ಮಂಗಳವಾರ, ಮಾರ್ಚ್ 9, 2021
31 °C
‘ಪ್ರಜಾವಾಣಿ’ ಕ್ವಿಜ್‌ನಲ್ಲಿ ವಿದ್ಯಾರ್ಥಿಗಳ ಕೌಶಲಕ್ಕೆ ಮನಸೋತ ಶಿಕ್ಷಣತಜ್ಞರು

ಪ್ರಜಾವಾಣಿ ಕ್ವಿಜ್‌ : ಬೆಂಗಳೂರಿನ ಪ್ರೆಸಿಡೆನ್ಸಿ ಶಾಲೆ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ಕ್ವಿಜ್‌ : ಬೆಂಗಳೂರಿನ ಪ್ರೆಸಿಡೆನ್ಸಿ ಶಾಲೆ ಚಾಂಪಿಯನ್

ಬೆಂಗಳೂರು: ನಗರದ ಪ್ರೆಸಿಡೆನ್ಸಿ ಸ್ಕೂಲ್‌ ಶನಿವಾರ  ಇಲ್ಲಿ ನಡೆದ ರಾಜ್ಯಮಟ್ಟದ ‘ಪ್ರಜಾವಾಣಿ ಕ್ವಿಜ್‌ 2015–16’ರ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.ಅಲೆನ್‌ ಕೆರಿಯರ್‌ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ನಡೆದ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಕಲಬುರ್ಗಿ, ಹುಬ್ಬಳ್ಳಿ–ಧಾರವಾಡ,  ರಾಯಚೂರು ಹಾಗೂ ದಾವಣಗೆರೆ ವಲಯ ಮಟ್ಟದಿಂದ ಆಯ್ಕೆಯಾದ  ಎಂಟು ತಂಡಗಳು ಭಾಗವಹಿಸಿದ್ದವು. ನಟ ರಮೇಶ ಅರವಿಂದ್‌ ಕ್ವಿಜ್‌ ಮಾಸ್ಟರ್‌  ಆಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, ಅಲೆನ್‌ ಕೆರಿಯರ್‌ ಇನ್‌ಸ್ಟಿಟ್ಯೂಟ್‌ನ ತುಷಾರ್‌ ಪಾರೇಖ್‌, ನೀರಜ್‌ ಕುಮಾರ್‌ ಪೋದ್ದಾರ್‌ ಬಹುಮಾನ ವಿತರಿಸಿದರು.ಬಹುಮಾನ ವಿವರ: ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ₹25 ಸಾವಿರ ನಗದು, ದ್ವಿತೀಯ ತಂಡಕ್ಕೆ ₹10 ಸಾವಿರ ಬೆಲೆಯ ಟ್ಯಾಬ್‌, ತೃತೀಯ ತಂಡಕ್ಕೆ  ₹ 5 ಸಾವಿರ ಬೆಲೆಯ ಮೊಬೈಲ್‌ ಫೋನ್‌, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ₹ 2 ಸಾವಿರ ಮೌಲ್ಯದ ಗಿಫ್ಟ್‌ ವೋಚರ್‌, ಸ್ಮರಣಿಕೆ ಮತ್ತು ಪ್ರಮಾಣಪತ್ರ.ಬೆಂಗಳೂರು ಕೋಟೆಯಿಂದ ಮಧುಬನಿವರೆಗೆ!

ಬೆಂಗಳೂರು: ‘16010100 00384828 ಈ ಸಂಖ್ಯೆಯ ವಿಶೇಷ ಏನು?’ 

