ಗುರುವಾರ , ಏಪ್ರಿಲ್ 15, 2021
22 °C

ಬೆಳಕಿನಲಿ ಝಗಮಗಿಸಿದ ವಾಣಿಜ್ಯ ನಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದಲ್ಲಿ ಮಂಗಳವಾರ ಮತ್ತು ಬುಧವಾರ ಎರಡು ದಿನ ಕಾಲ ದೀಪಾವಳಿಯ ಸಡಗರ-ಸಂಭ್ರಮ ಮನೆ ಮಾಡಿತ್ತು. ಹಬ್ಬದ ನಿಮಿತ್ತ ನಗರದ ವಿವಿಧ ಮಾರುಕಟ್ಟೆ ಸ್ಥಳಗಳು ಜನರಿಂದ ತುಂಬಿತುಳುಕುತ್ತಿದ್ದವು.ಮಂಗಳವಾರ ಲಕ್ಷ್ಮೀಪೂಜೆ ನಿಮಿತ್ತ ಹೂವು, ಹಣ್ಣು, ಬಾಳೇಕಂಬ ಇತ್ಯಾದಿ ಪೂಜಾ ಸಾಮಾಗ್ರಿಗಳು ಭರ್ಜರಿಯಾಗಿ ಮಾರಾಟವಾದವು. ಸೇವಂತಿಗೆ, ಚೆಂಡು ಹೂವು ಒಂದು ಮಾರಿಗೆ ರೂ 40ರಿಂದ 50ರ ತನಕ ಮಾರಾಟವಾದವು. ಹೂವು-ಹಣ್ಣಿನ ಬೆಲೆ ಗಗನಕ್ಕೇರಿದ್ದರೂ ಲಕ್ಷ್ಮೀ ಪೂಜೆ ಕೈಬಿಡಲು ಆಗುತ್ತದೆಯೇ? ಶಾಸ್ತ್ರಕ್ಕಾದರೂ ಪೂಜೆ ಮಾಡಲೇಬೇಕು ಎನ್ನುತ್ತಾರೆ ಗೃಹಿಣಿ ಶಾಂತಮ್ಮ.ಮಂಗಳವಾರ ಲಕ್ಷ್ಮೀಪೂಜೆ ಮಾಡಿದ ಹೆಂಗಳೆಯರು, ಮನ-ಮನೆಗಳಲ್ಲಿ ಲಕ್ಷ್ಮೀ ತುಂಬಿತುಳುಕಲಿ ಎಂದು ಪ್ರಾರ್ಥಿಸಿದರು. ವ್ಯಾಪಾರಿಗಳು ಅಂಗಡಿಗಳಲ್ಲಿ ಲಕ್ಷ್ಮೀಪೂಜೆ ಮಾಡಿ ವ್ಯಾಪಾರ ಇಮ್ಮಡಿಗೊಳ್ಳಲಿ ಎಂದು ಪ್ರಾರ್ಥಿಸಿದರು. ಪೂಜೆ ನೆಪದಲ್ಲಿ ಕೆಲಕಾಲ ವ್ಯಾಪಾರ-ವಹಿವಾಟಿಗೆ ಅಲ್ಪವಿರಾಮ ನೀಡಿ, ಹಬ್ಬದ ಕ್ಷಣಗಳನ್ನು ಸಂಭ್ರಮಿಸಿದರು.ಬುಧವಾರ ಹೋಳಿಗೆ ತುಪ್ಪ ಸೇರಿದಂತೆ ಇತ್ಯಾದಿ ಸಿಹಿ ಅಡುಗೆ ಮಾಡಿ, ಕುಟುಂಬದ ಜತೆ ಹಿರಿಯರು ಹಬ್ಬದ ಕ್ಷಣಗಳನ್ನು ಕಳೆದರೆ, ಕಿರಿಯರು ಬಣ್ಣ-ಬಣ್ಣದ ಬೆಳಕು ಚೆಲ್ಲುವ ಪಟಾಕಿ ಹಂಚಿ ಸಂಭ್ರಮಿಸಿದರು.ಚನ್ನಗಿರಿ

