ಆಗಸ್ಟ್ ತಿಂಗಳ 2008ನೇ ಇಸವಿ. ‘ಒಲವೇ ಮಂದಾರ’ ಚಿತ್ರಕ್ಕಾಗಿ ಲೊಕೇಶನ್ ಹುಡುಕುತ್ತಾ ಸ್ನೇಹಿತರ ತಂಡದೊಂದಿಗೆ ಪಶ್ಚಿಮ ಬಂಗಾಳದವರೆಗೆ ಪ್ರಯಾಣ ಬೆಳೆಸಿದ್ದೆ. ಕೋಲ್ಕೊತ್ತಾದಿಂದ 170 ಕಿ.ಮೀ. ದೂರದಲ್ಲಿರುವ ಶಾಂತಿಪುರ್ ಎಂಬ ಅರೆಪಟ್ಟಣದಲ್ಲಿ ನನ್ನ ನಾಟಕದ ಗೆಳೆಯ ಬಿಸ್ವಜಿತ್ ಬಿಸ್ವಾಸ್ ಇದ್ದರು. ‘ರಂಗಪೀಠ್’ ಎನ್ನುವ ನಾಟಕತಂಡ ಕಟ್ಟಿಕೊಂಡಿದ್ದ ಬಿಸ್ವಾಸ್, ಅನೇಕ ಭಾಷೆಯ ನಾಟಕಗಳನ್ನು ಬೆಂಗಾಲಿಗೆ ಅನುವಾದಿಸಿ ಶಾಂತಿಪುರ್ನಲ್ಲಿ ಪ್ರದರ್ಶಿಸುತ್ತಿದ್ದರು. 2005ರ ರಂಗಪೀಠ್ ನಾಟಕೋತ್ಸವದಲ್ಲಿ ಕನ್ನಡದ ‘ಭಾಗೀರಥಿ’ ಕಥೆಯನ್ನು ಅದೇ ತಂಡಕ್ಕೆ ನಾನು ನಿರ್ದೇಶಿಸಿದ್ದೆ. ಗಂಗಾನದಿಯ ಬಗೆಗೆಗಿದ್ದ ಬೆಂಗಾಲಿ ಜನಪದ ಗೀತೆಗಳನ್ನು ಬಳಸಿಕೊಂಡು ನಾಟಕ ಮಾಡಿದ್ದೆವು. 2007ರಲ್ಲಿ ಮೈಸೂರಿನ ರಂಗಾಯಣದಲ್ಲಿ ನಡೆದ ‘ಬಹುರೂಪಿ ಉತ್ಸವ’ದಲ್ಲಿ ಬಿಸ್ವಾಸ್ರ ‘ಬಾಯೇನ್’ ಎಂಬ ಬೆಂಗಾಲಿ ನಾಟಕ ಪ್ರದರ್ಶನವಾಗಿತ್ತು. ‘ಒಲವೇ ಮಂದಾರ’ ಚಿತ್ರಕ್ಕಾಗಿ ನಾನು ಸಿದ್ಧಪಡಿಸಿದ್ದ ಕಥೆ ಕೇಳಿದ ಬಿಸ್ವಾಸ್, ಪ್ರೀತಿಯ ಉನ್ಮಾದದಲ್ಲಿನ ಅನೇಕ ಸಾಧ್ಯತೆಗಳ ಬಗ್ಗೆ ಚರ್ಚಿಸತೊಡಗಿದರು. ಆಗ ಪ್ರಸ್ತಾಪವಾದದ್ದು ದಶರಥ ಮಾಂಜಿಯ ಕಥನ.

