ಗುರುವಾರ , ಮೇ 19, 2022
21 °C

ಬುರುಡೆ ಬಲ್ಬ್‌ಗಳಿಗೆ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯುತ್ ಬಳಕೆಯಲ್ಲಿ ಮಿತವ್ಯಯ ತರುವ ಯಾವುದೇ ಕ್ರಮವೂ ಸ್ವಾಗತಾರ್ಹ. ಕಳ್ಳತನ, ಸಾಗಣೆಯಲ್ಲಿ ಸೋರಿಕೆಯಂಥ ಲೋಪಗಳು ಗುಣಮಟ್ಟದ ವಿದ್ಯುತ್ ಪೂರೈಕೆಯಲ್ಲಿ ಇರುವ ಅಡ್ಡಿಗಳು. ಇವುಗಳ ನಿವಾರಣೆಯ ಪ್ರಯತ್ನಗಳು ಇಲಾಖೆಯಿಂದ ಮುಂದುವರಿಯಲೇ ಬೇಕು. ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಉತ್ಪಾದನೆ ಹೆಚ್ಚಿಸುವುದೇ ಪರಿಹಾರವಾಗಿದ್ದರೂ ಲಭ್ಯವಿರುವ ವಿದ್ಯುತ್ತನ್ನು ಗುಣಾತ್ಮಕವಾಗಿ ಬಳಸಿ ಕೊಳ್ಳುವ ವಿವೇಚನೆಯ ಕ್ರಮಗಳು ಅತ್ಯವಶ್ಯಕ.ಈ ನಿಟ್ಟಿನಲ್ಲಿ ಈಗ ಬಳಕೆಯಲ್ಲಿರುವ ಬುರುಡೆ ಬಲ್ಬ್‌ಗಳ (ಇನ್‌ಕ್ಯಾಂಡಿಸೆಂಟ್) ಬದಲಿಗೆ ಕಡಿಮೆ ವಿದ್ಯುತ್ತನ್ನು ಬಳಸುವ ಸಿಎಫ್‌ಎಲ್ (ಕಾಂಪ್ಯಾಕ್ಟ್ ಫ್ಲೋರೋಸೆಂಟ್ ಲ್ಯಾಂಪ್) ಬಲ್ಬ್‌ಗಳನ್ನು ಬಳಲು ಸರ್ಕಾರ ಕೈಗೊಂಡಿರುವ ‘ಬೆಳಕು’ ಯೋಜನೆ ಗಮನಾರ್ಹವಾದದ್ದು. ರಾಜ್ಯದ ಎಲ್ಲ 98 ಲಕ್ಷ ಮನೆಗಳಿಗೆ ತಲಾ ನಾಲ್ಕು ಸಿಎಫ್‌ಎಲ್ ಬಲ್ಬ್‌ಗಳನ್ನು ರಿಯಾಯಿತಿ ದರದಲ್ಲಿ  ಮುಂದಿನ ಆರು ತಿಂಗಳಲ್ಲಿ ಪೂರೈಸುವ ಕಾರ್ಯಕ್ರಮ ವಿದ್ಯುತ್ತಿನ ಸಮರ್ಪಕ ಬಳಕೆಯಲ್ಲಿ ಮಹತ್ವದ್ದು. ಇದು ಯಶಸ್ವಿಯಾಗಿ ಅನುಷ್ಠಾನಗೊಂಡರೆ ಸರ್ಕಾರ ವರ್ಷಕ್ಕೆ 400 ಮೆಗಾವಾಟ್  ವಿದ್ಯುತ್ತಿನ  ಉಳಿತಾಯದ ನಿರೀಕ್ಷೆಯಲ್ಲಿದೆ.ಹವಾಮಾನ ವೈಪರೀತ್ಯದ ದುಷ್ಪರಿಣಾಮ ನಿಯಂತ್ರಣ ಕುರಿತ ವಿಶ್ವಸಂಸ್ಥೆಯ ಯೋಜನೆ ಆಧರಿಸಿ ಕೇಂದ್ರ ಸರ್ಕಾರ ರೂಪಿಸಿದ ‘ಬಚತ್ ಲ್ಯಾಂಪ್’ ಕಾರ್ಯಕ್ರಮದ ಸಹಕಾರ ಪಡೆದು ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ‘ಬೆಳಕು’ ಯೋಜನೆಯ ಯಶಸ್ಸಿಗೆ ಅದು ಜನರಲ್ಲಿ ವಿಶ್ವಾಸ ಮೂಡಿಸುವುದು ಅವಶ್ಯಕ. ಈಗ ಮಾರುಕಟ್ಟೆಯಲ್ಲಿ ಇರುವ ಸಿಎಫ್‌ಎಲ್‌ಗಳು ಬಹಳ ದುಬಾರಿಯಾಗಿವೆ. ಒಂದು ಸಿಎಫ್‌ಎಲ್ ಬಲ್ಬ್‌ಗೆ 10 ಬುರುಡೆ ಬಲ್ಬ್‌ಗಳನ್ನು ಕೊಳ್ಳಬಹುದಾದಷ್ಟು ದುಬಾರಿ ದರ.