‘ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ತೆರೆಯಲಾದ ಡಿಮ್ಯಾಟ್ ಖಾತೆ ಸಂಖ್ಯೆ ಅದು. ಭಕ್ತರಿಂದ ಬರುತ್ತಿರುವ ಷೇರು ಮತ್ತು ಭದ್ರತಾ ಬಾಂಡ್‌ ದೇಣಿಗೆಗಳ ವರ್ಗಾವಣೆಗೆ ಈ ಖಾತೆ ತೆರೆಯಲಾಗಿದೆ’.–ಅಲೆನ್‌ ಕೆರಿಯರ್‌ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ‘ಪ್ರಜಾವಾಣಿ ರಸಪ್ರಶ್ನೆ 2015–16’ ಸ್ಪರ್ಧೆಯಲ್ಲಿ ಕ್ವಿಜ್‌ ಮಾಸ್ಟರ್‌ ಆಗಿದ್ದ ನಟ ರಮೇಶ ಅರವಿಂದ್ ಅವರು ಪ್ರಶ್ನೆ ಕೇಳುವುದೇ ತಡ, ಸ್ಪರ್ಧಿಗಳು ಥಟ್‌ ಅಂತ ಉತ್ತರಿಸಿದರು.‘ಜೂಜುಗಾರ, ಪೇದೆ, ಮನೆಗೆಲಸದ ಆಳು, ವ್ಯಾಪಾರಿ, ವೈದ್ಯ, ನೇಕಾರ, ಕಮ್ಮಾರ ಹಾಗೂ ರೈತ. ಇವುಗಳನ್ನೆಲ್ಲ ಜೋಡಿಸಿದ ಕೊಂಡಿ ಯಾವುದು’ ಎಂಬುದು ಇನ್ನೊಂದು ಪ್ರಶ್ನೆ. ‘ಚೆಸ್‌ ಆಟದ ಕಾಯಿಗಳು ಅವು’ ಎಂಬ ಉತ್ತರ ಬಂದಾಗ ಸಭಾಂಗಣದ ತುಂಬಾ ಚಪ್ಪಾಳೆ ಸದ್ದೇ ಸದ್ದು.‘ಸೀತೆಯ ಮದುವೆಗೆ ಜನಕ ಮಹಾರಾಜ ತನ್ನ ರಾಜ್ಯವನ್ನು ಯಾವ ಕಲೆಯಿಂದ ಸಿಂಗರಿಸಿದ್ದ’ ಎಂಬ ಪ್ರಶ್ನೆ ಬಂದಾಗ, ಸ್ಪರ್ಧಿಗಳು ಗಲಿಬಿಲಿಗೊಂಡು ತಲೆ ಕೆರೆದುಕೊಂಡರು. ರಮೇಶ ಅವರು ಇನ್ನೇನು ಸಭಿಕರ ಮುಂದೆ ಆ ಪ್ರಶ್ನೆ ಇಡಲು ಮುಂದಾಗಿದ್ದರು. ಅಷ್ಟರಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯದ ಪ್ರಜ್ಞಾ ಹೆಬ್ಬಾರ್‌ ‘ಮಧುಬನಿ’ ಎಂಬ ಉತ್ತರ ನೀಡಿದಳು.ಫೈನಲ್‌ಗೆ ಆಯ್ಕೆಯಾಗಿ ವೇದಿಕೆ ಏರಿದ್ದ ಸ್ಪರ್ಧಿಗಳಷ್ಟೇ ಸಭಾಂಗಣದಲ್ಲಿ ತುಂಬಿದ್ದ ಸಾವಿರಾರು ವಿದ್ಯಾರ್ಥಿಗಳಲ್ಲೂ ಪ್ರತಿ ಪ್ರಶ್ನೆಗೆ ಉತ್ತರ ಹೇಳುವ ಉತ್ಸಾಹ ಪುಟಿದೇಳುತ್ತಿತ್ತು. ಸ್ಪರ್ಧಿಗಳೆಲ್ಲ ‘ಪಾಸ್‌’ ಎಂದಾಗ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ಉತ್ತರ ಹೇಳಿ, ಬಹುಮಾನ ಪಡೆದು ಸಂಭ್ರಮಿಸಿದರು.