ಸೋಮವಾರ, ಜನವರಿ 20, 2020
29 °C

ಬೆಳೆವಿಮೆಗಾಗಿ ಮುಂದುವರಿದ ರೈತರ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ : ಬೆಳೆ ವಿಮೆ ಪರಿಹಾರದ ಹಣವನ್ನು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಮೂಲಕ ವಿತರಿಸುವಂತೆ ಆಗ್ರಹಿಸಿ ಪಟ್ಟಣದ ಕೆಸಿಸಿ ಬ್ಯಾಂಕ್‌ಗೆ ಬೀಗ ಹಾಕಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ತಾಲ್ಲೂಕು ಘಟಕ ನಡೆಸುತ್ತಿರುವ ಧರಣಿ ಸತ್ಯಾಗ್ರಹ  ಬುಧವಾರ ಕೂಡ ಮುಂದುವರೆಯಿತು. ಇದರಿಂದ ಕೆಸಿಸಿ ಬ್ಯಾಂಕ್‌ ಬಾಗಿಲು ತೆರೆಯದೆ ಗ್ರಾಹಕರು ತೀವ್ರ ತೊಂದರೆ ಅನುಭವಿಸುವಂತಾಯಿತು. ಧರಣಿಯ ನೇತೃತ್ವ ವಹಿಸಿದ್ದ ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ ಕೆಸಿಸಿ ಬ್ಯಾಂಕಿಗೆ ಬೀಗ ಹಾಕಿ ಧರಣಿ ಸತ್ಯಾಗ್ರಹ ಆರಂಭಿಸಿದ್ದರೂ ಬ್ಯಾಂಕಿನ ಆಡಳಿತ ವರ್ಗ ಸಮರ್ಪಕ ಉತ್ತರ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು. ಮುಂಜಾನೆ ಕೆಸಿಸಿ ಬ್ಯಾಂಕ್‌ ಎದುರಿಗೆ ಪ್ರತಿಭಟನೆ ನಡೆಸಿ ನಂತರ ಮೋಟೆಬೆನ್ನೂರ ಬಳಿ ರಾಷ್ಟ್ರೀಯ ಹೆದ್ದಾರಿ–4ರಲ್ಲಿ ರಸ್ತೆ ತಡೆ ನಡೆಸಲಾಗುವುದೆಂದು ಹೇಳಿದರು.ಬೆಳೆ ವಿಮೆ ಪ್ರೀಮಿಯಂ ಹಣ ತುಂಬುವ ಸಂದರ್ಭದಲ್ಲಿ ಸಹಕಾರಿ ಸಂಘಗಳನ್ನು ಬಳಸಿಕೊಂಡ ಕೆಸಿಸಿ ಬ್ಯಾಂಕ್ ಈಗ ಬಿಡುಗಡೆಯಾಗಿರುವ ಪರಿಹಾರದ ಹಣವನ್ನು ಸಹಕಾರಿ ಸಂಘಗಳ ಮೂಲಕ ರೈತರಿಗೆ ವಿತರಿಸದೆ ಅಮಾನತ್ ಖಾತೆಯಲ್ಲಿ ಇರಿಸಿಕೊಂಡಿದೆ. ಇದರಿಂದ ರೈತರ ಕೋಟ್ಯಂತರ ರೂಪಾಯಿ ಹಣಕ್ಕೆ ಬಡ್ಡಿ ಸಿಗದೆ ವಂಚಿತರಾಗುವಂತಾಗಿದೆ ಎಂದು ಆರೋಪಿಸಿದರು.ಧರಣಿಯಲ್ಲಿ ರೈತ ಮುಖಂಡರಾದ ವೀರಭದ್ರಗೌಡ ಹೊಮ್ಮರಡಿ, ಬಸವರಾಜ ಸಂಕಣ್ಣನವರ, ಮಲ್ಲಿಕಾರ್ಜುನ ಬಳ್ಳಾರಿ, ರಾಜು ಚನ್ನಗೌಡ್ರ, ಚನ್ನಬಸಪ್ಪ ಕಲ್ಲಾಪುರ, ಈರಪ್ಪ ಬಿದರಿ, ಚನ್ನಬಸಪ್ಪ ಕಲಕಟ್ಟಿ, ಬಸವರಾಜ ವಾಲಿಕಾರ, ಶಿವಪ್ಪ ಬಣಕಾರ, ಪರಸಪ್ಪ ಕಡಕೋಳ, ಗುಡ್ಡಪ್ಪ ಸುಣಗಾರ, ಶಿವಪ್ಪ ಸಣ್ಣಕ್ಕಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.ಈಡೇರದ ಬೇಡಿಕೆ

