ಗುರುವಾರ , ಏಪ್ರಿಲ್ 15, 2021
24 °C

ಬೀಚ್ ಕಬಡ್ಡಿ: ಹ್ಯಾಟ್ರಿಕ್

ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

`ಪುರುಷ ತಂಡದವರು ಚಿನ್ನ ಗೆಲ್ಲಲಾಗದೆ ಹಿಂತಿರುಗಿದರು. ಆಗ ನಮ್ಮ ಮೇಲೆ ಹೆಚ್ಚು ಒತ್ತಡ. ಅಷ್ಟೇ ಅಲ್ಲ, ನಾಯಕಿಯ ಜವಾಬ್ದಾರಿ ಬೇರೆ. ಅಬ್ಬಾ... ಆ ಒತ್ತಡದಿಂದ ಪಾರಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಮನಸ್ಸು ಹಗುರವಾಗಿದ್ದು, ಆ ಸಂದರ್ಭವನ್ನು ಎಂದಿಗೂ ಮರೆಯಲಾರೆ...~

ಹೀಗೆ ಸಂತಸದ ದನಿಯಲ್ಲಿ `ಪ್ರಜಾವಾಣಿ~ ಜೊತೆ ಮಾತನಾಡಿದ್ದು, ಭಾರತ ಕಬಡ್ಡಿ ತಂಡದ ನಾಯಕಿ ಕರ್ನಾಟಕದ ಮಮತಾ ಪೂಜಾರಿ.

ಚೀನಾದ ಹೈಯಾಂಗ್‌ನಲ್ಲಿ ಜೂನ್‌ನಲ್ಲಿ ನಡೆದ ಮೂರನೇ ಏಷ್ಯನ್ ಬೀಚ್ ಕ್ರೀಡಾಕೂಟದ ಕಬಡ್ಡಿಯಲ್ಲಿ ಭಾರತ ಮಹಿಳಾ ತಂಡ `ಚಿನ್ನ~ದ ಸಾಧನೆ ಮಾಡಿದೆ. ಅಷ್ಟೇ ಅಲ್ಲ ಸತತ ಮೂರನೇ ವರ್ಷವು ಬಂಗಾರ ಗೆದ್ದುಕೊಳ್ಳುವ ಮೂಲಕ ಹ್ಯಾಟ್ರಿಕ್ ಗೌರವಕ್ಕೂ ಪಾತ್ರವಾಗಿದೆ.

ಭಾರತದ ಈ ಸಾಧನೆಯ ಹಿಂದೆ ಸಾಕಷ್ಟು ಪರಿಶ್ರಮ, ಸಂಕಷ್ಟ, ಅಪಾಯವಿದೆ. ಇದ್ಯಾವುದನ್ನೂ ಲೆಕ್ಕಿಸದೆ ಮಮತಾ ತಂಡದವರು ಮತ್ತೊಮ್ಮೆ  ಕ್ರೀಡಾ ಪ್ರೇಮಿಗಳು ಸಲಾಂ ಹೊಡೆಯುವಂತೆ ಮಾಡಿದ್ದಾರೆ. ಮಣ್ಣಿನ ಮೇಲಿನ ಕಬಡ್ಡಿಯಂತೆ ಬೀಚ್ ಕಬಡ್ಡಿಯಲ್ಲ. ಇಲ್ಲಿ ಅಂಕಣವೂ ಚಿಕ್ಕದಾಗಿರುತ್ತದೆ. ಅದರ ಜೊತೆಗೆ ನಿಯಮಾವಳಿಗಳಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ.

ಕವಿತಾ ದೇವಿ, ಮಾರ್ಷಲ್ ಮೇರಿ ಸವಾರಿಯಪ್ಪನ್, ಪ್ರಿಯಾಂಕ ನೇಗಿ, ರಣದೀಪ್ ಕೌರ್ ಹಾಗೂ ಪ್ರಿಯಾಂಕ ಭಾರತ ತಂಡದಲ್ಲಿದ್ದರು. ಇಲ್ಲಿ ಬೋನಸ್ ಲೈನ್, ಬ್ಲಾಕ್ ಲೈನ್ ಇರುವುದಿಲ್ಲ. ತಂಡದಲ್ಲಿ ಒಟ್ಟು 6 ಜನ ಸದಸ್ಯರು. ಕಣದಲ್ಲಿರುವುದು ನಾಲ್ಕು ಆಟಗಾರ್ತಿಯರು ಮಾತ್ರ.