ಕ್ವಿಜ್‌ ಮಾಸ್ಟರ್‌ ಅವರ ತಬ್ಬಿಬ್ಬು ಮಾಡುವ, ಗೊಂದಲಕ್ಕೆ ದೂಡುವ ಕ್ಲಿಷ್ಟಕರ ಪ್ರಶ್ನೆಗಳಿಗೆ ವಿದ್ಯಾರ್ಥಿಗಳಿಂದ ರಾಕೆಟ್‌ ಚಿಮ್ಮಿದಂತೆ ಬರುತ್ತಿದ್ದ ಉತ್ತರಗಳು ಸಭಿಕರಲ್ಲಿ ಕುಳಿತಿದ್ದ ಶಿಕ್ಷಣತಜ್ಞರನ್ನು ತಲೆದೂಗಿಸುವಂತೆ ಮಾಡಿದವು. ಪ್ರಚಲಿತ ವಿದ್ಯಮಾನಗಳ ಕುರಿತು ಆಡಿಯೊ ಹಾಗೂ ವಿಡಿಯೊ ಮೂಲಕ ಪ್ರಶ್ನೆ ಕೇಳಲಾಯಿತು. ಪ್ರಶ್ನೆ ಬಂದಷ್ಟೇ ವೇಗದಲ್ಲಿ ಉತ್ತರ ತೂರಿಬಂದಾಗ ಕರತಾಡನದ ಸದ್ದು ಸಭಾಂಗಣದ ತುಂಬಾ ಪ್ರತಿಧ್ವನಿಸುತ್ತಿತ್ತು. ರಾಜ್ಯದ ಚರಿತ್ರೆ ಮತ್ತು ವಿದ್ಯಮಾನಗಳನ್ನೇ ಕೇಂದ್ರವಾಗಿಟ್ಟುಕೊಂಡು ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿತ್ತು.ರೋಚಕ ಟೈಬ್ರೇಕರ್‌: ಮೊದಲ ಸ್ಥಾನವನ್ನು ಪ್ರೆಸಿಡೆನ್ಸಿ ಶಾಲೆ ಪಡೆದರೆ, ತಲಾ 40 ಪಾಯಿಂಟ್‌ ಸಂಗ್ರಹಿಸಿದ ಮಡಿಕೇರಿಯ ಜನರಲ್‌ ತಿಮ್ಮಯ್ಯ ಶಾಲೆ ಮತ್ತು ಹೊಸನಗರದ ಶ್ರೀ ರಾಮಕೃಷ್ಣ ವಿದ್ಯಾಲಯ ಎರಡನೇ ಸ್ಥಾನದಲ್ಲಿದ್ದವು. ಟೈ ಬ್ರೇಕ್‌ ಮಾಡಲು ರಮೇಶ ಅವರು ಎರಡೂ ತಂಡಗಳಿಗೆ ‘ಕನ್ನಡ ಚಳವಳಿಗಾರ ಮ.ರಾಮಮೂರ್ತಿ ಅವರ ಮಹತ್ವದ ಕೊಡುಗೆ ಏನು’ ಎಂಬ ಪ್ರಶ್ನೆ ಹಾಕಿದರು.ಮಡಿಕೇರಿ ಶಾಲಾ ತಂಡ, ‘ರಾಮಮೂರ್ತಿ ಅವರು ಕನ್ನಡದ ಬಾವುಟ ರೂಪಿಸಿ ಕೊಟ್ಟರು’ ಎಂಬ ಉತ್ತರ ನೀಡುವ ಮೂಲಕ ದ್ವಿತೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಹೊಸನಗರ ತಂಡ ತೃತೀಯ ಸ್ಥಾನಕ್ಕೆ ಸಮಾಧಾನಪಟ್ಟಿತು. ಬೆಂಗಳೂರು ಕೋಟೆ ಚಿತ್ರ ತೋರಿಸಿದರೆ ಬಹುತೇಕ ವಿದ್ಯಾರ್ಥಿಗಳು ಅದನ್ನು ಚಿತ್ರದುರ್ಗದ ಕೋಟೆ ಎಂದು ಗುರುತಿಸಿದರು.ಭಾರತದಲ್ಲಿ  ಅಸಹಿಷ್ಣುತೆ ಇಲ್ಲ: ನಟ ರಮೇಶ್‌ ಅರವಿಂದ್‌

