ಬೀಜ ಗೊಬ್ಬರಕ್ಕೆ ರೈತರ ಲಗ್ಗೆ

7

ಬೀಜ ಗೊಬ್ಬರಕ್ಕೆ ರೈತರ ಲಗ್ಗೆ

Published:
Updated:

ಗಜೇಂದ್ರಗಡ: ಆಕಾಶದಲ್ಲಿ ಮೋಡಗಳು ಕಾಣಿಸದಿದ್ದರೂ ವರುಣನ ಮೇಲೆ ಅನ್ನದಾತನ ನಿರೀಕ್ಷೆ ಕಡಿಮೆ ಆಗಿಲ್ಲ. ಇಂದಲ್ಲದಿದ್ದರೂ ನಾಳೆಯಾದರೂ ಮೇಘರಾಜನ ಆಗಮನ ಆಗೇ ಆಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಬಿತ್ತನೆಗಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಮುಗಿಬಿದ್ದು ಬೀಜ ಗೊಬ್ಬರಗಳನ್ನು ಖರೀದಿಸುತ್ತಿದ್ದಾರೆ.ವರುಣನ ಆಗಮನಕ್ಕಾಗಿ ಈಗಲಾಲೇ ಅನೇಕ ಗ್ರಾಮಗಳಲ್ಲಿ ರೈತರು, ಕೃಷಿ ಕಾರ್ಮಿಕರು ದೇವರಿಗೆ ಮೊರೆ ಹೋಗಿದ್ದಾರೆ. ವಿಶೇಷ ಪೂಜೆ, ಅಭಿಷೇಕಗಳನ್ನು ಮಾಡಿ ವರುಣನ ಮನವೊಲಿಸುವ ಕಾರ್ಯ ನಡೆಸಿದ್ದಾರೆ. ಇನ್ನೊಂದೆಡೆ ಬಿತ್ತನೆ ಅವಧಿ ಆರಂಭವಾಗಿದ್ದು, ಸುಮ್ಮನೆ ಕುಳಿತರೆ ಅವಧಿ ಮುಕ್ತಾಯವಾಗುತ್ತದೆ ಎನ್ನುವ ಆತಂಕದಲ್ಲಿ ಹಸಿ ಇಲ್ಲದಿದ್ದರೂ ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದಾರೆ.ಪ್ರಸಕ್ತ ವರ್ಷ ತಾಲ್ಲೂಕಿನಲ್ಲಿ ತುಸು ಹೆಚ್ಚು ಎನ್ನುವಂತೆ ವರುಣ ಮುನಿಸಿಕೊಂಡಿದ್ದನು. ಪರಿಣಾಮ ಮುಂಗಾರು ಹಂಗಾಮಿನಲ್ಲಿ ಶೇ 50ರಷ್ಟು ಭೂಮಿ ಬೀಜವನ್ನು ಕಾಣಲಿಲ್ಲ. ಬಿತ್ತನೆಯಾಗಿದ್ದ ಬೆಳೆಗಳು ಹಸಿಯ ಕೊರತೆಯಿಂದ ಒಣಗುತ್ತಿವೆ.ಮುಂಗಾರು ಕೈಕೊಟ್ಟರೂ ಹಿಂಗಾರು ಬೆಳೆ ಇದ್ದೇ ಇದೆ ಎನ್ನುವ ರೈತರ ನಂಬಿಕೆಗೆ ವರುಣ ಮಾತ್ರ ಈ ವರೆಗೂ ಸ್ಪಂದಿಸುತ್ತಿಲ್ಲ. ಅದಾಗ್ಯೂ ರೈತರು ಮಾತ್ರ ಒಣ ಹೊಲವನ್ನು ಗಳೆ ಹೊಡೆದು ಬಿತ್ತನೆಗೆ ತಯಾರಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಮಳೆ ಸುರಿಯತ್ತದೆ ಎನ್ನುವ ಅಪಾರ ವಿಶ್ವಾಸದಲ್ಲಿ ಒಣ ಭೂಮಿಯಲ್ಲಿಯೇ ಬಿತ್ತನೆಯನ್ನು ಮಾಡುತ್ತಿದ್ದಾರೆ.