ಭಾನುವಾರ, ಮಾರ್ಚ್ 7, 2021
29 °C
ಕೆ.ಆರ್‌.ಪುರ ಬಳಿಯ ಮುನಿಯಪ್ಪ ಲೇಔಟ್‌ನಲ್ಲಿ ಹಾಡಹಗಲೇ ಘಟನೆ

ಬಿಬಿಎಂಪಿ ಸದಸ್ಯೆಯ ಪತಿ ಬರ್ಬರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಬಿಎಂಪಿ ಸದಸ್ಯೆಯ ಪತಿ ಬರ್ಬರ ಹತ್ಯೆ

ಬೆಂಗಳೂರು: ಬಿಬಿಎಂಪಿ ಬಿಜೆಪಿ ಸದಸ್ಯೆ ದೇವಸಂದ್ರ ವಾರ್ಡ್‌ನ ಆರ್‌.ಮಂಜುಳಾದೇವಿ ಅವರ ಪತಿ ಶ್ರೀನಿವಾಸ್‌ (43) ಅವರನ್ನು ದುಷ್ಕರ್ಮಿಗಳು ಹಾಡಹಗಲೇ ಮಾರಕಾಸ್ತ್ರ­ಗಳಿಂದ ಬರ್ಬರ­ವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೆ.ಆರ್‌.ಪುರ ಸಮೀಪದ ಮುನಿಯಪ್ಪ ಲೇಔಟ್‌ನಲ್ಲಿ ಬುಧವಾರ ನಡೆದಿದೆ.ಮುನಿಯಪ್ಪ ಲೇಔಟ್‌ನ ಸರ್ಕಾರಿ ಕಾಲೇಜು ರಸ್ತೆ ನಿವಾಸಿ­ಯಾದ ಶ್ರೀನಿವಾಸ್‌ ಅವರು ಮುಖಕ್ಷೌರ ಮಾಡಿಸಿಕೊಳ್ಳಲು ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಯ ಸಮೀಪದ ‘ಚಾಯ್ಸ್‌ ಮೆನ್ಸ್‌ ಸಲೂನ್‌’ ಕ್ಷೌರದ ಅಂಗಡಿಗೆ ಬಂದಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.ಗ್ರಾಹಕರ ಸೋಗಿನಲ್ಲಿ ಒಬ್ಬೊಬ್ಬರೇ ಕ್ಷೌರದ ಅಂಗಡಿ­ಯೊಳಗೆ ಬಂದ ಐವರು ದುಷ್ಕರ್ಮಿಗಳು ಮುಖ­ಕ್ಷೌರ ಮಾಡಿಸಿ­ಕೊಳ್ಳುತ್ತಾ ಕುಳಿತಿದ್ದ ಶ್ರೀನಿ­ವಾಸ್‌ ಅವರ ಮೇಲೆ ಮಚ್ಚು ಲಾಂಗ್‌­ಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ನಂತರ ಅಂಗಡಿ­ಯಿಂದ ಹೊರಬಂದು ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ.ಈ ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಕುಟುಂಬ ಸದಸ್ಯರು ಸ್ಥಳೀಯರ ನೆರವಿನಿಂದ ಶ್ರೀನಿವಾಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ, ಆ ವೇಳೆ­ಗಾ­ಗಲೇ ತೀವ್ರ ರಕ್ತಸ್ರಾವವಾಗಿ ಮಾರ್ಗಮಧ್ಯೆಯೇ ಮೃತಪಟ್ಟರು.ಆಂಧ್ರಪ್ರದೇಶ ಮೂಲದ ಶ್ರೀನಿವಾಸ್‌  ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದು ನೆಲೆಸಿದ್ದರು. ಈ ಹಿಂದೆ ಕಾಂಗ್ರೆಸ್‌ ಪಕ್ಷ­ದಲ್ಲಿದ್ದ ಅವರು 2008ರಲ್ಲಿ ಬಿಜೆಪಿಗೆ ಸೇರಿದ್ದರು. ಮಂಜುಳಾ­ದೇವಿ  ಅವರಿಗೆ ಧನುಷ್‌ ಮತ್ತು ಮೇಘನಾ ಎಂಬ ಇಬ್ಬರು ಮಕ್ಕಳಿದ್ದಾರೆ.ಅಘೋಷಿತ ಬಂದ್‌: ಶ್ರೀನಿವಾಸ್ ಅವರ ಸಾವಿನ ಸುದ್ದಿ ತಿಳಿಯು­ತ್ತಿ­­ದ್ದಂತೆ ಮುನಿಯಪ್ಪ ಲೇಔಟ್‌ನಲ್ಲಿ ವರ್ತಕರು ಸ್ವಯಂ­ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿದರು. ಇದರಿಂದಾಗಿ ಸ್ಥಳದಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು.ಶ್ರೀನಿವಾಸ್‌ ಅವರ ಶವವನ್ನು ಇರಿಸಿದ್ದ ವಿಕ್ಟೋರಿಯಾ ಆಸ್ಪತ್ರೆ ಬಳಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿ­ಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ­ವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ­ರಾದ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಆರ್‌.ಅಶೋಕ, ‘ರಾಜ್ಯ-­ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಗೂಂಡಾಗಿರಿ ನಡೆಸಲಾಗು­ತ್ತಿದೆ. ಬೆಂಗ­ಳೂರು ಮರ್ಡರ್‌ ಸಿಟಿಯಾಗಿದ್ದು, ಜನಪ್ರತಿನಿಧಿ­ಗಳು ನಿರ್ಭೀತಿ­ಯಿಂದ ಓಡಾ­ಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ದೂರಿದರು. ‘ಕೆ.ಆರ್‌.ಪುರ ಕ್ಷೇತ್ರದ ವ್ಯಾಪ್ತಿಯ ಪೊಲೀಸ್‌ ಠಾಣೆಗಳು ರಾಜಕೀಯ ಕೇಂದ್ರಗಳಾಗಿವೆ. ಶ್ರೀನಿವಾಸ್‌ ಕೊಲೆಯ ಹಿಂದೆ ರಾಜಕೀಯ ಕೈವಾಡವಿದೆ’ ಎಂದು ಆರೋಪಿಸಿದರು.ಶವವಿಟ್ಟು ಪ್ರತಿಭಟನೆ: ಮಧ್ಯಾಹ್ನ 2ಕ್ಕೆ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು. ನಂತರ ಆಂಬುಲೆನ್ಸ್‌ನಲ್ಲಿ ಶವ ತೆಗೆದು­ಕೊಂಡು ಕೆ.ಆರ್‌.ಪುರ ಠಾಣೆ ಬಳಿ ಬಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಆರೋಪಿ­ಗಳನ್ನು ಶೀಘ್ರವೇ ಬಂಧಿಸು­ವಂತೆ ಒತ್ತಾಯಿಸಿ ಒಂದು ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ಮಾಡಿದರು.ಬಳಿಕ ಹಿರಿಯ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸುವುದಾಗಿ ಮತ್ತು ಆರೋಪಿಗಳನ್ನು ಶೀಘ್ರವೇ ಬಂಧಿಸು­ವುದಾಗಿ ಭರವಸೆ ನೀಡಿ ಪ್ರತಿಭಟನಾಕಾರರ ಮನ­ವೊಲಿಸಿ­ದರು. ಆ ನಂತರ ಪ್ರತಿಭಟನೆ ಹಿಂಪಡೆದರು.ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್‌ ಜೋಷಿ, ಸಂಸದ ಅನಂತಕುಮಾರ್‌, ವಿಧಾನ­ಪರಿಷತ್‌ ವಿರೋಧ ಪಕ್ಷದ ನಾಯಕ ಡಿ.ವಿ.ಸದಾ­ನಂದ­ಗೌಡ ಮತ್ತಿತರ ಮುಖಂಡರು ಶ್ರೀನಿವಾಸ್‌ ಅವರ ಮನೆಗೆ ಹೋಗಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.ಮೇಯರ್‌ ನೇತೃತ್ವದಲ್ಲಿ ಪ್ರತಿಭಟನೆ: ಶ್ರೀನಿವಾಸ್‌ ಅವರ ಹತ್ಯೆ ಖಂಡಿಸಿ ಮೇಯರ್‌ ಬಿ.ಎಸ್‌.ಸತ್ಯನಾರಾಯಣ ನೇತೃತ್ವ­ದಲ್ಲಿ ಬಿಬಿಎಂಪಿ ಸದಸ್ಯರು ಪಾಲಿಕೆ ಕೇಂದ್ರ ಕಚೇರಿ ಎದುರು ಪ್ರತಿಭಟನೆ ಮಾಡಿ ರಾಘವೇಂದ್ರ ಔರಾದಕರ್‌ ಅವರಿಗೆ ಮನವಿ ಸಲ್ಲಿಸಿದರು.‘ಮಂಜುಳಾದೇವಿ ಅವರ ಕುಟುಂಬಕ್ಕೆ ರಕ್ಷಣೆ ಒದಗಿಸ­ಬೇಕು’ ಎಂದು ಪಾಲಿಕೆ ಸದಸ್ಯರು ಆಗ್ರಹಿಸಿದರು. ‘ಪಾಲಿಕೆ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಯುತ್ತಿ­ರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹತ್ಯೆ ಘಟನೆಗಳು ನಡೆದಿವೆ. ಜನಸೇವೆಯಲ್ಲಿ ತೊಡಗಿ­ರುವ ಸದಸ್ಯರು ಭಯದಲ್ಲೇ ಜೀವನ ದೂಡು­ವಂತಾ­ಗಿದೆ. ಆದ್ದರಿಂದ ಎಲ್ಲಾ ಸದಸ್ಯರಿಗೂ ರಕ್ಷಣೆ ನೀಡಬೇಕು’ ಎಂದು ಹೇಳಿದರು.ಶಾಸಕರ ಕೈವಾಡ: ಆರೋಪ

ಶವಾಗಾರದ ಬಳಿ ನಗರ ಪೊಲೀಸ್ ಕಮಿಷನರ್‌ ರಾಘವೇಂದ್ರ ಔರಾದಕರ್‌ ಅವರ ಮೇಲೆ ಹರಿಹಾಯ್ದ ಕೆ.ಆರ್‌.ಪುರದ ಮಾಜಿ ಶಾಸಕ ಬಿಜೆಪಿಯ ಎನ್‌.ಎಸ್‌.ನಂದೀಶ್‌ರೆಡ್ಡಿ, ‘ಶ್ರೀನಿವಾಸ್‌ ಮೇಲೆ ಇತ್ತೀಚೆಗೆ ಹಲ್ಲೆ ನಡೆದಿತ್ತು. ಆ ಬಗ್ಗೆ ದೂರು ನೀಡಿದರೂ ಕೆ.ಆರ್‌.ಪುರ ಠಾಣೆ ಇನ್‌ಸ್ಟೆಕ್ಟರ್‌ ಆರೋಪಿಗಳನ್ನು ಬಂಧಿಸಿರಲಿಲ್ಲ. ಅವರ ನಿರ್ಲಕ್ಷ್ಯವೇ ಶ್ರೀನಿವಾಸ್‌ ಕೊಲೆಗೆ ಮುಖ್ಯ ಕಾರಣ. ಆದ್ದರಿಂದ ಅವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

‘ಪ್ರಕರಣದಲ್ಲಿ ಸ್ಥಳೀಯ ಶಾಸಕ  ಕಾಂಗ್ರೆಸ್‌ನ ಬೈರತಿ ಬಸವರಾಜು ಅವರ ಕೈವಾಡವಿದೆ’ ಎಂದು ಅವರು ನೇರ ಆರೋಪ ಮಾಡಿದರು.

‘ಬಸವರಾಜು ಅವರು ಕ್ಷೇತ್ರದ ವ್ಯಾಪ್ತಿಯ ಠಾಣೆಗಳಿಗೆ ತಮ್ಮ ಸಂಬಂಧಿಕರಾದ ಇನ್‌ಸ್ಪೆಕ್ಟರ್‌ಗಳನ್ನೇ ನಿಯೋಜಿಸಿಕೊಂಡಿದ್ದಾರೆ. ಪೊಲೀಸರನ್ನು ಬಳಸಿಕೊಂಡು ಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ರಾಜ್ಯಪಾಲರು, ಗೃಹ ಸಚಿವರು ಮತ್ತು ನಗರ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದರು.ಸಿಸಿಬಿಗೆ ಪ್ರಕರಣ

‘ಕೊಲೆಗೆ ಕಾರಣ ಏನೆಂದು ಗೊತ್ತಿಲ್ಲ ಮತ್ತು ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ. ಆರೋಪಿಗಳ ಪತ್ತೆಗೆ ಸಿಸಿಬಿ ಜಂಟಿ ಪೊಲೀಸ್‌ ಕಮಿಷನರ್‌ ಪ್ರಣವ್‌ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಕಮಲ್‌ಪಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಭೂ ವಿವಾದ ಕಾರಣ

ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದ ಶ್ರೀನಿವಾಸ್‌ ಅವರ ಕೊಲೆಗೆ ಭೂ ವಿವಾದವೂ ಕಾರಣ ಇರಬಹುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಶಂಕಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.