ಶನಿವಾರ, ಏಪ್ರಿಲ್ 17, 2021
24 °C

ಬೆಳಗಾವಿಯತ್ತ ಸಿನಿಮಾ ಮಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎರಡನೆಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಕನ್ನಡ ಚಿತ್ರರಂಗದ ವತಿಯಿಂದ ಸುಮಾರು ಒಂದು ಸಾವಿರ ಮಂದಿ ಬೆಳಗಾವಿಗೆ ತೆರಳಲಿದ್ದಾರೆ. ಜನಪ್ರಿಯ ನಟ-ನಟಿಯರು, ಸಂಗೀತ ನಿರ್ದೇಶಕರು, ಗಾಯಕರು, ತಂತ್ರಜ್ಞರು ಬೆಳಗಾವಿಗೆ ತೆರಳಲಿದ್ದಾರೆ. ಚಿತ್ರರಂಗದ ತಂಡಕ್ಕೆ 10 ವೊಲ್ವೊ ಬಸ್ ಸೇರಿದಂತೆ ಒಟ್ಟು 30 ಬಸ್‌ಗಳ ವ್ಯವಸ್ಥೆಯನ್ನು ಸರ್ಕಾರವೇ ಮಾಡಲಿದ್ದು, ತಂಡ ಇದೇ 10ರಂದು ಬೆಂಗಳೂರಿನಿಂದ ತೆರಳಲಿದೆ.ಚಲನಚಿತ್ರ ನಟರಾದ ಅಂಬರೀಷ್, ಶಿವರಾಜ್ ಕುಮಾರ್, ಸುದೀಪ್, ಉಮಾಶ್ರಿ, ರಮ್ಯಾ, ತಾರಾ, ಪೂಜಾ ಗಾಂಧಿ, ಗಣೇಶ್, ದರ್ಶನ್ ಮತ್ತಿತರರು ಬೆಳಗಾವಿಗೆ ತೆರಳಲಿರುವ ಕಲಾವಿದರ ಪೈಕಿ ಪ್ರಮುಖರು. ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಸಂತ ಕುಮಾರ್ ಪಾಟೀಲ, ‘ಎಲ್ಲ ಕಲಾವಿದರೂ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ನೀವು ಯಾರ ಹೆಸರನ್ನೇ ಹೇಳಿ, ಅವರು ಒಂದಲ್ಲಾ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ’ ಎಂದರು.ಬೆಳಗಾವಿಗೆ ತೆರಳಲಿರುವ ಎಲ್ಲ ಕಲಾವಿದರು ಸಮ್ಮೇಳನದ ಉದ್ಘಾಟನೆಗೆ ಪೂರ್ವಭಾವಿಯಾಗಿ ನಡೆಯಲಿರುವ ಮೆರವಣಿಗೆಯಲ್ಲೂ ಭಾಗವಹಿಸಲಿದ್ದಾರೆ. ಸಂಗೀತ ನಿರ್ದೇಶಕ ಹಂಸಲೇಖ ಅವರ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಸಮ್ಮೇಳನದ ಉದ್ಘಾಟನೆಯ ದಿನ ನಡೆಯಲಿದ್ದು ಸುಮಾರು ಒಂದೂವರೆ ಗಂಟೆಯ ಅವಧಿಯದ್ದಾಗಿದೆ. ಕಲಾವಿದರ ಪ್ರಯಾಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆಂದು ಸರ್ಕಾರ ಚಲನಚಿತ್ರ ವಾಣಿಜ್ಯ ಮಂಡಳಿಗೆ 30 ಲಕ್ಷ ರೂಪಾಯಿ ನೀಡಿದೆ. ‘ಸರ್ಕಾರ ನೀಡಿರುವ ಹಣ ನಮ್ಮ ಕಾರ್ಯಕ್ರಮಕ್ಕೆ ಸಾಕಾಗದು. ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಇಷ್ಟೇ ಮೊತ್ತ ನೀಡಲಿದೆ’ ಎಂದು ಪಾಟೀಲ ಅವರು ತಿಳಿಸಿದರು.‘ಸಾಂಸ್ಕೃತಿಕ ಕಾರ್ಯಕ್ರಮಗಳ ತಾಲೀಮು ಭಾನುವಾರದಂದು (ಮಾ. 6) ರಾಕ್‌ಲೈನ್ ಸ್ಟುಡಿಯೋನಲ್ಲಿ ಆರಂಭವಾಗಲಿದೆ. ಹಂಸಲೇಖ ಮತ್ತು ಇತರ ಸಂಗೀತ ನಿರ್ದೇಶಕರು ಈ ಕಾರ್ಯಕ್ರಮಕ್ಕೆ ಅಂತಿಮ ರೂಪ ಕೊಡುವಲ್ಲಿ ಮಗ್ನರಾಗಿದ್ದಾರೆ. ಸೋಮವಾರದ ಒಳಗೆ ಕಾರ್ಯಕ್ರಮದ ಪರಿಕಲ್ಪನೆ ಅಂತಿಮ ರೂಪ ಪಡೆದುಕೊಳ್ಳಲಿದೆ. ನೃತ್ಯ, ಮಿಮಿಕ್ರಿ, ಕೆಲವು ಜನಪ್ರಿಯ ಚಲನಚಿತ್ರಗಳ ಸನ್ನಿವೇಶಗಳ ಮರುಸೃಷ್ಟಿ ಮುಂತಾದವು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇರಲಿವೆ’ ಎಂದು ಕರ್ನಾಟಕ ಚಲನಚಿತ್ರ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಅಶೋಕ್ ತಿಳಿಸಿದರು.ಬೆಳಗಾವಿಯಿಂದ ಮರಳಿ ಬೆಂಗಳೂರಿಗೆ ಬರುವಾಗ ಕಲಾವಿದರು ಹುಬ್ಬಳ್ಳಿ, ಹಿರೇಕೆರೂರು, ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರುಗಳಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ‘ಕನ್ನಡಿಗರು ಕನ್ನಡ ಚಲನಚಿತ್ರಗಳನ್ನು ನೋಡುವಂತಾಗಬೇಕು, ಆ ಮೂಲಕ ಚಿತ್ರರಂಗ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ’ ಎಂದು ಪಾಟೀಲ ಅವರು ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.