ಶನಿವಾರ, ಮೇ 8, 2021
19 °C

ಬಿಬಿಎಫ್‌ಐಗೆ ಕ್ರೀಡಾ ಇಲಾಖೆ ಮಾನ್ಯತೆ

ಪ್ರಜಾವಾಣಿ ವಾರ್ತೆ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ವಿವಾದಗಳಿಂದಾಗಿಯೇ ಸುದ್ದಿಯಾಗುತ್ತಿದ್ದ ಬಾಲ್‌ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಕೊನೆಗೂ ಭರವಸೆಯ ಬೆಳಕು ಮೂಡಿದೆ. ಭಾರತ ಬಾಲ್‌ಬ್ಯಾಡ್ಮಿಂಟನ್ ಫೆಡರೇಷನ್‌ಗೆ (ಬಿಬಿಎಫ್‌ಐ) ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆಯ ಮಾನ್ಯತೆ ದೊರೆತಿದೆ.ಈ ಬೆಳವಣಿಗೆ ದೇಶದ ಬಾಲ್‌ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು, ಬೆಂಬಲ ಲಭಿಸದ ಕಾರಣ ಈ ಕ್ರೀಡೆಯ ಬೆಳವಣಿಗೆ ಕುಂಠಿತಗೊಂಡಿತ್ತು. 2004-05ರಿಂದ ಬಾಲ್‌ಬ್ಯಾಡ್ಮಿಂಟನ್‌ಗೆ ಸರ್ಕಾರ ಎಲ್ಲ ನೆರವುಗಳನ್ನು ನಿಲ್ಲಿಸಿತ್ತು.ಇದೀಗ ಕ್ರೀಡಾ ಇಲಾಖೆ ಕೈಗೊಂಡ ಮಹತ್ವದ ನಿರ್ಧಾರ ದೇಶದೆಲ್ಲೆಡೆಯಿರುವ ಬಾಲ್‌ಬ್ಯಾಡ್ಮಿಂಟನ್ ಸ್ಪರ್ಧಿಗಳ ಭವಿಷ್ಯವನ್ನು ಉಜ್ವಲವಾಗಿಸಿದೆ. ಇತರ ಕ್ರೀಡಾಪಟುಗಳಂತೆ ಬಾಲ್‌ಬ್ಯಾಡ್ಮಿಂಟನ್ ಸ್ಪರ್ಧಿಗಳೂ ಕ್ರೀಡಾಕೋಟಾದಡಿ ಇನ್ನು ಉದ್ಯೋಗಗಳನ್ನು ಗಿಟ್ಟಿಸಲು ಹಾದಿ ಸುಗಮವಾಗಿದೆ.  ಫೆಡರೇಷನ್‌ನಲ್ಲಿ ಎರಡು ಬಣಗಳ ನಡುವಿನ `ಕಚ್ಚಾಟ~ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿತ್ತು. ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ ಎ.ಕೆ. ಪ್ಯಾಟ್ರೊ ಅವರು ಏಪ್ರಿಲ್ 19, 2012 ರಂದು ಈ ಎರಡು ಬಣಗಳನ್ನು ಪ್ರತಿನಿಧಿಸುತ್ತಿದ್ದ ಎಂ. ಪೊನ್ನುಸ್ವಾಮಿ ಮತ್ತು ಎ.