ಸೋಮವಾರ, ಮಾರ್ಚ್ 27, 2023
24 °C
ಗಿರಿಜನ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯ

ಬುಡಕಟ್ಟುಗಳ ಒಕ್ಕೂಟದ ಸದಸ್ಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬುಡಕಟ್ಟುಗಳ ಒಕ್ಕೂಟದ ಸದಸ್ಯರ ಪ್ರತಿಭಟನೆ

ಉಡುಪಿ: ‘ಗಿರಿಜನ ಉಪಯೋಜನೆ ಮತ್ತು ವಿಶೇಷ ಘಟಕ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಸರಿಯಾದ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿ’ ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟದ ಉಡುಪಿ ಜಿಲ್ಲಾ ಸದಸ್ಯರು ಬುಧವಾರ ನಗರದ ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.



ಸಾಮಾಜಿಕ ನ್ಯಾಯ, ಸಂಪನ್ಮೂಲಗಳ ಹಂಚಿಕೆ, ಮಾನವ ಅಭಿವೃದ್ಧಿ ಸಾಧಿಸಲು ಬುಡಕಟ್ಟು ಮತ್ತು ದಲಿತ ಸಮುದಾಯಗಳಿಗೆ ಗಿರಿಜನ ಉಪಯೋಜನೆ ಮತ್ತು ವಿಶೇಷ ಘಟಕ ಯೋಜನೆ 1974 ಮತ್ತು 1980ರಲ್ಲಿ ಜಾರಿಗೆ ಬಂದಿತು. ಆದರೆ ಈ ಯೋಜನೆಗಳು ಜಾರಿಗೆ ಬಂದು 4 ದಶಕಗಳಷ್ಟು ಕಳೆದುಹೋದರೂ ಸಮರ್ಪಕವಾದ ಅನುಷ್ಟಾನದ ಕೊರತೆಯಿಂದ ಈ ಸಮುದಾಯಗಳು ಬೆಳವಣಿಗೆಯಾಗಲು ಸಾಧ್ಯವಾಗಿಲ್ಲ. ಈ ಯೋಜನೆಗಳು ಸಮರ್ಪಕವಾಗಿ ಅನುಷ್ಟಾನವಾಗಬೇಕಾದರೆ ಎಲ್ಲರೂ ಅಗತ್ಯವಾಗಿ ಪಾಲಿಸಲೇಬೇಕಾದ ಕಾನೂನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.



ಕೇಂದ್ರ ಸರ್ಕಾರದ ಹೊಸ ಬುಡಕಟ್ಟು ನೀತಿಯಲ್ಲಿ ಬುಡಕಟ್ಟು ಸಮುದಾಯಗಳನ್ನು ಅಳಿವಿನಂಚಿನಲ್ಲಿರುವ  ಹೆರಿಟೇಜ್ ಸಮುದಾಯಗಳು, ಅರಣ್ಯವಾಸಿ ಸಮುದಾಯಗಳು ಹಾಗೂ ಮುಖ್ಯವಾಹಿನಿಯೊಂದಿಗೆ ಸಂಯೋಜಿಸಿಕೊಂಡು ಬದುಕಲು ಸಾಧ್ಯವಾಗುವ ಸಮುದಾಯಗಳೆಂದು ವರ್ಗೀಕರಿಸಿ ಸಮೂಹ ಮತ್ತು ಗುಂಪಾಗಿ ಕೂಡುಕಟ್ಟಿನ ರಚನೆಗಳನ್ನು ಗಮನದಲ್ಲಿರಿಸಿ ಅಭಿವೃದ್ಧಿ ಯೋಜನೆ ರೂಪಿಸಬೇಕು. ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಸಕ್ತ ವರ್ಷ ಮೀಸಲಿಟ್ಟ ಹಣ ಆ ವರ್ಷವೇ ಖರ್ಚಾಗಬೇಕು.



ಯೋಜನೆಯನ್ನು ಸಮುದಾಯ ಸದಸ್ಯರೊಂದಿಗೆ ಚರ್ಚಿಸಿ ಅದಕ್ಕೆ ಪೂರಕವಾಗಿ ಕ್ರಿಯಾ­ಯೋಜನೆ ರಚನೆಯಾಗಬೇಕು.ವಿಶೇಷ ಗ್ರಾಮ, ವಾರ್ಡ್‌ ಸಭೆಗಳನ್ನು ಕರೆದು ಕ್ರಿಯಾಯೋಜನೆ ತಯಾರಿಸಬೇಕು ಮತ್ತು ಅದರಂತೆ ಅನುಷ್ಠಾನವಾಗಬೇಕು ಎಂದು ಅವರು ಮನವಿ ಮಾಡಿದರು.



ಎಲ್ಲಾ ಸಮುದಾಯಗಳ ಪ್ರತಿನಿಧಿತ್ವದ ಮೇಲ್ವಿಚಾರಣಾ ಸಮಿತಿಗಳ ರಚನೆ ಮಾಡಬೇಕು ಮತ್ತು ಆ ಸಮಿತಿಗೆ ಸಂಪೂರ್ಣ ಅಧಿಕಾರ ನೀಡಬೇಕು. ಜಿಲ್ಲಾಮಟ್ಟದಲ್ಲಿ ಮಾಸಿಕ, ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆ ನಡೆದು ಅದರಲ್ಲಿ ಕಡ್ಡಾಯವಾಗಿ ಹಣದ ನಿರ್ವಹಣೆ ಮತ್ತು ವಿನಿಯೋಗದ ಮೇಲ್ವಿಚಾರಣೆ ನಡೆಯಬೇಕು. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಹಣ ಬಿಡುಗಡೆಯ ಹಂತದಿಂದ ಖರ್ಚಾಗುವವರೆಗೂ ಸಂಬಂಧಪಟ್ಟ ಅಧಿಕಾರಿಯು ಹಣಕಾಸಿನಲ್ಲಿ ಲೋಪವೆಸಗಿದಲ್ಲಿ ಶಿಕ್ಷೆಗೆ ಒಳಗಾಗುವ ಅವಕಾಶವಿರಬೇಕು. ಸ್ಥಳೀಯ ಆಡಳಿತ ವ್ಯವಸ್ಥೆಗಳಲ್ಲಿ ದಲಿತ ಹಾಗೂ ಬುಡಕಟ್ಟು ಸಮುದಾಯಗಳ ಜನಸಂಖ್ಯೆಯನ್ನು ಒಟ್ಟು ಜನಸಂಖ್ಯೆಯ ಅನುಪಾತದಲ್ಲಿ ಯೋಜನಾ ಅನುದಾನವನ್ನು ಕಾದಿರಿಸಿ ವಾರ್ಷಿಕ ಪ್ರತ್ಯೇಕ ಬಜೆಟ್‌ ಮಂಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.



ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟದ ಜಿಲ್ಲಾ ಸಂಚಾಲಕಿ  ಸುಶೀಲ ನಾಡ, ಮುಖಂಡರಾದ ಶಶಿಕಲಾ ಸಚ್ಚರಿಪೇಟೆ, ಶಶಿಕಲಾ ಕುಂದಾಪುರ, ಗಿರಿಜ, ವಿನಯ ಅಡ್ವೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.