ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಜೊತೆಗಾತಿ ಜೊಮ್ಲು ತೀರ್ಥ

Last Updated 9 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿರುವ ಜಲಪಾತಗಳನ್ನು ಹೆಸರಿಸಿ ಎಂದಾಕ್ಷಣ ನೆನಪಾಗುವುದು ಜೋಗ, ಅಬ್ಬಿ, ಹೊಗೇನಕಲ್, ಸಾತೊಡ್ಡಿ ಮುಂತಾದವುಗಳು. ಆದರೆ ಅದೆಷ್ಟೋ ಜಲಪಾತಗಳು ಮೂಲಭೂತ ಸೌಕರ್ಯಗಳಿಲ್ಲದಿದ್ದರೂ ತಮ್ಮ ಪ್ರಕೃತಿದತ್ತ ಚೆಲುವಿನಿಂದಲೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಅವುಗಳಲ್ಲಿ ಉಡುಪಿಯಿಂದ 35 ಕಿ.ಮೀ. ದೂರ ಇರುವ ಜೊಮ್ಲು ತೀರ್ಥವೂ ಒಂದು. ಮಳೆಗಾಲದಲ್ಲಿ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳಿಸುವ ಈ ಸುಂದರಿ ಬೇಸಿಗೆಯಲ್ಲೂ ವೀಕ್ಷಕರ ಮನ ತಣಿಸುತ್ತಾಳೆ. ಸದ್ದುಗದ್ದಲವಿಲ್ಲದೇ, ಹೆಚ್ಚಾಗಿ ಯಾರ ಗಮನಕ್ಕೂ ಬಾರದೇ ಮೌನವಾಗಿ ಹರಿಯುತ್ತಿರುವ ಈ ರಮಣೀಯ ತಾಣದ ಸೌಂದರ್ಯ ಸವಿದಿರುವ ನಾನು ಇದರ ಬಗ್ಗೆ ಒಂದಿಷ್ಟು ವಿಷಯ ಎಲ್ಲರೊಡನೆ ಹಂಚಿಕೊಳ್ಳಲು ಬಯಸಿದ್ದೇನೆ.

ನಾವೆಲ್ಲ ಸ್ನೇಹಿತರು ಸೇರಿ ಪ್ರವಾಸ ಮಾಡಲು ಬಯಸಿದಾಗ ತುಂಬಾ ಚರ್ಚೆಯ ನಂತರ ಈ ಸ್ಥಳದ ಬಗ್ಗೆ ಯಾರೋ ಹೇಳಿದರು. ಸರಿ. ಇಲ್ಲಿಯೇ ಪ್ರವಾಸ ಮಾಡೋಣ ಎಂದು ನಿರ್ಧರಿಸಿದೆವು. ಮಿನಿ ಬಸ್‌ನಲ್ಲಿ ಅಂತ್ಯಾಕ್ಷರಿಯೊಂದಿಗೆ ಆರಂಭವಾಯಿತು ನಮ್ಮ ಪಯಣ. ಅಂತೂ ಬೆಳಿಗ್ಗೆ 10 ಗಂಟೆಗೆ ಜೊಮ್ಲುತೀರ್ಥದ ಸನಿಹದ ಕಾನನ ತಲುಪಿದೆವು. ಸುತ್ತಲೂ ಕಾಡು, ನಡುವೆ ಮಣ್ಣಿನ ರಸ್ತೆ. ಕಿರಿದಾದ ರಸ್ತೆಯಲ್ಲಿ ನಮ್ಮ ಬಸ್ಸು ಮರಗಳ ಕಿರು ಗೆಲ್ಲುಗಳನ್ನು ಸವರುತ್ತಾ ಮುಂದೆ ಸಾಗಿತು.

ಒಂದು ಹಂತದಲ್ಲಿ ಮುಂದಕ್ಕೆ ಸಾಗಲು ಚಾಲಕ ನಿರಾಕರಿಸಿದ ಕಾರಣ ಅಲ್ಲಿಯೇ ಬಸ್ಸನ್ನು ನಿಲ್ಲಿಸಿ ಎಲ್ಲರೂ ಕೆಳಗಿಳಿದೆವು. ಸ್ವಲ್ಪ ಮುಂದೆ ಸಾಗುವಾಗ ಕಿರು ಮೈದಾನದಂತಹ ಸ್ಥಳ. ಅಲ್ಲಿ ನಾವು ತಂದ ಚಹಾ, ಬಿಸ್ಕತ್‌ ಸೇವಿಸಿದೆವು.  ಬಸ್ಸಿನಲ್ಲಿ ಕುಣಿದ ಆಯಾಸ ಸ್ವಲ್ಪ ಮಟ್ಟಿಗೆ ಪರಿಹಾರ! 