ಎಸ್. ನಖ್ವಿ ಅವರಿಗೆ ಪತ್ರ ಬರೆದಿದ್ದಾರೆ.ಬಾಲ್‌ಬ್ಯಾಡ್ಮಿಂಟನ್ ಕ್ರೀಡೆಯ ಬೆಳವಣಿಗೆಯ ನಿಟ್ಟಿನಲ್ಲಿ ಬಿಬಿಎಫ್‌ಐಗೆ ಮಾನ್ಯತೆ ನೀಡುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ. ಬಿಬಿಎಫ್‌ಐ ಅಧ್ಯಕ್ಷರಾಗಿ ಸಿ.ಎಚ್. ರಾಜಶೇಖರ್ ಹಾಗೂ ಕಾರ್ಯದರ್ಶಿಯಾಗಿ ವೈ. ರಾಜಾರಾವ್ ಮುಂದುವರಿಯಲಿದ್ದಾರೆ ಎಂದು ಕ್ರೀಡಾ ಇಲಾಖೆ ತನ್ನ ಪತ್ರದಲ್ಲಿ ತಿಳಿಸಿದೆ. ಈ ಪತ್ರದ ಪ್ರತಿ `ಪ್ರಜಾವಾಣಿ~ಗೆ ಲಭಿಸಿದೆ.2011ರ ನವೆಂಬರ್ 12 ರಂದು ಭಿಲಾಯ್‌ನಲ್ಲಿ ನಡೆದಿದ್ದ ವಾರ್ಷಿಕ ಮಹಾಸಭೆಯಲ್ಲಿ ಸಿ.ಎಚ್. ರಾಜಶೇಖರ್ ಅಧ್ಯಕ್ಷರಾಗಿಯೂ, ವೈ. ರಾಜಾರಾವ್ ಪ್ರಧಾನ ಕಾರ್ಯದರ್ಶಿಯಾಗಿಯೂ ಆಯ್ಕೆಯಾಗಿದ್ದರು. ಈ ಸಭೆ ಕಾನೂನು ರೀತಿಯಲ್ಲೇ ನಡೆದಿರುವುದಾಗಿ ಕ್ರೀಡಾ ಇಲಾಖೆ ಹೇಳಿದೆ.ಹಿನ್ನೆಲೆ: 2000ರ ಆರಂಭದಿಂದ ಬಿಬಿಎಫ್‌ಐನಲ್ಲಿ ಒಳಜಗಳ ಆರಂಭವಾಯಿತು. ಜೈಪುರದ ಎ.ಎಸ್ ನಖ್ವಿ, ಮತ್ತು ಪುದುಚೇರಿಯ ಎಸ್. ರಂಗರಾವ್ ನೇತೃತ್ವದಲ್ಲಿ ಎರಡು ಬಣಗಳು ಅಸ್ತಿತ್ವಕ್ಕೆ ಬಂದವು. ಈ ಗುಂಪು ಪ್ರತ್ಯೇಕವಾಗಿ ರಾಷ್ಟ್ರೀಯ   ಚಾಂಪಿಯನ್‌ಷಿಪ್‌ಗಳನ್ನು ನಡೆಸಲು ಆರಂಭಿಸಿದವು.ಇವರ ನಡುವಿನ `ಕಾದಾಟ~ ತಾರಕಕ್ಕೇರಿದ ಕಾರಣ ಸರ್ಕಾರ 2004-05ರಿಂದ ಬಿಬಿಎಫ್‌ಐನ್ನು ನಿರ್ಲಕ್ಷಿಸತೊಡಗಿತು. ಎರಡೂ ಬಣಗಳನ್ನು ದೂರವಿಟ್ಟಿತ್ತು. ಈ ನಡುವೆ ವಿವಾದ ಬಗೆಹರಿಸುವಂತೆ ಕ್ರೀಡಾ ಇಲಾಖೆ ಭಾರತ ಒಲಿಂಪಿಕ್ ಸಂಸ್ಥೆಗೆ (ಐಒಎ) ಸೂಚಿಸಿತ್ತು. ಆದರೆ ಐಒಎ ಸಕಾರಾತ್ಮಕ ಪ್ರತಿಕ್ರಿಯೆ ನೀಡಲಿಲ್ಲ.

