ಮಂಗಳವಾರ, ಜೂನ್ 22, 2021
27 °C

ಬಿಸಿಲ ನಾಡಿನಲ್ಲಿ ಆಲಿಕಲ್ಲು ರಾಶಿ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಿಜಾಪುರ, ಬಾಗಲಕೋಟೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸೋಮವಾರ ಆಲಿಕಲ್ಲು ಮಳೆಯಾಗಿದ್ದು, ಸಿಡಿಲು ಬಡಿದು ವಿಜಾಪುರ ಜಿಲ್ಲೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ.ವಿಜಾಪುರ ಜಿಲ್ಲೆಯ ಇಂಡಿ, ಆಲಮೇಲ, ಸಿಂದಗಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳ ವಿವಿಧೆಡೆ ಆಲಿಕಲ್ಲು ಸಹಿತ ಮಳೆಯಾಗಿದ್ದು, ಇಂಡಿ ತಾಲ್ಲೂಕು ತೆನ್ನೆಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಗೋಪಾಲ ನಾಗಪ್ಪ ಹೂವನಗೋಳ (25) ಎಂಬ ಯುವಕ ಮೃತಪಟ್ಟಿದ್ದಾನೆ. ಸಂಜೆ ಹೊಲದಲ್ಲಿ ಕಣಕಿ ಸಂಗ್ರಹಿಸುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಇಂಡಿ ತಾಲ್ಲೂಕಿನ ಬರಡೋಲ, ಭತಗುಣಕಿ, ಚಡಚಣ, ಬಳ್ಳೊಳ್ಳಿ, ಗುಂದವಾನ, ಅಂಜುಟಗಿ, ಝಳಕಿ, ಧೂಳಖೇಡ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ದ್ರಾಕ್ಷಿ, ಬಿಳಿ ಜೋಳ ಮತ್ತಿತರ ಬೆಳೆಗೆ ಹಾನಿಯಾಗಿದೆ.ದೊಡ್ಡ ಗಾತ್ರದ ಆಲಿಕಲ್ಲು: ವಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಸುಮಾರು  ಅರ್ಧ ಗಂಟೆ ಸುರಿದ ದೊಡ್ಡ ಗಾತ್ರದ ಆಲಿಕಲ್ಲು ಸಮೇತ ಮಳೆ ಪಟ್ಟಣದ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿತು. ಆಲಿಕಲ್ಲುಗಳು ಸುಮಾರು ಕಾಲು ಕೆ.ಜಿ.ಗಿಂತಲೂ ಹೆಚ್ಚು ತೂಕವಿದ್ದವು. ಕೆಲವು ಕಾರಿನ ಗಾಜುಗಳು, ದ್ವಿಚಕ್ರ ವಾಹನಗಳ ಕನ್ನಡಿ ಹಾಗೂ ಮನೆ ಮೇಲೆ ಅಳವಡಿಸಿದ್ದ ಸೌರಶಕ್ತಿಯ ಪ್ಯಾನೆಲ್‌್‌ಗಳು ಒಡೆದಿವೆ.ಬಾಗಲಕೋಟೆ ಜಿಲ್ಲೆಯ ಹುನಗುಂದ ಮತ್ತು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಸಿದ್ಧವನಹಳ್ಳಿ ಗ್ರಾಮದಲ್ಲಿಯೂ ಆಲಿಕಲ್ಲು ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನಾದ್ಯಂತ ಆಲಿಕಲ್ಲು ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಗೋಧಿ, ಕಡಲೆ ಹಾಗೂ ದ್ರಾಕ್ಷಿ ಬೆಳೆಗೂ ಸಹ ಅಪಾರ ಹಾನಿಯುಂಟಾಗಿದೆ.ಉದುರಿದ ಮಿಡಿ ಮಾವು

ಗುಲ್ಬರ್ಗ:
ಗುಲ್ಬರ್ಗ, ಬೀದರ್‌, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಕೆಲವು ಕಡೆ ಸೋಮವಾರ ಆಲಿಕಲ್ಲು ಸಹಿತ ಮಳೆ ಬಿದ್ದು, ಅಪಾರ ಪ್ರಮಾಣದ ಬೆಳೆಹಾನಿ ಉಂಟಾಗಿದೆ.ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬೂದಿವಾಳ ಕ್ಯಾಂಪ್‌ನಲ್ಲಿ ಗಂಗಮ್ಮ ಅಂಬಣ್ಣ (24) ಎನ್ನುವ ಮಹಿಳೆ ಸೋಮವಾರ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹೊಲದಲ್ಲಿ ಕಳೆ ಕೀಳುವುದಕ್ಕೆ ಹೋಗಿದ್ದ ವೇಳೆ ಮಳೆ ಸಿಡಿಲು ಬಡಿದಿದೆ. ಸಮೀಪದ ಗೋಮರ್ಸಿ ಗ್ರಾಮದ ಎಂಟು ಮನೆಗಳ ತಗಡುಗಳು ಹಾರಿಹೋಗಿವೆ.