ಗೆಹಲೋರ್ ಘಾಟ್ ಎಂಬ ಪ್ರದೇಶದಲ್ಲಿ ದಶರಥ ಮಾಂಜಿ ಎಂಬ ವ್ಯಕ್ತಿ ಬೆಟ್ಟವನ್ನೇ ಕಡಿದು ಎರಡು ಊರುಗಳ ಮಧ್ಯೆ ದಾರಿ ಮಾಡಿದ್ದಾನೆಂಬ ಸುದ್ದಿಯೊಂದನ್ನು ನಾನು ಯಾವುದೋ ಪುಸ್ತಕವೊಂದರಲ್ಲಿ 1999ರಲ್ಲೇ ಓದಿದ್ದೆ. ಆದರೆ, ಹೀಗೆ ದಾರಿ ಮಾಡಲು ಕಾರಣವೇನು ಎನ್ನುವುದಾಗಲೀ, ಮಾಂಜಿಯ ಹಿನ್ನೆಲೆಯಾಗಲೀ ನನಗೆ ತಿಳಿದಿರಲಿಲ್ಲ. ಬಿಸ್ವಾಸ್ ಅವರ ಮೂಲಕ ಮತ್ತೆ ಮಾಂಜಿ ನೆನಪಾಗಿದ್ದ. ಗೆಹಲೋರ್ ಘಾಟ್ಗೆ ಭೇಟಿ ನೀಡಬೇಕೆಂದು ನಾನಾಗಲೇ ನಿರ್ಧರಿಸಿಬಿಟ್ಟಿದ್ದೆ. ನನ್ನೊಂದಿಗಿದ್ದ ರವಿ, ಗಿರಿ, ಮೌನೇಶ್ರನ್ನು ಈ ಅನಿರೀಕ್ಷಿತ ಪ್ರಯಾಣಕ್ಕೆ ಮಾನಸಿಕವಾಗಿ ಸಿದ್ಧಪಡಿಸಿದೆ. ನಮ್ಮನ್ನು ಬೆಂಗಳೂರಿನಿಂದ ಕ್ವಾಲೀಸ್ ಗಾಡಿಯಲ್ಲಿ ಕರೆತಂದಿದ್ದ ಚಾಲಕ ಸತ್ಯಾ ಕೂಡ ಹುಮ್ಮಸ್ಸಿನಿಂದ ಮುಂದಾದ. ಅಸ್ಸಾಂ ಭೇಟಿ ನಂತರ ಈ ಹೊಸ ಕಾರ್ಯಕ್ರಮ ಯೋಜಿಸಿಕೊಂಡೆವು.

ಶಾಂತಿಪುರ್ನಿಂದ 135 ಕಿ.ಮೀ. ದೂರದಲ್ಲಿ ಕೃಷ್ಣಗಂಜ್ ಎಂಬ ಪಟ್ಟಣ ಎದುರಾಯ್ತು. ಈ ಪಟ್ಟಣದ ಅರ್ಧ ಭಾಗ ಪಶ್ಚಿಮ ಬಂಗಾಲದ್ದಾದರೆ ಇನ್ನರ್ಧ ಬಿಹಾರ್. ಹೇಗೋ ಬಿಹಾರ್ ತಲುಪಿ, ಅಲ್ಲಿಂದ ನಮ್ಮ ಪಯಣ ಗಯಾ ಪಟ್ಟಣದೆಡೆಗೆ ಸಾಗಿತು. ಬಿಹಾರದ ಹೆದ್ದಾರಿಯಲ್ಲಿ ವಿಚಿತ್ರ ದೃಶ್ಯಗಳು ನಮಗೆದುರಾದವು. ಹೈವೇ ರಸ್ತೆಯನ್ನೇ ಮುಚ್ಚುವಂತೆ ಒಂದೆಡೆ ಸಂತೆ ನಡೆಯುತ್ತಿತ್ತು. ಐದು ಅಡಿಯ ಹೈವೇ ವಿಭಜಕ ಹುಲ್ಲುಹಾಸಿನ ಮೇಲೇ ಶೇವಿಂಗ್ ಶಾಪ್ ಇಟ್ಟುಕೊಂಡಿದ್ದನೊಬ್ಬ. ಊರು, ಮೈಲಿಗಳ ವಿವರ ನೀಡುವ ಬೋರ್ಡುಗಳನ್ನೇ ಬಾಗಿಸಿಕೊಂಡು ಸೂರು ಮಾಡಿಕೊಂಡು ತರಕಾರಿ ಅಂಗಡಿ ಮಾಡಿಕೊಂಡಿದ್ದಳೊಬ್ಬ ಹೆಂಗಸು. ಇದೆಲ್ಲದರ ಮಧ್ಯೆ ನಾವು ಸಾಗಿ ಬಂದ ನೂರಾರು ಹಳ್ಳಿ ಮತ್ತು ಅರೆಪಟ್ಟಣ ಪ್ರದೇಶದಲ್ಲಿ ಅಚ್ಚುಕಟ್ಟಾದ ಯಾವುದೇ ಲಾಡ್ಜ್ ಸಿಗದಿದ್ದುದು ಕಂಡು ನಮಗೆ ಆತಂಕ ಶುರುವಾಯ್ತು. ಕತ್ತಲಾಗುವಷ್ಟರಲ್ಲಿ ‘ಬೇಗುಸರಾಯ್’ ಎಂಬ ಪಟ್ಟಣ ಸೇರಿದೆವು. ಅಲ್ಲಿ ತಂಗಲು ಸುಮಾರಾದ ಲಾಡ್ಜ್ ದೊರೆಯಿತು.