ಪ್ರಸಕ್ತ ವರ್ಷ ತಾಲ್ಲೂಕಿನಲ್ಲಿ 91,700 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬಿತ್ತನೆಯ ಗುರಿ ಹೊಂದಿಲಾಗಿದೆ. ಇದರಲ್ಲಿ 20ಸಾವಿರ ಹೆಕ್ಟೇರ್  ಬೀಲಿಜೋಳ, 24ಸಾವಿರ ಹೆಕ್ಟೇರ್  ಸೂರ್ಯಕಾಂತಿ, 19ಸಾವಿರ ಹೆಕ್ಟೇರ್  ಕಡಲೆ, 16ಸಾವಿರ ಹೆಕ್ಟೇರ್ ಹತ್ತಿ, 10ಸಾವಿರ ಹೆಕ್ಟರ್ ಗೋಧಿ, 2ಸಾವಿರ ಹೆಕ್ಟೇರ್ ಕುಸುಬಿ, 300ಹೆಕ್ಟರ್ ಹುರುಳಿ, 100ಹೆಕ್ಟರ್ ಮೆಕ್ಕೆಜೋಳ ಬಿತ್ತನೆಯಾಗಬಹುದೆಂದು ಕೃಷಿ ಇಲಾಖೆ ಅಂದಾಜಿಸಿದೆ.ಅದಕ್ಕಾಗಿ ತಾಲ್ಲೂಕಿನ ಆರು ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಭೂ ಚೇತನ ಇಲಾಖೆಗೆ ಸಂಬಂಧಿಸಿದ ಗ್ರಾ.ಪಂ.ಗೊಂದರಂತೆ 31ಭೂಚೇತನ ಕೇಂದ್ರಗಳಲ್ಲಿ ಬೀಜ ಹಾಗೂ ಲಘು ಪೋಷಕಾಂಶಗಳ ವಿತರಣೆಗೆ ವ್ಯವಸ್ಥೆಯನ್ನು ಮಾಡಿಕೊಂಡಿದೆ.ಗೊಬ್ಬರ ಪೂರೈಕೆ ಇಲ್ಲ: ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದ ಮೂಲಕ ಸಬ್ಸಿಡಿ ದರದಲ್ಲಿ ಬೀಜ ಮತ್ತು ಲಘು ಪೋಷಕಾಂಶಗಳನ್ನು ಮಾತ್ರ ವಿತರಣೆ ಮಾಡುತ್ತಿದ್ದು, ಗೊಬ್ಬರ ವಿತರಣೆ ಮಾಡುತ್ತಿಲ್ಲ. ಇದರಿಂದ ರೈತರು ಗೊಬ್ಬರಕ್ಕಾಗಿ ತೀವ್ರ ಪರದಾಡುವಂತಾಗಿದೆ.ಬಿತ್ತನೆ ಸಂದರ್ಭದಲ್ಲಿ ಯೂರಿಯಾ ಅಥವಾ ಡಿಎಪಿ ಗೊಬ್ಬರವನ್ನು ಬಳಿಕೆ ಮಾಡಿದಲ್ಲಿ ಬೆಳೆಗಳು ಚನ್ನಾಗಿ ಬರುತ್ತವೆ ಎನ್ನುವ ನಂಬಿಕೆಯಲ್ಲಿರುವ ರೈತರಿಗೆ ಗೊಬ್ಬರ ವಿತರಣೆ ಮಾಡದಿರುವುದು ಬೇಸರ ತಂದಿದೆ.ಗೊಬ್ಬರಕ್ಕಾಗಿ ಅಗ್ರೋ ಕೇಂದ್ರಗಳಿಗೆ ಹೋಗುತ್ತಿದ್ದಾರೆ. ಆದರೆ, ಅಗ್ರೋ ಕೇಂದ್ರದಲ್ಲಿ ನಿಗದಿತ ಬೆಲೆಗಿಂತ ಹೆಚ್ಚು ಹಣ ಪಡೆಯಲಾಗುತ್ತಿದೆ ಎನ್ನುವ ದೂರು ಕೇಳಿ ಬರುತ್ತಿವೆ. ಹೀಗಾಗಿ ಇಲಾಖೆ ಬೀಜ ಮತ್ತು ಲಘು ಪೋಷಕಾಂಶಗಳ ಜೊತೆಗೆ ಅಗತ್ಯ ಇರುವ ಗೊಬ್ಬರವನ್ನು ಪೂರೈಕೆ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry