ಗುರುವಾರ , ಮೇ 19, 2022
24 °C

ಬೆಂಗಳೂರಿನಲ್ಲಿ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ಯಾನನಗರಿ ಬೆಂಗಳೂರಿನಲ್ಲಿರುವ ಮಧ್ಯಮ ವರ್ಗ ಮತ್ತು ಮೇಲ್ವರ್ಗದ ಜನರಲ್ಲಿ ಹೆಚ್ಚುತ್ತಿರುವ ಚಿನ್ನಾಭರಣ  ಗಳನ್ನು ಖರೀದಿಸುವ ಬಯಕೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ವಿವಿಧ ಚಿನ್ನಾಭರಣ ಮಾರಾಟ ಸಂಸ್ಥೆಗಳು ಬೆಂಗಳೂರಿನಲ್ಲಿ ಹೊಸ ಹೊಸ ಮಳಿಗೆಗಳನ್ನು ಪೈಪೋಟಿ ಮೇಲೆ ತೆರೆಯುತ್ತಿವೆ. ಕನ್ನಡ ಚಿತ್ರರಂಗದ ಜನಪ್ರಿಯ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ಪೂಜಾ ಗಾಂಧಿ ಅವರನ್ನು ಪ್ರಚಾರ ರಾಯಭಾರಿಗಳನ್ನಾಗಿ ಮಾಡಿಕೊಂಡು ಜನರ ಮನಕ್ಕೆ ಲಗ್ಗೆ ಹಾಕಲಾಗುತ್ತಿದೆ.

ನಗರದಲ್ಲಿ 4,000ಕ್ಕೂ ಅಧಿಕ ಆಭರಣಗಳ ಮಳಿಗೆಗಳಿದ್ದು, ರಾಷ್ಟ್ರೀಯ ಹಾಗೂ ಪ್ರಾದೇಶಿಕ ಆಭರಣಗಳ ಬ್ರಾಂಡ್‌ಗಳು ಅತಿ  ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯಲ್ಲಿವೆ.ದೇಶದಲ್ಲಿ  ಅತ್ಯಂತ ಜನಪ್ರಿಯ ನಗರವಾಗಿ ಬೆಳೆಯುತ್ತಿರುವ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಬೆಂಗಳೂರು, ದೇಶದ ಪ್ರಮುಖ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿಯೂ ಗಮನ ಸೆಳೆಯುತ್ತಿದೆ. ಇದರ ಜೊತೆಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೊಪಾಲಿಟನ್ ನಗರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.ಈಗಾಗಲೇ ಇಲ್ಲಿ ಪ್ರಸಿದ್ಧ ಸಿ, ಕೃಷ್ಣಯ್ಯ ಶೆಟ್ಟಿ ಆಂಡ್ ಸನ್ಸ್, ಎಲ್ಲೋರ್ ಜ್ಯುವೆಲ್ಸ್, ಪಾಥಿ ಜ್ಯುವೆಲ್ಲರ್ಸ್‌, ಸಿ. ವಾಸುದೇವ್‌ಶೆಟ್ಟಿ ಆಂಡ್ ಸನ್ಸ್, ಶುಭ್ ಮತ್ತಿತರ ಚಿನ್ನಾಭರಣಗಳ ಬ್ರಾಂಡ್‌ಗಳ ಹೊರತಾಗಿ ಜೋಯಾಲುಕ್ಕಾಸ್, ಕಲ್ಯಾಣ್, ಜೋಸ್ಕೊ, ಭೀಮಾ, ಮಲಬಾರ್, ಮಣಪ್ಪುರಂ ಸೇರಿದಂತೆ ಬೇರೆ ರಾಜ್ಯಗಳಿಂದ ಬಂದಿರುವ ಹಲವಾರು ಜನಪ್ರಿಯ ಬ್ರಾಂಡ್‌ಗಳೂ ಗ್ರಾಹಕರನ್ನು ಸೆಳೆಯಲು ಭಾರಿ ಪೈಪೋಟಿ ನಡೆಸುತ್ತಿವೆ.ಚಿನ್ನದ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದುದರ  ಹೊರತಾಗಿಯೂ ಕಳೆದ ವರ್ಷ ಬೆಂಗಳೂರಿನಲ್ಲಿ ಚಿನ್ನದ ಮಾರಾಟದಲ್ಲಿಯೂ   ಗಮನಾರ್ಹ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಹೆಚ್ಚು ಆದಾಯ ಹೊಂದಿರುವವರು ದರ ಏರಿಕೆಯಾಗಿದ್ದರೂ ಆಭರಣಗಳನ್ನು ಖರೀದಿಸುತ್ತಿದ್ದುದೇ ಇದಕ್ಕೆ ಕಾರಣ.ಕಳೆದ ವರ್ಷ ಚಿನ್ನದ ದರ ಹೆಚ್ಚಿದ್ದರೂ ತಮ್ಮ ಮಳಿಗೆಗಳಲ್ಲಿ ಚಿನ್ನಾಭರಣ ಗಳ ಮಾರಾಟದಲ್ಲಿ ಶೇ 18ರಷ್ಟು ಹೆಚ್ಚಳವಾಗಿತ್ತು ಎಂದು ಸಿ.ಕೃಷ್ಣಯ್ಯ ಶೆಟ್ಟಿ ಆಂಡ್ ಸನ್ಸ್‌ನ ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಹಯಗ್ರೀವ ಹೇಳುತ್ತಾರೆ.ಟೈಟಾನ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾಗಿರುವ ತಾನಿಷ್ಕ್‌ದ ಮಾರಾಟ ವಿಭಾಗದ ಉಪಾಧ್ಯಕ್ಷ ಸಂದೀಪ್ ಕುಲ್‌ಹಳ್ಳಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘ಚಿನ್ನದ ಬೆಲೆ ಏರು ಗತಿಯಲ್ಲಿದ್ದರೂ ನಮ್ಮ ಮಳಿಗೆಗಳಲ್ಲಿ ನಡೆದ ಮಾರಾಟದಲ್ಲಿ ನಿರಂತರವಾಗಿ ಏರಿಕೆ ಕಂಡು ಬಂದಿದೆ’ ಎಂದು ಸಂದೀಪ್ ಹೇಳುತ್ತಾರೆ.ಹೊಸದಾಗಿ ಬೆಂಗಳೂರಿನಲ್ಲಿ ಮಳಿಗೆ ತೆರೆದಿರುವ ಜೋಯಾಲುಕ್ಕಾಸ್ ಕೂಡಾ ಇಲ್ಲಿ ಮಳಿಗೆ ಆರಂಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದೆ. ‘ಬೆಂಗಳೂರಿನಲ್ಲಿ ನಮ್ಮ ಮೊದಲ ಮಳಿಗೆ ಆರಂಭಿಸಿದ ಆರು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳ ಮಾರಾಟದಲ್ಲಿ ಶೇ 25ರಷ್ಟು ಪ್ರಗತಿ ಕಂಡು ಬಂದಿದೆ. ಇದು ನಮ್ಮ ನಿರೀಕ್ಷೆಗಳನ್ನೂ ಮೀರಿದ ಬೆಳವಣಿಗೆ’ ಎಂದು ಜೋಯಾಲುಕ್ಕಾಸ್‌ನ ಪ್ರಾದೇಶಿಕ ಮಾರುಕಟ್ಟೆ ಉಸ್ತುವಾರಿ ಹೊತ್ತಿರುವ ಸೂರಜ್ ಪರಮೇಶ್ವರನ್ ಅಭಿಪ್ರಾಯ ಪಡುತ್ತಾರೆ.ದೇಶದಲ್ಲಿ ಚಿನ್ನದ ಅತ್ಯಂತ ದೊಡ್ಡ ಉತ್ಪಾದಕರಾದ  ಶುಭ್ ಜ್ಯುವೆಲ್ಲರ್ಸ್‌ ಸಮೂಹದ ಮಾಲೀಕ ಹಾಗೂ ರಾಜೇಶ್ ಎಕ್ಸ್‌ಪೋರ್ಟ್ಸ್ ಅಧ್ಯಕ್ಷ ರಾಜೇಶ್ ಮೆಹ್ತಾ ಅವರ ಪ್ರಕಾರ, ಬೆಂಗಳೂರು ಒಂದು ಅಂತರರಾಷ್ಟ್ರೀಯ ನಗರವಾಗಿ ಬೆಳೆಯುತ್ತಿರುವುದರಿಂದ ಎಲ್ಲಾ ಚಿನ್ನಾಭರಣ ಸಂಸ್ಥೆಗಳು ಇತ್ತ ಆಕರ್ಷಿತವಾಗಿವೆ.