ಹಾನಗಲ್‌:
ರೈತರ ಬೇಡಿಕೆ ಈಡೇರದ ಹಿನ್ನಲೆಯಲ್ಲಿ ಬುಧವಾರವೂ ಕೆಸಿಸಿ ಬ್ಯಾಂಕಿಗೆ ಬೀಗದ ಪರಿಸ್ಥಿತಿ ಮುಂದುವರೆದಿದ್ದು, ಮೂರು ದಿನಗಳಿಂದ ಬ್ಯಾಂಕ್‌ ಗ್ರಾಹಕರಿಗೆ ತೊಂದರೆಯಾಗಿದೆ ಎಂದು ಬ್ಯಾಂಕಿನ ಸಿಬ್ಬಂದಿ ಹೇಳಿಕೊಂಡಿದ್ದಾರೆ.    ಸೋಮವಾರ ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟನೆ ಆರಂಭಿಸಿರುವ ಹಸಿರುಸೇನೆ ಮತ್ತು ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು, ಸಹಕಾರಿ ಸಂಘಗಳಲ್ಲಿ ಬೆಳೆವಿಮೆ ಪರಿಹಾರಕ್ಕೆ ಪಟ್ಟು ಹಿಡಿದಿದ್ದಾರೆ. ಆದರೆ ಮೂರು ದಿನಗಳಾದರೂ ಈ ಸಮಸ್ಯೆ ಇತ್ಯರ್ಥಗೊಂಡಿಲ್ಲ.   ಸೋಮವಾರ ಬ್ಯಾಂಕ್‌ ಅಧಿಕಾರಿಗಳನ್ನು ಹೊರಹಾಕಿ ಬೀಗ ಜಡಿದ್ದಿದ್ದ ರೈತರು ಮಂಗಳವಾರ ಮತ್ತು ಬುಧವಾರ ಸಿಬ್ಬಂಧಿಗಳಿಗೆ ಬ್ಯಾಂಕಿನಲ್ಲಿನ ಬಾಕಿ ಕೆಲಸಗಳಿಗಾಗಿ ಅವಕಾಶ ನೀಡಿದ್ದಾರೆ. ಆದರೆ ಬ್ಯಾಂಕಿನ ಬಾಗೀಲು ಬಂದ್‌ ಮಾಡಲಾಗಿರುತ್ತದೆ. ಬುಧವಾರ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಬ್ಯಾಂಕಿನ ವ್ಯವಸ್ಥಾಪಕ ಸುಭಾಸ ಗೌಡರ, ‘3 ದಿನಗಳಿಂದ ಗ್ರಾಹಕರಿಗೆ ತೊಂದರೆಯಾಗಿದೆ.ಒಳಗೆ ಕುಳಿತು ಬಾಕಿ ಕಾರ್ಯವನ್ನು ಮಾಡುತ್ತಿದ್ದೇವೆ. ಪ್ರತಿಭಟನಾಕಾರರು ಗ್ರಾಹಕರನ್ನು ಒಳಬಿಡುತ್ತಿಲ್ಲ. ಜನರಲ್‌ ಇನ್ಷೂರೆನ್ಸ್‌ಕಂಪೆನಿ (ಜೆಇಸಿ) ಕಾಯ್ದೆಯನ್ನು ಬಿಟ್ಟು ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ’ ಎಂದರು.    ‘ಕೆಸಿಸಿ ಬ್ಯಾಂಕ್‌ ಮುಖಾಂತರವೇ ರೈತರಿಗೆ ಶೀಘ್ರವಾಗಿ ಬೆಳೆವಿಮೆ ವಿತರಿಸಲು ಸಾಧ್ಯವಿದೆ. ರೈತರ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಸಿಬ್ಬಂಧಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಸುಮಾರು ಶೇ.70 ರಷ್ಟು ಬೆಳೆವಿಮೆ ಫಲಾನುಭವಿ ರೈತರ ಚಾಲ್ತಿ ಖಾತೆಗಳು ಕೆಸಿಸಿ ಬ್ಯಾಂಕಿನಲ್ಲಿವೆ. ರೈತರು ಸಹಕರಿಸಬೇಕಷ್ಟೆ’ ಎಂದರು.ಬೆಳೆವಿಮೆ ಜಮಾಕ್ಕೆ ಒತ್ತಾಯ

ರಾಣೆಬೆನ್ನೂರು:
ಬೆಳೆ ವಿಮೆ ಹಣವನ್ನು ವ್ಯವಸಾಯ ಸಹಕಾರಿ ಬ್ಯಾಂಕ್ ಮೂಲಕ ನೀಡಬೇಕೆಂದು ಒತ್ತಾಯಿಸಿ ನಗರದ ಕೆಸಿಸಿ ಬ್ಯಾಂಕ್ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ೨೦೧೧-–೧೨ಸಾಲಿನಲ್ಲಿ ಬೆಳೆ ವಿಮೆ ತುಂಬಿದ ರೈತರಿಗೆ ಹಣ ಬಿಡುಗಡೆ ಮಾಡಿದ್ದು ಕೆಸಿಸಿ ಬ್ಯಾಂಕ್ ಮೂಲಕ ಬೆಳೆ ವಿಮೆ ನೀಡಲಾಗುತ್ತಿದೆ, ಈ ಹಿಂದೆ ಬೆಳೆ ವಿಮೆ ತುಂಬುವಾಗ ರೈತರು ವ್ಯವಸಾಯ ಸಹಕಾರಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದರೂ ವ್ಯವಸಾಯ ಸಹಕಾರಿ ಬ್ಯಾಂಕ್‌ಗಳ ಮೂಲಕ ರೈತರಿಗೆ ಹಣ ಪಾವತಿಸಲು ಕೆಸಿಸಿ ಬ್ಯಾಂಕ್‌ಗಳು ಮುಂದಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.೧೨,೪೦೦ ರೈತರಿಗೆ ಬೆಳೆವಿಮೆ ಬಂದಿದ್ದು ಅದರಲ್ಲಿ ಸಾಕಷ್ಟು ರೈತರು ಕೆಸಿಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯದೆ ಇರುವುದರಿಂದ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸುರೇಶ ದೂಳಿಹೊಳಿ, ಜಗದೀಶಗೌಡ ಪಾಟೀಲ, ಚನ್ನಬಸಪ್ಪ ತೆಗ್ಗಿನ, ಹಾಲೇಶ ನಾಗರಜ್ಜಿ, ಆರ್.ಬಿ.ಕರಬಸಳ್ಳವರ, ಪಿ.ಎಸ್. ಹರಿಯಾಳದಳವರ, ಸಿ.ಎ.ಗೌಡಪ್ಪ ಗೌಡ್ರ, ಎಚ್.ಕೆ.ಗುತ್ತಲ, ಮಲ್ಲಿಕಾರ್ಜುನ ಅಣ್ಣಪ್ಪಳ್ಳವರ, ಮತ್ತಿತರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)