ಶನಿವಾರ, ಫೆಬ್ರವರಿ 27, 2021
19 °C
ಬಿರುಗಾಳಿ ಸಹಿತ ಧಾರಾಕಾರ ಮಳೆ-: ಸಂಚಾರ ಅಸ್ತವ್ಯಸ್ತ

ಬಿಸಿಲ ಬೇಗೆಯಲ್ಲಿ ತಂಪೆರೆದ ವರುಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಸಿಲ ಬೇಗೆಯಲ್ಲಿ ತಂಪೆರೆದ ವರುಣ

ಕೆರೂರ: ಪಟ್ಟಣದಲ್ಲಿ ಮುಂಜಾನೆ 9 ಗಂಟೆಯಿಂದ ನೆತ್ತಿ ಸುಡುವ ಬಿರು ಬಿಸಿಲು, ನಾಗರಿಕರು ಮೇ ತಿಂಗಳ ಬಿರು ಬಿಸಿಲಿಗೆ ಬಸವಳಿದು ಹೋಗಿರುವ ಜೊತೆಗೆ ಸೆಖೆಯ ಸಂಕಟದಲ್ಲಿ ಬೆವರಿನ ಮುದ್ದೆಯಂತಾಗಿ ಯಾವಾಗ ಸಂಜೆಯಾಗಿತ್ತೋ ಎಂದು ಜಪಿಸುವಂತಾಗಿತ್ತು.ಆದರೆ ಸೋಮವಾರ ಮಧ್ಯಾಹ್ನ ವಾತಾವರ­ಣ­ದಲ್ಲಿ ಬದಲಾವಣೆ ಕಂಡು ಬಂದಿತು.  ಸೀಮಂತ, ಮದುವೆಯಲ್ಲಿ ಸಿಹಿಯೂಟ ಉಂಡು ಬಂದವರು ಝಳದಿಂದ ಪಾರಾಗುವುದು ಹೇಗೆ ಎಂಬ ಸಂಕಟದಲ್ಲಿದ್ದಾಗಲೇ ಅಂದಾಜು 3 ಗಂಟೆ ಸುಮಾರಿಗೆ ಬಾನ ತುಂಬೆಲ್ಲಾ ಆವರಿಸಿದ್ದ ಕಪ್ಪ­ಡರಿ­ದ ಕರಿ ಮೋಡಗಳ ರಾಶಿಯ ಮಧ್ಯೆ ಗಡಗಡ, ಗುಡುಗಿನ ಸದ್ದು, ಕೋಲ್ಮಿಂಚಿನ ಬೆಳಕಿನ ಸೆಳೆತ ಬಿಸಿಲಿನ ಬೇಗೆಯಲ್ಲಿ ಕಾದ ಭುವಿಗೆ ಮಳೆಯ ಸಿಂಚನವಾದರೆ ಸಂಕಟದಲ್ಲಿದ್ದ ನಾಗರಿ­ಕರ ಮೊಗದಲ್ಲಿ ಅಮೃತ ಸಿಕ್ಕಷ್ಟು ಸಂತಸ, ನೆಮ್ಮದಿ.ನಂತರ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ಈ ನಡುವೆ ಎದೆ ನಡುಗಿಸುವಂತಹ ಸಿಡಿಲಿನ ‘ಕಡ್‌, ಕಡಲ್‌’ ಸದ್ದು ಮೂರ್ನಾಲ್ಕು ಬಾರಿ ಗ್ರಾಮೀಣ ಪ್ರದೇಶದಲ್ಲಿ ಅಪ್ಪಳಿಸಿದ್ದು ಶಬ್ದದಿಂದ ಅನುಭವಕ್ಕೆ ಬಂದಿತು ಎಂದು ಪಾನ ಅಂಗಡಿಯ ಪುನೀತ ತಮಗಾದ ಅನುಭವ ಹೇಳಿದರು.ಮನೆಗಳ ಮಾಳಿಗೆ ಹಾಗೂ ಉಪ್ಪರಿಗೆಯಿಂದ ಒಂದೇ ಸಮನೆ ನೀರು ಸುರಿದರೆ, ಹಳ್ಳ,ಕೊಳ್ಳ ಮತ್ತು ಚರಂಡಿ ಗಳು ತುಂಬಿ ಹರಿದವಲ್ಲದೇ ಸ್ಥಳೀಯ ತರಕಾರಿ ಮಾರುಕಟ್ಟೆ ಮಳೆ ನೀರಿನಿಂದ ಆವೃತಗೊಂಡಿತು. ಮಧ್ಯಾಹ್ನವೇ ಏಕಾ ಏಕಿ ಸುರಿದ ಮಳೆಯಿಂದ ಪರದಾಡಿದ ತರಕಾರಿ ವ್ಯಾಪಾರಿಗಳು ತಮ್ಮ ಸಲಕರಣೆಗಳನ್ನು ರಕ್ಷಿಸಿಕೊಳ್ಳು ವಲ್ಲಿ ಹೆಣಗಾಡಿದರು.ಮಳೆಯಿಂದ ರಾಷ್ಟ್ರೀಯ ಹೆದ್ದಾರಿ (218) ರಲ್ಲಿ ವಾಹನ ಸಂಚಾರ ತೀವ್ರ ಅಸ್ತವ್ಯಸ್ತವಾಗಿತ್ತು. ಕಾರ್ಮೋ­ಡಗಳ ಪರಿ­ಣಾಮ ಮಧ್ಯಾಹವೇ ಮಬ್ಬುಗತ್ತಲು ಆವರಿಸಿ­ದಂತಾಗಿ ಹಗಲು ಹೊತ್ತಿನಲ್ಲೇ ವಾಹನಗಳು ದೀಪ ಹಾಕಿ ಸಂಚರಿಸಬೇಕಾಯಿತು. ಮದುವೆ ಇತರೆ ಮಂಗಲ ಕಾರ್ಯಗಳಿಗೆ ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಸಾಗುತ್ತಿದ್ದ ಪ್ರಯಾಣಿಕರು ಮಳೆಯಲ್ಲಿ ನೆನೆದು ತೊಪ್ಪೆಯಾಗಿದ್ದು ಕಂಡು ಬಂದಿತು.ಮಳೆ ನೀರಿನ ಸದ್ಬಳಕೆ: ರಭಸದ ಮಳೆಯಲ್ಲಿ ಮನೆ ಮಾಳಿಗೆಯಿಂದ ಜೋರಾಗಿ ಬೀಳುವ ನೀರನ್ನು ಬ್ಯಾರಲ್‌ಗ ಳಲ್ಲಿ ಸಂಗ್ರಹಿಸಿ ಬೇಸಿಗೆಯ ಅವಧಿಯ ಬವಣೆ ತೊಲಗಿಸಲು ನೆಹರುನಗರದ ಗೃಹಿಣಿ ದಾಕ್ಷಾಯಣಿ ಅವರು ಮಳೆ ನೀರಿನ ಸದ್ಬಳಕೆಗೆ ಮುಂದಾಗಿದ್ದು ಗಮನ ಸೆಳೆಯಿತು.ಇತ್ತ ಪಟ್ಟಣ ಪಂಚಾಯ್ತಿ ಪಟ್ಟಣಿಗರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಹೆಣಗುತ್ತಿರುವಾಗಲೇ ಉತ್ತಮವಾಗಿ (ಅಂದಾಜು 4 ಸೆಂ.ಮೀ) ಸುರಿದ ‘ವರುಣರಾಯ’ ಆಡಳಿತವನ್ನು ಸ್ವಲ್ಪ ಕಾಲ ನಿರಾಳವಾಗಿಸಿದ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.