ಆಟಗಾರ್ತಿ ರೈಡಿಂಗ್ ಹೋದಾಗ ಪಾಯಿಂಟ್ಸ್ ಕಲೆ ಹಾಕಲೇಬೇಕು. ಬರಿಗೈಯಲ್ಲಿ ವಾಪಸ್ಸಾದರೆ, ಎದುರಾಳಿ ತಂಡಕ್ಕೆ ಪಾಯಿಂಟ್ ಲಭ್ಯವಾಗುತ್ತದೆ. ಆದ್ದರಿಂದ ಪ್ರತಿ ರೈಡಿಂಗ್  ಪಂದ್ಯದ ಗತಿ ನಿರ್ಧರಿಸುತ್ತದೆ. ಮರಳಿನಲ್ಲಿ ಆಡಬೇಕಾದ ಕಾರಣ, ಸಾಕಷ್ಟು ಹೋರಾಟ ನಡೆಸಬೇಕಾಗುತ್ತದೆ. ಕಾಲು ಮರಳಿನಲ್ಲಿ ಸಿಕ್ಕಿ ಬೀಳುವ ಅಪಾಯವೂ ಇರುತ್ತದೆ. ಆದ್ದರಿಂದ ರೈಡಿಂಗ್ ಹೋಗುವ ಆಟಗಾರ್ತಿಗೆ ಸವಾಲು ಹೆಚ್ಚಾಗಿರುತ್ತದೆ. ಆಟ ಪ್ರೇಕ್ಷಕರಿಗೆ ಆಕರ್ಷಕವಾಗಿ ಕಂಡರೂ, ಆಟಗಾರ್ತಿಯರು ಅಪಾಯದ ಭೀತಿಯಿಂದಲೇ ಆಡಬೇಕಾಗುತ್ತದೆ.

ಏಷ್ಯನ್ ಕ್ರೀಡಾಕೂಟಗಳಲ್ಲಿ ಭಾರತ ಪುರುಷರ ತಂಡ ಪ್ರತಿ ವರ್ಷ ಚಿನ್ನದ ಪದಕವನ್ನೇ ಗೆದ್ದಿದೆ. 2010ರಲ್ಲಿ ಚೀನಾದ ಗುವಾಂಗ್ ಜೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ಕಬಡ್ಡಿಗೆ ಮೊದಲ ಸಲ ಅವಕಾಶ ನೀಡಲಾಗಿತ್ತು. ಚೊಚ್ಚಲ ಅವಕಾಶದಲ್ಲಿಯೇ ಭಾರತ ಮಹಿಳಾ ತಂಡ ಚಿನ್ನ ಜಯಿಸಿತ್ತು. ಮಣ್ಣಿನ ಮೇಲಿನ ಕಬಡ್ಡಿಯಲ್ಲಿ ಭಾರತ ಮಾಡಿರುವ ಸಾಧನೆಯನ್ನು ಬೀಚ್ ಕಬಡ್ಡಿಯಲ್ಲೂ ಉಳಿಸಿಕೊಂಡು ಬರುತ್ತಿದೆ. `ಲೀಗ್ ಹಂತದಲ್ಲಿ ಯಾವ ಪಂದ್ಯದಲ್ಲೂ ಸೋಲು ಕಾಣದ  ನಮ್ಮ ತಂಡಕ್ಕೆ ತುಂಬಾ ಸವಾಲು ಎದುರಾಗಿದ್ದು ಫೈನಲ್‌ನಲ್ಲಿ. ಎದುರಾಳಿ ಥಾಯ್ಲೆಂಡ್ ಬಲಿಷ್ಠವಾಗಿತ್ತು. ಅದಕ್ಕೆ ಕಾರಣ ಭಾರತದ ರಮೇಶ್ ಬೆಂಡಿಗೇರಿ. ಅವರು ಥಾಯ್ಲೆಂಡ್ ಮಹಿಳಾ ತಂಡದ ಕೋಚ್ ಆಗಿದ್ದಾರೆ. ಅವರಿಂದ ಅಲ್ಲಿನ ಆಟಗಾರ್ತಿಯರು ಉತ್ತಮ ತಂತ್ರಗಾರಿಕೆ ಕಲಿತುಕೊಂಡಿದ್ದಾರೆ~ ಎನ್ನುವುದು ಮಮತಾ ಹೇಳಿಕೆ. ಥಾಯ್ಲೆಂಡ್ ತಂಡ ಎರಡು ತಿಂಗಳ ಮುಂಚೆಯೇ ಮುಂಬೈನ ಬೀಚ್‌ನಲ್ಲಿ ಅಭ್ಯಾಸ ನಡೆಸಿದ್ದರಿಂದ ಭಾರತಕ್ಕೆ ಪ್ರಬಲ ಸವಾಲೊಡ್ಡಿತು.