‘ಆಭರಣಗಳ ಖರೀದಿ ಕುರಿತಂತೆ ಹೇಳುವುದಾದರೆ, ಈಗ ಗ್ರಾಹಕರಿಗೆ ತುಂಬಾ ಅವಕಾಶಗಳಿವೆ. ಹಲವು ರಾಷ್ಟ್ರೀಯ ಮಟ್ಟದ ಬ್ರಾಂಡ್‌ಗಳು ಇಲ್ಲಿಗೆ ಆಗಮಿಸಿರುವುದು ಒಳ್ಳೆಯ ಬೆಳವಣಿಗೆ. ಬೆಂಗಳೂರಿನಲ್ಲಿ ನೆಲೆಸಿರುವ ಜನರ ಕೊಳ್ಳುವ ಸಾಮರ್ಥ್ಯ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಇದರ ಜೊತೆಗೆ ದೇಶದ ಆರ್ಥಿಕ ವ್ಯವಸ್ಥೆ ಕೂಡ ಕ್ಷಿಪ್ರವಾಗಿ ಬೆಳೆಯುತ್ತಿದೆ’ ಎಂದು ಮೆಹ್ತಾ ಅಭಿಪ್ರಾಯ ಪಡುತ್ತಾರೆ.ಚಿನ್ನಾಭರಣ ಮಾರಾಟಗಾರರ ನಡುವೆ ಪೈಪೋಟಿ ಹೆಚ್ಚುತ್ತಿರುವುದರಿಂದ ಗ್ರಾಹಕರೂ ಸಂತಸ ಹೊಂದಿದ್ದಾರೆ. ಅವರ ನಡುವಿನ ಸ್ಪರ್ಧೆಯಿಂದಾಗಿ ತಮಗೆ ಒಳ್ಳೆಯ ಗುಣಮಟ್ಟದ ಆಭರಣಗಳು ಸಿಗುತ್ತವೆ ಎಂಬುದು ಅವರ ಅನಿಸಿಕೆಯಾಗಿದೆ.ಶುಭ್ ಸೇರಿದಂತೆ ಇನ್ನಿತರ ಕೆಲವು ಜ್ಯುವೆಲ್ಲರಿಗಳು ಆಭರಣಗಳನ್ನು  ‘ಪ್ರತಿ ಗ್ರಾಮ್ ಬೆಲೆ’ಗೆ ಮಾರಲು ಆರಂಭಿಸಿದ್ದಾರೆ. ಈ ಬೆಲೆಯಲ್ಲಿ ವೇಸ್ಟೇಜ್ ಅಥವಾ ತಯಾರಿಕಾ ವೆಚ್ಚ ಸೇರಿರುವುದಿಲ್ಲ. ಇನ್ನೂ ಕೆಲವು ಬ್ರಾಂಡ್‌ಗಳು ಗ್ರಾಹಕರನ್ನು  ಸೆಳೆಯುವುದಕ್ಕಾಗಿ ವಹಿವಾಟಿನ ಪಾರದರ್ಶಕತೆಗೆ ಹೆಚ್ಚು ಗಮನ ನೀಡಿವೆ. ಮತ್ತೂ ಕೆಲವು ಚಿನ್ನಾಭರಣ ಸಂಸ್ಥೆಗಳು ಜೀವನ ಪರ್ಯಂತ ಉಚಿತ ದುರಸ್ತಿ  ಮತ್ತು ಭವಿಷ್ಯದಲ್ಲಿ ಪ್ರಚಲಿತದಲ್ಲಿರುವ ಬೆಲೆಯಲ್ಲಿ ಚಿನ್ನ ಹಿಂದಿರುಗಿಸುವ ಸೌಲಭ್ಯ ನೀಡುವುದಾಗಿಯೂ ಹೇಳುತ್ತಿವೆ.ಇನ್ನು ಕೆಲವು ಮಳಿಗೆಗಳು ದೇಶದಲ್ಲೇ ಅತ್ಯಂತ ಕಡಿಮೆ ಬೆಲೆ ಎಂದು ನಂಬಲಾಗಿರುವ ಚೆನ್ನೈ ದರದಲ್ಲಿ ಆಭರಣಗಳನ್ನು ಮಾರಾಟ ಮಾಡುತ್ತಿವೆ. ಚಿನ್ನಾಭರಣಗಳ ಸಂಸ್ಥೆಗಳ ನಡುವೆ ಹೆಚ್ಚುತ್ತಿರುವ ತೀವ್ರ ಪೈಪೋಟಿ ಇಡೀ ಚಿನ್ನಾಭರಣಗಳ ಮಾರುಕಟ್ಟೆಯ ಬಲವರ್ಧನೆಗೆ ಕಾರಣವಾಗಿದೆ. ಸ್ಪರ್ಧೆ ತಾಳಲಾರದೆ ಹಲವು ಸಣ್ಣ ಮತ್ತು ಮಧ್ಯಮ ಚಿನ್ನಾಭರಣ ಮಾರಾಟ ಸಂಸ್ಥೆಗಳು ದೊಡ್ಡ ಸಂಸ್ಥೆಗಳೊಂದಿಗೆ ಸೇರಿಕೊಂಡಿವೆ ಇಲ್ಲವೇ ಮಾರಾಟವಾಗುತ್ತಿರುವುದು ಇನ್ನೊಂದು ಬೆಳವಣಿಗೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.