ಬೆಂಗಳೂರು:
‘ಭಾರತದಲ್ಲಿ ಅಸಹಿಷ್ಣುತೆ ಇಲ್ಲವೇ ಇಲ್ಲ’ ಎಂದು ನಟ ರಮೇಶ್‌ ಅರವಿಂದ್‌ ಅವರು ಕಡ್ಡಿಮುರಿದಂತೆ ಹೇಳಿದರು.

‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌’ನ ಅಂತಿಮ ಸ್ಪರ್ಧೆಯ ಕ್ವಿಜ್‌ ಮಾಸ್ಟರ್‌ ಆಗಿದ್ದ ಅವರು, ಸ್ಪರ್ಧೆಯ ಒಂದೊಂದು ಸುತ್ತು ಮುಗಿಯುತ್ತಿದ್ದಂತೆ  ಸಭೆಯಲ್ಲಿದ್ದ ಮಕ್ಕಳಿಂದ ಬಂದ ಪ್ರಶ್ನೆಗಳಿಗೆ ಅತ್ಯಂತ ಚಾಣಾಕ್ಷ ಉತ್ತರ ನೀಡಿದರು.‘ಪ್ರಧಾನಿ ನರೇಂದ್ರ ಮೋದಿಯವರು  ಬೇರೆ ಬೇರೆ ದೇಶಗಳಿಗೆ ಪ್ರವಾಸ ಹೋಗುತ್ತಾರೆ. ಇತ್ತೀಚೆಗೆ ವಿದೇಶದಲ್ಲಿ ಬಸವೇಶ್ವರರ ಪ್ರತಿಮೆ ಅನಾವರಣ ಮಾಡಿದ್ದಾರೆ. ಆದರೆ, ಭಾರತದಲ್ಲಿ ಅಸಹಿಷ್ಣುತೆಯ ಇದೆಯಲ್ವಾ? ನಿಮ್ಮ ಅಭಿಪ್ರಾಯ  ಏನು’ ಎಂಬ ಪುಟ್ಟ ಬಾಲಕ ಮಹಮ್ಮದ್‌ನ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.‘ಭಾರತದಷ್ಟು ಸಹಿಷ್ಣು ರಾಷ್ಟ್ರ ಬೇರೆ ಇಲ್ಲ. ಆದರೆ, ಧರ್ಮದ ಬಗ್ಗೆ ಬೇರೆಯವರು ಹೇಳಿದ್ದು ಮಾತ್ರ ಮನಸಿನಲ್ಲಿ ಕೂತಿರುತ್ತದೆ.  ಗೋಡೆ ಕಟ್ಟುವವರಿಗೆ ಮಾತ್ರ ಇದರಿಂದ ಲಾಭ ಸಿಗುತ್ತದೆ. ಹಾಗಾಗಿ ಅದನ್ನು ಬಿಟ್ಟು ನೀವೇ ತೀರ್ಮಾನಿಸಿಕೊಳ್ಳಿ. ಇಷ್ಟು ಚಿಕ್ಕ ವಯಸಿನಲ್ಲಿ  ದೇಶದೆಲ್ಲೆಡೆ ಅಸಹಿಷ್ಣುತೆ ಇದೆ ಎಂಬುದನ್ನು ಮನಸಿಗೆ ಹಚ್ಚಿಕೊಳ್ಳಬೇಡಿ. ಅಂಥದ್ದೇನೂ ಇಲ್ಲ’ ಎಂದರು.ಕೆಲವು ನಟರು ಅವಕಾಶ ಕಡಿಮೆಯಾದಾಗ ರಾಜಕಾರಣಕ್ಕೆ ಇಳಿಯುತ್ತಾರೆ. ಅದು ಹಣ ಮಾಡುವ ಮಾರ್ಗವೇ? ಎಂಬ ಪ್ರಶ್ನೆಗೆ,  ‘ಕಲಾವಿದರು ರಾಜಕಾರಣಕ್ಕೆ ಹೋಗುವುದು ತಪ್ಪಲ್ಲ. ಆದರೆ, ಉದ್ದೇಶ ಸಮಾಜ ಸೇವೆಯಾಗಿರಬೇಕು. ಹಣ ಮಾಡುವ ಉದ್ದೇಶದಿಂದ ರಾಜಕಾರಣಕ್ಕೆ ಹೋಗಬಾರದು’ ಎಂದರು.‘ನಿಮ್ಮ ವೀಕೆಂಡ್‌ ವಿಥ್‌ ರಮೇಶ್‌ ರಿಯಾಲಿಟಿ ಶೋದಲ್ಲಿ ಕಲಾವಿದರನ್ನು ಮಾತ್ರ ಪರಿಚಯಿಸುತ್ತೀರಿ. ಬೇರೆ ಸಾಧಕರನ್ನು ಯಾಕೆ ತೋರಿಸಲ್ಲಾ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಲ್ಲ ಟಿಆರ್‌ಪಿಗಾಗಿ. ನನಗೂ ಬೇರೆ ಬೇರೆ ಕ್ಷೇತ್ರದವರನ್ನು ಕರೆಯಬೇಕು ಎಂಬ ಹಂಬಲವಿದೆ’ ಎಂದು ಸ್ಪಷ್ಟಪಡಿಸಿದರು.ಕನ್ನಡ ಭಾಷೆಯ ಮೇಲಿನ ದಾಳಿ ತಪ್ಪಿಸುವುದು ಹೇಗೆ ಎಂಬ ಬಾಲಕಿಯೊಬ್ಬಳ ಪ್ರಶ್ನೆಗೆ,  ‘ಕನ್ನಡದ ಮೇಲೆ ಇಂಗ್ಲಿಷ್‌ನ ದಾಳಿ ತಪ್ಪಿಸಲು ಕನ್ನಡದ ಬಗ್ಗೆ ಸಾಮಾನ್ಯ ಆಸಕ್ತಿ ಇದ್ದರೆ ಸಾಕು. ಇತ್ತೀಚೆಗೆ ಕಾಂಬೋಡಿಯಾಕ್ಕೆ ಹೋಗಿದ್ದೆ. ಅಲ್ಲಿ ಎಲ್ಲಿಯೂ ಇಂಗ್ಲಿಷ್‌ ಬಳಕೆ ಇಲ್ಲ. ಆದರೆ ಎಲ್ಲ ವ್ಯವಹಾರಗಳು  ಸುಸೂತ್ರವಾಗಿ ನಡೆಯುತ್ತಿದೆ. ನಾನು ನನ್ನ ಮಕ್ಕಳಿಗೂ ಇದನ್ನೇ ಹೇಳುತ್ತೇನೆ. ಕನ್ನಡ ಪುಸ್ತಕಗಳೇ ಸ್ಪೂರ್ತಿ’ ಎಂದು  ಉತ್ತರಿಸಿದರು.‘ನಾನು ಎಂಜಿನಿಯರಿಂಗ್‌ ಓದಿದೆ. ನಟನಾದೆ. ನನ್ನ ಮಗನಿಗೂ ಎಂಜಿನಿಯರಿಂಗ್‌, ಡಾಕ್ಟರ್‌ ಆಗುವುದು ಇಷ್ಟ ಇಲ್ಲ. ಆತನಿಗೆ ವೀಡಿಯೊ ಗೇಮ್‌ ತಯಾರಿಕೆ ಕೋರ್ಸ್‌ ಮಾಡಬೇಕು ಎಂಬ ಆಸೆ. ಅದಕ್ಕೂ ಕೋರ್ಸ್‌ ಇದೆ. ನೀವು ಅಷ್ಟೆ, ಇಷ್ಟವಿರುವ ಕ್ಷೇತ್ರದ ಲ್ಲಿಯೇ ಮುಂದುವರಿಯಿರಿ ಎಂದರು.***