`ಲೀಗ್ ಹಂತದಲ್ಲಿ ಬಾಂಗ್ಲಾದೇಶ, ಶ್ರೀಲಂಕಾದಿಂದ ಪೈಪೋಟಿ ಎದುರಾದರೂ ಗೆಲುವು ಕಷ್ಟವೆನಿಸಲಿಲ್ಲ. ಭಾರತ ಪುರುಷರ ತಂಡ ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ಎದುರು ಸೋಲು ಕಂಡು ಕಂಚಿಗೆ ತೃಪ್ತಿ ಪಟ್ಟಿತು. ಆದ್ದರಿಂದ ಮಹಿಳಾ ತಂಡದ ಮೇಲೆ ಎಲ್ಲರ ಭರವಸೆ ಇತ್ತು. ಅಷ್ಟೇ ಅಲ್ಲ, ಸಾಕಷ್ಟು ಒತ್ತಡವೂ ಇತ್ತು. ಗೆಲ್ಲುವುದಾದರೆ ಚಿನ್ನವೇ ಗೆಲ್ಲಬೇಕು ಎನ್ನುವುದು ನಮ್ಮ ಹಠವಾಗಿತ್ತು~ ಎಂದು ಮಮತಾ ಹೇಳಿದರು.

ಎರಡು ವರ್ಷಕ್ಕೊಮ್ಮೆ ನಡೆಯುವ ಬೀಚ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಕಬಡ್ಡಿ ತಂಡ `ಚಿನ್ನ~ದ ಸಾಧನೆಯನ್ನೇ ತೋರಿದೆ. 2008ರ ಇಂಡೊನೇಷ್ಯಾ, 2010ರ ಒಮಾನ್ ಹಾಗೂ 2012ರ ಚೀನಾದ ಹೈಯಾಂಗ್‌ನಲ್ಲೂ ಮಹಿಳಾ ತಂಡ ಸ್ವರ್ಣ ಜಯಿಸಿದೆ. ಈ ಮೂರು ವರ್ಷವೂ ಮಮತಾ ಪೂಜಾರಿ ನಾಯಕಿಯಾಗಿದ್ದರೆನ್ನುವುದು ವಿಶೇಷ.

`ಆಟಗಾರ್ತಿಯಾಗಿದ್ದಾಗ ವೈಯಕ್ತಿಕ ಪ್ರದರ್ಶನದ ಮೇಲೆ ಮಾತ್ರ ಗಮನ. ಆದರೆ, ನಾಯಕಿಯಾದಾಗ ಇಡೀ ತಂಡದ ಜವಾಬ್ದಾರಿ. ಈ ಸವಾಲನ್ನು ಮೂರು ಬೀಚ್ ಕ್ರೀಡಾಕೂಟದಲ್ಲಿ ನಿಭಾಯಿಸಿದ್ದೇನೆ. ಪಾಟ್ನಾದಲ್ಲಿ ನಡೆದ ಮಹಿಳೆಯರ ಚೊಚ್ಚಲ ವಿಶ್ವಕಪ್‌ನಲ್ಲೂ ನಾಯಕಿಯಾಗಿದ್ದೆ. ಅಲ್ಲಿನ ಅನುಭವವೇ ಈ ಕ್ರೀಡಾಕೂಟಕ್ಕೂ ನೆರವಾಯಿತು~ ಎಂದು ಮಮತಾ ಸಂತಸ ಹಂಚಿಕೊಂಡರು.

ಬೀಚ್ ಕಬಡ್ಡಿಯ ನಿಯಮಗಳು

ಒಂದು ತಂಡದಲ್ಲಿ ಒಟ್ಟು ಆರು ಜನ. ಆದರೆ, ಕಣದಲ್ಲಿರುವುದು ನಾಲ್ಕು ಜನ ಮಾತ್ರ.

15 ಮತ್ತು 15 ಒಟ್ಟು 30 ನಿಮಿಷಗಳ ಆಟವಿದು. ನಡುವೆ ಐದು ನಿಮಿಷ ವಿಶ್ರಾಂತಿ

ರೈಡಿಂಗ್ ಹೋದಾಗ ಪಾಯಿಂಟ್ ಗಳಿಸದೆ ಬರಿಗೈಲಿ ವಾಪಸ್ಸಾದರೆ, ಎದುರಾಳಿ ತಂಡಕ್ಕೆ ಪಾಯಿಂಟ್ ಲಭಿಸುತ್ತದೆ.

11x7 ಮೀಟರ್ ಸೈಜಿನ ಅಂಕಣವನ್ನು ಎರಡು ವಿಭಾಗಗಳಲ್ಲಿ ವಿಂಗಡಣೆ ಮಾಡಲಾಗಿರುತ್ತದೆ

ರೈಡಿಂಗ್ ಹೋದಾಗ ಹೊರ ಬರುವ ತನಕ ಕಬಡ್ಡಿ, ಕಬಡ್ಡಿ ಅನ್ನುತ್ತಿರಬೇಕು. ಸ್ಪಷ್ಟ ಉಚ್ಚಾರ ಇಲ್ಲವಾದರೆ ಅಥವಾ ಅನ್ನುವುದನ್ನು ನಿಲ್ಲಿಸಿದರೆ, ಎದುರಾಳಿ ತಂಡಕ್ಕೆ ಒಂದು ಪಾಯಿಂಟ್ ಲಭ್ಯವಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.