ಮಧ್ಯಾಹ್ನ ಒಂದೂ ಮುಕ್ಕಾಲರ ಸುಮಾರಿಗೆ ವಾಸಿರ್ಗಂಜ್ ತಲುಪಿದೆವು. ದಾರಿಯಲ್ಲಿ ಸೇತುವೆಯೊಂದು ಕುಸಿದಿದ್ದ ಕಾರಣ ಸುತ್ತುಬಳಸಿದ ದಾರಿಯಲ್ಲಿ ಅರಾಯ್ಮೋಡ್ ಮತ್ತು ತಪೋಬನ್ ಎಂಬ ಪುಟ್ಟ ಗ್ರಾಮದ ಮೂಲಕ ಗೆಹಲೋರ್ ಘಾಟ್ ತಲುಪಬೇಕಾಯ್ತು.

ಬೃಹತ್ ಬೆಟ್ಟದ ತಪ್ಪಲಲ್ಲಿರುವ ಗೆಹಲೋರ್ ಘಾಟ್ ಸುಮಾರು 350 ಕುಟುಂಬಗಳು ಬದುಕುತ್ತಿರುವ ಪುಟ್ಟ ಹಳ್ಳಿ. ಇಲ್ಲಿ ಪ್ರಧಾನವಾಗಿ ಬದುಕುತ್ತಿರುವವರು ಮುಷರ್ ಜನಾಂಗಕ್ಕೆ ಸೇರಿದವರು. ಇಲ್ಲಿನ ಪ್ರಮುಖ ಬೆಳೆ ಗೋಧಿ. ಇಲಿಗಳನ್ನು ಹಿಡಿದು ತಿನ್ನುವ ಕಸುಬಿನವರಾದ್ದರಿಂದ ಮುಷರ್ ಎಂಬ ಹೆಸರು ಬಂತಂತೆ. ಈವರೆಗೆ ಅಲ್ಲಿ ವಿದ್ಯುತ್ ಹಾಗೂ ನೀರಿನ ಸೌಕರ್ಯವನ್ನು ಸರ್ಕಾರ ಕಲ್ಪಿಸಿಲ್ಲ. ನಕ್ಸಲ್ ಚಟುವಟಿಕೆಗೂ ಈ ಪ್ರದೇಶ ನೆಲೆಯಾಗಿದೆಯಂತೆ.

ಬೃಹತ್ ಬೆಟ್ಟವನ್ನು ಕಡಿದು ಎರಡು ತುಂಡಾಗಿಸಿದ್ದ ದಶರಥ್ ಮಾಂಜಿಯ ಸಾಧನೆ ನಮ್ಮ ಕಣ್ಣೆದುರೇ ಇತ್ತು. ನಮಗೆಲ್ಲಾ ರೋಮಾಂಚನವಾಯ್ತು. ಬೆಟ್ಟವೇ ಕಥೆ ಪಿಸುಗುಡತೊಡಗಿತು.

ಅದು 1959ನೇ ಇಸವಿ. ಮುಷರ್ ಸಮುದಾಯದ ದಶರಥ್ ಮಾಂಜಿ ಮತ್ತು ಫಲ್ಗುಣಿದೇವಿ ದಂಪತಿಗಳು ಇದೇ ಊರಲ್ಲಿ ಬದುಕುತ್ತಿದ್ದರು. ‘ನಾನು ಬಡವಿ ಆತ ಬಡವ/ ಒಲವೇ ನಮ್ಮ ಬದುಕು’ ಎಂದು ಬಾಳುತ್ತಿದ್ದ ಜೋಡಿಯದು. ಕಡಿದಾದ ಬೆಟ್ಟವನ್ನು ಹತ್ತಿಳಿದು ವಾಸಿರ್ಗಂಜ್ ತಲುಪಿ, ಅಲ್ಲಿನ ಜಮೀನ್ದಾರರ ಹೊಲಗಳಲ್ಲಿ ದುಡಿಯುವುದು ಅವರ ಬದುಕಿನ ಮಾರ್ಗವಾಗಿತ್ತು. ಕೂಲಿ ಕೆಲಸಕ್ಕಿಂತಲೂ ಬೆಟ್ಟ ಹತ್ತಿಳಿಯುವುದೇ ಅವರಿಗೆ ತೊಡಕಾಗಿತ್ತು. ಆದರೇನು ಮಾಡುವುದು? ಬೆಟ್ಟ ಹತ್ತಿಳಿಯದೆ, ಕೂಲಿ ಮಾಡದೆ ವಿಧಿಯಿಲ್ಲ. ಈ ದಂಪತಿಯಷ್ಟೇ ಅಲ್ಲ, ಗೆಹಲೋರ್ಘಾಟ್ನ ಬಹುತೇಕ ಕುಟುಂಬಗಳ ಬದುಕಿನ ಪಥ ಸಾಗುತ್ತಿದ್ದುದೇ ಹೀಗೆ.

