ಭಾನುವಾರ, ಏಪ್ರಿಲ್ 18, 2021
23 °C

ಬೆಳೆ ನಷ್ಟ ಪರಿಹಾರ ನೀಡುವಂತೆ ರೈತರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡರಗಿ: ಚಿಗರಿ ಹಾವಳಿಯಿಂದ ರೈತರಿಗೆ ಉಂಟಾಗಿರುವ ಬೆಳೆನಷ್ಟ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಮೇವುಂಡಿ ಗ್ರಾಮದ ರೈತರು ಪಟ್ಟಣದ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯಲಯಕ್ಕೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೇವುಂಡಿ ಗ್ರಾಮದ ರೈತ ಮುಖಂಡ ಅಂದಪ್ಪ ಅಕ್ಕಿ, `ಅಧಿಕಾರಿಗಳು ರೈತರ ಬದುಕಿನೊಡನೆ ಚಲ್ಲಾಟವಾಡುತ್ತಿದ್ದು, ಅವರ ಸಮಸ್ಯೆಗಳನ್ನು ಕೇಳುವವರೆ ಇಲ್ಲದಂತಾಗಿದೆ. ಚಿಗರೆ ಹಾವಳಿಯಿಂದ ಕಳೆದ ವರ್ಷವೂ ರೈತರು ಸಾಕಷ್ಟು ಬೆಳೆ ನಷ್ಟ ಅನುಭವಿಸಿದ್ದು, ಆ ಕುರಿತಂತೆ ಅಧಿಕಾರಿಗಳು  ಯಾವುದೆ ಸೂಕ್ತ ಕ್ರಮ ಕೈಗೊಂಡಿಲ್ಲ~ ಎಂದು ಆರೋಪಿಸಿದರು. ಇಡೀ ತಾಲ್ಲೂಕು ಕಳೆದ ಎರಡು ವರ್ಷಗಳಿಂದ ತೀವ್ರ ಬರಗಾಲಕ್ಕೆ ಈಡಾಗಿದ್ದು, ರೈತರು ಸಾಲ ಮಾಡಿ ಬಿತ್ತಿದ ಅಲ್ಪ ಸ್ವಲ್ಪ ಬೆಳೆಯು  ಚಿಗರೆ ಹಾಗೂ ಜಿಂಕೆಗಳ ಪಾಲಾಗುತ್ತಿದ್ದು, ಬಡ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಚಿಗರೆಗಳ ಕಾಟ ತಪ್ಪಿಸುವಂತೆ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಳೆದ ಹಲವು ತಿಂಗಳುಗಳಿಂದ ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ರೈತರ ಮನವಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು. ತಾಲ್ಲೂಕಿನಾದ್ಯಂತ ಕಳೆದ ಹಲವು ವರ್ಷಗಳಿಂದ ತೀವ್ರವಾದ ಬರಗಾಲ ತಾಂಡವವಾಡುತ್ತಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ರೈತರು ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಇದರಿಂದಾಗಿ ತಾಲ್ಲೂಕಿನ ರೈತರು, ಕೂಲಿಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರಕಾರ ತಕ್ಷಣ ಅವರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು. ನಂತರ ಪ್ರತಿಭಟನಾಕಾರರ ಬಳಿಗಾಗಮಿಸಿದ ವಲಯ ಅರಣ್ಯಾಧಿಕಾರಿ ಎಚ್. ಪರಿಮಳ `ವನ್ಯಜೀವಿಗಳ ರಕ್ಷಣೆಯ ಜೊತೆಗೆ ರೈತರ ಹಿತವನ್ನು ಕಾಪಾಡವುದು ತಮ್ಮ ಹಾಗೂ ತಮ್ಮ ಇಲಾಖೆಯ ಕರ್ತವ್ಯವಾಗಿದ್ದು, ತಕ್ಷಣ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಡನೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು. ಮಲ್ಲೇಶ ಹೊಸಮನಿ, ಶೇಖರಗೌಡ ಪಾಟೀಲ, ತಿಪ್ಪಣ್ಣ ತಿಪ್ಪಣ್ಣವರ, ಹಾಲನಗೌಡ ಪಾಟೀಲ, ಮಲ್ಲಪ್ಪ ಹಲವಾಗಲಿ, ರಾಮಣ್ಣ ಪೂಜಾರ, ಶೇಖಪ್ಪ ಯಾವಗಲ್ಲ, ಬಸನಗೌಡ ಪಾಟೀಲ, ಭರಮಪ್ಪ ಕವಲೂರ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.