧ್ಯ?~ ಎಂದು ಕೈಯಾಡಿಸಿದ್ದರು.ನಟ ಯೋಗೀಶ್ ಪರಿಸ್ಥಿತಿಯೂ ಹೀಗೇ ಆಗಿತ್ತು. `ಧೂಳ್~ ಚಿತ್ರದ ಬೆನ್ನಿಗೇ `ದೇವದಾಸ್~ ತೆರೆಕಂಡಿತು. ಅದು ತೆರೆಯಿಂದ ಮರೆಯಾಗುವಷ್ಟರಲ್ಲೇ `ಹುಡುಗರು~ ಬಿಡುಗಡೆಯಾಯಿತು. `ಧೂಳ್~-`ದೇವದಾಸ~ನಲ್ಲಿ ಕುದುರದ ಯೋಗವನ್ನು ಅವರಿಗೆ `ಹುಡುಗರು~ ಕರುಣಿಸಿದ್ದು ಮಾತ್ರ ಅದೃಷ್ಟ.ಯಶಸ್ಸಿನ ಏಣಿಯ ಮೇಲೆ ಆರೋಹಣ, ಅವರೋಹಣದ ಸರ್ಕಸ್ಸು ಮಾಡುತ್ತಿರುವ ಯುವನಾಯಕ ಯಶ್ ಹಣೆಬರಹವೂ ಹೀಗೆಯೇ. ಎರಡು ವಾರದ ಹಿಂದೆ ತೆರೆಕಂಡ ಅವರ ಅಭಿನಯದ `ರಾಜಧಾನಿ~ ಪೋಸ್ಟರ್‌ಗಳ ಮೇಲೀಗ `ಕಿರಾತಕ~ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆಯೆಂಬುದು ಈಚೀಚೆಗೆ ದೊಡ್ಡ ಪ್ರಹಸನವೇ ಆಗುತ್ತಿದೆ. ಬಿಡುಗಡೆಯಾಗಿ ನಾಲ್ಕು ದಿನ ಕಳೆಯುವ ಮೊದಲೇ ದಿಢೀರನೆ ಸುದ್ದಿಗೋಷ್ಠಿ ಕರೆದು, ತಮ್ಮ ಚಿತ್ರವನ್ನು ತಕ್ಷಣದಿಂದಲೇ ಎಲ್ಲಾ ಚಿತ್ರಮಂದಿರಗಳಿಂದಲೂ ತೆಗೆಯಬೇಕು.ಬಾಡಿಗೆ ಕಟ್ಟಲು ತಮ್ಮಲ್ಲಿ ಹಣವಿಲ್ಲ ಎಂದು `ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ~ ನಿರ್ಮಾಪಕ ಕಂ ನಿರ್ದೇಶಕ ರವೀಂದ್ರ ಘಂಟಾಘೋಷವಾಗಿ ಹೇಳಿದರು. ಸಾಮಾನ್ಯವಾಗಿ ಚಿತ್ರಮಂದಿರಗಳು ವಾರದ ಬಾಡಿಗೆ ಪಡೆದೇ ಬಿಡುಗಡೆಗೆ ಅನುಮತಿ ನೀಡುತ್ತವೆ.ಇಲ್ಲವಾದರೆ ದಿನಗಳ ಲೆಕ್ಕದಲ್ಲಿ ಪರ್ಸೆಂಟೇಜ್ ಆಧಾರದ ಮೇಲೆ ಆದಾಯದ ಹಂಚಿಕೆಗೆ ಒಪ್ಪಿ ಚಿತ್ರಗಳನ್ನು ಬಿಡುಗಡೆ ಮಾಡುತ್ತವೆ. ಒಟ್ಟಿನಲ್ಲಿ ವ್ಯವಹಾರ ಸ್ಪಷ್ಟ.

ಬಾಡಿಗೆಯಷ್ಟೇ ಅಲ್ಲದೆ ತಲೆಗೊಂದು ರೂಪಾಯಿ ಶುಲ್ಕ ಕೂಡ ಚಿತ್ರಮಂದಿರದ ಮಾಲೀಕರ ಥೈಲಿ ಸೇರುತ್ತವೆ.