ಒಂದುದಿನ, ಗಂಡನ ಬಾಯಾರಿಕೆ ತಣಿಸಲು ನೀರು ತರುತ್ತಿದ್ದ ಫಲ್ಗುಣಿದೇವಿ ಬೆಟ್ಟದಿಂದ ಜಾರಿಬಿದ್ದು ಸಾವಿಗೀಡಾದಳು. ಸಂಗಾತಿಯನ್ನು ಕಳೆದುಕೊಂಡ ಮಾಂಜಿ ಬದುಕಿನೆಡೆಗೆ ಆಸಕ್ತಿಯನ್ನೇ ಕಳಕೊಂಡ. ಇದ್ದೊಬ್ಬ ಮಗನನ್ನು ಅಣ್ಣ ಬಲರಾಂದಾ ನೋಡಿಕೊಳ್ಳಬೇಕಿತ್ತು. ಅತೀವ ಆಘಾತಕ್ಕೊಳಗಾಗಿದ್ದ ಮಾಂಜಿ ಇದ್ದಕ್ಕಿದ್ದಂತೆ ಆವೇಶಕ್ಕೊಳಗಾದ. ಬೆಟ್ಟದ ಮೇಲೆ ಕ್ರುದ್ಧನಾದ. ತನ್ನ ಹೆಂಡತಿಯನ್ನು ಬಲಿ ತೆಗೆದುಕೊಂಡ ಈ ಬೆಟ್ಟ ಇನ್ನಾರಿಗೂ ತೊಂದರೆ ಕೊಡಬಾರದೆಂಬ ಆವೇಶದಲ್ಲಿ ತನ್ನ ಬಳಿಯಿದ್ದ ಕುರಿಯೊಂದನ್ನು ಮಾರಿ, ಉಳಿ ಸುತ್ತಿಗೆ ಖರೀದಿಸಿದ. ಬೆಟ್ಟವನ್ನು ಹೊಡೆಯಲು ಪ್ರಾರಂಭಿಸಿದ. ಸತತ ಇಪ್ಪತ್ತೆರಡು ವರ್ಷಗಳ ಕಾಲ (1966-1982) ಹಗಲಿರುಳು ಏಕಾಂಗಿಯಾಗಿ ಬೆಟ್ಟವನ್ನು ಕಡಿದ. ಕೊನೆಗೆ ದಶರಥ ಮಾಂಜಿಯ ತಪಸ್ಸಿನಂಥ ಪರಿಶ್ರಮದಿಂದ ವಾಸಿರ್ ಗಂಜ್ ಮತ್ತು ಗೆಹಲೋರ್ ಘಾಟ್ ನಡುವೆ ದಾರಿ ನಿರ್ಮಾಣವಾಯಿತು. ಮೊದಮೊದಲಿಗೆ ಮಾಂಜಿಯ ಕೆಲಸವನ್ನು ಊರಿನ ಜನ ಹುಚ್ಚು ಎಂದಿದ್ದರು, ಆತನನ್ನು ಕನಿಕರದಿಂದ ನೋಡಿದ್ದರು. ಮಾಂಜಿಯ ಬದ್ಧತೆ ಸ್ಪಷ್ಟವಾದ ಮೇಲೆ ಹೊಸ ಉಳಿ-ಸುತ್ತಿಗೆ ತಂದುಕೊಡುವುದರ ಮೂಲಕ ಅವನ ಕಾರ್ಯಕ್ಕೆ ನೆರವಾದರು.

