ಭಾನುವಾರ, ಮೇ 9, 2021
26 °C

ಬೆಂಗಳೂರಿಗೂ ಕೊಂಡೊಯ್ಯಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕಿತ್ತೂರು ಉತ್ಸವದ ಅಂಗವಾಗಿ ಪ್ರತಿ ವರ್ಷ ಹೊರಡಿಸಲಾಗುವ ಕಿತ್ತೂರು ಚನ್ನಮ್ಮ ವಿಜಯಜ್ಯೋತಿ ಯಾತ್ರೆಯನ್ನು ಕಳೆದ ವರ್ಷದಂತೆ ಈ ಬಾರಿಯೂ ಬೆಂಗಳೂರಿಗೆ ಕೊಂಡೊಯ್ಯಲು ನಿರ್ಧರಿಸಲಾಯಿತು.ಜಿಲ್ಲಾಧಿಕಾರಿ ಡಾ. ಏಕ್‌ರೂಪ್ ಕೌರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕಿತ್ತೂರು ಉತ್ಸವದ ಅಂಗವಾಗಿ ರಚಿಸಲಾದ ವಿವಿಧ ಸಮಿತಿಗಳ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.ಬೈಲಹೊಂಗಲದಲ್ಲಿರುವ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಿಂದ ಈ ವಿಜಯಜ್ಯೋತಿ ಮೆರವಣಿಗೆ ಪ್ರಾರಂಭವಾಗಿ ಬೆಳಗಾವಿ ವಿಭಾಗದಲ್ಲಿ ಬರುವ ಏಳು ಜಿಲ್ಲೆಗಳಲ್ಲಿ ಸಂಚರಿಸಿ ವಿಜಯಜ್ಯೋತಿ ಯಾತ್ರೆಯು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ.ನಂತರ ಅಕ್ಟೋಬರ್ 22ರಂದು ಬೈಲಹೊಂಗಲಕ್ಕೆ ಬಂದು ವಾಸ್ತವ್ಯ ಮಾಡಲಿದೆ. ಅ. 23ರ ಬೆಳಿಗ್ಗೆ ಕಿತ್ತೂರಿಗೆ ಜ್ಯೋತಿ ಬರಲಿದೆ. ಜ್ಯೋತಿ ಸಂಚರಿಸುವ ಪ್ರತಿಯೊಂದು ಜಿಲ್ಲೆಯಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಚನ್ನಮ್ಮ ಜ್ಯೋತಿಗೆ ಗೌರವ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಉತ್ಸವದ ಅಂಗವಾಗಿ ಅಕ್ಟೋಬರ್ 22ರಿಂದ ನಾಲ್ಕು ದಿನಗಳ ಕಾಲ ಬೆಳಗಾವಿ ಹಾಗೂ ಬೈಲಹೊಂಗಲದಲ್ಲಿ ಕನ್ನಡ ಚಲನಚಿತ್ರೋತ್ಸವ ಏರ್ಪಡಿಸಲಾಗುವುದು. ಚಲನಚಿತ್ರೋತ್ಸವ ಉದ್ಘಾಟನೆಗೆ ಖ್ಯಾತ ಸಿನಿಮಾ ತಾರೆಯರನ್ನು ಆಹ್ವಾನಿಸಲು ಹಾಗೂ ಪ್ರಶಸ್ತಿ ವಿಜೇತ ಮತ್ತು ಜನಪ್ರಿಯ ಚಿತ್ರಗಳನ್ನು ಪ್ರದರ್ಶಿಸಲು ನಿರ್ಧರಿಸಲಾಯಿತು. ಉತ್ಸವದ ಸಂದರ್ಭದಲ್ಲಿ ಕೋಟೆ ಆವರಣದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗುವುದು. ಇದರ ಜೊತೆಗೆ ಕುಸ್ತಿ, ಸೈಕ್ಲಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲು ತೀರ್ಮಾನಿಸಲಾಯಿತು.ಜಿಲ್ಲಾಧಿಕಾರಿ ಡಾ. ಏಕ್‌ರೂಪ್ ಕೌರ್ ಮಾತನಾಡಿ, ಉತ್ಸವದ ವ್ಯವಸ್ಥೆಗಾಗಿ ರಚಿಸಲಾಗಿರುವ ವಿವಿಧ ಸಮಿತಿಗಳು ತಮ್ಮ ಸಮಿತಿಯ ಸಭೆಗಳನ್ನು ನಡೆಸಿ ಈ ತಿಂಗಳ 30ರೊಳಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅಜಯ ನಾಗಭೂಷಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಚ್. ಚನ್ನೂರ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.