ಹಾಗಾಗಿ ಅರ್ಧಕ್ಕಿಂತ ಕಡಿಮೆ ಸೀಟುಗಳು ಭರ್ತಿಯಾಗಿ ಇಡೀ ವಾರ ಚಿತ್ರ ಓಡುವ ಬದಲು ವಾರಕ್ಕೊಂದು ಸಿನಿಮಾ ತೆರೆಕಂಡು ಮೊದಲ ಮೂರು ದಿನ ಶೇ 75ರಷ್ಟು ಕಲೆಕ್ಷನ್ ಬಂದರೆ ವಾಸಿ ಎಂದು ಲೆಕ್ಕ ಹಾಕುವ ಚಿತ್ರಮಂದಿರಗಳ ಮಾಲೀಕರೂ ಇಲ್ಲುಂಟು. ರವೀಂದ್ರ ಅವರಿಗೆ ಈ ಎಲ್ಲಾ ವ್ಯವಹಾರ, `ರಿಸ್ಕ್~ ಗೊತ್ತಿದ್ದೂ ತಮ್ಮ ಚಿತ್ರ ಬಿಡುಗಡೆ ಮಾಡಿ, ದಿಢೀರನೆ ಅದನ್ನು ನಿಲ್ಲಿಸುವಂತೆ ಹೇಳಿರುವುದೇ ತಮಾಷೆಯಂತೆ ಕಾಣುತ್ತಿದೆ.

 

ಅವರ ಮೊರೆಗೆ ಸ್ಪಂದಿಸಿ, ಯಾರೂ ಚಿತ್ರಮಂದಿರದಿಂದ ಸಿನಿಮಾ ತೆಗೆಯಲಿಲ್ಲ. ಚಿತ್ರ ಸಿದ್ಧಪಡಿಸುವಾಗ ದೊಡ್ಡ ಮೊತ್ತದ ಹಣ ತೊಡಗಿಸುವ ಮಂದಿ ಬಿಡುಗಡೆಯ ನಂತರ ಪೇಚಿಗೆ ಸಿಕ್ಕಂತಾಗುವುದು ಹೊಸತೇನೂ ಅಲ್ಲ.ಇದೇ ಪ್ರೇಮ್ ನಾಯಕತ್ವದಲ್ಲಿ `ಗುಣವಂತ~ ಸಿನಿಮಾ ಮಾಡಿದ ಮುನಿರಾಜು ಎಂಬ ನಿರ್ಮಾಪಕರು ಮೀಟರ್ ಬಡ್ಡಿಗೆ ಸಾಲ ತಂದು, ತೀರಿಸಲು ಪರದಾಡುತ್ತಾ ಕಣ್ಣೀರು ಹಾಕಿಕೊಂಡಿದ್ದರು. ಇಟ್ಟಿಗೆ ಕಾರ್ಖಾನೆ ಇಟ್ಟುಕೊಂಡಿದ್ದ ಅವರು ಯಾಕಾದರೂ ಸಿನಿಮಾ ಸಹವಾಸ ಮಾಡಿದೆನೋ ಎಂದು ಪೇಚಾಡಿದ್ದರು.`ಸಿನಿಮಾ ಬಿಡುಗಡೆ ತರಕಾರಿ ವ್ಯಾಪಾರದ ತರಹ ಆಗಿಬಿಟ್ಟಿದೆ. ನಾನು ನಾಯಕ. ಎಷ್ಟೇ ವಿನಂತಿಸಿಕೊಂಡರೂ ನಿರ್ಮಾಪಕರು ಕೇಳಿಸಿಕೊಳ್ಳುತ್ತಿಲ್ಲ. ವಾಣಿಜ್ಯ ಮಂಡಳಿಯದ್ದೂ ಕಿವುಡು~ ಎಂಬುದು ಪ್ರೇಮ್ ಅಳಲು.ಪರಿಸ್ಥಿತಿ ಹೀಗಿರುವಾಗಲೂ ವಾರಕ್ಕೆ ಸರಾಸರಿ ಎರಡರಿಂದ ಮೂರು ಚಿತ್ರಗಳ ಬಿಡುಗಡೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಸ್ತು ಎನ್ನುತ್ತಿದೆ. ಕೆಲವೇ ವಾರಗಳ ಅಂತರದಲ್ಲಿ ಒಬ್ಬನೇ ನಾಯಕನ ಚಿತ್ರ ಬಿಡುಗಡೆ ಮಾಡುವುದನ್ನು ತಡೆಯಲು ಖ್ದ್ದುದು ಆ ನಾಯಕನಿಗೇ ಇಲ್ಲಿ ಸಾಧ್ಯವಾಗುತ್ತಿಲ್ಲ. ಒಪ್ಪಿತ ನೈತಿಕತೆಯು ಚಿತ್ರರಂಗದಿಂದ ಕಣ್ಮರೆಯಾಗುತ್ತಿರುವುದಕ್ಕೂ ಇದು ಉದಾಹರಣೆ.