ಗುರುವಾರ , ಜುಲೈ 29, 2021
21 °C

ಬೂದಿವಾಳ ಕ್ಯಾಂಪ್: ಬ್ಯಾಂಕ್ ಲೂಟಿಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೂದಿವಾಳ ಕ್ಯಾಂಪ್: ಬ್ಯಾಂಕ್ ಲೂಟಿಗೆ ಯತ್ನ

ಸಿಂಧನೂರು: ತಾಲ್ಲೂಕಿನ ಬೂದಿವಾಳ ಪ್ರಗತಿ ಗ್ರಾಮೀಣ ಬ್ಯಾಂಕ್ ಲೂಟಿಗೆ ಯತ್ನಿಸಿರುವ ಕಳ್ಳರು ವಿಫಲವಾಗಿರುವ ಘಟನೆ ಭಾನುವಾರ ಮದ್ಯರಾತ್ರಿ ನಡೆದಿದೆ. ಬ್ಯಾಂಕ್‌ನ ಹಿಂಬದಿಯ ಗೋಡೆಗೆ ಬೋಂಗಾ ಕೊರೆದ ಕಳ್ಳರು ಒಳ ನುಗ್ಗಿ ಸೇಫ್ ಲಾಕರ್ ಒಡೆಯಲು ಮುಂದಾಗಿದ್ದಾರೆ ಆದರೆ ಆ ಯತ್ನಕ್ಕೆ ಫಲ ದೊರೆತಿಲ್ಲ.ಬೆಳಗಿನ ಸಮಯದಲ್ಲಿ ಬ್ಯಾಂಕ್‌ನ ಗೋಡೆಗೆ ಬೋಂಗಾ ಬಿದ್ದಿರುವುದನ್ನು ಕಂಡ ಸಾರ್ವಜನಿಕರು ಬೂದಿವಾ ಕ್ಯಾಂಪ್‌ನಲ್ಲಿ ಮನೆ ಮಾಡಿಕೊಂಡಿರುವ ವ್ಯವಸ್ಥಾಪಕ ಶಿವಾನಂದ ನಾಯಕರಿಗೆ ವಿಷಯ ತಿಳಿಸಿದ್ದಾರೆ.ನಂತರ ಅವರು ಗ್ರಾಮೀಣ ಪೊಲೀಸ್ ಠಾಣೆಗೆ ಫಿರ್ಯಾದಿ ನೀಡಿದ್ದಾರೆ. ಡಿವೈಎಸ್‌ಪಿ, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ ಮಾಳಿಗೇರ ಹಾಗೂ ಗ್ರಾಮೀಣ ಠಾಣೆ ಪಿ.ಎಸ್.ಐ. ಕರುಣೇಶಗೌಡ, ಬಳಗಾನೂರು ಪಿ.ಎಸ್.ಐ. ಅಜುರುದ್ದೀನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಶ್ವಾನದಳ ಭೇಟಿ : ರಾಯಚೂರಿನಿಂದ ಶ್ವಾನ ದಳ ಪ್ರಗತಿ ಗ್ರಾಮೀಣ ಬ್ಯಾಂಕ್‌ಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು. ಕಳೆದ ಎರಡು ವರ್ಷದ ಹಿಂದೆ ಗ್ಯಾಸ್ ಕಡ್ಡಿಯಿಂದ ಶೆಟರ್ ಒಡೆದು ಅಂತರ್‌ರಾಜ್ಯ ದರೋಡೆಕೋರರು 35 ಲಕ್ಷ ಬೆಲೆ ಬಾಳುವ ಆಭರಣ ಹಾಗೂ ರೂ 9 ಲಕ್ಷ ದೋಚಿದ್ದರು. ಪುನಃ ಬ್ಯಾಂಕ್ ಲೂಟಿಗೆ ಪ್ರಯತ್ನ ನಡೆದಿರುವ ಘಟನೆಯಿಂದ ಗ್ರಾಹಕರು ಆತಂಕಗೊಂಡಿದ್ದಾರೆ.ಬ್ಯಾಂಕ್ ಸಿಬ್ಬಂದಿಗೆ ಡಿವೈಎಸ್‌ಪಿ ತರಾಟೆ

ಸಿಂಧನೂರು:
ತಾಲ್ಲೂಕಿನ ಬೂದಿವಾಳ ಕ್ಯಾಂಪ್ ಪ್ರಗತಿ ಗ್ರಾಮೀಣ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಡಿವೈಎಸ್‌ಪಿ ಬಿ.ಡಿ.ಡಿಸೋಜಾ ಬ್ಯಾಂಕ್‌ನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಬ್ಯಾಂಕ್ ಕಟ್ಟಡದ ಅಭದ್ರತೆ, ಸೈಲೆನ್ಸರ್, ಸಿ.ಸಿ.ಕ್ಯಾಮರಾ ಅಳವಡಿಸದಿರುವ ಮತ್ತು ಕಾವಲುಗಾರ ನೇಮಿಸಿಕೊಳ್ಳದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎರಡು ಬಾರಿ ಸಭೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರೂ ನಿರ್ಲಕ್ಷ್ಯ ವಹಿಸಿದ್ದರಿಂದ ಘಟನೆ ಮರುಕಳಿಸಿದೆ ಎಂದ ಅವರು ಬ್ಯಾಂಕ್‌ನಲ್ಲಿರುವ ಗ್ರಾಹಕರ ಹಣ ಮತ್ತು ಒಡವೆಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮುಂಚಿತವಾಗಿ ತಿಳಿಸಿದ್ದರೂ ಪ್ರಗತಿ ಗ್ರಾಮೀಣ ಬ್ಯಾಂಕ್ ಆಡಳಿತ ಮಂಡಳಿ ನಿರ್ಲಕ್ಷ್ಯವಹಿಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಇಷ್ಟರಲ್ಲಿಯೇ ನೂತನ ಕಟ್ಟಡ ಕಟ್ಟಿಸಲಾಗಿದ್ದು ಬ್ಯಾಂಕ್ ಕಚೇರಿಯನ್ನು ಸ್ಥಳಾಂತರಗೊಳಿಸಲಾಗುವುದು ಎಂದು ವ್ಯವಸ್ಥಾಪಕರು ಡಿಸೋಜಾ ಅವರಿಗೆ ಸಮಜಾಯಿಷಿ ನೀಡಿದರು.

ಪ್ರಕರಣದಿಂದ ಗ್ರಾಹಕರು ಯಾವುದೇ ರೀತಿಯ ಆತಂಕಪಡುವ ಅವಶ್ಯಕತೆಯಿಲ್ಲ. ದರೋಡೆಗೆ ಬ್ಯಾಂಕ್ ಹಿಂಬದಿಯಲ್ಲಿ ಕೊರೆದಿರುವ ಬೋಂಗಾ ಸುತ್ತಮುತ್ತ ಶ್ವಾನದಳ ಈಗಾಗಲೇ ಪರಿಶೀಲನೆ ನಡೆಸಿದ್ದು ಮಾಹಿತಿ ಕಲೆ ಹಾಕಿ ಶೀಘ್ರ ಕಳ್ಳರನ್ನು ಪತ್ತೆ ಹಚ್ಚುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.