ಉತ್ಪಾದಕರು ಸಿಎಫ್‌ಎಲ್‌ನ ಬಾಳಿಕೆ ಬಗ್ಗೆ ಖಾತರಿ ನೀಡಿದರೂ ಗುಣಮಟ್ಟದ ವಿದ್ಯುತ್ ಇಲ್ಲದಿದ್ದರೆ, ಪದೇ ಪದೇ ವಿದ್ಯುತ್ ಸ್ಥಗಿತಗೊಳ್ಳುತ್ತಿದ್ದರೆ, ವೋಲ್ಟೇಜ್ ಏರುಪೇರಾಗುತ್ತಿದ್ದರೆ ಸಿಎಫ್‌ಎಲ್ ಬಲ್ಬ್‌ಗಳ ಬಾಳಿಕೆ ಬುರುಡೆ ಬಲ್ಬ್‌ಗಳಷ್ಟೇ ಆಗುತ್ತದೆ.ದುಬಾರಿ ಹಣ ತೆತ್ತು ಬುರುಡೆ ಬಲ್ಬಿನ ಕಾರ್ಯಕ್ಷಮತೆಯನ್ನೇ ಪಡೆಯುವಂತಿದ್ದರೆ ಈ ಬದಲಾವಣೆಯಿಂದ ಬಳಕೆದಾರರಿಗೆ ಪ್ರಯೋಜನವಿಲ್ಲ. ಬುರುಡೆ ಬಲ್ಬ್ ಬದಲಿಸಲು ವಿದ್ಯುತ್ ಕಂಪೆನಿಗಳು ರಿಯಾಯಿತಿ ದರದಲ್ಲಿ ನೀಡುತ್ತಿರುವ ಸಿಎಫ್‌ಎಲ್ ಬಲ್ಬ್‌ಗಳ ಗುಣಮಟ್ಟ ಮತ್ತು ಬಾಳಿಕೆಯ ಖಾತರಿಯ ಬಗ್ಗೆಯೂ ಜನರಿಗೆ ಮನವರಿಕೆ ಆಗಿಲ್ಲ. ಆದ್ದರಿಂದ ವಿದ್ಯುತ್ ಕಂಪೆನಿಗಳು ಬಲ್ಬ್ ಬದಲಾವಣೆಯ ಆಂದೋಲನ ಆರಂಭಿಸುವ ಮೊದಲು ಗುಣಮಟ್ಟದ ಮತ್ತು ನಿರಂತರ ವಿದ್ಯುತ್ ಪೂರೈಕೆಯ ಖಾತರಿ ನೀಡಬೇಕು. ಜೊತೆಗೆ ಸಿಎಫ್‌ಎಲ್ ಬಲ್ಬ್‌ಗಳ ದೀರ್ಘ ಬಾಳಿಕೆ ಮತ್ತು ಅವು  ಮಿತವ್ಯಯಕರ ಎಂಬುದನ್ನು ತಮ್ಮ ಕಚೇರಿಗಳಲ್ಲಿಯೇ ಬಳಸುವ ಮೂಲಕ ಪ್ರದರ್ಶಿಸಬೇಕು.ಸಾರ್ವಜನಿಕ ರಸ್ತೆ, ಉದ್ಯಾನ, ಸರ್ಕಾರಿ ಕಚೇರಿಗಳಲ್ಲಿ ಇವುಗಳ ಅಳವಡಿಕೆ ಜನರಲ್ಲಿ ವಿಶ್ವಾಸ ಮೂಡಿಸಬಲ್ಲದು. ಸಿಎಫ್‌ಎಲ್ ಬಲ್ಬ್‌ಗಳು ಕೈಗೆಟಕುವ ಬೆಲೆಗೆ ಸಿಗುವಂತೆ ಮಾಡುವುದಕ್ಕೂ ಸರ್ಕಾರ ಕ್ರಮ ಕೈಗೊಳ್ಳಬೇಕು. ದೀರ್ಘ ಬಾಳಿಕೆಯ ಖಚಿತತೆ ಮತ್ತು ವೆಚ್ಚದಲ್ಲಿ ಉಳಿತಾಯದ ಭರವಸೆ ಮೂಡದಿದ್ದರೆ ಹೊಸ ವ್ಯವಸ್ಥೆಯನ್ನು ಜನತೆಯ ಮೇಲೆ ಹೇರಲಾಗದು ಎಂಬುದನ್ನು ಇಲಾಖೆ ಮರೆಯಬಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.