ಗುರುವಾರ , ಮೇ 13, 2021
35 °C

ಬೀದಿ ನಾಯಿ, ಹಂದಿ ಕಾಟ; ಜನರ ಸಂಕಟ

ಡಿ.ಬಿ.ನಾಗರಾಜ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರದಲ್ಲಿ ದಿನೇ ದಿನೇ ಪ್ರಾಣಿಗಳ ಕಾಟ ಹೆಚ್ಚುತ್ತಿದೆ. ಹಂದಿ- ನಾಯಿ- ಕೋತಿ- ಬಿಡಾಡಿ ದನಗಳ ಹಾವಳಿಗೆ ತುಮಕೂರು ಜನತೆ ತತ್ತರಿಸಿದ್ದಾರೆ. ಯಾವುದೇ ಬಡಾವಣೆ ಹೊಕ್ಕರೂ ಈ ಸಮಸ್ಯೆ ತಪ್ಪಿದ್ದಲ್ಲ ಎನ್ನುವಂಥ ಸಮಸ್ಯೆ ನಿರ್ಮಾಣಗೊಂಡಿದೆ.ಸಮಸ್ಯೆ ಪರಿಣಾಮ ಹೆಚ್ಚಿದಾಗ ಎಚ್ಚೆತ್ತು ಕೊಳ್ಳುವ ನಗರಸಭೆ ಆಡಳಿತ ಕೆಲವು ಕಡೆ ಕೋತಿ- ನಾಯಿ ಹಿಡಿಯುವ ಕಾರ್ಯಾಚರಣೆ ನಡೆಸುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಾಚರಣೆ ಬಳಿ ತೆರಳಿ ಅದರ ಛಾಯಾಚಿತ್ರ ತೆಗೆಸಿ ಪತ್ರಿಕೆಗಳಿಗೆ ತಲುಪಿಸಿ ಕೈ ತೊಳೆದುಕೊಳ್ಳುತ್ತಾರೆ.15-20 ದಿನ ಕಳೆಯುವುದರೊಳಗಾಗಿ ಯಥಾಪ್ರಕಾರ ಮತ್ತದೇ ಸಮಸ್ಯೆ. ಇದಕ್ಕೆ ಶಾಶ್ವತ ಪರಿಹಾರ ಇಲ್ಲವೇ ಎಂಬುದು ನಗರದ ನಾಗರಿಕರ ಪ್ರಶ್ನೆ. ನಗರಸಭೆ ಸಾಮಾನ್ಯಸಭೆಗಳಲ್ಲಿ ವಿಷಯ ಪ್ರಸ್ತಾಪವಾದಾಗ ಆಯುಕ್ತರು, ಬಿಡಾಡಿ ದನ ಹಾಗೂ ಹಂದಿ ಮಾಲೀಕರಿಗೆ ಎಚ್ಚರಿಕೆ ನೋಟಿಸ್ ನೀಡುತ್ತಾರೆ. ಅದು ಪತ್ರಿಕೆಗಳಲ್ಲಿ ಮಾತ್ರ ಪ್ರಕಟಗೊಳ್ಳುತ್ತದೆ. ಕಾರ್ಯರೂಪಕ್ಕೆ ಬರುವುದಿಲ್ಲ ಎಂಬ ದೂರು ನಾಗರಿಕರದ್ದು.ಬಿಡಾಡಿ ದನಗಳ ಹಾವಳಿ ಈಚಿನ ದಿನಗಳಲ್ಲಿ ಹೆಚ್ಚಿದೆ. ಅಹೋರಾತ್ರಿ ಇವುಗಳ ಕ್ಯಾಂಪ್ ತುಮಕೂರು-ಹೊನ್ನಾವರ ಹೆದ್ದಾರಿಯಲ್ಲೆ ಇರುತ್ತದೆ. ಹೆದ್ದಾರಿಗೆ ವಿಭಜಕ ಹಾಕಿದ ನಂತರ ಇನ್ನಷ್ಟು ಅನುಕೂಲವಾಗಿದೆ.ವಿಭಜಕದ ಆಸುಪಾಸು ಮಲಗುವ ದನಗಳು ಯಾವಾಗ ಎದ್ದು ಹೊರಡುತ್ತವೆ ಎಂಬುದು ವಾಹನ ಸವಾರರ ಅರಿವಿಗೆ ಬರುವುದರೊಳಗಾಗಿ ಅಪಘಾತ ಸಂಭವಿಸುವ ಸಾಧ್ಯತೆಗಳೇ ಹೆಚ್ಚಿರುತ್ತವೆ ಎನ್ನುತ್ತಾರೆ ವಾಹನ ಚಾಲಕ ಪ್ರದೀಪ್.