ಬುಧವಾರ, ಮೇ 12, 2021
18 °C

ಬಿಸಿಸಿಐ ಮಾಜಿ ಅಧ್ಯಕ್ಷ ಎನ್‌ಕೆಪಿ ಸಾಳ್ವೆ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ ಐಎಎನ್‌ಎಸ್): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಎನ್‌ಕೆಪಿ ಸಾಳ್ವೆ (90) ಭಾನುವಾರ ಬೆಳಿಗ್ಗೆ ನಿಧನರಾದರು. 

ಅಲ್ಪಕಾಲದ ಅಸ್ವಸ್ಥತೆಯಿಂದ ಬಳಲಿದ್ದ ಸಾಳ್ವೆ ಅವರನ್ನು ಕೆಲ ದಿನಗಳ ಹಿಂದೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಯೇ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಂತ್ಯಕ್ರಿಯೆ ನಾಗ್ಪುರದಲ್ಲಿ ಸೋಮವಾರ ನಡೆಯಲಿದೆ. ಅವರು ಪುತ್ರ ಖ್ಯಾತ ನ್ಯಾಯವಾದಿ ಹರೀಶ್ ಸಾಳ್ವೆ ಮತ್ತು ಪುತ್ರಿ ಅರುಂಧತಿ ಅವರನ್ನು ಅಗಲಿದ್ದಾರೆ.

ಎನ್‌ಕೆಪಿ ಸಾಳ್ವೆ ಎಂದೇ ಖ್ಯಾತರಾಗಿದ್ದ ನರೇಂದ್ರ ಕುಮಾರ್ ಸಾಳ್ವೆ ಬಿಸಿಸಿಐ ಅಧ್ಯಕ್ಷರಾಗಿದ್ದಾಗ (1982-85) ಕ್ರಿಕೆಟ್‌ನ ಬೆಳವಣಿಗೆಗೆ ಮಾಡಿದ ಕಾರ್ಯಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರು ಅಧ್ಯಕ್ಷರಾಗಿದ್ದಾಗಲೇ ಭಾರತ 1983ರಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದಿತ್ತು.

ಭಾರತ ಮತ್ತು ಪಾಕಿಸ್ತಾನಗಳ ಜಂಟಿ ಆತಿಥ್ಯದಲ್ಲಿ 1987ರ ವಿಶ್ವಕಪ್ ಕ್ರಿಕೆಟ್ ನಡೆಯಲು ಸಾಳ್ವೆ ಪ್ರಯತ್ನ ಮಹತ್ತರದ್ದಾಗಿತ್ತು.

ನಾಗ್ಪುರದ ಮೋದಿ ಕ್ಲಬ್ ಪರ ಕ್ರಿಕೆಟ್ ಆಡಿದ್ದ ಸಾಳ್ವೆ ರಣಜಿ ಒಳಗೊಂಡಂತೆ ಹಲವು ಪ್ರಥಮ ದರ್ಜೆ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. 1967 ರಿಂದ 77ರ ವರೆಗೆ ವಿದರ್ಭ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು.

ಭಾರತ ಕ್ರಿಕೆಟ್ ರಂಗಕ್ಕೆ ಅವರು ನೀಡಿದ ಕೊಡುಗೆಯ ಗೌರವಾರ್ಥ ಬಿಸಿಸಿಐ ಪ್ರತಿ ವರ್ಷ ನಡೆಸುವ ಮೂರು ತಂಡಗಳ ನಡುವಣ ಚಾಲೆಂಜರ್ ಟ್ರೋಫಿ ಟೂರ್ನಿಯ ವಿಜೇತರಿಗೆ ನೀಡುವ ಪ್ರಶಸ್ತಿಗೆ `ಎನ್‌ಕೆಪಿ ಸಾಳ್ವೆ ಟ್ರೋಫಿ~ ಎಂದು ಹೆಸರಿಡಲಾಗಿದೆ.  

ರಾಜಕಾರಣದಲ್ಲಿಯೂ ಸಾಳ್ವೆ ಅವರದು ಮರೆಯಲಾಗದ ಇನ್ನಿಂಗ್ಸ್. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಸಾಳ್ವೆ ಮಧ್ಯಪ್ರದೇಶದ ಬೇತುಲ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆ ಬಳಿಕ ರಾಜ್ಯಸಭೆಯ ಸದಸ್ಯರಾದರಲ್ಲದೆ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಪಿ.ವಿ. ನರಸಿಂಹರಾವ್ ಅಧಿಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಶ್ರೀನಿವಾಸನ್ ಸಂತಾಪ: ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ಸಾಳ್ವೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. `ಬಿಸಿಸಿಐ ಅಧ್ಯಕ್ಷರಾಗಿದ್ದುಕೊಂಡು ಭಾರತದಲ್ಲಿ ಕ್ರಿಕೆಟ್‌ನ ಬೆಳವಣಿಗೆಗೆ ಅವರು ಸಲ್ಲಿಸಿರುವ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ವಿಶ್ವಕಪ್ ಕ್ರಿಕೆಟನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸುವಲ್ಲಿ ಸಾಳ್ವೆ ಕೊಡುಗೆ ಅನನ್ಯ~ ಎಂದು ಶ್ರೀನಿವಾಸನ್ ನುಡಿದರು.

`ಸಾಳ್ವೆ ಇತ್ತೀಚಿನವರೆಗೂ ಮಂಡಳಿಯ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು. ಮಾತ್ರವಲ್ಲ ತಮಗೆ ಸಾಧ್ಯವಾದ ಸಂದರ್ಭದಲ್ಲೆಲ್ಲಾ ವಿಜೇತ ತಂಡಕ್ಕೆ ಎನ್‌ಕೆಪಿ ಸಾಳ್ವೆ ಚಾಲೆಂಜರ್ ಟ್ರೋಫಿಯನ್ನು ನೀಡಲು ಆಗಮಿಸುತ್ತಿದ್ದರು~ ಎಂದರು.

`ಅವರ ನಿಧನದಿಂದ ಭಾರತದ ಕ್ರಿಕೆಟ್ ತನ್ನ ಒಂದು ಆಧಾರಸ್ತಂಭವೊಂದನ್ನು ಕಳೆದುಕೊಂಡಂತಾಗಿದೆ~ ಎಂದು ಶ್ರೀನಿವಾಸನ್ ಕಂಬನಿ ಮಿಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.