ಮಂಗಳವಾರ, ಮೇ 11, 2021
24 °C

ಬಿರುಗಾಳಿಯೂ ತಂಗಾಳಿಯೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಲವು ಅಪಘಾತಗಳನ್ನು ದಾಟಿ ತೆರೆ ಕಾಣಲು ಸಜ್ಜಾಗಿದೆ `ತೂಫಾನ್~ ಎಂದರು ಚಿತ್ರದ ನಿರ್ದೇಶಕ ಸ್ಮೈಲು ಸೀನು. ಚಿತ್ರೀಕರಣದ ವೇಳೆ ನಾಯಕ ಯಶಸ್ ಅವರಿಗೆ ಅಪಘಾತವಾಯಿತು.ಸುಮಾರು ಐದು ತಿಂಗಳ ಕಾಲ ಅವರು ಚೇತರಿಸಿಕೊಳ್ಳಬೇಕಾಯಿತು ಎಂದು ಚಿತ್ರ ಬಿಡುಗಡೆ ವಿಳಂಬವಾದದ್ದಕ್ಕೆ ಕಾರಣ ನೀಡಿದರು ಅವರು. ಇದಾದ ಮೇಲೆ ನಾಯಕಿ ತೆಲುಗು ಮೂಲದ ನಕ್ಷತ್ರ ಅವರ ಡೇಟ್ಸ್ ಕೊರತೆ ಕಾಡಿತಂತೆ. ಚಿತ್ರದ ಮತ್ತೊಬ್ಬ ನಾಯಕ ಚಂದನ್ ಕೂಡ ಪರ್ವತವೊಂದರ ತುದಿಯಲ್ಲಿ ಅಪಾಯ ಎದುರಿಸಿದರು.

 

ಜಿಮ್ಮಿ ಜಿಪ್ ಕ್ಯಾಮೆರಾ ಆ ದುರ್ಗಮ ಪ್ರದೇಶದಲ್ಲಿ ಅವರನ್ನು ಬಡಿದಿತ್ತು. ಮೂರನೇ ಅಪಘಾತ ಹರ್ಷ ಆಸ್ಪತ್ರೆಯಲ್ಲಿ ನಡೆದು ಹೋಗಿತ್ತು. ಇಬ್ಬರು ಸಹಾಯಕರಿಗೆ ಕಾರೊಂದು ಅಪ್ಪಳಿಸಿತ್ತು. ಅದರಲ್ಲೊಬ್ಬರು ಕೋಮಾ ಸ್ಥಿತಿಯಲ್ಲಿದ್ದರು.ಇಬ್ಬರು ನಾಯಕರು ಒಬ್ಬರೇ ನಾಯಕಿ ಏನಿದರ ಮರ್ಮ ಎಂಬುದು ಪತ್ರಕರ್ತರ ಪ್ರಶ್ನೆ. ಆದರೆ ಸೀನು ಅವರಿಗೆ ಸಸ್ಪೆನ್ಸ್ ಕಾಯ್ದುಕೊಳ್ಳುವುದು ಬಹಳ ಇಷ್ಟ. ತೆರೆಯ ಮೇಲೆಯೇ ಅದನ್ನೆಲ್ಲಾ ತಿಳಿಯುವುದು ಉತ್ತಮ ಎಂಬುದು ಅವರ ಸಮಜಾಯಿಷಿ.ಯಶಸ್ ಅವರದು ಮಧ್ಯಮವರ್ಗದ ಹುಡುಗನ ಪಾತ್ರ. ಪ್ರೇಮಪಾಶಕ್ಕೆ ಸಿಲುಕಿದ ಯುವಕನೊಬ್ಬ ಏನೆಲ್ಲಾ ಆಗುತ್ತಾನೆ ಎಂಬುದು ಚಿತ್ರದ ಕತೆ. ತಮ್ಮ ಹಿಂದಿನ ಚಿತ್ರ ಶಿಶಿರಕ್ಕಿಂತ ಇಲ್ಲಿ ಭಿನ್ನ ಪಾತ್ರ ದೊರೆತಿದೆ. ತಮ್ಮ ಹೀರೊಯಿಸಂ ತೋರಿಸಲು ಉತ್ತಮ ವೇದಿಕೆ ದೊರೆತಿದೆ. ಇಲ್ಲಿನ ಸಾಹಸ ಸನ್ನಿವೇಶಗಳು ಸೂಕ್ತವಾಗಿ ಹೊಂದಿಕೊಂಡಿವೆಯಂತೆ.ನಿರ್ಮಾಪಕ ಎಚ್. ಜಡೇಗೌಡರಿಗೆ ಚಿತ್ರರಂಗ ಹೊಸತು. ತೂಫಾನ್ ಅವರಿಗೆ ಮತ್ತಷ್ಟು ಚಿತ್ರಗಳನ್ನು ನಿರ್ಮಿಸಲು ಪ್ರೇರಣೆ ಒದಗಿಸಿದೆಯಂತೆ. ಅವರ ಪ್ರಕಾರ ಕತೆಯೇ ಚಿತ್ರದ ನಾಯಕ. ಪ್ರೇಮಕತೆಯಾಗಿರುವುದರಿಂದ ಚಿತ್ರದಲ್ಲಿ ಬಿರುಗಾಳಿ ತಂಗಾಳಿ ಎರಡೂ ಲಭ್ಯ. ಹಾಸ್ಯ, ತಾಯಿಪ್ರೀತಿ, ಹೊಡೆದಾಟಗಳಿಗೆ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ.