ತಾಲ್ಲೂಕಿನಾದ್ಯಂತ ಎರಡು ದಿನಗಳ ಹಿಂದುಗಳ ಪವಿತ್ರವಾದ ಹಬ್ಬ ದೀಪಾವಳಿಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ಮಂಗಳವಾರ ಅಮಾವಾಸ್ಯೆಯ ದಿನ ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಿ ಮನೆಗಳಲ್ಲಿ ಹಾಗೂ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆಯನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಬುಧವಾರ ಬಲಿಪಾಡ್ಯಮಿ ದಿನ. ಮನೆಗಳಲ್ಲಿ ಬೆಳಿಗ್ಗೆ ಗೃಹಿಣಿಯರು ಬೇಗ ಎದ್ದು, ಸ್ನಾನ ಮಾಡಿ ಮಡಿಯಿಂದ ಉಪವಾಸ ಇದ್ದು, ಹಿರಿಯರ ಪೂಜೆಗೆ ಅಗತ್ಯವಾದ ವಿವಿಧ ಪ್ರಸಾದ ತಯಾರಿಸಿದರು.ನಂತರ ಸಂಜೆ ತಮ್ಮ ಮನೆಗಳಲ್ಲಿ ನಿಧನರಾದ ಹಿರಿಯರ ಭಾವಚಿತ್ರಗಳನ್ನು ಇಟ್ಟು, ಅದಕ್ಕೆ ಅಲಂಕಾರ ಮಾಡಿ ಮಾಡಿದ ವಿವಿಧ ರೀತಿಯ ಭೋಜನ ಸಾಮಗ್ರಿಗಳನ್ನು ನೈವೇದ್ಯ ಮಾಡಿ ನಂತರ ಮನೆಯವರೆಲ್ಲಾ ಒಟ್ಟಿಗೆ ಕುಳಿತು ಸಾಮೂಹಿಕವಾಗಿ ಭೋಜನ ಮಾಡುವುದು ಹಿಂದಿನಿಂದಲೂ ಬಂದ ಸಂಪ್ರದಾಯವಾಗಿದೆ.ಸಂಜೆ ಹಟ್ಟಿ ಲಕ್ಕವ್ವನ ಪೂಜೆಯನ್ನು ಕಡ್ಡಾಯವಾಗಿ ಎಲ್ಲರ ಮನೆಗಳಲ್ಲಿ ಮಾಡುತ್ತಾರೆ. ಸಗಣಿಯಿಂದ ಮಾಡಿದ ಬೆನಕಪ್ಪ, ಕವಚಿ ಹುಲ್ಲು, ವಿವಿಧ ರೀತಿಯ ಹೂವುಗಳನ್ನು ಹಟ್ಟಿ ಅಂದರೆ ಮನೆಗಳ ಮುಂದೆ ಇಟ್ಟು ಅವುಗಳಿಗೆ ಪೂಜೆ ಸಲ್ಲಿಸುತ್ತಾರೆ.

 

ಮನೆಯ ಮುಂದೆ ತಂಗಡಿಕೆ, ಚೆಂಡು ಹೂವುಗಳ ದಳಗಳನ್ನು ಚೆಲ್ಲುತ್ತಾರೆ. ರಾತ್ರಿ ದೀಪಗಳನ್ನು ಇಟ್ಟು ದೀಪ ಹಚ್ಚಿ ದೀಪಾವಳಿಯನ್ನು ಕತ್ತಲೆಯಿಂದ ಬೆಳಕಿನಡೆಗೆ ನಮ್ಮನ್ನು ಕರೆದುಕೊಂಡು ಹೋಗಿ ಎಂದು ದೇವರನ್ನು ಪ್ರಾರ್ಥಿಸುತ್ತಾರೆ. ಮಕ್ಕಳು ಹಾಗೂ ದೊಡ್ಡವರು ಪಟಾಕಿಗಳನ್ನು ಹಚ್ಚಿ ಹಬ್ಬಕ್ಕೆ ಮುಕ್ತಾಯ ಹೇಳುತ್ತಾರೆ.ಮಲೇಬೆನ್ನೂರು

ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ  ಹಣತೆ ದೀಪ ಬೆಳಗಿಸಿ ಜನತೆ ದೀಪಾವಳಿ ಹಬ್ಬ ಆಚರಿಸಿದರು.

ಮನೆಯ ಮುಂಭಾಗದಲ್ಲಿ ದೀಪಾವಳಿ ಬಿಂಬಿಸುವ ರಂಗೋಲಿ, ಚೆಂಡು ಹೂವು ಹಾಗೂ  ಸಗಣಿಯಿಂದ ತಯಾರಿಸಿದ ಬಲಿ ಚಕ್ರವರ್ತಿ ಕುಳ್ಳಿರಿಸಿದ್ದರು.  ತಳಿರುತೋರಣಗಳಿಂದ ಶೃಂಗರಿಸಿ ಮುಂಭಾಗದಲ್ಲಿ ಆಕಾಶಬುಟ್ಟಿ ಕಟ್ಟಲಾಗಿತ್ತು. ದನದ ಕೊಟ್ಟಿಗೆಯಲ್ಲಿ ಕಾಚಿಕಡ್ಡಿಗಳನ್ನು ಚುಚ್ಚಿದ ಹಟ್ಟಿ ಲಕ್ಕಮ್ಮ ಹಾಗೂ ಗೋಪೂಜೆ ಮಾಡಿದ್ದರು. ಹಿರಿಯರ ಹಬ್ಬವೆಂದು ಹೊಸ ಬಟ್ಟೆ ತೊಟ್ಟು ಎಡೆ ಹಿಡಿದು ಪೂರ್ವಿಕರ ಸ್ಮರಿಸಿದರು.ಎಗ್ಗಿಲ್ಲದ ಪಟಾಕಿ ವ್ಯಾಪಾರ: ಇಲ್ಲಿನ ಮುಖ್ಯರಸ್ತೆ ಆಸುಪಾಸಿನಲ್ಲಿ  ಅ(ನ)ಧಿಕೃತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಶಾಮಿಯಾನದ ಅಡಿ ಪಟಾಕಿ ಮಳಿಗೆ ಹಾಕಿದ್ದರು. ಬೆಲೆ ಹೆಚ್ಚಳದ ನಡುವೆ ವ್ಯಾಪಾರ ಜೋರಾಗಿತ್ತು.ಹೊನ್ನಾಳಿ

ಪಟ್ಟಣದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಬುಧವಾರ ಸಡಗರ- ಸಂಭ್ರಮಗಳಿಂದ ಆಚರಿಸಲಾಯಿತು.

ವಯೋಮಾನದ ಭೇದ ಇಲ್ಲದೇ ಎಲ್ಲರೂ ಪಟಾಕಿ ಸಿಡಿಸುವುದರಲ್ಲಿ ನಿರತರಾಗಿದ್ದರು.ಮಂಗಳವಾರ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಕೆಲವರ ಮನೆಯಲ್ಲಿ ಹಿರಿಯರ ಪೂಜೆ ನೆರವೇರಿಸಲಾಯಿತು. ಜಾನುವಾರುಗಳಿಗೆ ಬರೆ ಎಳೆಯುವ ಸಂಪ್ರದಾಯ ನಡೆಸಲಾಯಿತು.ಬರದ ಬರೆ: ತಾಲ್ಲೂಕಿನ ವಿವಿಧೆಡೆ ದೀಪಾವಳಿ ಸಂಭ್ರಮಕ್ಕೆ ಈ ಬಾರಿ ಸ್ವಲ್ಪ ಮಂಕು ಕವಿದಿತ್ತು. ಬರ, ಅಕಾಲಿಕ  ಮಳೆಯಿಂದ ಬೆಳೆ ನಾಶ ರೈತಾಪಿ ವರ್ಗವನ್ನು ಕಂಗೆಡಿಸಿದ್ದು ಇದಕ್ಕೆ ಕಾರಣ. ಆದರೂ, ಸಾಲ ಮಾಡಿ ಕೆಲವರು ಯಾಂತ್ರಿಕವಾಗಿ ಹಬ್ಬ ಆಚರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.