ಸಂತಸ ನೂರ್ಮಡಿಸಿದೆ

ಕ್ವಿಜ್‌ ಅನುಭವ ತುಂಬಾ ಚೆನ್ನಾಗಿತ್ತು. ಮಾಸ್ಟರ್‌ ಉತ್ತಮವಾಗಿ ಕಾರ್ಯ ಕ್ರಮ ನಿರ್ವಹಿಸಿದರು. ಪ್ರಶ್ನೆಗಳು ಕೂಡ ಅಷ್ಟೊಂದು ಕಠಿಣ ಎನಿಸಲಿಲ್ಲ. ಖುಷಿಯಿಂದಲೇ ಸ್ಪರ್ಧೆ ಎದುರಿಸಿದೆ. ಮುಂದಿನ ಸ್ಪರ್ಧೆಯನ್ನು ತವಕದಿಂದ ಎದುರು ನೋಡುತ್ತಿರುತ್ತೇನೆ. ಪ್ರಥಮ ಬಹುಮಾನ ಗೆಲ್ಲುತ್ತೇವೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದೇ ಮೊದಲ ಬಾರಿ ನಾವು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದದ್ದು ಸಂತಸ ಇಮ್ಮಡಿ ಮಾಡಿದೆ. ಇಂತಹೊಂದು ವೇದಿಕೆ ಒದಗಿಸಿದ್ದಕ್ಕೆ ‘ಪ್ರಜಾವಾಣಿ’ಗೆ ಧನ್ಯವಾದಗಳು.