ಸಾಧುಕೋಕಿಲ ರೋಮರಾಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಮೇಶ್‌ಭಟ್, ಪ್ರಮಿಳಾ ಜೋಷಾಯ್, ವಿದ್ಯಾಮೂರ್ತಿ ಮುಂತಾದವರ ತಾರಾಗಣ ಚಿತ್ರಕ್ಕಿದೆ.ಬೆಂಗಳೂರು, ತುಮಕೂರು, ಗೋಣಿಕೊಪ್ಪ, ಕಾರವಾರ, ಯಲ್ಲಾಪುರ, ಗೋವಾ, ಮಡಿಕೇರಿಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಐದು ಹಾಡುಗಳು ಮೂರು ಹಾಡಿನ ತುಣುಕುಗಳು ಸಂಗೀತದ ಸ್ಪರ್ಶ ನೀಡಿವೆ.ಚಿತ್ರದ ಸಂಕಲನಕಾರ ಪಿ.ಸೌಂದರ್‌ರಾಜ್ ಇಬ್ಬರು ನಾಯಕರನ್ನೂ ಬಹುವಾಗಿ ಮೆಚ್ಚಿಕೊಂಡರು. ಇಬ್ಬರ ಶ್ರಮ ಅವರ ಮೆಚ್ಚುಗೆ ಕಾರಣವಾಗಿತ್ತು. ಸಂಭಾಷಣೆ ಉತ್ತಮವಾಗಿರುವುದಕ್ಕೆ ನಿರ್ದೇಶಕರ ಬರಹಗಾರಿಕೆ ಕಾರಣ ಎಂದರು.ಸಂಗೀತ ನಿರ್ದೇಶಕ ಎಲ್ವಿನ್ ಚಿತ್ರದ ಶಬ್ದ ತಂತ್ರಜ್ಞಾನವನ್ನು ಹೊಗಳಿದರು. ಹಿನ್ನೆಲೆ ಸಂಗೀತ ಸನ್ನಿವೇಶಗಳ ತೀವ್ರತೆಯನ್ನು ಹೆಚ್ಚಿಸಲಿದೆ ಎಂಬ ಆಶಯ ಅವರದು. ಸುಮಾರು 60 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.