ಗಿರೀಶ ಕಾಸರವಳ್ಳಿಯವರು ಪದೇಪದೇ ಕಡಿಮೆ ಸೀಟುಗಳಿರುವ ಸಣ್ಣ ಚಿತ್ರಮಂದಿರಗಳ ಅಗತ್ಯವನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಕಮರ್ಷಿಯಲ್ ಚಿತ್ರಗಳಿಗೂ ಈಗ ಅಂಥ ಚಿತ್ರಮಂದಿರಗಳ ಅಗತ್ಯವಿದೆ. ಗುಣಮಟ್ಟದ ದೃಷ್ಟಿಯಿಂದ ಚೆನ್ನಾಗಿರುವ ಚಿತ್ರಗಳೂ ಮಕಾಡೆಯಾಗುತ್ತಿದ್ದು, ಸಿನಿಮಾ ಸೃಷ್ಟಿಕರ್ತರು ಹತಾಶೆಗೊಳ್ಳಲು ಕಾರಣವಾಗಿವೆ.ಎಸ್.ವಿ.ರಾಜೇಂದ್ರಸಿಂಗ್ ಬಾಬು ತರಹದ ಅನುಭವಿ ನಿರ್ದೇಶಕರಿಗೇ ತಮ್ಮ `ಬೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್~ ಚಿತ್ರ ತೆರೆಗೆ ತರಲು ಎರಡು ವರ್ಷಗಳಿಂದ ಸಾಧ್ಯವಾಗಿಲ್ಲ; ಅದೂ ಉಪೇಂದ್ರ, ರಮ್ಯಾ ತರಹದ ಸ್ಟಾರ್‌ಗಳಿದ್ದೂ.ಇದೇ ಉಪೇಂದ್ರ ಅಭಿನಯದ `ಶ್ರೀಮತಿ~ ಚಿತ್ರವನ್ನು ಡಬ್ಬದಲ್ಲೇ ಇಟ್ಟಿರುವ ನಿರ್ಮಾಪಕ ಶಂಕರೇಗೌಡರು ಸುದೀಪ್ ಜೊತೆಯಲ್ಲೆಗ ಕ್ರಿಕೆಟ್ ಆಡುತ್ತಿದ್ದಾರೆ. ಬಹುಶಃ ಅವರು ಉಪೇಂದ್ರ ಅಭಿನಯದ ಇನ್ನೊಂದು ಚಿತ್ರ ಬಂದು, ಅದು ಗೆಲ್ಲುವ ಮುಹೂರ್ತಕ್ಕೆ ಕಾಯುತ್ತಿರಬಹುದು.ಕನ್ನಡ ಚಿತ್ರರಂಗ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಸಿನಿಮಾ ಬಿಡುಗಡೆಯ ಪ್ರಹಸನವನ್ನು ಮುಗಿಸಲು ಟೊಂಕಕಟ್ಟಿ ಎಂದಿಗೆ ಪಟ್ಟಾಗಿ ಸಭೆ ಕೂರುತ್ತವೆಂಬ ಕುತೂಹಲ ವರ್ಷಗಳಿಂದ ಹಾಗೆಯೇ ಉಳಿದಿದೆಯಷ್ಟೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.