ಗುಲ್ಬರ್ಗದ ಅಫಜಲಪುರ ತಾಲ್ಲೂಕಿನ ಜೇವರ್ಗಿ (ಬಿ) ಗ್ರಾಮದ ಭಾಸ್ಕರ್‌ ತಿಪ್ಪಣ್ಣ ಚಾಂಬರ್‌ ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸೋಮವಾರ ಸಂಜೆ ಸಿಡಿಲು ಬಡೆದು ಮೃತ ಪಟ್ಟಿದ್ದಾರೆ.ಆಳಂದ ತಾಲ್ಲೂಕಿನಲ್ಲಿ ಸೋಮವಾರ ಸಂಜೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿ ಬೆಳೆದು ನಿಂತಿದ್ದ ಜೋಳ, ಗೋಧಿ, ಕಡಲೆ, ದ್ರಾಕ್ಷಿ ಸೇರಿದಂತೆ ಬೆಳೆಗಳು ಹಾನಿಗೀಡಾಗಿವೆ. ತೋಟಗಾರಿಕೆ ಬೆಳೆ ಹೆಚ್ಚಾಗಿರುವ ದಣ್ಣೂರ ಗ್ರಾಮದಲ್ಲಿ ದ್ರಾಕ್ಷಿ, ಕಲ್ಲಂಗಡಿ, ನಿಂಬೆಹಣ್ಣಿನ ತೋಟ, ಮಾವಿನ ಮೀಡಿಗಾಯಿಗಳು ಬಿರುಗಾಳಿಗೆ ಉದುರಿ ಬಿದ್ದಿವೆ. ಕೆಲವು ಗ್ರಾಮಗಳಲ್ಲಿ ಗಾಳಿಗೆ ಸಿಕ್ಕು ಮನೆಗಳಿಗೆ ಹೊದಿಸಿದ್ದ ತಗಡುಗಳು ಹಾರಿ ಹೋಗಿವೆ. ಕಮಲಾನಗರದಲ್ಲಿ ಒಂದು ಆಕಳು ಸಾವನ್ನಪ್ಪಿದ್ದು, ಎರಡು ಎತ್ತುಗಳಿಗೆ ಗಾಯವಾಗಿವೆ. ಕರಾರಿ ಗ್ರಾಮದ ಏಳು ಮಹಿಳೆಯರು ಆಲಿಕಲ್ಲು ಹೊಡೆತದಿಂದ ಮೈತುಂಬ ಬಾತುಕೊಂಡಿದ್ದು, ಸಮೀಪದ ಕಮಲಾನಗರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.ಬೀದರ್‌ನ ಹುಮನಾಬಾದ್ ಪಟ್ಟಣದ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸೋಮವಾರ ಬೆಳಿಗ್ಗೆ ಸುರಿದ ಆಲಿಕಲ್ಲು ಮಿಶ್ರಿತ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಹಾನಿ ಉಂಟಾಗಿದೆ. ಪಟ್ಟಣದ ಬಹುತೇಕ ರಸ್ತೆಗಳು ಮಳೆ ನೀರಿನಿಂದ ಜಲಾವೃತಗೊಂಡಿದ್ದರಿಂದ ವಾಹನ ಹಾಗೂ ಪಾದಚಾರಿಗಳು ಸಂಚರಿಸಲು ತೀವ್ರ ತೊಂದರೆ ಉಂಟಾಗಿತ್ತು.ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಹಾಗೂ ಕುಷ್ಟಗಿ ತಾಲ್ಲೂಕುಗಳಲ್ಲಿ ಅಕಾಲಿಕ ಮಳೆಗೆ ಬೆಳೆಹಾನಿಯಾಗಿದ್ದಲ್ಲದೆ, ಆಲಿಕಲ್ಲಿನ ಹೊಡೆತಕ್ಕೆ ಜನ ಜಾನುವಾರುಗಳು ತತ್ತರಿಸಿವೆ.ಬೆಸಿಗೆಗಾಗಿ ದನಕರುಗಳಿಗೆ ಸಂಗ್ರಹಿಸಿಟ್ಟಿದ್ದ ಹೊಟ್ಟು, ಮೇವು ಹಾಳಾಗಿದೆ. ಯಲಬುರ್ಗಾದ ಹಿರೇವಂಕಲಕುಂಟಾ ಹೋಬಳಿ ಸುತ್ತಮುತ್ತ ಗ್ರಾಮಗಳಲ್ಲಿ ಹೆಚ್ಚಾಗಿ ಬೆಳೆದಿದ್ದ ಪಪ್ಪಾಯಿ ನೆಲಕಚ್ಚಿವೆ.ಕನಕಗಿರಿ ಹೋಬಳಿ ಸುತ್ತಮುತ್ತಲಿನ ಹುಲಿಹೈದರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ಸಂಜೆ  ಗುಡುಗು, ಸಿಡಿಲು ಮಿಶ್ರಿತ  ಧಾರಾಕಾರ ಮಳೆಗೆ ಎರಡು ಎತ್ತುಗಳು ಸೇರಿದಂತೆ ಕುರಿ, ಕೋಳಿಗಳು ಸಾವನ್ನಪ್ಪಿವೆ.ಹೊಸಗುಡ್ಡ ಗ್ರಾಮದ ರಸ್ತೆಯಲ್ಲಿರುವ ಹುಸೇನಸಾಬ ಇಮಾಮಸಾಬ ಗಿಡದವರ ಎಂಬುವ ರೈತನಿಗೆ ಸೇರಿದ ಎರಡು ಎತ್ತುಗಳು ಸಿಡಿಲು ಬಡಿದು  ಸ್ಥಳದಲ್ಲಿಯೇ  ಮೃತಪಟ್ಟಿವೆ  ಎಂದು ಕಂದಾಯ ನಿರೀಕ್ಷಕ ಮೋಹನರಾವ್ ತಿಳಿಸಿದ್ದಾರೆ. ಸತತ ಒಂದು ಗಂಟೆ ಕಾಲ ಆಲಿಕಲ್ಲು ಮಳೆ ಸುರಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.