ಅನ್ಯಮಾರ್ಗವಿಲ್ಲದೆ ಕ್ರೀಡಾ ಇಲಾಖೆ 2007ರ ನವೆಂಬರ್ 30 ರಂದು ಎರಡೂ ಬಣಗಳನ್ನು ಚರ್ಚೆಗೆ ಕರೆದು ವಿವಾದ ಬಗೆಹರಿಸುವ ಪ್ರಯತ್ನ ನಡೆಸಿದರೂ ಅದರಲ್ಲಿ ಯಶ ಕಾಣಲಿಲ್ಲ. ಈ ಕಾರಣ ಅಖಿಲ ಭಾರತ ಬಾಲ್‌ಬ್ಯಾಡ್ಮಿಂಟನ್ ಆಟಗಾರರ ಸಂಸ್ಥೆ ಆಂಧ್ರ ಪ್ರದೇಶ ಹೈಕೋರ್ಟ್ ಮೆಟ್ಟಿಲೇರಿತು. ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಕೋರಿತು.ಹೈಕೋರ್ಟ್‌ನ ತೀರ್ಪಿನಂತೆ ವಿವಾದ ಬಗೆಹರಿಸಲು ಎರಡೂ ವಿಭಾಗದ ಒಬ್ಬೊಬ್ಬ ಪ್ರತಿನಿಧಿಯನ್ನೊಳಗೊಂಡ ಸಮಿತಿ ನೇಮಿಸಲಾಯಿತು. ಒಂದು ಬಣದಿಂದ ನಖ್ವಿ ಹಾಗೂ ಇನ್ನೊಂದು ಬಣದಿಂದ ತಮಿಳುನಾಡಿನ ಎಂ. ಪೊನ್ನುಸ್ವಾಮಿ ಅವರು ಸಮಿತಿಗೆ ನೇಮಕಗೊಂಡರು.ವಿವಾದ ಬಗೆಹರಿಸಿ ಮೂರು ತಿಂಗಳ ಒಳಗೆ ಇಲಾಖೆಗೆ ವರದಿ ಸಲ್ಲಿಸಲು ಇಬ್ಬರೂ ಒಪ್ಪಿಕೊಂಡರು. ಆದರೆ ಪೊನ್ನುಸ್ವಾಮಿ ಮಾತುಕತೆಗೆ ಆಹ್ವಾನಿಸಿದಾಗ ನಖ್ವಿ ಅವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಲಿಲ್ಲ. ಈ ನಡುವೆ ಪೊನ್ನುಸ್ವಾಮಿ ಫೆಡರೇಷನ್‌ಗೆ ನೂತನ ಪದಾಧಿಕಾರಿಗಳ ನೇಮಕಕ್ಕೆ 2011ರ ನವೆಂಬರ್ 12 ರಂದು ಭಿಲಾಯ್‌ನಲ್ಲಿ ವಾರ್ಷಿಕ ಮಹಾ ಸಭೆ ಕರೆದರು.ವಿವಿಧ ಕಾರಣಗಳನ್ನು ನೀಡಿದ ನಖ್ವಿ ಸಭೆಯಿಂದ ದೂರವುಳಿದರು. ಈ ಸಭೆಯಲ್ಲಿ ಸಿ.ಎಚ್. ರಾಜಶೇಖರ್ ಅವರು ಬಿಬಿಎಫ್‌ಐ ಅಧ್ಯಕ್ಷರಾಗಿಯೂ, ವೈ. ರಾಜಾರಾವ್ ಪ್ರಧಾನ ಕಾರ್ಯದರ್ಶಿಯಾಗಿಯೂ ಆಯ್ಕೆಯಾಗಿದ್ದರು.

ಕ್ರೀಡಾ ಇಲಾಖೆಯು ಫೆಡರೇಷನ್‌ನ ನೂತನ ಪದಾಧಿಕಾರಿಗಳ ಜೊತೆಗೆ ಪೊನ್ನುಸ್ವಾಮಿ ಮತ್ತು ನಖ್ವಿ ಅವರನ್ನು ಮಾತುಕತೆಗೆ ಆಹ್ವಾನಿಸಿತು. ಒಂದು ಬಣದಿಂದ ಪೊನ್ನುಸ್ವಾಮಿ, ರಾಜಾರಾವ್ ಮತ್ತು ರಾಜಶೇಖರ್ ಹಾಗೂ ಇನ್ನೊಂದು ಬಣದಿಂದ ನಖ್ವಿ, ವಿಜಯ್ ಕುಮಾರ್ ಮತ್ತು ಪಿ.ಎಸ್. ಲಂಬಾ ಜನವರಿ 4, 2012ರಂದು ನಡೆದ ಈ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಮುಂದಿಟ್ಟಿದ್ದರು. ಇಲ್ಲಿ ದೊರೆತ ಮಾಹಿತಿಗಳ ಆಧಾರದಲ್ಲಿ ಕ್ರೀಡಾ ಇಲಾಖೆ ಮೊನ್ನೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.