ಬುಧವಾರ, ಆಗಸ್ಟ್ 4, 2021
25 °C

ಬೆರಳ ತುದಿಯಲ್ಲಿ ಹಳ್ಳಿ ಪ್ರವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗ್ರಾಮವೊಂದರ ಜನಸಂಖ್ಯೆ ಎಷ್ಟು? ರಸ್ತೆ, ನೀರಿನ ಪೂರೈಕೆ ಸೇರಿದಂತೆ ಅಲ್ಲಿರುವ ಮೂಲಸೌಲಭ್ಯಗಳೇನು? ಸರ್ಕಾರಿ ಆಸ್ತಿ ಎಲ್ಲೆಲ್ಲಿವೆ? ಕೆರೆ-ಬಾವಿ- ಹಳ್ಳಗಳೆಷ್ಟು? ಕೈಗಾರಿಕೆ ಸ್ಥಿತಿಗತಿ ಏನು? ಇಂಥವೇ ಹತ್ತು ಹಲವು ಮಾಹಿತಿಗಳು ಇನ್ನು ಮುಂದೆ ಕ್ಷಣಾರ್ಧದಲ್ಲಿ ಲಭ್ಯವಾಗಲಿವೆ. ಮಹಾನಗರ ಹೊರತುಪಡಿಸಿದರೆ, ಸಾವಿರಾರು ಗ್ರಾಮಗಳ ಸಮಗ್ರ ಮಾಹಿತಿ ಸಂಗ್ರಹಿಸುವ ಯೋಜನೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗುಲ್ಬರ್ಗ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ. ಜಿಲ್ಲೆಯ ಎಲ್ಲ ಗ್ರಾಮಗಳ ಸಮಗ್ರ ವಿವರ ಒಳಗೊಂಡ ಮಾಹಿತಿ ಸಂಗ್ರಹ ಮುಕ್ತಾಯಗೊಂಡಿದ್ದು, ಕೆಲವು ದಿನಗಳಲ್ಲಿ ಎಲ್ಲ ಮಾಹಿತಿಯನ್ನೂ ವೆಬ್‌ಸೈಟ್‌ಗೆ ಅಳವಡಿಸಲಾಗುತ್ತಿದೆ.

ಜಿಲ್ಲಾ ಪಂಚಾಯಿತಿ ಕೈಗೆತ್ತಿಕೊಂಡಿರುವ ಈ ಯೋಜನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ 1,200ಕ್ಕೂ ಹೆಚ್ಚು ಗ್ರಾಮಗಳ ಸಮಗ್ರ ವಿವರ ಸಂಗ್ರಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯೋಜನೆ ರೂಪಿಸುವುದು ಹಾಗೂ ಹಳ್ಳಿಗಳಿಗೆ ಸೌಕರ್ಯ ಕಲ್ಪಿಸಲು ನೆರವಾಗಲಿದೆ. ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (ಬಿಆರ್‌ಜಿಎಫ್) ಅಡಿಯಲ್ಲಿ ಇದಕ್ಕೆ ಹಣ ಒದಗಿಸಲಾಗಿದೆ. ಗ್ರಾಮಗಳಿಗೆ ಸರ್ಕಾರದಿಂದ ನೀಡಲಾದ ಸೌಲಭ್ಯಗಳ ಮಾಹಿತಿಯನ್ನು ಒಂದೆಡೆ ಅಚ್ಚುಕಟ್ಟಾಗಿ ಸಂಗ್ರಹಿಸಲಾದ ಈ ಯೋಜನೆ, ಮುಂದೆ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳಿಗೂ ದಿಕ್ಸೂಚಿಯಾಗಲಿದೆ.

ಜಿಐಎಸ್ ಬಳಕೆ: ನೀರು, ರಸ್ತೆ ಇತರ ಸೌಲಭ್ಯಗಳ ಬಗ್ಗೆ ಮಹಾನಗರ ಪಾಲಿಕೆಗಳು ತಮ್ಮದೇ ಆದ ಮಾಹಿತಿ ವ್ಯವಸ್ಥೆ ರೂಪಿಸಿಕೊಂಡಿರಬೇಕು. ಆದರೆ ಎಷ್ಟೋ ಪಾಲಿಕೆ, ನಗರಸಭೆಗಳು ತಮ್ಮ ಆಸ್ತಿಗಳ ಬಗ್ಗೆಯೇ ಸ್ಪಷ್ಟ ದಾಖಲೆ ಹೊಂದಿಲ್ಲ! ಹೀಗಿರುವಾಗ, ಗುಲ್ಬರ್ಗ ಜಿಲ್ಲೆಯ ಎಲ್ಲ ಗ್ರಾಮಗಳ ಸಮಗ್ರ ವಿವರಗಳನ್ನು ಇಲ್ಲಿ ಸಂಗ್ರಹಿಸಿರುವುದು ವಿಶೇಷ.