-ಪ್ರಣವ್‌ ಮತ್ತು ಅಭಿನವ್‌, ಪ್ರೆಸಿಡೆನ್ಸಿ ಪ್ರೌಢಶಾಲೆ , ಬೆಂಗಳೂರು ದಕ್ಷಿಣ

***

ಈ ಬಾರಿ ಯಶಸ್ವಿಯಾದೆವು

ಕಳೆದ ಬಾರಿ ಮೈಸೂರು ವಲಯದಲ್ಲಿ ಸ್ವಲ್ಪದರಲ್ಲಿಯೇ  ಅವಕಾಶ ಕಳೆದು ಕೊಂಡಿದ್ದೆವು. ಈ ಬಾರಿ ಫೈನಲ್‌ಗೆ ಬರಬೇಕೆಂದು ತುಂಬಾ ಕಷ್ಟಪಟ್ಟೆವು. ಇಲ್ಲಿ ಸಂಸ್ಥೆಗಳ ಚಿಹ್ನೆಗಳ ಬಗ್ಗೆ ತುಂಬಾ ತಿಳುವಳಿಕೆ ಬಂತು. ಅಮ್ಮ ಮೊದಲ ಮೂರು ಸ್ಥಾನದಲ್ಲೇ ಬರಬೇಕು ಎಂದು ಹೇಳಿ ಕಳುಹಿಸಿದ್ದರು. ಎರಡನೇ ಸ್ಥಾನ ಗಳಿಸಿದ್ದು ತುಂಬಾ ಖುಷಿಯಾಗಿದೆ. ಕಳೆದ ಬಾರಿ ಮಾಡಿದ ಯಡವಟ್ಟು ಈ ಬಾರಿ ಉಪಯೋಗಕ್ಕೆ ಬಂತು. ಹೆಚ್ಚೆಚ್ಚು ತಿಳಿದುಕೊಳ್ಳಬೇಕು ಎನ್ನುವುದು ಅರಿವಿಗೆ ಬಂತು.

-ಅಕ್ಷಯ್‌ ಭಾರದ್ವಾಜ್‌ ಮತ್ತು  ಎಸ್‌.ಎಸ್. ಗೌತಮ್, ಜನರಲ್ ತಿಮ್ಮಯ್ಯ ಪ್ರೌಢಶಾಲೆ ಮಡಿಕೇರಿ***


ಜ್ಞಾನ ವೃದ್ಧಿಯಾಯಿತು

ಕಳೆದ ಬಾರಿ ಲಿಖಿತ ಪರೀಕ್ಷೆಯಲ್ಲೇ ಅನುತ್ತೀರ್ಣರಾಗಿದ್ದೆವು.  ಮೊದಲ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾದದ್ದು ಖುಷಿಯಾಗಿದೆ. ಈ ಸ್ಪರ್ಧೆಯಿಂದ ನನ್ನ ಜ್ಞಾನವಂತೂ ವೃದ್ಧಿಯಾಗಿದೆ. ನಮಗೆ ಅನೇಕ ಅಂತರಾಷ್ಟ್ರೀಯ ವಿದ್ಯಮಾನಗಳೇ ಗೊತ್ತಿಲ್ಲ ಎನ್ನುವುದು ತಿಳಿಯಿತು. 3ನೇ ಸ್ಥಾನಕ್ಕೆ ‘ಟೈ ಬ್ರೇಕರ್’ ಆದಾಗ ನನಗೆ ಉತ್ತರ ಗೊತ್ತಿತ್ತು. ಹೇಳಿದ್ದರೆ ಎರಡನೇ ಸ್ಥಾನ ಸಿಗುತ್ತಿತ್ತು. ಭಯದಿಂದ ಹೇಳಲಿಲ್ಲ. ನಟ ರಮೇಶ್ ಅವರನ್ನು ಭೇಟಿಯಾ ದದ್ದಂತೂ ಸಖತ್‌ ಖುಷಿಯಾಯಿತು.

-ಕೆ.ಪಿ ಹೇಮಂತ್‌ ಮತ್ತು ಸಚಿನ್‌ ಕುಮಾರ್, ರಾಮಕೃಷ್ಣ ವಿದ್ಯಾಲಯ ಹೊಸನಗರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.