ಕೋತಿಗಳ ಹಾವಳಿ ನಗರದ ಜನತೆಗೆ ಹೊಸತಲ್ಲ. ಸಮಸ್ಯೆ ನಿವಾರಣೆಗೆ ನಗರಸಭೆ ಹತ್ತಾರು ಬಾರಿ ಕೋತಿ ಹಿಡಿಯುವ ಕಾರ್ಯಾಚರಣೆ ನಡೆಸಿದ್ದರೂ ಇವುಗಳ ಕಾಟದಿಂದ ಮುಕ್ತವಾಗಲು ಸಾಧ್ಯವಾಗಿಲ್ಲ ಎಂಬ ಆರೋಪ ಅಶೋಕನಗರ ನಿವಾಸಿ ವಿನಯ್ ಅವರದ್ದು.ಕೋತಿ ಹಾವಳಿ ಯಾವ ಪರಿ ಹೆಚ್ಚಿದೆ ಎಂದರೇ ಒಂದೇ ಒಂದು ನಿಮಿಷ ಮೈ ಮರೆತು ಮನೆಯ ಬಾಗಿಲು-ಕಿಟಕಿ ಮುಚ್ಚಿರದಿದ್ದರೇ ಮನೆ ಒಳಗಿರುವ ತಿಂಡಿ-ತಿನಿಸು ಏನೊಂದು ಉಳಿಯಲ್ಲ. ಮನೆಯ ಮಹಡಿ ಮೇಲಿನ ಸೋಲಾರ್‌ನ ಗಾಜು ಹೊಡೆಯುವುದು. ನೀರಿನ ಪೈಪುಗಳನ್ನು ಕಿತ್ತು ಹಾಕುವುದು... ಒಂದೇ ಎರಡೇ ಕೋತಿ ಚೇಷ್ಟೆ. ಪ್ರತಿ ತಿಂಗಳು ಅವುಗಳ ಚೇಷ್ಟೇಗೆ ದಂಡ ತೆರುವುದು ತಪ್ಪದಾಗಿದೆ ಎನ್ನುತ್ತಾರೆ ಕೃಷ್ಣನಗರ ನಿವಾಸಿ ಗಂಗಾ.ಹಂದಿಗಳ ಉಪಟಳಕ್ಕೆ ನಗರದಲ್ಲಿ ಅಂತ್ಯವಿಲ್ಲ. ಹಂದಿಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸುವಲ್ಲಿ ನಗರಸಭೆ ಆಡಳಿತ ಸಂಪೂರ್ಣ ವಿಫಲಗೊಂಡಿದೆ. ಕೆಲ ಬಡಾವಣೆಗಳಲ್ಲಿ ಹಂದಿಗಳದ್ದೇ ದರ್ಬಾರು.ಇನ್ನೂ ನಾಯಿಗಳ ಅಬ್ಬರ ಹೇಳತೀರದು. ಎಲ್ಲಿ ನೋಡಿದರೂ ಬೀದಿ ನಾಯಿಗಳ ಹಿಂಡು. ರಾತ್ರಿಯೆಲ್ಲ ನಾಯಿಗಳು ಹೂಳಿಡುವುದರಿಂದ ನಿದ್ರೆಗೂ ಕತ್ತರಿ. ಒಬ್ಬೊಬ್ಬರೇ ತಿರುಗಾಡಲು ಭಯ ಎನ್ನುತ್ತಾರೆ ಬಟವಾಡಿಯ ನಿವಾಸಿಗಳು.ಸದಾಶಿವನಗರ, ವೀರಸಾಗರ, ನಜರಾಬಾದ್, ಟಿಪ್ಪುನಗರ, ದಾನಪ್ಯಾಲೇಸ್, ಮಹಾಲಕ್ಷ್ಮೀನಗರ, ಬಟವಾಡಿ ಸೇರಿದಂತೆ ನಗರದ ಬಹುತೇಕ ಕಡೆ ಬೀದಿ ನಾಯಿಗಳ ಹಾವಳಿ ಹೇಳತೀರದು.ಚಿಕ್ಕ ಮಕ್ಕಳನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಲು ಭಯದ ವಾತಾವರಣ ನಿರ್ಮಾಣಗೊಂಡಿದೆ. ಯಾವ ಸಂದರ್ಭದಲ್ಲಿ ಪುಟ್ಟ ಮಕ್ಕಳ ಮೈಮೇಲೆ ಎರಗುತ್ತವೆ ಎಂಬ ಆತಂಕ ದಿಂದಲೇ ದಿನದೂಡುವಂತಾಗಿದೆ ಎನ್ನುತ್ತಾರೆ ಮಹಾಲಕ್ಷ್ಮೀ ನಗರದ ಶ್ರೀದೇವಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.