ಇದಕ್ಕಾಗಿ ಬಳಸಿದ್ದು- ಉಪಗ್ರಹ ಆಧಾರಿತ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ತಂತ್ರಜ್ಞಾನ. ಜಿಲ್ಲಾ ಪಂಚಾಯಿತಿ ನೀಡಿರುವ ಮಾಹಿತಿಯನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು (ಕೆಎಸ್‌ಸಿಎಸ್‌ಟಿ) ಪರಿಶೀಲಿಸುತ್ತದೆ. ನಂತರ ತಜ್ಞರ ತಂಡವೊಂದು ಗ್ರಾಮ ಪಂಚಾಯಿತಿಗಳಿಗೆ ಹೋಗಿ, ಆ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಮಾಹಿತಿಯನ್ನು ‘ಮೇನ್ ಸರ್ವರ್’ಗೆ ರವಾನಿಸುತ್ತದೆ. ಹೀಗೆ ಎಲ್ಲ ಹಳ್ಳಿ- ಪಟ್ಟಣಗಳ ವಿವರ ಒಂದೆಡೆ ಸಂಗ್ರಹವಾಗುತ್ತದೆ. ಹೀಗೆ ಸೇರುವ ಡೇಟಾಬೇಸ್ ಬಳಸಿ ವೆಬ್‌ಸೈಟ್ ರೂಪಿಸಲಾಗುತ್ತದೆ.

ಸಕಲ ವಿವರ: ಗ್ರಾಮದಲ್ಲಿನ ರಸ್ತೆ ಸಿಮೆಂಟ್ ಅಥವಾ ಮಣ್ಣಿನದ್ದೇ? ಎಂಬುದರಿಂದ ಹಿಡಿದು ನೀರಿನ ಪೂರೈಕೆ, ಕೊಳವೆಬಾವಿ, ತೆರೆದಬಾವಿ, ಚರಂಡಿ, ಸಾರ್ವಜನಿಕ ಶೌಚಾಲಯದಂಥ ಸೌಲಭ್ಯಗಳ ವಿವರವನ್ನು ಈ ವ್ಯವಸ್ಥೆ ಒಳಗೊಂಡಿದೆ. ವಿದ್ಯುತ್ ಪೂರೈಕೆ, ರೈಲ್ವೆ ಮಾರ್ಗ, ಆಸ್ಪತ್ರೆ, ಹಾಸ್ಟೆಲ್, ಶಾಲೆ, ಬೀದಿದೀಪ, ಚೆಕ್‌ಡ್ಯಾಮ್, ಕಾಲುವೆಯ ಮಾಹಿತಿಯೂ ಇಲ್ಲಿ ಲಭ್ಯ. ಸರ್ಕಾರಿ ಕಚೇರಿಗಳು, ವಿವಿಧ ಧರ್ಮಗಳ ಪೂಜಾ ಸ್ಥಳಗಳು ಸೇರಿದಂತೆ 50ಕ್ಕೂ ಹೆಚ್ಚು ಅಂಶಗಳನ್ನು 11 ಮುಖ್ಯ ವಿಭಾಗಗಳಲ್ಲಿ ವಿಂಗಡಿಸಿ, ನೀಡಲಾಗಿದೆ. ಪ್ರತಿ ಗ್ರಾಮದ ಸಮಗ್ರ ನಕ್ಷೆಗಳು ಇದೀಗ ಸಿದ್ಧಗೊಂಡಿವೆ.

ವೆಬ್‌ಸೈಟ್‌ಗೆ ಚಾಲನೆ: ಮಾಹಿತಿಯ ಇನ್ನೊಂದು ಸೆಟ್ ಅನ್ನು ತನ್ನಲ್ಲಿ ಇಟ್ಟುಕೊಳ್ಳಲು ಜಿಲ್ಲಾ ಪಂಚಾಯಿತಿ ಚಿಂತನೆ ನಡೆಸಿದ್ದು, ಇದಕ್ಕಾಗಿ ಮಾಹಿತಿ ಒದಗಿಸುವಂತೆ ಕೆಎಸ್‌ಸಿಎಸ್‌ಟಿಗೆ ಮನವಿ ಮಾಡಿದೆ. ‘ಈ ಮಾಹಿತಿ ನಮಗೆ ದೊರಕಿದ ನಂತರ, ಇನ್ನೇನಾದರೂ ಪರಿಷ್ಕರಣೆ ಮಾಡಬೇಕೇ? ಎಂಬ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಬಳಿಕ ಈ ವಿವರವನ್ನು ವೆಬ್‌ಸೈಟ್‌ಗೆ ಅಳವಡಿಸಲಾಗುವುದು. ಇದು ಇನ್ನು ಕೆಲವು ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ‘ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾ ಕೆ. ಫಾಹಿಮ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರದ ಸೌಲಭ್ಯಗಳ ಮಾಹಿತಿ ಜನರಿಗೆ ಸುಲಭವಾಗಿ ಲಭ್ಯವಾಗುತ್ತದೆ. ಇದರ ಜತೆಗೆ ಲಭ್ಯವಿರುವ ಸೌಲಭ್ಯಗಳ ಸುಧಾರಣೆ ಹಾಗೂ ಆಯಾ ಗ್ರಾಮದ ಜನಸಂಖ್ಯೆಗೆ ತಕ್ಕಂತೆ ಹೆಚ್ಚುವರಿ ಸವಲತ್ತು ಏನೇನು ಬೇಕು? ಎಂಬ ಬಗ್ಗೆಯೂ ಮುಂಚಿತವಾಗಿ ವಿವರ ಪಡೆಯಬಹುದು. ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಯೋಜನೆಗಳಿಗೆ ಪೂರಕ ಮಾಹಿತಿಯನ್ನು ಪಡೆಯಬಹುದಾಗಿದೆ‘ ಎಂದು ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.