ಬುಧವಾರ, ಮೇ 18, 2022
27 °C

ಬೆದರಿಕೆ: ರಕ್ಷಣೆ ಕೋರಿದ ಇಶ್ರತ್ ಕುಟುಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಪರಿಚಿತರಿಂದ ಜೀವ ಬೆದರಿಕೆ ಇರುವ ಕಾರಣ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ಕೋರಿ ಒಂಬತ್ತು ವರ್ಷಗಳ ಹಿಂದೆ ಗುಜರಾತ್ ಪೊಲೀಸರು ನಡೆಸಿದ್ದಾರೆಂದು ಆರೋಪಿಸಲಾಗಿರುವ `ನಕಲಿ' ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಇಶ್ರತ್ ಜಹಾನ್ ಅವರ ಕುಟುಂಬವು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.ಥಾಣೆ ಸಮೀಪದ ಮುಂಬ್ರಾದಲ್ಲಿ ನೆಲೆಸಿರುವ ಇಶ್ರತ್ ಅವರ ತಾಯಿ ಶಮಿಮಾ ಕೌಸೆರ್ ಅವರು ತಮ್ಮ ವಕೀಲರ ಮೂಲಕ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.`ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ನನಗೆ ಮತ್ತು ಮಕ್ಕಳಿಗೆ ಮುಕ್ತವಾಗಿ ಓಡಾಡಲು ಭಯವಾಗುತ್ತದೆ. ನಮಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿರುವ ಸಂಬಂಧಿ ರಾವುಫ್ ಲಾಲ್ ಮತ್ತು ಮೊಹಿನುದ್ದೀನ್ ಇಸ್ಮಾಯಿಲ್ ಸೈಯದ್ ಅವರಿಗೂ ಜೀವ ಬೆದರಿಕೆ ಇದೆ' ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಶ್ರತ್ ಅವರ ಸೋದರಿ ಮುಶ್ರತ್, `ನಮ್ಮ ಕುಟುಂಬಕ್ಕೆ ಮತ್ತು ನಮಗೆ ಬೆಂಬಲ ನೀಡುತ್ತಿರುವವರಿಗೆ ಜೀವ ಬೆದರಿಕೆ ಹಾಕಲಾಗಿದೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ನಮ್ಮನ್ನು ಹೆದರಿಸಲಾಗುತ್ತಿದೆ' ಎಂದು ದೂರಿದರು.`ನಮ್ಮ ಮನೆಯ ಸುತ್ತ ಪೊಲೀಸರ ಪಹರೆ ಹಾಕಲಾಗಿದ್ದರೂ ಬುಧವಾರ ರಾತ್ರಿ 2.30ರ ಹೊತ್ತಿಗೆ ಪೊಲೀಸರೆಂದು ಹೇಳಿಕೊಂಡ ಗುಂಪೊಂದು ಮನೆ ಬಾಗಿಲನ್ನು ಬಡಿದು, ನಮ್ಮ ಸುರಕ್ಷತೆ ಬಗ್ಗೆ ವಿಚಾರಿಸಿತು. ಪಿಸುಮಾತನಲ್ಲಿ ತಮ್ಮಲ್ಲೇ ಮಾತನಾಡಿಕೊಂಡ ಆ ಗುಂಪು, ನಂತರ ಹೊರಟುಹೋಯಿತು. ಗುಂಪಿನ ನಡವಳಿಕೆ ನೋಡಿದರೆ ನಮಗೆ ತೊಂದರೆ ನೀಡುವ ಉದ್ದೇಶ ಹೊಂದಿತ್ತೆಂದೇ ಕಾಣುತ್ತದೆ' ಎಂದರು.`ಈ ಘಟನೆಯ ಬಗ್ಗೆ ಮುಂಬ್ರಾ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದರೆ, ಅವರು ಉದಾಸೀನದಿಂದ ಉತ್ತರಿಸಿದರು' ಎಂದು ಮುಶ್ರತ್ ಆಕ್ಷೇಪಿಸಿದರು.ಇಶ್ರತ್ ಅವರ ಸಂಬಂಧಿ ರಾವುಫ್ ಲಾಲ್ ಕೂಡ ತಮ್ಮ ಕುಟುಂಬಕ್ಕೆ ಬೆದರಿಕೆ ಹಾಕಿದ ಪ್ರಸಂಗವನ್ನು ವಿವರಿಸಿದರು. `ಜೂನ್ 18- 19ರ ಮಧ್ಯರಾತ್ರಿ ನಾವು ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಮನೆಗೆ ವಾಪಸು ಬರುತ್ತಿದ್ದಾಗ ಇಬ್ಬರು ಸಶಸ್ತ್ರ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಕಾರಿನ ಹಿಂಬದಿಯ ಗಾಜನ್ನು ಒಡೆದುಹಾಕಿದರು'.`ಅವರನ್ನು ಅಲ್ಲಿದ್ದ ಜನರು ಹಿಡಿದರು. ನಂತರ ಅವರನ್ನು ಮುಂಬ್ರಾ ಠಾಣೆಗೆ ಕರೆದೊಯ್ಯಲಾಯಿತು. ಅವರ ಬಳಿ ನಾಡ ಬಂದೂಕು ಇದ್ದರೂ, ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದು ಸ್ಪಷ್ಟವಾಗಿದ್ದರೂ ಪೊಲೀಸರು ಅದನ್ನು ಮರೆಮಾಚಿ ರಸ್ತೆ ಅಪಘಾತ ಪ್ರಕರಣ ದಾಖಲಿಸಿಕೊಂಡು ಆ ವ್ಯಕ್ತಿಗಳನ್ನು ಬಿಟ್ಟುಬಿಟ್ಟರು. ನಂತರ ನಡೆದ ತನಿಖೆಯಿಂದ ಅಂದು ಕಾರಿನ ಮೇಲೆ ದಾಳಿ ಮಾಡಿದವರಲ್ಲಿ ಒಬ್ಬನ ಹೆಸರು ಫಿರೋಜ್ ಕಾಲಿಯಾ ಎಂದೂ ಆತ, ಸುಫಾರಿ ಹಂತಕನೆಂದು ತಿಳಿದುಬಂತು' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.