ಮಾಂಜಿ ತನ್ನ ಪ್ರೇಮದ ಬದ್ಧತೆಗಾಗಿ ವಿಶ್ವವೇ ತಿರುಗಿ ನೋಡುವಂಥ ಕೆಲಸ ಮಾಡಿದ್ದಾನೆ. ಒರಟು ಬೆಟ್ಟದ ಮೇಲೆ ಪ್ರೇಮಕಾವ್ಯ ಕೆತ್ತಿದ್ದಾನೆ. ಎಂದೆಂದಿಗೂ ಮರೆಯಲಾಗದಂಥ ಪ್ರೇಮದ ಚಿಹ್ನೆಯನ್ನು ಬಿಹಾರ್ ರಾಜ್ಯದಲ್ಲಿ ಉಳಿಸಿಹೋಗಿದ್ದಾನೆ. ಬೆಟ್ಟವನ್ನು ಸೀಳಿ ರೂಪಿಸಿರುವ ದಾರಿಯಲ್ಲಿ ಓಡಾಡುತ್ತಿದ್ದರೆ, ಮಾಂಜಿ ಮತ್ತು ಫಲ್ಗುಣಿ ದೇವಿ ದಂಪತಿಯ ಉಸಿರು ಅಲ್ಲಿ ಪಿಸುಗುಡುವಂತೆ ಭಾಸವಾಗುತ್ತದೆ.

ಮಾಂಜಿಯ ಪ್ರೇಮ ರೂಪಕ ನೋಡಿದ ತಕ್ಷಣ ನನಗೆ ನೆನಪಾದದ್ದು ತಾಜಮಹಲು. ಕಾಕತಾಳೀಯವೆಂದರೆ ತಾಜ್ಮಹಲ್ ನಿರ್ಮಾಣಕ್ಕೂ ಇಪ್ಪತ್ತೆರಡು ವರ್ಷ ಹಿಡಿಯಿತಂತೆ. ಇಪ್ಪತ್ತೆರಡು ಸಾವಿರ ಕೆಲಸದಾಳುಗಳನ್ನು ಬಳಸಿಕೊಂಡು, ಅಪಾರವಾದ ಹಣದ ಸಹಾಯದಿಂದ ಷಹಜಹಾನ್ ದೊರೆ ತಾಜಮಹಲನ್ನು ಕಟ್ಟಿದ. ಇಂಥದೊಂದು ಸ್ಮಾರಕವನ್ನು ಅಭಿರುಚಿ ಮತ್ತು ಹಣ ಇರುವ ಯಾರು ಬೇಕಾದರೂ ಕಟ್ಟಬಹುದೇನೋ? ಆದರೆ, ಬೆಟ್ಟವನ್ನು ಏಕಾಂಗಿಯಾಗಿ ಕಡಿಯುವುದು? ಅದು ಮಾಂಜಿಯಂಥ ಅಮರ ಪ್ರೇಮಿಗಲ್ಲದೆ ಇನ್ನಾರಿಗೆ ಸಾಧ್ಯ?

ಪ್ರೀತಿಸುತ್ತಿದ್ದವಳು ಕೈಕೊಟ್ಟಳು ಅಥವಾ ಸತ್ತುಹೋದಳು ಎನ್ನುವ ಕಾರಣಕ್ಕೆ ಮದ್ಯಪಾನ ಮಾಡುವ, ಗಡ್ಡಬಿಟ್ಟು ಅಸಭ್ಯವಾಗಿ ವರ್ತಿಸುವ ಭಗ್ನಪ್ರೇಮಿಗಳಿದ್ದಾರೆ. ಅವರು ತಮ್ಮ ನೋವಿನ ಕಿಡಿಯನ್ನು ಇತರರ ಮೇಲೂ ಎರಚಿ ಘಾಸಿಗೊಳಿಸುವ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಿದ್ದೇವೆ. ನಿಜಜೀವನದಲ್ಲೂ ಇಂಥ ವ್ಯಕ್ತಿಗಳಿದ್ದಾರೆ. ಆದರೆ, ಮಾಂಜಿಯ ವೇದನೆ ಸಮುದಾಯದ ಒಳಿತಿಗಾಗಿ ಬಳಕೆಯಾದುದು ವಿಶೇಷ.

