ಸೋಮವಾರ, ಏಪ್ರಿಲ್ 19, 2021
23 °C

ಬೆಡಗಿಯರ ನಡುವೆ ಬೌಲಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗು ಸೂಸುತ್ತಾ ನಿಂತಿದ್ದ ಹೆಂಗಳೆಯರು, ಮಂದ ಬೆಳಕು, ಕಿವಿಗಡಚುವ ಸಂಗೀತ, ಮಾಲ್‌ನೊಳಗೊಂದು ಮಾಲ್ ಇದ್ದ ಹಾಗಿತ್ತು ಅಲ್ಲಿಯ ವಾತಾವರಣ. ಕಾರ್ಯಕ್ರಮಕ್ಕೂ ಮೊದಲೇ ಬಾಲಿವುಡ್ ಬೆಡಗಿ ಟ್ರಾಲಿಯಲ್ಲಿ ಬಾಲ್ ಹಾಕಿಕೊಂಡು ಅದನ್ನು ವೇದಿಕೆಯ ಮೇಲೆ ತರಲು ಶತಪ್ರಯತ್ನ ಮಾಡುತ್ತಿದ್ದರು. ಕೊನೆಗೂ ಸುಮಾರು ಒಂದು ಗಂಟೆ ಕಾಯಿಸಿ ನಗುತ್ತಾ ಬಂದ ಅವರೇ ನಟಿ ನರ್ಗಿಸ್ ಫಕ್ರಿ. ಎಲ್ಲವನ್ನೂ ಬೆರಗು ಕಂಗಳಿಂದ ನೋಡುತ್ತಿದ್ದ ಅವರು ಬಾಲ್ ಹಿಡಿದು ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಲು ಶುರು ಮಾಡಿದರು.

ಈ ದೃಶ್ಯ ಕಂಡು ಬಂದಿದ್ದು ಯಶವಂತಪುರ ಸಮೀಪದ ಒರಾಯನ್ ಮಾಲ್‌ನಲ್ಲಿ `ಪಿವಿಆರ್ ಬ್ಲೂವೊ~ ಉದ್ಘಾಟನೆ ಸಮಯದಲ್ಲಿ.

“ಬೌಲಿಂಗ್ ಕ್ರೀಡೆ ಬಗ್ಗೆ ನಾನು ಒಲವು ಬೆಳೆಸಿಕೊಂಡ ಕೂಡಲೇ `ಬ್ಲೂವೊ~ ಜತೆಗೆ ಕೆಲಸ ಮಾಡಲು ಮನಸ್ಸು ಮಾಡಿದೆ. ನಾನು ತುಂಬಾ ಲಕ್ಕಿ, ಇವರು ನನ್ನ ಆಯ್ಕೆ ಮಾಡಿದ್ದಾರೆ.

`ಬ್ಲೂವೊ~ ಅಂದರೆ ತಾರುಣ್ಯ, ಉತ್ಸಾಹ, ಫ್ಯಾಷನ್. ಯುವಕರನ್ನು ಅದು ಆಕರ್ಷಣೆಯ ಕೇಂದ್ರವಾಗಿ ತನ್ನತ್ತ ಸೆಳೆಯಲಿದೆ” ಎಂದು ನರ್ಗಿಸ್ ನಗುನಗುತ್ತಾ ಹೇಳಿದರು. ಬೌಲಿಂಗ್ ಮಾಡುವಷ್ಟು ಶಕ್ತಿ ನಿಮ್ಮಲ್ಲಿದೆಯಾ ಎಂಬ ಪ್ರಶ್ನೆ ತೂರಿ ಬಂದಾಗ, `ಇದೆ. ನನ್ನ ಕೈಗಳು ತುಂಬಾ ಸ್ಟ್ರಾಂಗ್ ನೋಡಿ~ ಎಂದು ಕೈಮಡಚಿ ತಮ್ಮ ಸಣ್ಣ ಭುಜವನ್ನು ತೋರಿಸಿದರು. `ಬೆಂಗಳೂರು ನನಗೆ ತುಂಬಾ ಇಷ್ಟದ ಸ್ಥಳ. ಅಕ್ಟೋಬರ್‌ನಲ್ಲಿ ನನ್ನ ಹುಟ್ಟುಹಬ್ಬವಿದೆ, ಇಲ್ಲಿಯೇ ಆಚರಿಸಿಕೊಳ್ಳುತ್ತೇನೆ~ ಎಂದು ಕಣ್ಣು ಮಿಟುಕಿಸಿದರು.

ಮುಂದಿನ ಸಿನಿಮಾದ ಬಗ್ಗೆ ಮಾತು ಬಂದಾಗ, `ಅದು ಸೀಕ್ರೆಟ್~ ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡರು. ಮತ್ತೆ ಒತ್ತಾಯಿಸಿದಾಗ `ಉತ್ತಮವಾದುದು ಬರಬೇಕಾದರೆ ಕಾಯುಬೇಕು~ ಎಂದು ಹೇಳಿ ಸುಮ್ಮನಾದರು.

