ಬುಧವಾರ, ಮೇ 25, 2022
30 °C

ಬಿರುಸುಗೊಂಡ ಗುಡುಗಳಲೆ ಜಾನುವಾರು ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶನಿವಾರಸಂತೆ: ಇಲ್ಲಿನ ಗುಡುಗಳಲೆ ಜಾತ್ರಾ ಮೈದಾನದಲ್ಲಿ 10 ದಿನಗಳಿಂದ ನಡೆಯುತ್ತಿರುವ 66ನೇ ಜಯದೇವ ಜಾನುವಾರುಗಳ ಜಾತ್ರೆ ಜನರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.ಜಾತ್ರೆ ಇತ್ತೀಚಿನ ವರ್ಷಗಳಲ್ಲಿ ನೀರಸವಾಗಿದ್ದರೂ ಇದೀಗ ಗತ ವೈಭವ ಮರುಕಳಿಸಿಕೊಳ್ಳುವಂತೆ ರಾಸುಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿವೆ. ಇನ್ನೆರಡು ದಿನಗಳಲ್ಲಿ ರಾಸುಗಳ ಸಂಖ್ಯೆ ಮತ್ತಷ್ಟು ಅಧಿಕಗೊಳ್ಳುವ ನಿರೀಕ್ಷೆಯಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಜಾನುವಾರುಗಳು ಜಾತ್ರೆಗೆ ಆಗಮಿಸುತ್ತಿವೆ. ರೈತರು ರಾಸುಗಳ ವ್ಯಾಪಾರದಲ್ಲಿ ತೊಡಗಿದ್ದು, ಒಂದು ಜೋಡಿ ಉತ್ತಮ ರಾಸುಗಳ ಬೆಲೆ ರೂ. 15 ಸಾವಿರದಿಂದ 65 ಸಾವಿರದವರೆಗೆ ಇದೆ. ಸುಮಾರು ಒಂದು ಸಹಸ್ರ ಜಾನುವಾರುಗಳು ಮೈದಾನದಲ್ಲಿ ಸಮಾವೇಶಗೊಂಡಿವೆ.ಪ್ರತಿದಿನ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇದರಿಂದ ಜಾತ್ರೆಯಲ್ಲಿ ಜನರ ಓಡಾಟವೂ ಅಧಿಕಗೊಂಡು ಗ್ರಾಮಾಂತರ ಪ್ರದೇಶದ ಜನರನ್ನು ಆಕರ್ಷಿಸುತ್ತಿವೆ. ಹೋಟೆಲ್, ತಿಂಡಿ-ತಿನಿಸುಗಳು ಮತ್ತಿತರ ವ್ಯಾಪಾರ ಮಳಿಗೆಗಳು ಜನರಿಗಾಗಿ ಕಾಯುತ್ತಿವೆ.

ಈ ಸಲದ ಜಾತ್ರೆಗೆ ಕೊಡಗಿನಿಂದ ಮಾತ್ರವಲ್ಲದೆ ನೆರೆಯ ಹಾಸನ ಜಿಲ್ಲೆ ಹಾಗೂ ಸಕಲೇಶಪುರ ತಾಲ್ಲೂಕಿನಿಂದಲೂ ರಾಸುಗಳು ಬಂದಿವೆ. ಚಾಡೇನಹಳ್ಳಿಯ ರೈತ ಸಿ.ಎಂ.ಮಲ್ಲಿಕಾರ್ಜುನ ಜಾತ್ರೆಯಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ತಂದಿರುವ 65 ಸಾವಿರ ರೂಪಾಯಿ ಬೆಲೆ ಬಾಳುವ ಎರಡು ಹಲ್ಲುಗಳ 3 ವರ್ಷದ ಸುಂದರವಾದ ಜೊತೆ ರಾಸುಗಳು ಜನರನ್ನು ಆಕರ್ಷಿಸುತ್ತಿವೆ.ಹಂಡ್ಲಿ ಮತ್ತು ಶನಿವಾರಸಂತೆ ಗ್ರಾಮ ಪಂಚಾಯಿತಿಗಳು ಹಾಗೂ ಜಾತ್ರಾ ಸಮಿತಿಯ ಜಂಟಿ ಆಶ್ರಯದಲ್ಲಿ 13 ದಿನಗಳ ಕಾಲ ಈ ಜಾತ್ರೆ ನಡೆಯಲಿದೆ. ಜಾತ್ರೆಯಲ್ಲಿ ವಸ್ತು ಪ್ರದರ್ಶನ, ಜಾದೂ, ಜೈಂಟ್‌ವ್ಹೀಲ್, ಕೊಲಂಬಸ್, ಪುಟಾಣಿ ರೈಲು ಮೊದಲಾದ ಮನೋರಂಜನಾ ಕಾರ್ಯಕ್ರಮಗಳು ಹಾಗೂ ವೈವಿಧ್ಯಮಯ ತಿಂಡಿ-ತಿನಿಸುಗಳ ಮಳಿಗೆಗಳು, ಸರ-ಬಳೆ ಇತ್ಯಾದಿ ಶೃಂಗಾರ ಸಾಧನಗಳ ಅಂಗಡಿಗಳು ಮಕ್ಕಳು- ಮಹಿಳೆಯರನ್ನು ಅಕರ್ಷಿಸುತ್ತಿವೆ.ಜಾತ್ರಾ ಮೈದಾನದಲ್ಲಿ ಎರಡು ದೇವಾಲಯಗಳಿವೆ. ಜಾತ್ರಾ ಸಮಯದಲ್ಲಿ ಮಾತ್ರ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಆದರೆ, ದೇವರ ರಥೋತ್ಸವವಾಗಲಿ ತೇರನೆಳೆಯುವ ಕಾರ್ಯಕ್ರಮವಾಗಲಿ ಇದ್ದಲ್ಲಿ ಜಾತ್ರೆಗೆ ಮತ್ತಷ್ಟು ಕಳೆ ಬರುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಕೆಲವು ನಾಗರಿಕರು. ಈ ವರ್ಷದ ಜಾತ್ರೆಗೆ ಫೆ. 9ರಂದು ಮುಕ್ತಾಯ ಸಮಾರಂಭದೊಂದಿಗೆ ತೆರೆ ಬೀಳಲಿದೆ.

 -ಶ.ಗ.ನಯನತಾರಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.