ಬುಧವಾರ, ಜನವರಿ 29, 2020
24 °C

ಬೆಳಕು ನೀಡುತ್ತಿರುವ ಅನಾಥ ಸೇವಾಶ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ತಿರುಕ ನಾಮಾಂಕಿತ ರಾಘವೇಂದ್ರ ಸ್ವಾಮೀಜಿ ಕಟ್ಟಿ ಬೆಳೆಸಿದ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಅಂಧಕಾರದ ಜಗತ್ತಿಗೆ ಬೆಳಕು ನೀಡುವ ಕಾರ್ಯದಲ್ಲಿ ಇಂದಿಗೂ ಸಕ್ರಿಯವಾಗಿರುವುದು ಶ್ಲಾಘನೀಯ ಎಂದು ಕವಿ ಚಂದ್ರಶೇಖರ ತಾಳ್ಯ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ನಡೆಯುತ್ತಿರುವ ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವದ ಎರಡನೇ ದಿನವಾದ ಮಂಗಳವಾರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾಹಿತ್ಯ, ಸಂಗೀತ, ನೃತ್ಯ, ಯೋಗ, ಆಯುರ್ವೇದ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಆಶ್ರಮದ ಸಾಧನೆ ಮೆಚ್ಚುವಂಥದು. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವುದರೊಂದಿಗೆ, ಯೋಗ ಮತ್ತು ರಂಗ ತರಬೇತಿಗಳನ್ನು ನೀಡಲಾಗುತ್ತಿದೆ. ಸ್ವಾಮೀಜಿ ಅವರ ಆಶಯಗಳನ್ನು ಈಡೇರಿಸುವಲ್ಲಿ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲರು ಕಾರ್ಯೋನ್ಮುಖರಾಗಿದ್ದಾರೆ. ಈ ಕಾರ್ಯ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.ಮನುಷ್ಯನ ದುರಾಸೆಯಿಂದ ಪ್ರಕೃತಿಯಲ್ಲಿ ಅಸಮತೋಲನ ಆಗುತ್ತಿದೆ. ಪ್ರಕೃತಿಯಲ್ಲಿ ಸಮತೋಲನ ಕಾಪಾಡುವುದು ಎಲ್ಲರ ಕರ್ತವ್ಯ ಆಗಬೇಕು. ವಿಜ್ಞಾನವನ್ನು ಪ್ರಕೃತಿಯ ಚೌಕಟ್ಟಿನ ಒಳಗೆ ಅರ್ಥಮಾಡಿಕೊಳ್ಳಬೇಕೇ ಹೊರತು, ಅದರೊಂದಿಗೆ ಸಮರಕ್ಕೆ ಇಳಿಯಬಾರದು. ಇದು ಮುಂದೆ ಮನುಷ್ಯನ ವಿನಾಶಕ್ಕೆ ದಾರಿಮಾಡಿಕೊಡುತ್ತದೆ ಎಂದು ತಾಳ್ಯ ಎಚ್ಚರಿಸಿದರು.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ, ಶಿಕ್ಷಕ ತರಬೇತಿ ಸಂಸ್ಥೆ ಆರಂಭಿಸುವ ಮೂಲಕ ಸಾವಿರಾರು ಶಿಕ್ಷಕರನ್ನು ಸಮಾಜಕ್ಕೆ ಕೊಡುಗೆ ನೀಡಿದ ಕೀರ್ತಿ ಆಶ್ರಮಕ್ಕೆ ಸಲ್ಲುತ್ತದೆ. ರಾಘವೇಂದ್ರ ಸ್ವಾಮೀಜಿಯ ಪ್ರೇರಣೆಯಿಂದ ಇಂದಿಗೂ ಆಶ್ರಮದಲ್ಲಿ ಅನೇಕ ಚಟುವಟಿಕೆಗಳು ಸರಾಗವಾಗಿ ನಡೆಯುತ್ತಿವೆ ಎಂದರು.ಶಿಕ್ಷಣಾಧಿಕಾರಿ ಎನ್.ಎಂ. ರಮೇಶ್ ಮಾತನಾಡಿ, ಮಲ್ಲಾಡಿಹಳ್ಳಿ ಶಿಸ್ತು, ತ್ಯಾಗ, ಸಂಸ್ಕಾರಗಳಿಗೆ ಹೆಸರಾಗಿದೆ. ಇಂದಿನ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ರಂಗಭೂಮಿಯಂತಹ ಕಲೆಗಳು ನಶಿಸುತ್ತಿವೆ. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ, ರಂಗತರಬೇತಿ ನೀಡುತ್ತಿರುವುದು ಮಾದರಿ ಎಂದರು.ಕೆಂಗಾಪುರ ಹೊರಮಠದ ರಾಮಲಿಂಗೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಆಶ್ರಮದ ವಿಶ್ವಸ್ತ ಎಸ್. ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಯೋಗ ತರಬೇತುದಾರ ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ಆಶ್ರಮದ ವಿದ್ಯಾರ್ಥಿಗಳು ಯೋಗನಮನ ಸಲ್ಲಿಸಿದರು.ಚಾಮರಸ ಕವಿಯ ಪ್ರಭುಲಿಂಗಲೀಲೆ ಆಧರಿಸಿದ, ಹೊಸತೋಟ ಮಂಜುನಾಥ ಭಾಗವತ ರಚನೆಯ `ಮಾಯಾ ಕೋಲಾಹಲ~ ನಾಟಕವನ್ನು ಧಾರವಾಡದ ಯಕ್ಷಮಂಡಲ ಕಲಾವಿದರು ಪ್ರದರ್ಶಿಸಿದರು.ಶಿಕ್ಷಣಾಧಿಕಾರಿ ಎಸ್.ಕೆ.ಬಿ. ಪ್ರಸಾದ್, ಲಕ್ಕಪ್ಪ, ವಿಶ್ವನಾಥ ಹೂಗಾರ, ರಾಕೇಶ್ ಪೂಂಜಾ, ಇಮ್ರಾನ್ ಸಾಬ್, ಸೋಮಶೇಖರ ಗೌಡ್ರು, ಗೌರಮ್ಮ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ಎಸ್. ಬಸವರಾಜು ಸ್ವಾಗತಿಸಿದರು. ಬಿದರಹಳ್ಳಿ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ವನಜಾಕ್ಷಮ್ಮ ವಂದಿಸಿದರು.

ಪ್ರತಿಕ್ರಿಯಿಸಿ (+)