`ನಗರದಲ್ಲಿ ವೃತ್ತಿಪರ ಸ್ವರೂಪದ ಬೌಲಿಂಗ್ ಆಟಕ್ಕೆ ಅವಕಾಶ ನೀಡಿದ ಮೊದಲ ಮಾಲ್ ಇದು. ಎಲ್ಲರಿಗದಿದು ಸೂಕ್ತ ಮನರಂಜನೆ ತಾಣವಾಗುವ ವಿಶ್ವಾಸವಿದೆ. ಈ ಕೇಂದ್ರಕ್ಕೆ ಈಗಾಗಲೇ ಯುವ ಸಮೂಹದಿಂದ ಉತ್ಸಾಹದ ಪ್ರತಿಕ್ರಿಯೆ ಸಿಕ್ಕಿದೆ~ ಎಂದು ಪಿವಿಆರ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಬಿಜ್ಲಿ ಹೇಳಿದರು.

ದೇಶದ ಪ್ರಮುಖ ಬೌಲಿಂಗ್ ಕೇಂದ್ರವಾಗಿರುವ `ಪಿವಿಆರ್ ಬ್ಲೂವೊ~ ಸಿಲಿಕಾನ್ ಸಿಟಿಯಲ್ಲಿ ಆರಂಭಿಸಿದ ಅತಿ ದೊಡ್ಡ ಬೋಲಿಂಗ್ ಕೇಂದ್ರ ಇದು. ಒಟ್ಟು 40 ಸಾವಿರ ಚದರ ಅಡಿಗಳಷ್ಟು ವಿಶಾಲ ವಿಸ್ತೀರ್ಣದ ಈ ಬ್ಲೂವೊ ಕೇಂದ್ರ, ಅತ್ಯಾಧುನಿಕ ಮತ್ತು ಆಕರ್ಷಕ ಪರಿಸರದಲ್ಲಿದೆ. ಒಳಾಂಗಣ ವಿನ್ಯಾಸ ನೋಡುಗರನ್ನು ಆಕರ್ಷಿಸುವಂತಿದೆ.

ಸಂಜೆಯ ಮೋಜಿನ ಸಮಯ ಕಳೆಯುವವರಿಗಾಗಿಯೇ ಇಲ್ಲಿ ಪ್ರತ್ಯೇಕ ಲಾಂಜ್ ಇದೆ. ಖಾಸಗಿತನಕ್ಕೆ ಒಂದಿಷ್ಟೂ ಧಕ್ಕೆ ಒದಗದ ರೀತಿಯಲ್ಲಿ ಈ ಲಾಂಜ್ ರೂಪಿಸಲಾಗಿದೆ.

ಸಂಗೀತ ಆಲಿಸುವ, ಹಚ್ಚೆ ಹಾಕಿಸಿಕೊಳ್ಳುವ, ಸ್ಪಾದಲ್ಲಿ ವಿಶ್ರಾಂತಿ ಪಡೆಯುವ, ನೇಲ್ ಆರ್ಟ್, ವಿಡಿಯೋ ಗೇಮ್ ಸೌಲಭ್ಯವೂ ಇಲ್ಲಿ ಲಭ್ಯ. ಜತೆಗೆ ಡಿಸ್ಕೋ ಜಾಕಿಗಳು ಕೂಡ ಇಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ನರ್ಗಿಸ್ ಇಷ್ಟಗಳು

ಅಮೆರಿಕಾದ ಫ್ಯಾಷನ್ ಮಾಡೆಲ್ ಆಗಿರುವ ನರ್ಗಿಸ್ ಫಕ್ರಿ ಬಾಲಿವುಡ್‌ನ `ರಾಕ್‌ಸ್ಟಾರ್~ ಚಿತ್ರದಲ್ಲಿ ಮಿಂಚಿದ ನಟಿ. `ಮೆಟ್ರೊ~ಗೆ ಅವರು ಹೇಳಿದ್ದಿಷ್ಟು: `ನನಗೆ ಬಿರಿಯಾನಿ ಅಂದರೆ ತುಂಬಾ ಇಷ್ಟ. ಯೋಗ ಮಾಡುತ್ತೇನೆ. ಯಾವಾಗಲೂ ಖುಷಿಯಲ್ಲಿ ಇರುತ್ತೇನೆ. ನನಗೆ ಎಲ್ಲಾ ರೀತಿಯ ಸಿನಿಮಾದಲ್ಲೂ ನಟಿಸೋದಕ್ಕೆ ಇಷ್ಟ. ನಾನು ತೊಡುವ ಬಟ್ಟೆ ಕಂಫರ್ಟ್ ಆಗಬೇಕು. ಈಗ ಹಾಕಿಕೊಂಡಿರುವ ಈ ಬಟ್ಟೆ ನನಗೆ ಖುಷಿ ನೀಡುತ್ತಿದೆ. ಅಷ್ಟೇ ಸಾಕು. ನಾವು ಏನು ಹಾಕಿಕೊಳ್ಳುತ್ತೇವೋ ಅದು ನಮಗೆ ಇಷ್ಟವಾಗಬೇಕು~.

 ಚಿತ್ರ: ಎಂ.ಎಸ್. ಮಂಜುನಾಥ್

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.