ಅಲ್ಲಿಂದ ಮುಂದೆ ಸಾಗಿದಾಗ ಬೆಳ್ನೊರೆಯಂತೆ ಜುಳು ಜುಳು ನಾದ ಮಾಡುತ್ತಾ ನೀರೆ ಸಾಗುವ ಪರಿಯ ಕಂಡು ಅರೆಕ್ಷಣ ರೋಮಾಂಚನ. ನೀರಿಗೆ ಕೈಯೊಡ್ಡಿದರೆ ಮೈಯಲ್ಲಿ ಪುಳಕ. ತಂಪು ನೀರಿನಿಂದ ಚುಮು ಚುಮು ಚಳಿಯ ಅನುಭವ. ಧುಮುಕುವ ಜಲಧಾರೆಯನ್ನು ಕಣ್ಣಾರೆ ಕಾಣುವುದೇ ಪರಮಾನಂದ.

ಜೊಮ್ಲುತೀರ್ಥದಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲೆಂದು ಕಬ್ಬಿಣದ ಏಣಿಯನ್ನು ಇಳಿಸಿಬಿಟ್ಟಿದ್ದಾರೆ. ಏಣಿಯ ಇನ್ನೊಂದು ತುದಿ ತಲುಪಿದರೆ, ಸಣ್ಣ ಸ್ನಾನವಾಗುವುದಂತೂ ಖಚಿತ! ಇದರ ಮೇಲೆ ಹತ್ತಿ ಜಲಪಾತಕ್ಕೆ ಮೈ-ಕೈ ಒಡ್ಡಿಕೊಂಡು ಖುಷಿ ಪಡುವವರು ಒಂದೆಡೆಯಾದರೆ, ಅದರ ಮೇಲೆ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುವವರು ಮತ್ತೊಂದೆಡೆ.

ಜುಳು ಜುಳು ನಾದದ ಜಲಪಾತದಿಂದ ಸಿಂಚನವಾಗುವ ನೀರಲ್ಲಿ ಕಾಲ ಕಳೆಯುತ್ತಿದ್ದ ನಮಗೆ ಹೊತ್ತು ಹೋದದ್ದೇ ತಿಳಿಯಲಿಲ್ಲ. ಏಣಿಯ ಮೇಲೆ ವರ್ಷವಿಡೀ ನೀರು ಹರಿಯುವ ಕಾರಣ ಜಾರುವ ಅಪಾಯದ ಬಗ್ಗೆ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ಇಲ್ಲಿ ಪ್ರವಾಸಿಗರಿಗೆ ತಿನಿಸು ಏನೂ ಸಿಗದು. ಕುಡಿಯುವ ನೀರು ಸಹಿತ ಕೊಂಡೊಯ್ಯಬೇಕು. ಪ್ರವಾಸಿಗರು ತಂದ ತಿಂಡಿ ತಿನಿಸುಗಳ ಪೊಟ್ಟಣಗಳನ್ನು ಅಲ್ಲಲ್ಲಿ ಬಿಸಾಡಿ ಪರಿಸರವನ್ನು ಕೆಡಿಸದೇ ನಿಸರ್ಗದ ಅಂದ ಉಳಿಸುವುದು ಒಳಿತು.

ಈ ಪ್ರದೇಶವು ಚಾರಣಪ್ರಿಯರಿಗೆ ಸ್ವರ್ಗ ಎನ್ನುತ್ತಾರೆ. ಜನನಿಬಿಡ ಪ್ರದೇಶವಲ್ಲವಾದ್ದರಿಂದ, ತಂಡ ತಂಡವಾಗಿ ಹೋಗುವುದು ಉತ್ತಮ. ಇಲ್ಲಿಗೆ ಪ್ರವಾಸ ಕೈಗೊಳ್ಳುವವರು ಸ್ವಂತ ವಾಹನ ಮಾಡಿಕೊಂಡು ಹೋದರೆ ಒಳ್ಳೆಯದು.

ಹೋಗೋದು ಹೇಗೆ?
ಕಾರ್ಕಳ ತಾಲ್ಲೂಕಿನ ಹೆಬ್ರಿ ಪೇಟೆಯಿಂದ ಅಥವಾ ಉಡುಪಿಯ ಬ್ರಹ್ಮಾವರದಿಂದ ಜೊಮ್ಲು ತೀರ್ಥಕ್ಕೆ ಅರ್ಧ ಗಂಟೆಗೊಂದು ಬಸ್ ಸೌಕರ್ಯವಿದೆ. ಹೆಬ್ರಿಯಿಂದ ಅರ್ಧ ಗಂಟೆ ಬಸ್‌ನಲ್ಲಿ ಕ್ರಮಿಸಬೇಕು. ಜೊಮ್ಲು ತೀರ್ಥಕ್ಕೆ ಸಾಗುವ ಸೋಮೇಶ್ವರ ತಿರುವು ತನಕ ಬಸ್ ಸಂಚಾರವಿದ್ದು, ಅಲ್ಲಿಂದ ಮುಂದೆ ಖಾಸಗಿ ರಿಕ್ಷಾವನ್ನು ಬಾಡಿಗೆಗೆ ಪಡೆಯಬಹುದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT