ಗುರುವಾರ , ಮೇ 13, 2021
18 °C

ಬೆಂಗಳೂರಿನ ಪ್ರಥಮ ಪ್ರಜೆ ಹೇಗಿರಬೇಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷ, ಪ್ರಾಮಾಣಿಕ, ನಿಷ್ಠಾವಂತ ವ್ಯಕ್ತಿ ಮೇಯರ್ ಆಗಲಿ

“ಹಿಂದಣ ಹೆಜ್ಜೆಯನ್ನರಿಯದೆ ನಿಂದ ಹೆಜ್ಜೆಯನ್ನರಿಯಲಾಗದು~~ ಎಂಬ ಜಿ.ಎಸ್. ಶಿವರುದ್ರಪ್ಪನವರ ಕಾವ್ಯವಾಣಿಯಂತೆ ನಮ್ಮ ಹಿಂದಿನ ಭವ್ಯ, ಸುಂದರ ಬೆಂಗಳೂರಿನ ಕಡೆಗೆ ದೃಷ್ಟಿಯನ್ನು ಹರಿಸಿದರೆ ಇಂದಿನ ಬೆಂಗಳೂರು ಹೇಗಿದೆ ಎಂಬುದು ಸ್ವಲ್ಪ ಮಟ್ಟಿಗಾದರೂ ಅರಿವಿಗೆ ಬರುತ್ತದೆ. ಜಾತ್ಯತೀತವೂ, ಧರ್ಮಾತೀತವೂ ಆದ ಬೆಂಗಳೂರು ಸಕಲ ಜನಗಳ ಬಂಧುವಾಗಿ ಸಂಕಷ್ಟಕ್ಕೆ ಸಿಲುಕಿದವರನ್ನು ಕೈಬೀಸಿ ಕರೆದು ತನ್ನ ತೊಡೆ ತೊಟ್ಟಿಲಿನಲ್ಲಿ ಆಸರೆ ನೀಡುತ್ತಿದೆ. ಹೀಗೆ ಬಂದವರನ್ನೆಲ್ಲ ತನ್ನೊಳಗೆ ತುಂಬಿಕೊಳ್ಳುತ್ತಿರುವ ಬೆಂಗಳೂರಿನ ವ್ಯಾಪ್ತಿ ಕಳೆದ ಹತ್ತಿಪ್ಪತ್ತು ವರ್ಷಗಳಿಂದಂತೂ ಎಲ್ಲೆ ಮೀರಿ ಬೆಳೆದಿದೆ. ಈ ವಿಸ್ತಾರ ಮತ್ತು ಜನದಟ್ಟಣೆಯಿಂದ ಬೃಹತ್ ಬೆಂಗಳೂರು ಸಮಸ್ಯೆಗಳ ಆಗರವಾಗಿ ನಿರ್ಮಾಣವಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ನಗರವನ್ನು ಪಾಲಿಸುವ ಪ್ರಥಮ ಪ್ರಜೆಗಳಂತೂ (ಮೇಯರ್‌ಗಳೂ) ಲೆಕ್ಕವಿಲ್ಲದಷ್ಟು ಮಂದಿ ಆಯ್ಕೆಯಾಗಿ ಬಂದು ಅಧಿಕಾರಾವಧಿಯನ್ನು ಮುಗಿಸಿ ಹೋಗಿದ್ದಾರೆ. ಆದರೆ, ಅವರವರ ಅಧಿಕಾರಾವಧಿಯಲ್ಲಿ ನಗರಾಭಿವೃದ್ಧಿಗೆ ಅವರು ನೀಡಿದ ಕೊಡುಗೆ ಏನು? ಅವರ ವಿಶೇಷ ಸಾಧನೆಗಳೇನು? ಎಂದು ಕೇಳಿದರೆ ಸಿಗಬಹುದಾದ ಉತ್ತರ ಅಲ್ಪಮಟ್ಟದ್ದೇ ಆಗಿರುತ್ತದೆ. ಹಾಗಾದರೆ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಬೃಹತ್  ಬೆಂಗಳೂರನ್ನು ಕಾಪಾಡಬೇಕಾದ ನಮ್ಮ ಮುಂದಿನ ಮೇಯರ್ ಹೇಗಿರಬೇಕು?ದೇಶಕ್ಕೆ ಪ್ರಧಾನಿ ಪ್ರಮುಖವಾದರೆ, ರಾಜ್ಯಕ್ಕೆ ಮುಖ್ಯಮಂತ್ರಿ ಹಾಗೆಯೇ ನಗರಕ್ಕೆ ಪ್ರಧಾನ ವ್ಯಕ್ತಿ ಮೇಯರ್. “ಒಂದು ಮನೆ ಸರಿಯಾಗಿರಬೇಕಾದರೆ ಆ ಮನೆಯ ಯಜಮಾನ ಸರಿಯಾಗಿರಬೇಕು”. ಹಾಗೆಯೇ ನಮ್ಮ ಬೃಹತ್ ನಗರ ಸರಿಯಾಗಿರಬೇಕಾದರೆ ನಗರದ ಕೇಂದ್ರ ಬಿಂದು ನಾಯಕ ಸರಿಯಾಗಿರಬೇಕು.ಶ್ರಿಮೇಟಿಯಂತಿರುವ ಮೇಯರ್ ತನ್ನ ಸುತ್ತ ಇರುವ ಪ್ರತಿಯೊಬ್ಬರನ್ನೂ ಒಂದು ಚೌಕಟ್ಟಿನೊಳಗೆ ಸಾಗಿಸುವ ಗಟ್ಟಿಗನಾಗಿಬೇಕು. ಹಾಗಾದರೆ, ಇಂದು ಸಕಲ ಸಮಸ್ಯೆಗಳಿಂದ ಬಳಲುತ್ತಿರುವ ಬೃಹತ್ ಮಹಾನಗರ ಪಾಲಿಕೆಯನ್ನು ಸುಸೂತ್ರವಾಗಿ ಮುನ್ನಡೆಸುವ ಮುಂದಿನ ಮೇಯರ್ ಹೇಗಿರಬೇಕು? ಎಂಬ ಪ್ರಶ್ನೆಗೆ ಉತ್ತರವನ್ನು ಕಾಣಹೊರಟರೆ ಈವರೆಗಿನ ಮೇರ್‌ಗಳ ಆಯ್ಕೆಯ ನಿಯಮಗಳನ್ನು ದೂರವಿಟ್ಟು ಹೊಸ ಮಾದರಿಯೊಂದನ್ನು ಕಂಡುಕೊಳ್ಳುವುದು ಉಚಿತ.ಈ ಆಯ್ಕೆ ಯಾವುದೇ ರೀತಿಯ ಲಾಲಸೆಗಳಿಗೆ ಒಳಗಾಗದೆ, ಜಾತಿ ಕೇಂದ್ರಿತವಾಗಿರದೆ, ಒಬ್ಬ ದಕ್ಷ, ಪ್ರಾಮಾಣಿಕ, ನಿಷ್ಠಾವಂತ, ದೂರದೃಷ್ಟಿಯುಳ್ಳವರಾಗಿದ್ದರೆ ಅಂಥವರಿಂದ ಅಲ್ಪಾಭಿವೃದ್ಧಿಯನ್ನಾದರೂ ನಿರೀಕ್ಷಿಸಬಹುದು. ತಮಗೆ ಸಿಗಬಹುದಾದ ಅಲ್ಪಾವಧಿಯಲ್ಲಿ ಪ್ರತಿಯೊಂದರ ಪೂರ್ವ ಪರಗಳನ್ನು ಆಲೋಚಿಸಿ ಕಾರ್ಯರೂಪಿಸುವ ತೀಕ್ಷ್ಣವಾದ ಬುದ್ಧಿಯುಳ್ಳವರಾಗಿದ್ದರೆ ತಾವು ಅಧಿಕಾರಕ್ಕೆ ಬಂದಂದಿನಿಂದಲೇ ತಮ್ಮ ಕಾರ್ಯ ಬಾಹುಳ್ಯವನ್ನು ಮನಗಂಡು ಅದರ ಸ್ಪಷ್ಟ ಚಿತ್ರವೊಂದನ್ನು ರೂಪಿಸಿಕೊಳ್ಳಬೇಕು. ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ಎಲ್ಲರಿಂದಲೂ ಬರಬಹುದಾದ ಅನಿಸಿಕೆ, ಅಭಿಪ್ರಾಯಗಳನ್ನು ಸ್ವೀಕರಿಸುತ್ತಾ ಜನಮನದೆಡೆಗೆ ಸಾಗಬೇಕು.ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಪ್ರತಿನಿತ್ಯವೂ ಹೊಸದೊಂದು ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುತ್ತಿದೆ. ಸದಾ ಇರುವ ನೀರಿನ ಸಮಸ್ಯೆ, ಚರಂಡಿ ವ್ಯವಸ್ಥೆಯ ದೋಷಗಳು, ವಾಹನಗಳ ದಟ್ಟಣೆ, ಸಂಚಾರ ವ್ಯವಸ್ಥೆಯ ಸಮಸ್ಯೆ, ವಾಹನ ನಿಲುಗಡೆ ಸಮಸ್ಯೆ, ಕೊಳಚೆ ಪ್ರದೇಶಗಳ ಉಗಮ, ಪರಿಸರ ಮಾಲಿನ್ಯ, ಇವುಗಳ ಜೊತೆ ಜೊತೆಯಲ್ಲೇ ಇನ್ನೂ ಅನೇಕ ಸಾಮಾನ್ಯನಿಗೆ ಕಾಣದ ಸಮಸ್ಯೆಗಳೇನಿದೆಯೋ ಅವುಗಳನ್ನೆಲ್ಲಾ ಸಮಸ್ಯೆಗಳೆಂದು ಸ್ವೀಕರಿಸಿ ಕುಗ್ಗದೆ ಸವಾಲಾಗಿ ಸ್ವೀಕರಿಸುವ ಮನೋದಾರ್ಢ್ಯತೆ ಮೇಯರ್‌ಗಿರಬೇಕು. ಆ ಸಮಸ್ಯೆಗಳಿಗೆ ಕಾರಣವೇನೆಂದು ಪುನರುಚ್ಚರಿಸುವುದರ ಬದಲು ಅವುಗಳ ಪರಿಹಾರಕ್ಕಾಗಿ ಪಣತೊಟ್ಟು ನಿಲ್ಲಬೇಕು.“ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯುಷ್ಯ” ಎಂಬ ಗಾದೆಯಂತೆ ಹೇಗೋ ಅಧಿಕಾರಾವಧಿಯನ್ನು ಅನುಭವಿಸಿ ಮುಗಿಸಿ ಹೋದರೆ ಸಾಕು ಎಂದು ನಿಶ್ಚಯಿಸದೆ ಭವಿಷ್ಯದ ದೃಷ್ಟಿಯನ್ನು ಮೂಲದಲ್ಲಿರಿಸಿಕೊಂಡು ಸಾಗುವ ಮುಂಗಾಣ್ಕೆ ಹೊಂದಿದ ಮೇಯರ್ ಬೇಕು.ಮೇಯರ್ ತನ್ನ ಅಧೀನದಲ್ಲಿ ಬರುವ ಎಲ್ಲಾ ಸಮಿತಿಗಳನ್ನೂ, ಸರ್ಕಾರಿ ಅಧಿಕಾರಿಗಳನ್ನೂ, ಸರ್ಕಾರಿ ಹಾಗೂ ಖಾಸಗಿ ನೌಕರರನ್ನೂ ನಂಬಿಕೆಗೆ ತೆಗೆದುಕೊಂಡು ತನ್ನ ಮುಂದಿರುವ ಕಾರ್ಯಕ್ರಮಗಳ ಚೌಕಟ್ಟುಗಳನ್ನು ತಿಳಿಸಿ, ಅವರಿಗೆ ಎಸಗಬೇಕಾದ ಕಾರ್ಯಗಳನ್ನು ಚಿತ್ರಸಹಿತವಾಗಿ ಕಣ್ಮುಂದೆ ನಿಲ್ಲುವಂತೆ ರೂಪಿಸಬೇಕು. ಕಾರ್ಯಗಳಲ್ಲಿ ಎಲ್ಲೂ ಲೋಪಗಳಾಗದಂತೆ ಸೂಕ್ಷ್ಮ ಪರಿಶೀಲನೆ ನಡೆಸುತ್ತಲೇ ಜನಪ್ರತಿಗಳ ಮೆಚ್ಚುಗೆಗೆ ಪಾತ್ರರಾಗಿ ಸಕಲ ಜನಗಳ ಹಿತದೃಷ್ಟಿಯಿಂದ ಸಾಗುವ ಪೂರ್ಣದೃಷ್ಟಿ ಇರಬೇಕು. ಇಂತಹ ನಿಸ್ವಾರ್ಥ, ಸರಳ, ಸಜ್ಜನ, ಪ್ರಾಮಾಣಿಕ ವ್ಯಕ್ತಿ ಮೇಯರ್ ಆಗಿ ಆಯ್ಕೆಯಾದರೆ ನಗರದ ಸರ್ವತೋಮುಖ ಅಭಿವೃದ್ಧಿಯಾಗಿ ನಮ್ಮ ನಗರದ ನಕ್ಷೆಯೇ ಬದಲಾಗಬಹುದು. ಹಾಗಾದರೆ ನೀವು, ನಾವು ಬಯಸುವ ಮುಂದಿನ ಮೇಯರ್ ಯಾರು?... ಯಾರು?

ಡಾ.ಟಿ.ವಿ. ರಾಜು,

ನಿರ್ದೇಶಕರು, ಆರ್.ವಿ.

ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ಜನರಿಂದ ನೇರ ಆಯ್ಕೆ ನಡೆಯಲಿ

ಬೆಂಗಳೂರಿಗೆ ಹೊಸ ಮೇಯರ್ ಆಯ್ಕೆಯಾಗುತ್ತಿದ್ದಾರೆ. ಆದರೆ, ನಗರದ ಮೇಲೆ ಇದು ಶೂನ್ಯದಷ್ಟು ಸಕಾರಾತ್ಮಕ ಪರಿಣಾಮ ಬೀರುತ್ತಿಲ್ಲ ಎಂಬುದು ನನ್ನ ಭಾವನೆ. ಏಕೆಂದರೆ, ನಮ್ಮ ನಾಗರಿಕ ವ್ಯವಹಾರಗಳಲ್ಲಿ ಮೇಯರ್ ಆಯ್ಕೆ ಲೆಕ್ಕವೇ ಇಲ್ಲದಂತಾಗಿದೆ. ಪ್ರತಿ ವರ್ಷ ಮೇಯರ್ ಆಯ್ಕೆ ಸುದ್ದಿಯಾಗುತ್ತದೆ. ಆದರೆ, ಮೇಯರ್‌ಗೆ ಪೂರ್ಣ ಅಧಿಕಾರ ನೀಡದೆ ಹಾಗೂ ನೇರ ಆಯ್ಕೆ ನಡೆಯದ ಹೊರತು ಒಂದು ವರ್ಷದ ಅಧಿಕಾರಾವಧಿಗೆ ಯಾವುದೇ ಅರ್ಥವಿಲ್ಲ.ಬೆಂಗಳೂರಿನ ಬೆಳವಣಿಗೆಯ ದೃಷ್ಟಿಯಿಂದ ಮೇಯರ್ ಹುದ್ದೆಗೆ ಆಯ್ಕೆಯಾಗುವವರು ಕನಿಷ್ಠ ಪದವೀಧರರಾಗಿರಬೇಕು. ಅಲ್ಲದೆ, ಪ್ರತಿಯೊಬ್ಬ ನಾಗರಿಕ ಸಮಸ್ಯೆಗಳಿಗೆ ಮೇಯರ್ ಕಚೇರಿಯನ್ನು ಮುಕ್ತವಾಗಿರಿಸಿರಬೇಕು. ಬೆಂಗಳೂರಿನ ಬಗ್ಗೆ ಮೇಯರ್ ತನ್ನದೇ ಆದ ಪರಿಕಲ್ಪನೆ ಹೊಂದಿರಬೇಕು. ಬೆಂಗಳೂರು ನಗರದ ನಾಗರಿಕರ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕಾದರೆ ಎಂತಹ ಅಗತ್ಯತೆಗಳನ್ನು ಪೂರೈಸಬೇಕು ಎಂಬುದರ ಬಗ್ಗೆ ಮಾಧ್ಯಮಗಳ ಸಹಕಾರದಿಂದಲೂ ಸಲಹೆ- ಸೂಚನೆಗಳನ್ನು ಪಡೆಯಬೇಕು.

ಸಂವಿಧಾನದ 74ನೇ ಕಲಂನ ತಿದ್ದುಪಡಿಯಲ್ಲಿ ಪ್ರಸ್ತಾಪಿಸಿರುವಂತೆ ನಗರ ಆಡಳಿತಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು, ನಗರದ ಸವಾಲುಗಳನ್ನು ಯಾವ ರೀತಿ ಎದುರಿಸಬೇಕು.ನಾಗರಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಪೂರೈಸಲು (ಅದರಲ್ಲೂ ಬಡ ಜನರಿಗೆ ಕುಡಿಯುವ ನೀರು, ಸಾರಿಗೆ, ವಿದ್ಯುತ್, ಕಸ ನಿರ್ವಹಣೆ ಇತ್ಯಾದಿ) ಏನು ಕ್ರಮ ಕೈಗೊಳ್ಳಬೇಕು? ಎಂಬುದರ ಬಗ್ಗೆ ಚಿಂತಿಸಬೇಕು. ಈ ದೃಷ್ಟಿಯಿಂದ ಪಾರದರ್ಶಕತೆಯಿಂದ ಬಜೆಟ್ ಅನುಷ್ಠಾನಗೊಳಿಸಲು ಪ್ರಯತ್ನ ನಡೆಸಬೇಕು.

- ವಿ. ರವಿಚಂದರ್, ಅಧ್ಯಕ್ಷ, `ಫೀಡ್ ಬ್ಯಾಕ್ ಕನ್ಸಲ್ಟಿಂಗ್~ ಸಂಸ್ಥೆ,

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.