ಆಗಸ್ಟ್ 18, 2007ನೇ ಇಸವಿಯಲ್ಲಿ ದಶರಥ್ ಮಾಂಜಿ ತನ್ನ ಎಂಬತ್ತನೇ ವಯಸ್ಸಿನಲ್ಲಿ ಸಾವಿಗೀಡಾದ. ಆತನ ಸಮಾಧಿ ಬೆಟ್ಟದ ತಪ್ಪಲಲ್ಲೇ ಇದೆ. ಆತನ ಬದುಕಿನ ಬಗ್ಗೆ ಗೆಹಲೋರ್ ಘಾಟ್ ಪ್ರದೇಶದ ಜನರಿಗೆ ತುಂಬು ಅಭಿಮಾನ. ಆತನನ್ನು ‘ಬೆಟ್ಟದ ಮನುಷ್ಯ’ ಎಂದು ಬಣ್ಣಿಸುತ್ತಾರೆ.

ಮಾಂಜಿಯ ಸಾಧನೆಯಿಂದ ಗೆಹಲೋರ್ ಘಾಟ್ ಮತ್ತು ವಾಸಿರ್ಗಂಜ್ ನಡುವಿನ ದೂರ ಕೇವಲ 1 ಕಿ.ಮೀ.ಗೆ ಇಳಿದಿದೆ. 360 ಅಡಿ ಉದ್ದ, 25 ಅಡಿ ಎತ್ತರ, 30 ಅಡಿ ಅಗಲ ಇರುವ ಈ ದಾರಿ ಪವಿತ್ರ ಪ್ರೇಮಕ್ಕೆ ಹೆದ್ದಾರಿಯಂತಿದೆ. ಬೆಟ್ಟ ಹತ್ತಿಳಿಯುವ ಪ್ರಯಾಸ ಜನರಿಗೆ ತಪ್ಪಿದೆ. ಇಂದು ಆ ಪ್ರದೇಶದಲ್ಲಿ ‘ಸಾಧುಬಾಬ’ ಎಂಬ ಹೆಸರಿನಿಂದ ಮಾಂಜಿ ಖ್ಯಾತನಾಗಿದ್ದಾನೆ. ಅವನ ಮಗ, ಸೊಸೆ, ಮೊಮ್ಮಗಳು ಲಕ್ಷ್ಮಿ ಈಗಲೂ ಮಾಂಜಿ ಹುಟ್ಟಿಬೆಳೆದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇಡೀ ಊರಿಗೆ ಮೊಟ್ಟಮೊದಲ ಬಾರಿಗೆ ಹತ್ತನೇ ತರಗತಿಯವರೆಗೆ ಶಿಕ್ಷಣ ಪಡೆದ ಖ್ಯಾತಿ ಮಾಂಜಿಯ ಮೊಮ್ಮಗಳು ಲಕ್ಷ್ಮಿಗೆ ಸೇರುತ್ತದೆ.

ಗೆಹಲೋರ್ಘಾಟ್ನಿಂದ ನಮ್ಮ ಪಯಣ ಗಯಾದತ್ತ, ವಾರಣಾಸಿಯತ್ತ ಸಾಗಿತು. ‘ಒಲವೇ ಮಂದಾರ’ ಸಿನಿಮಾ ಕಾರಣದಿಂದ ನಾವು ಇಡೀ ಭಾರತ ದರ್ಶನ ಮಾಡಿದೆವು. ಅನೇಕ ಸಂಸ್ಕೃತಿ, ಜನಜೀವನ, ಭಾಷೆಗಳ ಪರಿಚಯವಾಯ್ತು. ಈ ಸುತ್ತಾಟದಲ್ಲಿ ಗೆಹಲೋರ್ ಘಾಟ್ ಭೇಟಿ ಕೂಡ ಒಂದು ಪ್ರದೇಶವಾಗಿತ್ತು. ಆದರೆ, ಈ ಭೇಟಿ ನನ್ನ ಮನಸ್ಸಿನಲ್ಲಿ ಎಂದೂ ಮರೆಯದ ನೆನಪಾಗಿ ಅಚ್ಚೊತ್ತಿದೆ. ದಶರಥ್ ಮಾಂಜಿ ಹಾಗೂ ಫಲ್ಗುಣಿ ದೇವಿ ಅನನ್ಯ ಪ್ರೇಮ ರೂಪಕಗಳಂತೆ ನನ್ನೊಳಗೆ ಉಳಿದಿದ್ದಾರೆ. ನನಗೀಗ ಪ್ರೇಮದ ರೂಪಕ ಎಂದಾಗ ತಾಜಮಹಲಿಗಿಂತಲೂ ಮೊದಲು ‘ಮಾಂಜಿಯ ಹೆದ್ದಾರಿ’ ಮೊದಲು ನೆನಪಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.